Wednesday, April 22, 2015

Conversation: Prof Roddam Narasimha on clouds, climate change and atmospheric sciences

Excerpts from conversation with Prof Roddam Narasimha our most distinguished aerospace scientist on climate change, clouds and atmospheric sciences in Prajavani
ರೊದ್ದಂ ಪ್ರೀತಿಯ ಮುಂಗಾರು ಋತು

Prajavani, Wed, 04/22/2015 

ದೇಶದ ಕೆಲವೇ ಕೆಲವು ನುರಿತ ವೈಮಾನಿಕ ಮತ್ತು ದ್ರವಚಲನ (ಫ್ಲೂಯಿಡ್ ಡೈನಾಮಿಕ್ಸಿಸ್ಸ್ಟ್) ವಿಜ್ಞಾನಿಗಳಲ್ಲಿ ಕನ್ನಡಿಗ ಪ್ರೊ. ರೊದ್ದಂ ನರಸಿಂಹ ಅವರು ಅಗ್ರಗಣ್ಯರು. ವಿಶ್ವಖ್ಯಾತ ವೈಜ್ಞಾನಿಕ ಸಂಸ್ಥೆಗಳಾದ ಲಂಡನ್ನಿನ ರಾಯಲ್ ಸೊಸೈಟಿ, ಅಮೇರಿಕದ ವಿಜ್ಞಾನ ಅಕಾಡೆಮಿ ಮತ್ತು ತಂತ್ರಜ್ಞಾನ ಅಕಾಡೆಮಿ ಗಳೆಲ್ಲದರ ಗೌರವ ಸದಸ್ಯತ್ವ ಪಡೆದ ಕೆಲವೇ ಇಂಜಿನಿಯರ್ ಗಳಲ್ಲಿ ಅವರೊಬ್ಬರು.   ಸದ್ಯಕ್ಕೆ  ನೆಹರೂ ಉನ್ನತ ವೈಜ್ಞಾನಿಕ ಅಧ್ಯಯನ ಕೇಂದ್ರದ (JNCASR) ಗೌರವ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಭಾರತ ಸರ್ಕಾರ ರೊದ್ದಂ ಅವರ ಸೇವೆಯನ್ನು ಪರಿಗಣಿಸಿ  ಪದ್ಮಭೂಷಣ ನೀಡಿ ಗೌರವಿಸಿದೆ.
80ರ ದಶಕದ ಆರಂಭದಲ್ಲಿ  ಲಘು ಯುದ್ಧ ವಿಮಾನ ಹಾಗೂ  ಲಘು ಸಾಗಣೆ ವಿಮಾನಗಳಿಗೆ  ರೂಪು ಕೊಡುವ ಕಾರ್ಯದಲ್ಲಿ ತೊಡಗಿದ ಅವರು, ಅದೇ ಸಮಯದಲ್ಲಿ ದ್ರವ ಪರಿಚಲನೆ ಅಧ್ಯಯನದಿಂದ ಮುಂಗಾರು ಮಾರುತಗಳನ್ನು ಅರ್ಥ ಮಾಡಿಕೊಳ್ಳಬಹುದು ಎಂಬ ಸತ್ಯ ವನ್ನು ಅರಿತರು.  ತಡ ಮಾಡದೆ 1982ರಲ್ಲಿ  ಐಐಎಸ್‌ಸಿಯಲ್ಲಿ  ‘ಪರಿಸರ ಹಾಗೂ ಸಾಗರ ಅಧ್ಯಯನ ಕೇಂದ್ರಸ್ಥಾಪಿಸಿದರು.  ಈ ಕೇಂದ್ರ ಮುಂಗಾರಿಗೆ ಸಂಬಂಧಿಸಿದ  ಆಸಕ್ತಿಯುತ ಸಂಗತಿ ಕುರಿತು ಅಧ್ಯಯನ ನಡೆಸಿದೆ.
