(https://www.prajavani.net/op-ed/vyakti/father-of-the-indian-it-sector-faquir-chand-kohli-786915.html?)
ಭಾರತದ ಐ.ಟಿ. ಉದ್ಯಮದ ಭೀಷ್ಮ
ಕರ್ಮಯೋಗಿ ಎಫ್.ಸಿ. ಕೊಹ್ಲಿ
ಶಿವಾನಂದ
ಕಣವಿ
ದೇಶಕ್ಕಾಗಿ ಕೊನೆಯ ಕ್ಷಣದವರೆಗೂ ಶ್ರಮಪಡುತ್ತಲೇ ಫಕೀರ್ ಚಂದ್ ಕೊಹ್ಲಿ (96) ಅವರು ನವೆಂಬರ್ 26ರಂದು ನಿಧನರಾದರು.
ಅಕ್ಷರಶಃ ಮತ್ತು ಉಪಮಾತ್ಮಕ ಎರಡೂ ರೀತಿಯಲ್ಲಿಯೂ ಅವರು ಮಂಚೂಣಿಯಲ್ಲಿದ್ದ ವ್ಯಕ್ತಿ.
ಅವರು ಹುಟ್ಟಿದ್ದು, ಪ್ರಾಥಮಿಕ ವಿದ್ಯಾಭ್ಯಾಸ ಪಡೆದದ್ದು ಖೈಬರ್ ಕಣಿವೆಯ ಹತ್ತಿರದ ಪೆಶಾವರದಲ್ಲಿ; ಲಾಹೋರ್ ಸರ್ಕಾರಿ ಕಾಲೇಜಿನಿಂದ ಭೌತವಿಜ್ಞಾನದಲ್ಲಿ ಪದವಿ ಪಡೆದರು. 1944ರಲ್ಲಿ ಅವರಿಗೆ ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಕಲಿಕೆಗೆ ಕೆನಡಾದ ಕ್ವೀನ್ಸ್ ವಿಶ್ವವಿದ್ಯಾಲಯದ ಸ್ಕಾಲರ್‌ಶಿಪ್ ಸಿಕ್ಕಿತು. ಅಮೆರಿಕದ ಪ್ರಸಿದ್ಧ ಎಂಐಟಿಯಿಂದ ವಿದ್ಯುತ್ ಪಾವರ್ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಅವರು ಉತ್ತರ ಅಮೆರಿಕದಲ್ಲಿ ವ್ಯಾಸಂಗ ನಡೆಸುತ್ತಿದ್ದಾಗಲೇ, ತವರಿನಲ್ಲಿ ಅವರ ಕುಟುಂಬವು ಆಸ್ತಿ ಮತ್ತು ವ್ಯಾಪಾರವೆಲ್ಲವನ್ನೂ ದೇಶವಿಭಜನೆಯಿಂದಾಗಿ ಕಳೆದುಕೊಂಡು ನಿರಾಶ್ರಿತರಾದರು. ಆದರೆ ಭವಿಷ್ಯದತ್ತ ದೃಷ್ಟಿ ನೆಟ್ಟ ಕೊಹ್ಲಿ ಕುಟುಂಬವು ಸಿಟ್ಟು, ಸ್ವಮರುಕ ಮತ್ತು ಹಳೆಯ ನೆನಪುಗಳ ಕನವರಿಕೆಯಲ್ಲಿ ತನ್ನ ಚೈತನ್ಯವನ್ನು ಕಳೆದುಕೊಳ್ಳಲಿಲ್ಲ.
೧೯೫೧ ರಲ್ಲಿ ಸ್ವದೇಶಕ್ಕೆ ಮರಳಿ ಬಂದ ಕೊಹ್ಲಿ ಅವರು ಮುಂಬೈಯಲ್ಲಿರುವ ಟಾಟಾ ಎಲೆಕ್ಟ್ರಿಕ್ ಕಂಪನಿಯ ಸೇವೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಡಿಜಿಟಲ್ ಕಂಪ್ಯೂಟರ್‌ಗಳನ್ನು ಬಳಸಿದ ಏಷ್ಯಾದ ಮೊದಲ ಮತ್ತು ಜಗತ್ತಿನ ಮೂರನೇ ಪಾವರ್ ಕಂಪನಿ ಎಂಬ ಹೆಗ್ಗಳಿಕೆಗೆ ಅವರ ನಾಯಕತ್ವದಲ್ಲಿ ಈ ಕಂಪನಿ ಭಾಜನವಾಯಿತು. ಇದರ ಪರಿಣಾಮವಾಗಿಯೇ ಮುಂಬೈ ನಗರಕ್ಕೆ ಅತ್ಯುನ್ನತ ಗುಣಮಟ್ಟದ ಅನಿರ್ಬಂಧಿತ ವಿದ್ಯುತ್ ಕಳೆದ ಅರ್ಧ ಶತಮಾನಕ್ಕೂ ಹೆಚ್ಚಿನ ಅವಧಿಯಿಂದ ಪೂರೈಕೆಯಾಗುತ್ತಿದೆ. ಇದು ನ್ಯೂಯಾರ್ಕ್ ಸಿಟಿಯ ವಿದ್ಯುತ್ ಪೂರೈಕೆಗೆ ಸಮಾನ ಅಥವಾ ಅದಕ್ಕಿಂತ ಉತ್ತಮ ಎಂದು ವಿದ್ಯುತ್ ಕ್ಷೇತ್ರದಲ್ಲಿ ಕೆಲಸ ಮಾಡುವ ಎಂಜಿನಿಯರ್‌ಗಳು ಹೇಳುತ್ತಾರೆ.
