Friday, April 30, 2021

Roddam Narasimha Interview on Climate, Clouds etc Kannada

(This Kannada version of my original interview was translated by Amar Holegadde and published in Matukate 137 by Ninasam, Heggodu)

ತಾಪಮಾನ, ಮೋಡ, ಮಳೆ ಇತ್ಯಾದಿ: ರೊದ್ದಂ ನರಸಿಂಹ ಸಂದರ್ಶನ

ಸಂದರ್ಶಕ: ಶಿವಾನಂದ ಕಣವಿ,

ಕನ್ನಡಕ್ಕೆ: ಅಮರ ಹೊಳೆಗದ್ದೆ



(ಪ್ರೊ. ರೊದ್ದಂ ನರಸಿಂಹ (1933-2020) ಅವರು ನಮ್ಮ ನಾಡಿನ ಹೆಸರಾಂತ ವೈಮಾಂತರಿಕ್ಷ ವಿಜ್ಞಾನಿ. ಅಂತರಾಷ್ಟ್ರೀಯ ಮಟ್ಟದ ವಿಶ್ವವಿದ್ಯಾಲಯ ಮತ್ತು ಅಧ್ಯಯನ ಕೇಂದ್ರಗಳಲ್ಲಿ ಸುಪ್ರಸಿದ್ಧರಾಗಿದ್ದವರು. ದ್ರವಚಲನ ಶಾಸ್ತ್ರ ಮತ್ತು ವಿಮಾನ ನಿರ್ಮಾಣ ಶಾಸ್ತ್ರಗಳಲ್ಲಿ ವಿಶೇಷ ಪರಿಣತರು. ವಿಜ್ಞಾನ, ತತ್ವಶಾಸ್ತ್ರ ಮತ್ತು ಸಂಸ್ಕೃತಿಗಳ ಸಂಬಂಧ ಕುರಿತೂ ಅಪರೂಪದ ಬರಹಗಳನ್ನು ಇವರು ಬರೆದಿದ್ದು, ಅಂಥ ಒಂದು ಪುಸ್ತಕವು ಕನ್ನಡದಲ್ಲೂ ಪ್ರಕಟಗೊಂಡಿದೆ (ವಿಜ್ಞಾನ-ಸಂಸ್ಕೃತಿ, ಅಕ್ಷರ ಪ್ರಕಾಶನ). ಬೆಂಗಳೂರಿನ ಜವಾಹರಲಾಲ್ ನೆಹರು ಉನ್ನತ ವೈಜ್ಞಾನಿಕ ಸಂಶೋಧನ ಕೇಂದ್ರದಲ್ಲಿ ತೊಡಗಿಸಿಕೊಂಡಿದ್ದ ಇವರು ಈಚಿನ ವರ್ಷಗಳಲ್ಲಿ ಮೋಡಗಳ ವಿಕಾಸ ಮತ್ತು ಚಲನೆಯ ಕುರಿತು ವಿಶೇಷ ಸಂಶೋಧನೆಯನ್ನು ನಡೆಸುತ್ತಿದ್ದರು. ಪ್ರಸ್ತುತ ಸಂದರ್ಶನ ಈ ವಿಚಾರ ಕುರಿತದ್ದು. ಈ ವಿಷಯದಲ್ಲಿನ ಅಧ್ಯಯನವು, ಭಾರತದ ಮುಂಗಾರು ಹಾಗು ಜಗತ್ತಿನ ಹವಾಮಾನ ಬದಲಾವಣೆಯನ್ನು ಅರಿಯಲು ತುಂಬ ಸಹಕಾರಿಯಾಗಿದೆ. ಸಂದರ್ಶಕರಾದ ಶಿವಾನಂದ ಕಣವಿ ಅವರು ಟಿಸಿಎಸ್‍ನ ಮಾಜಿ ಉಪಾಧ್ಯಕ್ಷರು, ಬೆಂಗಳೂರಿನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್‍ಡ್ ಸ್ಟಡೀಸ್‍ನಲ್ಲಿ ಬೋಧಕರು. ಈ ಬರಹದ ಅನುವಾದಕ ಅಮರ ಹೊಳೆಗದ್ದೆ ಪ್ರಸ್ತುತ ತುಮಕೂರು ವಿಶ್ವವಿದ್ಯಾನಿಲಯದಲ್ಲಿ ಕನ್ನಡ ಎಂ.ಎ. ಓದುತ್ತಿದ್ದಾರೆ.)