ಕೇವಲ ವಿಜ್ಞಾನವಷ್ಟೇ ಅವರ ಆಸಕ್ತಿಯ ಕ್ಷೇತ್ರವಲ್ಲ. ಭಾರತೀಯ ಕಲೆ, ಸಾಹಿತ್ಯ, ಸಂಸ್ಕೃತಿ, ಓದು, ಬರವಣಿಗೆ ಹೀಗೆ ಅವರ ಆಸಕ್ತಿಯ ವಿಸ್ತಾರ ಅಪಾರವದಾದ್ದು. ದ್ರವ ಚಲನೆ ಅಧ್ಯಯನ, ವೈಮಾನಿಕ ಎಂಜಿನಿಯರಿಂಗ್‌, ಕ್ಷಿಪಣಿ, ರಾಕೆಟ್‌, ಮೋಡ, ಹವಾಮಾನ ಹೀಗೆ ವಿಜ್ಞಾನಕ್ಷೇತ್ರದಲ್ಲಿ ವೈವಿಧ್ಯಮಯವಾದ ಕೊಡುಗೆ ನೀಡಿದ್ದಾರೆ.
ಬೆಂಗಳೂರಿನಲ್ಲಿರುವ ರಾಷ್ಟ್ರೀಯ ವೈಮಾನಿಕ ಪ್ರಯೋಗಾಲಯದ(NAL), ವೈಮಾನಿಕ ಇಂಜಿನೀಯರಿಂಗ್ ಕೇಂದ್ರ, ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸಡ್ ಸ್ಟಡೀಸ್ (NIAS),  ಬೆಂಗಳೂರಿನ ಜವಾಹರ ಲಾಲ್ ನೆಹರೂ ಉನ್ನತ ಅಧ್ಯಯನ ಕೇಂದ್ರದ (JNCASR) ಹಾಗೂ ಭಾರತ ವಿಜ್ಞಾನ ಅಕಾಡೆಮಿಯ ವಿವಿಧ ಜವಾಬ್ದಾರಿಯುತ ಹುದ್ದೆಗಳನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ. ಚಿಕ್ಕಂದಿನಿಂದಲೂ ಮೋಡಗಳ ಬಗ್ಗೆ ಭಾರಿ ಕುತೂಹಲ ಮತ್ತು ಅಪಾರ ಆಸಕ್ತಿ ಹೊಂದಿದ್ದ ಅವರು ಹವಾಮಾನ, ಮೋಡ, ಮಾನ್ಸೂನ್ ಮಳೆಯ ಬಗ್ಗೆ ಅನೇಕ ಕುತೂಹಲಕಾರಿ ವಿಷಯಗಳನ್ನು ಅನಾವರಣಗೊಳಿಸಿದ್ದಾರೆ. ಭೌತವಿಜ್ಞಾನಿ, ಹಿರಿಯ ಪತ್ರಕರ್ತ ಶಿವಾನಂದ ಕಣವಿ ಅವರೊಡನೆ ರೊದ್ದಮ್ ಅವರು ಮಾಡಿದ ಮಾತುಕತೆಯ ಟಿಪ್ಪಣಿಗಳು ಇಲ್ಲಿವೆ...
ಮೋಡಗಳೆಡೆಗಿನ ನಿಮ್ಮ ಸೆಳೆತಕ್ಕೆ ಮುಖ್ಯ ಕಾರಣಗಳೇನು? ಮೋಡಗಳಿಗೆ ಸಂಬಂಧಿಸಿದಂತೆ ಇನ್ನೂ  ಉತ್ತರ ಸಿಗದ ಪ್ರಶ್ನೆಗಳಾವವು?