50 ಮತ್ತು 60ರ ದಶಕದಲ್ಲಿ ಕೊಹ್ಲಿ ಅವರು ಪಿ.ಕೆ. ಕೇಳ್ಕರ್ ಜತೆಗೂಡಿ ಬಾಂಬೆ ಮತ್ತು ಕಾನ್ಪುರದ ಐಐಟಿಗಳ ಸ್ಥಾಪನೆಯ ಕೆಲಸದಲ್ಲಿ ತೊಡಗಿದರು. ಎರಡೂ ಸಂಸ್ಥೆಗಳಿಗೆ ವಿದೇಶದ ವಿಶ್ವವಿದ್ಯಾಲಯಗಳಲ್ಲಿದ್ದ ಭಾರತೀಯ ಬೋಧಕರನ್ನು ನೇಮಿಸಿಕೊಂಡರು. ಭಾರತ ಮತ್ತು ಸಿಲಿಕಾನ್ ವ್ಯಾಲಿಯ ಮಾಹಿತಿ ತಂತ್ರಜ್ಞಾನ ಕ್ರಾಂತಿಯಲ್ಲಿ ಐಐಟಿಗಳು ನಿರ್ಣಾಯಕ ಪಾತ್ರ ವಹಿಸಿವೆ ಎಂಬುದು ಜನಜನಿತ. ಈ ಎರಡೂ ಸಂಸ್ಥೆಗಳಿಂದ ಬಂದ ಪ್ರತಿಭಾವಂತರಲ್ಲಿ ಹಲವರು ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ನಲ್ಲಿ (ಟಿಸಿಎಸ್) ಕೊಹ್ಲಿ ಅವರನ್ನು ಸೇರಿಕೊಂಡರು. 80ರ ದಶಕದಲ್ಲಿ ಇನ್ಫೊಸಿಸ್ ಸ್ಥಾಪಿಸಿದ ಎನ್.ಆರ್. ನಾರಾಯಣಮೂರ್ತಿ ಮತ್ತು ನಂದನ್ ನಿಲೇಕಣಿ ಅವರೂ ಈ ಐಐಟಿ ಗಳಲ್ಲಿ ವಿದ್ಯಾಭ್ಯಾಸ ಮಾಡಿದವರು.
ವಿದ್ಯುತ್ ಎಂಜಿನಿಯರಿಂಗ್‌ನಲ್ಲಿ ಕಂಪ್ಯೂಟರ್ ಬಳಸಿದ್ದನ್ನು ಗಮನಿಸಿದ್ದ ಜೆ.ಆರ್.ಡಿ ಟಾಟಾ ಅವರು, ಕೊಹ್ಲಿಯವರನ್ನು 1969ರಲ್ಲಿ ಆಗ ತಾನೇ ಸ್ಥಾಪನೆಗೊಂಡ ಟಿಸಿಎಸ್‌ಗೆ ಆಹ್ವಾನಿಸಿದರು.
1968ರಲ್ಲಿಯೇ ಟಿಸಿಎಸ್ ಸ್ಥಾಪಿಸಿದ ಜೆ.ಆರ್.ಡಿ ಟಾಟಾ ಅವರ ಜಾಣ್ಮೆ ಮತ್ತು ಕೆಚ್ಚನ್ನು ಎಂಥವರೂ ಮೆಚ್ಚಲೇಬೇಕು. ಆ ಹೊತ್ತಿನಲ್ಲಿ ಮೈಕ್ರೊಸಾಫ್ಟ್ ಆಗಲಿ ಇಂಟೆಲ್ ಆಗಲಿ, ಸ್ಯಾಪ್, ಎಕ್ಸೆಂಚರ್, ಗೂಗಲ್ ಮುಂತಾದವುಗಳೇ ಆಗಲಿ ಇರಲಿಲ್ಲ. ಅಂತಹ ದಿನಗಳಲ್ಲಿ ಭಾರತದ ಸಮಾಜ ಮತ್ತು ಅರ್ಥವ್ಯವಸ್ಥೆಗೆ ಕಂಪ್ಯೂಟರ್‌ನ ಪ್ರಯೋಜನವನ್ನು ಒದಗಿಸುವ ಕನಸನ್ನು ಟಾಟಾ ಕಾಣುತ್ತಿದ್ದರು.