 

ಶಿವಾನಂದ ಕಣವಿ: ಮೋಡಗಳ ಅಧ್ಯಯನದೆಡೆಗೆ ನೀವು ಆಕರ್ಷಿತರಾಗಲು ಕಾರಣವೇನು? ಈ ಅಧ್ಯಯನದಿಂದ ಇನ್ನೂ ಬಗೆಹರಿಯದೇ ಇರುವ ವಿಷಯಗಳು ಯಾವುವು?

ರೊದ್ದಂ ನರಸಿಂಹ: ಮೋಡಗಳ ಚಲನವಲನವು, ಇಂದು ಪ್ರಧಾನವಾಗಿರುವ ಎರಡು ವಿದ್ಯಮಾನಗಳ ಕೇಂದ್ರವಾಗಿದೆ. ಮೊದಲನೆಯದ್ದು, ಹವಾಮಾನ ಬದಲಾವಣೆ. ಈ ಹವಾಮಾನ ಬದಲಾವಣೆಯನ್ನು ಮುಂಗಾಣುವಲ್ಲಿ ಅತಿದೊಡ್ಡ ಅನಿರ್ದಿಷ್ಟತೆ ಎದುರಾಗುವುದೇ ಮೋಡಗಳ ವಿಚಾರದಲ್ಲಿ. ನೋಡಿ, ಹಸಿರುಮನೆ ಅನಿಲಗಳು ಹಾಗು ಇನ್ನಿತರ ಪದಾರ್ಥಗಳಿಂದಾಗಿ ವಾಯುಮಂಡಲದಲ್ಲುಂಟಾಗುವ ಬದಲಾವಣೆಗಳ ಕುರಿತು ಸಂಶೋಧಕರ ಅನೇಕ ಗುಂಪುಗಳು ವಿಶ್ವಾದ್ಯಂತ ಅಧ್ಯಯನ ನಡೆಸಿವೆ. ಆದರೆ, ಅವು ನುಡಿಯುವ ಭವಿಷ್ಯಕ್ಕೆ ಹೊಂದಿಕೆಯಾಗದ ಸಂಗತಿಗಳೂ ಆಗೊಮ್ಮೆ ಈಗೊಮ್ಮೆ ಕಾಣ ಸಿಕೊಂಡಿವೆ. ಕಳೆದ ಹತ್ತು ವರ್ಷಗಳು ಇದಕ್ಕೆ ಉತ್ತಮ ಉದಾಹರಣೆ. ಈ ಕಾರಣದಿಂದಾಗಿ, ‘ಅವೆಲ್ಲಾ ಉಪಯೋಗಕ್ಕೆ ಬಾರದ ಮಾದರಿಗಳು. ಅವನ್ನು ಬಳಸಿಕೊಂಡು ನೀವೆಲ್ಲ ಬರಿದೇ ದಿಗಿಲೆಬ್ಬಿಸುವ ಹೇಳಿಕೆಗಳನ್ನು ನೀಡುತ್ತಿದ್ದೀರ. ಕಳೆದ 10 ವರ್ಷಗಳಲ್ಲಿ ಭೂಮಿಯ ಕಾವು ಏಕೆ ಏರಿಲ್ಲ ಎನ್ನುವುದನ್ನು ನಿಮ್ಮಿಂದ ವಿವರಿಸಲಾಗಿಲ್ಲ ಎಂದಮೇಲೆ, ನಿಮ್ಮ ಯಾವ ಮಾತುಗಳನ್ನು ನಂಬುವುದಾದರೂ ಹೇಗೆ?’ ಎಂದು ಪ್ರಶ್ನೆಮಾಡುವ ಸಂಶಯವಾದಿಗಳು ಇದ್ದೇ ಇರುತ್ತಾರೆ.

ಕಣವಿ: ಮೈಕಲ್ ಕ್ರೈಡನ್ ಎನ್ನುವವರು ಒಂದು ಕಾದಂಬರಿ ಬರೆದಿದ್ದಾರೆ (ಸ್ಟೇಟ್ ಆಫ್ ಫಿಯರ್, 2004 - ಅನುವಾದಕ). ಇದರ ಅರ್ಧಭಾಗದಷ್ಟು ಅವರು, ಹವಾಮಾನ ಬದಲಾವಣೆ ಎಂಬ ವಿಚಾರವನ್ನೇ ಕಟುವಾಗಿ ಟೀಕಿಸಿದ್ದಾರೆ. ಓದಿದ್ದೀರಾ? ಕುತೂಹಲಕಾರಿಯಾಗಿದೆ.