ರೊದ್ದಂ: ಸದ್ಯದ ಪರಿಸರ ವಿಜ್ಞಾನದ ಎರಡು ಪ್ರಮುಖ ಸವಾಲುಗಳಾದ  ಹವಾಮಾನ ವೈಪರೀತ್ಯ ಮತ್ತು ಜಾಗತಿಕ ತಾಪಮಾನ ಹೆಚ್ಚಳದ ಸಂಶೋಧ ನೆಯ ಕೇಂದ್ರ ಬಿಂದು ಈಮೋಡಗಳು. ಈ ವಿಷಯ ದಲ್ಲಿರುವ ಅನೇಕ ಅನಿಶ್ಚಿತತೆಗಳ ಮೂಲಕಾರಣ ಮೋಡಗಳ ಬಗ್ಗೆ ನಮಗಿರುವ ಅಲ್ಪಜ್ಞಾನ.
ಮೇಲ್ನೋಟಕ್ಕೆ ಕಾಣುವಷ್ಟು ಮೋಡಗಳು ಸರಳ ವಲ್ಲ, ಬಿಡಿಸಲಾಗದ ಒಗಟುಗಳಿದ್ದಂತೆ. ಇದಕ್ಕೆ ಕಳೆದ ಹತ್ತು ವರ್ಷಗಳಲ್ಲಿ ಬದಲಾಗುತ್ತಿರುವ ಹವಾಮಾನ ಉತ್ತಮ ಉದಾಹರಣೆ.  ಪ್ರಕೃತಿ ಸದಾ ತನ್ನ ಒಡಲಲ್ಲಿಯ ಏರುಪೇರುಗಳ ಕುರಿತು ಮುನ್ಸೂಚನೆ ನೀಡುತ್ತಲೇ ಇರುತ್ತದೆ.  ಸ್ಪಷ್ಟ ಸುಳಿವು ನೀಡದಿದ್ದರೂ ಪರೋಕ್ಷ ಎಚ್ಚರಿಕೆಯನ್ನಂತೂ ನೀಡುತ್ತಿರುತ್ತದೆ. ಅದನ್ನು ಅರ್ಥ ಮಾಡಿಕೊಳ್ಳಲು  ನಮಗೆ ಸಾಧ್ಯವಾಗುತ್ತಿಲ್ಲ.

ಧ್ರುವಗಳಲ್ಲಿ ವೇಗವಾಗಿ ಕರಗುತ್ತಿರುವ ನೀರ್ಗಲ್ಲುಗಳು ಪರಿಸರ ನೀಡುತ್ತಿರುವ ಪರೋಕ್ಷ ಎಚ್ಚರಿಕೆ ಗಂಟೆ. ಅದು ನೀಡುವ ಎಚ್ಚರಿಕೆಯ ವಿಧಾನ ಮಾತ್ರ ಪ್ರತಿ ಬಾರಿ ವಿಭಿನ್ನವಾಗಿರುತ್ತದೆ. ಜಾಗತಿಕ ತಾಪಮಾನ ಹೆಚ್ಚಳ, ಹವಾಮಾನ ವೈಪ ರೀತ್ಯ ಸೇರಿದಂತೆ ಪ್ರಕೃತಿಯಲ್ಲಾಗುವ ಬದ ಲಾವಣೆಗಳನ್ನು ತಡೆಯಲು ನಮ್ಮಿಂದ ಸಾಧ್ಯವಿಲ್ಲ.  ಪರಿಸರ ಆಗಾಗ ನೀಡುತ್ತಿರುವ ಅಪಾಯದ ಎಚ್ಚರಿಕೆ ಗಂಟೆ  ಗ್ರಹಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು. ಇಲ್ಲದಿದ್ದರೆ ಅಪಾಯ ಕಾದಿದೆ.
ಪರಿಸರಕ್ಕೆ ಸಂಬಂಧಿಸಿದಂತೆ ಅತಿ ದೊಡ್ಡ ಅನಿಶ್ಚಿತತೆ  ಯಾವುದು?