ಇಂದು, ಜಗತ್ತಿನ ವ್ಯಾಪಾರದಲ್ಲಿ ಭಾರತವು ಐಟಿ ಸೇವೆಗಳಿಗೆ ಪ್ರಸಿದ್ಧವಾಗಿದೆ. ಭಾರತದ ಐ.ಟಿ. ಉದ್ಯಮವು ಇಂದು ಸುಮಾರು ₹15 ಲಕ್ಷ ಕೋಟಿ ವಾರ್ಷಿಕ ವಹಿವಾಟು ನಡೆಸುವಷ್ಟು ಬೆಳೆದಿದೆ. ಹೆಚ್ಚುತ್ತಲೇ ಇರುವ ನಮ್ಮ ತೈಲ ಮತ್ತು ಇತರ ಆಮದುಗಳಿಗೆ ಸಾಫ್ಟವೇರ್ ರಫ್ತಿನಿಂದ ಬರುವ ವರಮಾನವು ವಿದೇಶಿ ವಿನಿಮಯ ಒದಗಿಸಿಕೊಡುತ್ತಿದೆ. ಸಾಫ್ಟವೇರ್ ಕ್ಷೇತ್ರದಲ್ಲಿ ಪ್ರಥಮ ಸ್ಥಾನಕ್ಕಾಗಿ ಪ್ರಸಿದ್ಧ ಅಕ್ಸೆಂಚರ್ ಮತ್ತು ಅಗ್ರಗಾಮಿ ಐಬಿಎಂ ಜತೆಗೆ ಟಿಸಿಎಸ್ ಇಂದು ನಿಕಟ ಸ್ಪರ್ಧೆಯಲ್ಲಿದೆ. ಟಾಟಾ ಸಮೂಹದ ಮುಕುಟದಲ್ಲಿ ಟಿಸಿಎಸ್ ಅದ್ವಿತೀಯ ರತ್ನ.
ಕೊಹ್ಲಿ ಅವರು ಟಿಸಿಎಸ್ ಚುಕ್ಕಾಣಿ ಹಿಡಿದಾಗ ಪರಿಸ್ಥಿತಿ ಹೀಗಿರಲಿಲ್ಲ. ಒಂದು ವರ್ಷ ಪೂರೈಸಿದ್ದ ಕಂಪನಿಗೆ ಹೇಳಿಕೊಳ್ಳುವಂತಹ ಸಾಧನೆಯೇನೂ ಇರಲಿಲ್ಲ. ಕೆಲವೇ ಮಂದಿ ಕನ್ಸಲ್ಟೆಂಟ್‌ಗಳನ್ನು ಹೊಂದಿದ್ದ ಕಂಪನಿ ಕೆಲವು ಲಕ್ಷ ರೂಪಾಯಿಗಳ ನಷ್ಟದಲ್ಲಿತ್ತು. 1968–69ರಲ್ಲಿ ಭಾರತದಲ್ಲಿ ಕಂಪ್ಯೂಟರ್ ಸೇವೆಗಳನ್ನು ಬಳಸಿಕೊಳ್ಳುವ ಉಮೇದು ಇದ್ದವರು ಬಹಳ ಇರಲಿಲ್ಲ. ಮುಂಬೈ ಮತ್ತು ಭಾರತದ ಇತರೆಡೆಗಳಲ್ಲಿನ ಸಂಭಾವ್ಯ ಗ್ರಾಹಕರನ್ನು ಕೊಹ್ಲಿ ಅವರು ಹುಡುಕಾಡತೊಡಗಿದರು: ಉತ್ತಮ ಡೈರೆಕ್ಟರಿಯನ್ನು ಎದುರು ನೋಡುತ್ತಿರುವ ದೂರಸಂಪರ್ಕ ಕಂಪನಿಗಳು; ಪರೀಕ್ಷೆಯ ಫಲಿತಾಂಶ ಮತ್ತು ಅಂಕಪಟ್ಟಿಯನ್ನು ತ್ವರಿತವಾಗಿ ನೀಡಲು ಬಯಸುವ ವಿಶ್ವವಿದ್ಯಾಲಯಗಳು; ಸಾವಿರಾರು ಗ್ರಾಹಕರ ಬಿಲ್ ಸಿದ್ಧಪಡಿಸಲು ತಿಣುಕಾಡುತ್ತಿದ್ದ ಸೇವಾ ಕಂಪನಿಗಳು; ಲೆಕ್ಕಪತ್ರ ನಿರ್ವಹಣೆಗೆ ಸಂಕಷ್ಟಪಡುತ್ತಿದ್ದ ಬ್ಯಾಂಕ್ ಮತ್ತು ವಿಮಾ ಕಂಪನಿಗಳು; ಲೆಕ್ಕಪತ್ರ ಮತ್ತು ವೇತನ ಪಾವತಿ ನಿರ್ವಹಣೆಗೆ ನೆರವು ನಿರೀಕ್ಷಿಸುತ್ತಿದ್ದ ಯಾವುದೇ ಕಂಪನಿಗಳು ಮುಂತಾದವುಗಳೆಲ್ಲವೂ ಕೊಹ್ಲಿ ಅವರ ಗುರಿಯಾಗಿದ್ದವು. ಆದರೆ ವಿದೇಶಿ ವಿನಿಮಯ ಕೊರತೆಯಿಂದ ಬಳಲಿದ್ದ ಸರ್ಕಾರವು ದುಬಾರಿ ಕಂಪ್ಯೂಟರ್‌ಗಳ ಆಮದನ್ನು ಪ್ರೋತ್ಸಾಹಿಸುತ್ತಿರಲಿಲ್ಲ ಎಂಬುದು ಕೊಹ್ಲಿ ಎದುರಿಸಿದ ಮೊದಲ ತೊಡಕಾಗಿತ್ತು.
ಭಾರಿ ಒತ್ತಡದ ಬಳಿಕ ಸರ್ಕಾರವು ಷರತ್ತುಬದ್ಧವಾದ ತಾತ್ಕಾಲಿಕ ಅನುಮತಿ ನೀಡಿತು; ಕಂಪ್ಯೂಟರ್‌ಗಳಿಗೆ ನೀಡುವ ಹಣಕ್ಕಿಂತ ಹೆಚ್ಚಿನ ವಿದೇಶಿ ವಿನಿಮಯವನ್ನು ಗಳಿಸಬೇಕು ಎಂಬುದು ಆ ಷರತ್ತು. ಹೀಗೆ, ಭಾರತದ ಮಣ್ಣಿನಲ್ಲಿ ದೃಢವಾಗಿ ಕಾಲೂರಿಕೊಂಡೇ ಟಿಸಿಎಸ್‌ನ ಜಾಗತಿಕ ಪಯಣ ಆರಂಭವಾಯಿತು.
ಕಂಪ್ಯೂಟರ್ ಬಳಸುವ ಮೂಲಕ ವ್ಯಾಪಾರದಲ್ಲಿನ ದಕ್ಷತೆ ಹೆಚ್ಚಿಸಲು ತಮ್ಮ ತಂಡದ ಮತ್ತು ಭಾರತದ ಪ್ರತಿಭಾವಂತ ಎಂಜಿನಿಯರ್‌ಗಳು ಮತ್ತು ಪ್ರೋಗ್ರಾಮರ್‌ಗಳು ನೆರವಾಗಬಲ್ಲರು ಎಂಬುದನ್ನು ಶ್ರೀಮಂತ ಮತ್ತು ಅಭಿವೃದ್ಧಿ ಹೊಂದುತ್ತಿದ್ದ ದೇಶಗಳಿಗೆ ಮನವರಿಕೆ ಮಾಡಲು ಕೊಹ್ಲಿ ಪ್ರಪಂಚ ಸುತ್ತ ತೊಡಗಿದರು. ಈಗಾಗಲೇ ಕಂಪ್ಯೂಟರ್ ಬಳಸುತ್ತಿರುವವರಿಗೆ ಹೊಸ ಸಾಫ್ಟವೇರ್ ಒದಗಿಸುವ ಮೂಲಕ, ಅವರ ಸಮಸ್ಯೆಗಳನ್ನು ಪರಿಹರಿಸುವ ಮೂಲಕ ಟಿಸಿಎಸ್ ನೆರವಾಗಬಲ್ಲುದು ಎಂದು ತುಂಬು ಹೃದಯದ ಪ್ರಚಾರ ಮಾಡಿದರು.
ಟಿಸಿಎಸ್ ಕೆಲಸವನ್ನು ಕಣ್ಣಾರೆ ನೋಡಬೇಕು ಎಂದು ಬಯಸಿದವರಿಗೆ, ತಮ್ಮ ಪ್ರತಿಭಾವಂತರ ತಂಡವನ್ನು ಗ್ರಾಹಕರ ಹತ್ತಿರವೇ ಕಳಹಿಸಲು ಕೊಹ್ಲಿ ಸಿದ್ಧವಿದ್ದರು. ನಿಗದಿತ ಗಡುವು ಮತ್ತು ವೆಚ್ಚದಲ್ಲಿ ತೃಪ‍್ತಿಕರವಾಗಿ ಪೂರ್ಣಗೊಳಿಸುವ ಖಾತರಿಯಲ್ಲಿ ಯೋಜನೆಯನ್ನು ಭಾರತಕ್ಕೆ ಹೊರಗುತ್ತಿಗೆ ನೀಡುವಂತೆ ಕಂಪನಿಗಳ ಮನವರಿಕೆ ಸಾಧ್ಯವಾದರೆ, ಇದರಿಂದಾಗುವ ವೆಚ್ಚ ಕಡಿತವು ಎರಡೂ ಕಡೆಗಳಿಗೆ ಲಾಭದಾಯಕ ಎಂದೂ ಗ್ರಾಹಕರಿಗೆ ತಿಳಿಸಿದರು.
ದೊಡ್ಡ ಐಟಿ ಯೋಜನೆಗಳ ಅನುಷ್ಠಾನ ಅಥವಾ ವ್ಯಾಪಾರ ವಿಸ್ತರಣೆಯ ಸವಾಲನ್ನು ಕೊಹ್ಲಿ ಎದುರಿಸಿದ್ದು ಹೇಗೆ? ಪ್ರೋಗ್ರಾಮಿಂಗ್ ಎಂಬುದು ಮುಖ್ಯವಾಗಿ ಕುಶಲಕರ್ಮಿಯ ಕೆಲಸವನ್ನು ಹೋಲುವ ಚಟುವಟಿಕೆ. ಹಾಗಾಗಿ ಸಾಫ್ಟ್ವವೇರ್ ಅಭಿವೃದ್ಧಿಯನ್ನು ಕೈಗಾರಿಕೀಕರಣಗೊಳಿಸುವುದೇ ಇಲ್ಲಿನ ಪ್ರಮುಖ ಸವಾಲು ಆಗಿತ್ತು. ಪ್ರೋಗ್ರಾಮಿಂಗ್ ಮಾನದಂಡಗಳು, ಗುಣಮಟ್ಟದ ಮಾನದಂಡಗಳು, ಮಾಡ್ಯೂಲ್ ಗಳ ರಚನೆ, ಕೆಲಸವನ್ನು ಘಟಕಗಳಾಗಿ ವಿಭಜಿಸುವ ಮೂಲಕ ಏಕಕಾಲಕ್ಕೆ ಹಲವರು ಕೆಲಸ ಮಾಡುವ ಸ್ಥಿತಿ ನಿರ್ಮಾಣ, ಸಾಫ್ಟ್ವವೇರ್ ಘಟಕಗಳ ಸಿದ್ಧ ಲೈಬ್ರೆರಿ ರಚನೆ, ಸಾಫ್ಟವೇರ್ ಅಭಿವೃದ್ಧಿ ಮತ್ತು ನಿರ್ವಹಣೆಯ ಕೆಲವು ಭಾಗಗಳನ್ನು ಸ್ವಯಂಚಾಲಿತಗೊಳಿಸುವುದು ಇತ್ಯಾದಿ ವಿಷಯಗಳು ಇದರಲ್ಲಿ ಒಳಗೊಂಡಿದ್ದವು. ನಂತರದಲ್ಲಿ ಇದುವೇ ಸಾಫ್ಟವೇರ್ ಎಂಜಿನಿಯರಿಂಗ್ ಎಂಬ ಕ್ಷೇತ್ರದ ಹೆಸರಾಯಿತು.