ಖಂಡಿತ ಮೋಡಗಳು. ಮೋಡಗಳ ಪರಿಚಲನೆ, ಆವರ್ತನೆಯನ್ನು ಅರ್ಥ ಮಾಡಿಕೊಳ್ಳುವುದು ನಿಜಕ್ಕೂ ಸವಾಲಿನ ಕೆಲಸ. ತಾಪಮಾನ ಊಹಿಸದಷ್ಟು ಸುಲಭವಾಗಿ ಮೋಡ ಅಥವಾ ಮಳೆಯ ಬಗ್ಗೆ ಭವಿಷ್ಯ ನುಡಿಯುವುದು ಸವಾಲಿನ ಕೆಲಸ. ಮೋಡ ಮತ್ತು ಮಾರುತಗಳು ಚಲನಶೀಲ ಗುಣದಿಂದ ಹಠಾತ್ ತಮ್ಮ ದಿಕ್ಕು, ಪಥ ಬದಲಿಸುವ ಕಾರಣ ಊಹೆ ಕಷ್ಟ. ಮೋಡಗಳು ಮತ್ತು ತಾಪಯುಕ್ತ ವಿಕಿರಣದ ಪರಸ್ಪರ ಸಂಬಂಧ ಇನ್ನೂ ತೊಡಕಿನದು.
ಭೂ ಮಂಡಲದ ಹವಾಮಾನದ ಸಂಕೀರ್ಣ ಸ್ವರೂಪ ಮೊದಲಿನಿಂದಲೂ ನಮ್ಮಲ್ಲಿ ಗೊಂದಲ ಮೂಡಿ ಸಿದೆ. ಭೂಮಿ, ವಾಯುಮಂಡಲ ಹಾಗೂ ಸಾಗರಗಳ ಶಾಸ್ತ್ರೀಯ ಅಧ್ಯಯನ ಮತ್ತು ಉಪಗ್ರಹಗಳಂತಹ ತಂತ್ರಜ್ಞಾನ ಈ ದಿಸೆಯಲ್ಲಿ ನಮಗೆ ನೆರವಾಗುತ್ತಿದೆ. ವಾತಾವರಣದ ಮೇಲೆ ಮೋಡಗಳ ಪ್ರಭಾವ ಏನು?
ಭೂಮಂಡಲದ ವಾತಾವರಣಕ್ಕೂ ಮೋಡಗಳಿಗೂ ನೇರವಾದ ಸಂಬಂಧವಿದೆ. ಹಗಲು ಹೊತ್ತಿನಲ್ಲಿ ಸೂರ್ಯ ನಿಂದ ಭೂಮಿಯತ್ತ ಹೊರಡುವ ವಿಕಿರಣಗಳನ್ನು ಮೋಡಗಳು ತಡೆದು ಮರಳಿ ಪ್ರತಿಫಲನಗೊಳಿಸುವ ಕಾರಣ ವಾತಾವರಣ ತಂಪಾಗುತ್ತದೆ.  ರಾತ್ರಿ ಹೊತ್ತು ಭೂಮಿಯಿಂದ ಹೊರ ಹೊಮ್ಮುವ ಇನ್ಫ್ರಾರೆಡ್‌ಕಿರಣ ಗಳು ಮೋಡಗಳಿಂದಾಗಿ ಮರಳಿ ಭೂಮಿಗೆ ಪ್ರತಿಫಲನ ಗೊಳ್ಳುವ ಕಾರಣ ವಾತಾವರಣ ಬಿಸಿಯಾಗುತ್ತದೆ. ಭೂಮಿ ಮತ್ತು ಸೂರ್ಯನಿಂದ ಹೊರಹೊಮ್ಮುವ ವಿಕಿರಣಗಳ ಜತೆ ಮೋಡಗಳ ಸಂಬಂಧ  ಸಂಕೀರ್ಣವಾದದ್ದು. 
ಮಾನ್ಸೂನ್ ಮಾರುತಗಳಿಗೂ ಈ ಮಾತು ಅನ್ವಯಿಸುತ್ತದೆಯೇ?
ಮಾನ್ಸೂನ್ ಮುನ್ಸೂಚನೆಗಳ ವೈಫ಼ಲ್ಯದ ಅಥವಾ ಅನಿಶ್ಚಿತತೆಯ ಮೂಲ ಕಾರಣವೂ ಕೂಡ ಮೋಡಗಳ ಬಗ್ಗೆ ನಮಗಿದ್ದ ಅಲ್ಪಜ್ಞಾನವೇ ಕಾರಣ. ಭಾರತೀಯ ಹವಾಮಾನ ತಜ್ಞರು ಮತ್ತು ವಿಜ್ಞಾನಿಗಳು ಮಾತ್ರವಲ್ಲ, ವಿಶ್ವದ ಎಲ್ಲ ವಿಜ್ಞಾನಿಗಳೂ 
ಮಾರುತಗಳನ್ನು  ಮುಂಚಿತವಾಗಿ ಊಹಿಸಲು ವಿಫಲವಾಗಿದ್ದಾರೆ. 
ಭಾರತೀಯ ಹವಾಮಾನ ತಜ್ಞರು ಹೆಚ್ಚಾಗಿ ಪಾಶ್ಚಾತ್ಯ  ವಿಜ್ಞಾನಿಗಳನ್ನು ಅನುಸರಿಸುತ್ತಿರುವುದು ಒಳ್ಳೆಯ ಬೆಳವಣಿಗೆ ಅಲ್ಲ. ಪಾಶ್ಚಾತ್ಯ ವಿಜ್ಞಾನಿಗಳು ತಮ್ಮ ಅಗತ್ಯಕ್ಕೆ ತಕ್ಕಂತೆ ಸಂಶೋಧನೆ ಮಾಡುತ್ತಾರೆ. ಹೀಗಾಗಿ ನಾವು ನಮ್ಮದೇ ಕಾರ್ಯಪಟ್ಟಿಯನ್ನು ಅಳವಡಿಸಿಕೊಳ್ಳುವುದು ಉತ್ತಮ. ಪಾಶ್ಚಾತ್ಯರಲ್ಲಿ ತಾಪಮಾನದ ಬಗ್ಗೆ ಕಾಳಜಿ ಹೆಚ್ಚು ಮಳೆಯ ಬಗ್ಗೆ ಕಡಿಮೆ. ತಾಪಮಾನ ಮುನ್ಸೂಚನೆ ನೀಡುವುದು ಬಹು ಮಟ್ಟಿಗೆ ಸರಳ ಆದರೆ ಮಳೆ, ಮೋಡಗಳ ವಿಷಯ ಸಂಕೀರ್ಣ.
ಶತಮಾನಗಳಷ್ಟು ಹಳೆಯದಾದ ಪಂಚಾಂಗಗಳ ಆಧಾರದ ಮೇಲೆ ನುಡಿಯುವ ಹವಾಮಾನ ಮತ್ತು ಮಳೆ ಕುರಿತ ಭವಿಷ್ಯ ಎಷ್ಟರ ಮಟ್ಟಿಗೆ ಕರಾರುವಾಕ್ಕು ಆಗಿರುತ್ತದೆ? ಇವುಗಳ ಸತ್ಯಾಸತ್ಯತೆ ಎಷ್ಟು? ಪಂಚಾಂಗ ಮತ್ತು ಹವಾಮಾನ ಇಲಾಖೆಯ ಮಾಹಿತಿಗಳ ಪರಸ್ಪರ ಎಷ್ಟರ ಮಟ್ಟಿಗೆ ತಾಳೆಯಾಗುತ್ತವೆ?