ಸಮರ್ಥ ಸಾಫ್ಟವೇರ್ ತಂತ್ರಜ್ಞರು, ಯೋಜನಾ ವ್ಯವಸ್ಥಾಪಕರು, ಎಂಜಿನಿಯರ್‌ಗಳು, ಗುಣಮಟ್ಟ ಪರಿಣತರು, ಮತ್ತು ಮಾನವ ಸಂಪನ್ಮೂಲ ನಿರ್ವಾಹಕರ ದೊಡ್ಡ ಪಡೆಯನ್ನೇ ಕೊಹ್ಲಿ ಅವರು ಟಿಸಿಎಸ್‌ನಲ್ಲಿ ಕಟ್ಟಿದರು. ಟಿಸಿಎಸ್‌ನ ಹೊರಗಿನವರೂ ಸ್ವಲ್ಪ ಕಾಲದಲ್ಲಿಯೇ ಇದೇ ವಿಧಾನವನ್ನು ಅನುಸರಿಸಲು ತೊಡಗಿದರು. ಭಾರತದ ಸಾಫ್ಟವೇರ್ ಉದ್ಯೋಗ ಜಾಗತಿಕ ಮಟ್ಟದಲ್ಲಿ ಒಂದು ದೊಡ್ಡ ವಿದ್ಯಮಾನವಾಗಿ ಬೆಳೆಯಿತು. ಟಿಸಿಎಸ್‌ನಿಂದ ಹೊರಬಂದು ಸ್ವಂತ ಐ.ಟಿ ಕಂಪನಿ ಸ್ಥಾಪಿಸಿದವರು ಅಥವಾ ಬೇರೆ ಕಂಪನಿಗಳಲ್ಲಿ ಸಿಇಒ, ಸಿಒಒ ಮತ್ತು ಸಿಟಿಒ ಹಾಗೂ ಮಧ್ಯಮ ಹಂತದ ಪ್ರಾಜೆಕ್ಟ ಮ್ಯಾನೇಜರ್ ಆದವರನ್ನು ಗಮನಿಸಿದರೆ, ಕೊಹ್ಲಿ ಅವರು ಕಟ್ಟಿದ್ದು ಟಿಸಿಎಸ್ ಅನ್ನು ಮಾತ್ರವಲ್ಲ ಭಾರತದ ಇಡೀ ಐ.ಟಿ. ಉದ್ಯಮಕ್ಕೆ ಬೇಕಾದ ಮಾನವ ಸಂಪನ್ಮೂಲವನ್ನು ಎಂಬುದು ವೇದ್ಯವಾಗುತ್ತದೆ.
1990ರ ದಶಕದ ಆರಂಭದಲ್ಲಿಯೇ ಕೊಹ್ಲಿ ಅವರು ವೈ2ಕೆ ಸಮಸ್ಯೆಯನ್ನು ಗುರುತಿಸಿದ್ದರು. ಪ್ರಮುಖವಾಗಿ ಕಂಪ್ಯೂಟರ್ ಬಳಸುವ ಎಲ್ಲರಿಗೂ ಈ ಸಮಸ್ಯೆಯಿಂದ ಹೊರಗೆ ಬರಲೇಬೇಕಿತ್ತು. 2000ನೇ ಇಸವಿ ಜನವರಿ 1ರಂದು 12:01 ಗಂಟೆ ಆದ ಬಳಿಕವೂ ತಮ್ಮ ಕಂಪ್ಯೂಟರ್‌ಗಳು ಸರಿಯಾಗಿ ಕೆಲಸ ಮಾಡುತ್ತಿವೆ ಎಂಬ ಖಾತರಿ ಬೇಕಿತ್ತು. ಈ ಸಮಸ್ಯೆಯು ವ್ಯಾಪಾರವನ್ನೆಲ್ಲ ಅಲ್ಲೋಲಕಲ್ಲೋಲ ಮಾಡಿಬಿಡಬಹುದು ಎಂಬ ಭೀತಿ ಇತ್ತು. ವ್ಯಾಪಾರವು ಸುಗಮವಾಗಿ ಮುಂದುವರಿಯುತ್ತದೆ ಎಂಬುದರ ಖಾತರಿಗೆ ಕಂಪ್ಯೂಟರ್ ಪ್ರೋಗ್ರಾಂಗಳ ಕೋಟ್ಯಂತರ ಸಾಲು ಕೋಡ್‌ಗಳನ್ನು ಪರಿಶೀಲಿಸಬೇಕಿತ್ತು. ಈ ಕೆಲಸವು ಹೊಸ ಶತಮಾನದ ಆರಂಭಕ್ಕೆ ಸಾಕಷ್ಟು ಮುಂಚಿತವಾಗಿಯೇ ಆಗಬೇಕಿತ್ತು.