ಮೊದಲನೆಯದಾಗಿ ಪಂಚಾಂಗ ಅಥವಾ ಹವಾಮಾನ ಇಲಾಖೆ ನೀಡುವ ಮಾಹಿತಿ ನಂಬಿಕೊಂಡು ನಮ್ಮ ರೈತರು ಕೃಷಿ ಮಾಡುವುದಿಲ್ಲ. ಮಳೆ, ಮಾರುತ, ಹವಾಮಾನದ ಬಗ್ಗೆ  ಸಾಂಪ್ರದಾಯಿಕ ಜ್ಞಾನ ಅವರಿಗೆ ಬಳುವಳಿಯಾಗಿ ಬಂದಿದೆ.  ಮೋಡಗಳ ಬಗ್ಗೆ ಭವಿಷ್ಯ ನುಡಿಯುವ ಪಂಚಾಂಗ ರಚಿಸಿದವರಿಗೆ ಯಾವ ಜ್ಞಾನವೂ ಇದ್ದಿರಲಿಲ್ಲ ಎಂದು ಹೇಳಲಾರೆ.   ಆದರೆ, ಹವಾಮಾನ ಇಲಾಖೆಯ ಅಂಕಿ, ಅಂಶಗಳು ಮತ್ತು ಪಂಚಾಂಗದ ಭವಿಷ್ಯವನ್ನು ಹೋಲಿಕೆ ಮಾಡಿದಾಗ ಒಂದೊಕ್ಕೊಂದು ತಾಳೆಯಾಗುವುದಿಲ್ಲ.
ಎಲ್ಲ ಮೋಡಗಳು ಮಳೆ ಸುರಿಸುತ್ತವೆ ಎಂದು ಹೇಳಲು ಸಾಧ್ಯವಿಲ್ಲ. ಮೋಡಗಳ ಜೀವಿತ ಪ್ರಮಾಣ  ಕಡಿಮೆ. ಮೋಡಗಳು ಘನೀಕರಿಸಿದ ದ್ರವ.   ಮೋಡ ಕರಗಿ  ಮಳೆಯಾಗುವ ಕ್ರಿಯೆ ನಿಜಕ್ಕೂ ಅದ್ಭುತ ರಾಸಾಯನಿಕ ಕ್ರಿಯೆ. ಸಾಗರ ಮೇಲ್ಮೈ ತಾಪಮಾನ ಮತ್ತು ಹವಾಮಾನ ಅಧ್ಯಯನಕ್ಕಾಗಿ ಇಸ್ರೊ ಕಳಿಸಿರುವ ಉಪಗ್ರಹಗಳಿಂದ ಏನಾದರೂ ಲಾಭವಾಗಿದೆಯೇ?
ಖಂಡಿತ. ಬಹಳ ಲಾಭವಾಗಿದೆ. ಕಳೆದ ವರ್ಷ ಒಡಿಶಾ ದಲ್ಲಿ ಬೀಸಿದ ಚಂಡಮಾರುತದ ಬಗ್ಗೆ ಉಪಗ್ರಹಗಳ ಆಧಾರದ ಮೇಲೆ ಭಾರತೀಯ ಹವಾಮಾನ ಇಲಾಖೆ ಮುಂಚಿತವಾಗಿ ನಿಖರ ಮಾಹಿತಿ ನೀಡಿತ್ತು.   2013ರಲ್ಲಿ ಪಶ್ಚಿಮ ಬಂಗಾಳ, ಆಂಧ್ರ ಪ್ರದೇಶದ ಕರಾವಳಿಗೆ ಫೈಲಿನ್ಚಂಡಮಾರುತ ಅಪ್ಪಳಿಸಿದಾಗ ಹವಾಮಾನ ತಜ್ಞರ ಸಮಯೋಚಿತ ನಿಖರ ಮಾಹಿತಿಯಿಂದ ಸಾವಿರಾರು ಜನರ ಜೀವ ಉಳಿಯಿತು. ಉಳಿದೆಲ್ಲ ರಾಷ್ಟ್ರಗಳು ವಿಫಲರಾದಾಗ ನಾವು ಕರಾರುವಾಕ್ಕು ಮಾಹಿತಿ ನೀಡಲು ಯಶಸ್ವಿಯಾಗಿದ್ದೆವು.