ಈ ಕೋಡ್ ಲೋಪವನ್ನು ಸರಿಪಡಿಸಿದ್ದೇ ಟಿಸಿಎಸ್ ಮತ್ತು ಭಾರತದ ಇತರ ಹಲವು ಸಣ್ಣ ಮತ್ತು ದೊಡ್ಡ ಐ.ಟಿ ಕಂಪನಿಗಳ ವರಮಾನದಲ್ಲಿನ ನೆಗೆತಕ್ಕೆ ಕಾರಣ ಎಂಬುದನ್ನು ವ್ಯಾಪಾರೋದ್ಯಮ ಇತಿಹಾಸಕಾರರು ಗುರುತಿಸಿದ್ದಾರೆ. ಆದರೆ, 2–3 ವರ್ಷಗಳಲ್ಲಿ ಟಿಸಿಎಸ್ 70 ಕೋಟಿ ಸಾಲು ಕೋಡ್‌ಗಳನ್ನು ಪರಿಶೀಲಿಸಿ ಸರಿಪಡಿಸಿತು ಮತ್ತು ಇದು ಆಗ ಜಗತ್ತಿನಲ್ಲಿ ಇದ್ದ ಒಟ್ಟು ಕೋಡ್‌ಗಳ ಶೇ 30ರಷ್ಟು ಎಂಬುದು ಬಹಳಷ್ಟು ಜನರಿಗೆ ಗೊತ್ತಿಲ್ಲ. ಕೊಹ್ಲಿ, ಅವರ ಕೈಕೆಳಗೆ ಬೆಳೆದ ಎಸ್. ರಾಮದೊರೈ, ಎಸ್. ಮಹಾಲಿಂಗಂ ಮತ್ತು ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ಮುಖ್ಯಸ್ಥ ಕೇಶವ ನೊರಿ ಅವರು ಈ ಸಮಸ್ಯೆ ಪರಿಹಾರಕ್ಕೆ ಅನ್ವಯಿಸಿದ ಸಿಸ್ಟಮ್ ಎಂಜಿನಿಯರಿಂಗ್ ಮತ್ತು ಸಾಫ್ಟ್‌ವೇರ್ ಎಂಜಿನಿಯರಿಂಗ್‌ನ ಜಾಣ್ಮೆಯೇ ಈ ಯಶಸ್ಸಿನ ಹಿಂದಿನ ರಹಸ್ಯ.
ವೈ2ಕೆ ಸಮಸ್ಯೆ ಪರಿಹಾರದ ಬಳಿಕ, ಗ್ರಾಹಕರ ಸಾಫ್ಟ್‌ವೇರ್‌ಗಳನ್ನು ಇನ್ನಷ್ಟು ಉತ್ತಮಪಡಿಸುವತ್ತ ಟಿಸಿಎಸ್ ಗಮನ ಹರಿಸಿತು. ಆ ಹೊತ್ತಿಗೆ ಗ್ರಾಹಕರ ಕಂಪ್ಯೂಟರ್‌ಗಳ ಒಳಹೊರಗೆಲ್ಲ ಟಿಸಿಎಸ್‌ಗೆ ಗೊತ್ತಿತ್ತು! ಮುಂದಿನ ಮೂರು ವರ್ಷಗಳಲ್ಲಿ ಅಂದರೆ 2003ರಲ್ಲಿ ಟಿಸಿಎಸ್ ವರಮಾನವು ನೂರು ಕೋಟಿ ಡಾಲರ್ (ಈಗಿನ ದರದಲ್ಲಿ ಸುಮಾರು ₹ 7,400 ಕೋಟಿ). ಈ ಮಟ್ಟಕ್ಕೆ ಬೆಳೆದ ಭಾರತದ ಮೊದಲ ಸಾಫ್ಟ್‌ವೇರ್ ಕಂಪನಿ ಎಂದು ಪ್ರಸಿದ್ಧಿ ಪಡೆಯಿತು.
ಡಾಲರ್‌ನಲ್ಲಿ ವರಮಾನ ಗಳಿಸುತ್ತಿದ್ದ ಅಷ್ಟೂ ದಿನಗಳಲ್ಲಿಯೂ ಕೊಹ್ಲಿ, ಅವರ ನಂತರ ಬಂದ ಸಿಇಒಗಳಾದ ಎಸ್. ರಾಮದೊರೆ ಮತ್ತು ಎನ್. ಚಂದ್ರಶೇಖರನ್ ಅವರು ಭಾರತದ ಅರ್ಥ ವ್ಯವಸ್ಥೆ ಮತ್ತು ಸಮಾಜವನ್ನು ಕಂಪ್ಯೂಟರ್ ಬಳಕೆಯ ಮೂಲಕ ಆಧುನಿಕಗೊಳಿಸಬೇಕು ಎಂಬ ಜೆ.ಆರ್.ಡಿ ಟಾಟಾ ಅವರ ಮೂಲ ಧ್ಯೇಯದಿಂದ ಕಣ್ಣು ತೆಗೆದಿರಲೇ ಇಲ್ಲ.
ಭಾರತದಲ್ಲಿ ಐ.ಟಿ. ಯೋಜನೆಗಳಿಗೆ ಹಣವೇ ಇರಲಿಲ್ಲ. ಡಿಜಿಟಲ್ ಇಂಡಿಯಾದಿಂದ ಭಾರತದಲ್ಲಿ ನಿರುದ್ಯೋಗ ಸಮಸ್ಯೆ ಸೃಷ್ಟಿಯಾಗಬಹುದು ಎಂಬ ರಾಜಕೀಯ ನಾಯಕರ ಭೀತಿ ಮತ್ತು ಮತ್ತು ಅಧಿಕಾರಶಾಹಿಯ ವ್ಯವಸ್ಥೆಯಲ್ಲಿ ಟಿಸಿಎಸ್ ಹೆಜ್ಜೆ ಮುಂದಿಟ್ಟಿತು. ಮುಂದುವರಿದ ಹಲವು ದೇಶಗಳಿಗಿಂತ ಭಾರತದ ಹತ್ತಾರು ಕಂಪನಿಗಳು ಹೆಚ್ಚು ಕಂಪ್ಯೂಟರ್ ಬಳಸುತ್ತಿರುವುದರ ಹಿಂದೆ ಕೊಹ್ಲಿ, ರಾಮದೊರೆ ಮತ್ತು ಚಂದ್ರಶೇಖರನ್ ಅವರ ಶ್ರಮವಿದೆ. ಇದು ಸಾಮಾಜಿಕ ಹೊಣೆಗಾರಿಕೆ ನೀತಿಯ ಜತೆಗೆ ವ್ಯಾಪಾರದ ಅತ್ಯುತ್ತಮ ಕಾರ್ಯತಂತ್ರವೂ ಹೌದು.
ಕೆಲ ಮ್ವುಅಟ್ಟಿಗೆ ಡಾಲರ್ ಲಾಭವನ್ನು ಕಡೆಗಣಿಸಿಯೂ ಟಿಸಿಎಸ್ ಭಾರತವನ್ನು ಡಿಜಿಟಲೀಕರಣ ಮಾಡಿದ್ದರ ಪರಿಣಾಮವಾಗಿ ದೇಶವು 19ನೇ ಶತಮಾನದಿಂದ ನೇರವಾಗಿ 21ನೇ ಶತಮಾನಕ್ಕೆ ನೆಗೆಯಿತು. ಬೃಹತ್ ಮತ್ತು ಅತ್ಯಂತ ಸಂಕೀರ್ಣವಾದ ಡಿಜಿಟಲ್ ವ್ಯವಸ್ಥೆಗಳನ್ನು ಕಟ್ಟುವ ಅನುಭವವೂ ಟಿಸಿಎಸ್‌ಗೆ ಸಿಕ್ಕಿತು.
1995–96ರಲ್ಲಿ ಕೊಹ್ಲಿ ಅವರು ಟಿಸಿಎಸ್‌ನ ಸಿಇಒ ಹುದ್ದೆಯಿಂದ ನಿರ್ಗಮಿಸಿ, ಸಂಸ್ಥೆಯ ಕಾರ್ಯನಿರ್ವಾಹಕೇತರ ಉಪಾಧ್ಯಕ್ಷರಾದರು. ಸುಲಲಿತ ಅಧಿಕಾರ ಹಸ್ತಾಂತರದ ವಿಚಾರದಲ್ಲಿಯೂ ಅವರು ಮೇಲ್ಪಂಕ್ತಿ ಹಾಕಿಕೊಟ್ಟರು. ಈ ರೀತಿಯ ಅಧಿಕಾರ ಹಸ್ತಾಂತರವು ಭಾರತದ ಹಲವು ಕಂಪನಿಗಳ ಕೊರತೆಯಾಗಿದೆ. ಟಿಸಿಎಸ್‌ನ 52 ವರ್ಷಗಳ ಇತಿಹಾಸದಲ್ಲಿ ಸ್ಥಾಪಕ ಪಿ.ಎಂ. ಅಗರ್‌ವಾಲ್ ಸೇರಿದಂತೆ ಸಿಇಒ ಆದವರು ಐವರು ಮಾತ್ರ.