ಆದರೆ, ಅದೇ ಉತ್ತರಾಖಂಡದಲ್ಲಿಯ ವರ್ಷಸ್ಫೋಟದ ಬಗ್ಗೆ ಮುನ್ಸೂಚನೆ ನೀಡಲು ನಾವು  ವಿಫಲರಾದೆವು.  ಹವಾಮಾನ ಮುನ್ಸೂಚನೆಯನ್ನು ಸಮರ್ಥವಾಗಿ ಊಹಿಸಲು ನೆಲ​-ಜಲ​-ಗಾಳಿ ನಡುವಿನ ಪರಸ್ಪರ  ಸಂವಹನ  ತಿಳಿದುಕೊಳ್ಳುವುದು ​ತುಂಬಾ ಮುಖ್ಯ. ಹವಾಮಾನ ಮುನ್ಸೂಚನೆಯ ಕೆಲಸ  ಸಂಕೀರ್ಣವಾಗಿದ್ದು ಮಾನವ​ ನಿರ್ಮಿತ ಉಪಗ್ರಹ ಮತ್ತು ಸುಧಾರಿತ ವಿಜ್ಞಾನ-ತಂತ್ರಜ್ಞಾನದ ನೆರವಿನಿಂದ ಹವಾಮಾನವನ್ನು ಒಂದು ಹಂತಕ್ಕೆ ಅಂದಾಜಿಸಬಹುದು. 
ಭಾರತಕ್ಕೆ ಹೋಲಿಸಿದಾಗ ಅಮೆರಿಕ ಮತ್ತು ಬ್ರಿಟನ್‌ ಹವಾಮಾನ ತಜ್ಞರು ನಿಖರ ಮಾಹಿತಿ ನೀಡುತ್ತಾರೆ ಎಂಬ ಪ್ರತೀತಿ ಇದೆ.
ಉತ್ತರದ ದೇಶಗಳಿಗೆ ಹೋಲಿಸಿದರೆ ಉಷ್ಣ ವಲಯ ವಾತಾವರಣ ಭಾರಿ ಸಂಕೀರ್ಣತೆಯಿಂದ ಕೂಡಿದೆ. ಪಾಶ್ಚಾತ್ಯ ಮತ್ತು ಐರೋಪ್ಯ ರಾಷ್ಟ್ರಗಳ ವಾತಾವರಣದ ಅಧ್ಯಯನ ತುಂಬಾ ಸುಲಭ. ಆದರೆ, ನಮ್ಮಲ್ಲಿ ಹಾಗಲ್ಲ. ಆದರೂ, ಅಮೆರಿಕ ಹಾಗೂ ಬ್ರಿಟನ್ ಹವಾಮಾನ ತಜ್ಞರು ಮತ್ತು ವಿಜ್ಞಾನಿಗಳು ಅನೇಕ ಬಾರಿ ನಿಖರವಾದ ಮಾಹಿತಿ ನೀಡಲು ವಿಫಲರಾದ ನಿದರ್ಶನಗಳಿವೆ.
ಕೃತಕ ಮೋಡಗಳ ನಿರ್ಮಾಣದ ಬಗ್ಗೆ ಹೇಳಿ
ಮೋಡಗಳ ಕುರಿತಾದ ವೈಜ್ಞಾನಿಕ ಅಧ್ಯಯನ 1960ರಿಂದ  ಆರಂಭವಾಯಿತು. ಅವೆಲ್ಲ ಅತ್ಯಂತ ಸರಳ ಪ್ರಯೋಗಳಾಗಿದ್ದವು. ಆದರೆ, ಪ್ರಯೋಗಾಲಯದಲ್ಲಿ ನಿರ್ಮಿಸಿದ  ಕೃತಕ ಮೋಡಗಳು ನೈಜ ಮೋಡಗಳನ್ನು ಹೋಲುತ್ತಿರಲಿಲ್ಲ ಮತ್ತು ಅವುಗಳಂತೆ ವರ್ತಿಸುತ್ತಿರಲಿಲ್ಲ  ಎಂಬ ಕಾರಣಕ್ಕಾಗಿ 70ರ ದಶಕದ ವೇಳೆಗೆ  ಕೃತಕ ಮೋಡಗಳ ನಿರ್ಮಾಣ  ಪ್ರಯತ್ನ ಕಡಿಮೆಯಾಯಿತು.