1999ರಲ್ಲಿ ಕೊಹ್ಲಿ ಅವರು ಟಿಸಿಎಸ್‌ನಿಂದ ಔಪಚಾರಿಕವಾಗಿ ನಿವೃತ್ತರಾದರು. ಟಾಟಾ ಕಂಪನಿಗಳಿಗೆ ಮಾತ್ರವಲ್ಲ, ಇಡೀ ದೇಶಕ್ಕೆ ಮಾರ್ಗದರ್ಶನ ಮತ್ತು ಸಮಸ್ಯೆ ಪರಿಹಾರಕ್ಕಾಗಿ ಸಲಹೆ ನೀಡುವುದನ್ನು ಮುಂದುವರಿಸಿದರು. ಅವರ ಮಾರ್ಗದರ್ಶನದಿಂದ ಹೇಗೆಲ್ಲ ಪ್ರಯೋಜನ ಪಡೆದಿದ್ದೇವೆ ಎಂಬುದನ್ನು ಟಾಟಾ ಸನ್ಸ್‌ನ ಈಗಿನ ಅಧ್ಯಕ್ಷ ಎನ್.ಚಂದ್ರಶೇಖರನ್ ಸೇರಿ ಅನೇಕ ಉದ್ಯಮಿಗಳು, ಶಿಕ್ಷಣ ತಜ್ಣ್ರರು ಬಹಿರಂಗವಾಗಿಯೇ ಹೇಳಿಕೊಂಡಿದ್ದಾರೆ.
ಡಿಜಿಟಲ್ ಇಂಡಿಯಾದ ಸ್ಥಿತಿ ಬಗ್ಗೆ ಕೊಹ್ಲಿ ಅವರಿಗೆ ತೃಪ್ತಿ ಇರಲಿಲ್ಲ. ‘ಇಂಡಿಕ್ ಕಂಪ್ಯೂಟಿಂಗ್’ ವ್ಯವಸ್ಥೆ ಬೇಕು, ಇಂಗ್ಲಿಷ್ ಗೊತ್ತಿಲ್ಲದ, ಭಾರತೀಯ ಭಾಷೆ ಬಳಸುವವರಿಗೆ ಕಂಪ್ಯೂಟರ್ ಬಳಕೆ ಕೈಗೆಟುಕಿ, ಡಿಜಿಟಲ್ ಕಂದರ ನಿವಾರಣೆಯಾಗಬೇಕು ಎಂಬುದು ಅವರ ಬಯಕೆಯಾಗಿತ್ತು. ಇಂತಹ ದಾರ್ಶನಿಕ ನಾಯಕನ ಬದುಕಿನ ಎಲ್ಲ ಆಯಾಮಗಳನ್ನು ಒಂದು ಲೇಖನದಲ್ಲಿ ಕಟ್ಟಿಕೊಡುವುದು ಸುಲಭವಲ್ಲ. ನರಿಮನ್ ಪಾಯಿಂಟ್‌ನ ಏರ್ ಇಂಡಿಯಾ ಕಟ್ಟಡದ 11ನೇ ಮಹಡಿಯಲ್ಲಿ ಅವರು 2020ರ ಮಾರ್ಚ್ 16ರವರೆಗೆ ಕೆಲಸ ಮಾಡಿದ್ದರು. ಕುಟುಂಬದ ಜತೆಗೆ ತಮ್ಮ 96ನೇ ಹುಟ್ಟುಹಬ್ಬ ಆಚರಿಸುವುದಕ್ಕಾಗಿ ಅಲ್ಲಿಂದ ಇಳಿದು ಹೋಗಿದ್ದರು.
ನಂತರ ಬಂದದ್ದೇ ಕೋವಿಡ್ ಸಾಂಕ್ರಾಮಿಕ ತಡೆಗಾಗಿ ಲಾಕ್‌ಡೌನ್. ಅವರು ಅನಿವಾರ್ಯವಾಗಿ ತಮ್ಮ ಫ್ಲ್ಯಾಟ್‌ಗೆ ಸೀಮಿತರಾಗಬೇಕಾಯಿತು. ವಯಸ್ಸಾಗಿತ್ತು ಎನ್ನುವುದಕ್ಕಿಂತ ಹೆಚ್ಚಾಗಿ ಕಚೇರಿಗೆ, ಕೆಲಸಕ್ಕೆ ಹೋಗಲಿಕ್ಕಿಲ್ಲ ಎಂಬ ನಿರ್ಬಂಧವೇ ಅವರನ್ನು ಹಣ್ಣು ಮಾಡಿರಬಹುದೇನೋ. ಇಲ್ಲದೇ ಇದ್ದರೆ, ಭಾರತರತ್ನ ವಿಶ್ವೇಶರಯ್ಯ ಅವರಂತೆ ಈ ಕರ್ಮಯೋಗಿಯೂ ಶತಾಯುಷಿ ಆಗುತ್ತಿದ್ದರು. ಕೊಹ್ಲಿ ಅವರ ನಿಧನದೊಂದಿಗೆ ಭಾರತವು ದಾರ್ಶನಿಕ ರಾಷ್ಟ್ರ ನಿರ್ಮಾತೃವೊಬ್ಬರನ್ನು ಕಳೆದುಕೊಂಡಿದೆ.
(ಲೇಖಕ ಶಿವಾನಂದ ಕಣವಿ, ಟಿಸಿಎಸ್‌ನ ಮಾಜಿ ಉಪಾಧ್ಯಕ್ಷ, ಗ್ರಂಥಕತೃ ಮತ್ತು ನಿಯಾಸ್ ನಲ್ಲಿ ಅತಿಥಿ ಪ್ರಾಧ್ಯಾಪಕ)
Seriously spectacular Post that You have shared here, This is an amazing superb article Keep Sharing this...
ReplyDeleteThanks, thanks to a lotttttttt!!!!
Germany VPS Hosting