1980ರಲ್ಲಿ ಈ ಪ್ರಯತ್ನವನ್ನು ನಾನು ಮುಂದುವರೆಸಿದೆ. ನಾವು ಅನೇಕ ಬಗೆಯ ಮೋಡಗಳನ್ನು ಪ್ರಯೋಗಾಲದಲ್ಲಿಯೇ ಕೃತಕವಾಗಿ ನಿರ್ಮಿಸುವ ಹಂತಕ್ಕೆ ಯಶಸ್ವಿಯಾದೆವು. ಕೃತಕ ಮೋಡಗಳ ನಿರ್ಮಾಣ ನಿಜಕ್ಕೂ ಕಷ್ಟದ ಕೆಲಸ. ಈಗೀಗ ಪ್ರಯೋಗಾಲಯಗಳಿಗಿಂತ  ಕಂಪ್ಯೂಟರ್‌ಗಳ ನೆರವಿನಿಂದ ವಿಶ್ವಾಮಿತ್ರ ಸೃಷ್ಟಿ (virtual simulation) ಸುಲಭವಾಗಿದೆ.
ಪುರಾತನ ಭಾರತೀಯ ವಿಜ್ಞಾನ  ಕ್ಷೇತ್ರದ ಸಾಧನೆಗಳ ಕುರಿತು 500 ಪುಟಗಳ ಬೃಹತ್ ಗ್ರಂಥ ಬರೆಯಲು ನಿಮಗೆ ದೊರೆತ ಪ್ರೇರಣೆ ಏನು?
ಪರಿಸರದ ಬಗೆಗೆ ನಮ್ಮಸಂಸ್ಕೃತಿಯ ದ್ರುಷ್ಟಿಕೋನದ ಬಗ್ಗೆ ನಾನು ಪುಸ್ತಕ ಬರೆದಿದ್ದೇನೆ. ವಿಜ್ಞಾನದ ಜತೆಗೆ ಭಾರತೀಯ ಕಲೆ, ಕಾವ್ಯ, ಸಾಹಿತ್ಯ  , ಇತಿಹಾಸವನ್ನೂ ಈ ಪುಸ್ತಕ ಒಳಗೊಂಡಿದೆ. ಅದರ್ಂತೆಯೇ ಅಮೆರಿಕದ ಒಬ್ಬ ವಿಜ್ಞಾನಿಯ ಜತೆ ಸೇರಿ ವಿಜ್ಞಾನ ಕ್ಷೇತ್ರಕ್ಕೆ ಭಾರತೀಯರ ಕೊಡುಗೆಯ ಪ್ರಮುಖ ವಿಷಯಗಳನ್ನು ತಿಳಿಸುವ  ‘ಎನ್‌ಸೈಕ್ಲೋಪಿಡಿಯಾ ಆಫ್‌ ಇಂಡಿಯನ್ ಸೈನ್ಸ್‌ಎಂಬ ಪುಸ್ತಕವನ್ನೂ  ನಾನು ಬರೆದಿದ್ದೇನೆ. ವಿಶ್ವಕ್ಕೆ ಮತ್ತು ಪಾಶ್ಚಾತ್ಯ ಶಿಕ್ಷಣ ಪಡೆದ ನಮ್ಮ ಪೀಳಿಗೆಯವರಿಗೆ ನಮ್ಮ ಪ್ರಾಚೀನ ವೈಜ್ಞಾನಿಕ ಪರಂಪರೆಯ ಬಗ್ಗೆ ಇರುವ ಅಜ್ಞಾನವೇ ನನ್ನನ್ನು ಪ್ರೇರಿಸಿತು.
ಕನ್ನಡಕ್ಕೆ: ಗವಿಸಿದ್ದಪ್ಪ ಬ್ಯಾಳಿ


No comments:

Post a Comment