ರೊದ್ದಂ: ಹೌದು, ಸಾಕಷ್ಟು ಕುತೂಹಲ ಹುಟ್ಟಿಸತ್ತೆ ಅದು. ನಿಜ ಹೇಳಬೇಕು ಅಂದರೆ, ಕೆಲವು ಭೌತವಿಜ್ಞಾನಿಗಳು ಸಂಶಯವಾದಿಗಳೂ ಆಗಿದ್ದಾರೆ. ವಾಯುಮಂಡಲ ವಿಜ್ಞಾನ ವಲಯದಲ್ಲಿ ಒಂದು ಧೋರಣೆ ಸಾಮಾನ್ಯವಾಗಿ ಚಾಲ್ತಿಯಲ್ಲಿದೆ. ಅದು ಹೀಗಿದೆ - ‘ಕ್ಷಣ ಕ ವ್ಯತ್ಯಯಗಳು/ ಏರಿಳಿತಗಳು ಆಗಾಗ ಉಂಟಾಗುತ್ತವೆ ಎನ್ನುವುದೇನೋ ನಿಜ. ಆ ಎಲ್ಲಾ ವ್ಯತ್ಯಯಗಳನ್ನು ಮುಂಗಾಣಬಲ್ಲೆವು ಎಂದೇನು ನಾವು ವಾದಿಸುತ್ತ ಇಲ್ಲ. ಆದರೆ, ಒಂದು ವ್ಯತ್ಯಯ ಉಂಟಾದ ಬಳಿಕ, ಏನು ನಡೆಯುತ್ತಿದೆ ಎನ್ನುವುದನ್ನು ನಾವು ವಿವರಿಸಬಲ್ಲೆವು. ಭೂಮಿಯ ತಾಪಮಾನ ಒಟ್ಟಾರೆಯಾಗಿ ಏರುವುದನ್ನಾಗಲಿ ಅಥವಾ, ಹವಾಮಾನ ಬದಲಾಗುವುದನ್ನಾಗಲಿ ಈ ಕ್ಷಣ ಕ ವ್ಯತ್ಯಯವು ತಡೆಹಿಡಿಯಲಾರದು’.

ಕಣವಿ: ಭೂಮಿಯ ತಾಪಮಾನ ಏರುತ್ತಿರುವುದು ಖಚಿತವಾಗಿದೆಯೇ?

ರೊದ್ದಂ: ಇದಕ್ಕೆ ಉತ್ತರ, ಈ ಪ್ರಶ್ನೆಯನ್ನು ನೀವು ಯಾರಲ್ಲಿ ಕೇಳುತ್ತೀರಿ ಎನ್ನುವುದನ್ನು ಅವಲಂಬಿಸಿದೆ. ವಾಯುಮಂಡಲ ವಿಜ್ಞಾನಿಗಳು ಇದೊಂದು ಖಚಿತ ವಿದ್ಯಮಾನ ಎಂದೇ ನಂಬಿದ್ದಾರೆ. ವಿವರಣೆಯ ಸೂಕ್ಷ್ಮಗಳನ್ನು ಮರೆತು, ಹವಾಮಾನ ಬದಲಾಗುತ್ತಿರುವುದನ್ನೊಮ್ಮೆ ಸುಮ್ಮನೆ ಅವಲೋಕಿಸಿ ಎಂದು ಹೇಳುತ್ತಾರೆ. ನೋಡಿ, ಆರ್ಕ್ಟಿಕ್‍ನಲ್ಲಿ (ಉತ್ತರಧ್ರುವದಲ್ಲಿ) ಮಂಜುಗಡ್ಡೆಗಳು ಕರಗುತ್ತಾ ಇವೆ. ಇದನ್ನು ಯಾರೂ ಅನುಮಾನಿಸಲು ಸಾಧ್ಯವಿಲ್ಲ, ಸಾಕ್ಷ್ಯಗಳು ಅಷ್ಟು ಬಲವಾಗಿವೆ. ಇಲ್ಲ, ಹವಾಮಾನ ವೈಪರೀತ್ಯಗಳನ್ನೇ ನೋಡಿ. ಅವು ಮರುಕಳಿಸುವುದು ಹೆಚ್ಚುತ್ತಲೇ ಇದೆ, ಇದಕ್ಕೆ ಬಲವಾದ ಸಾಕ್ಷ್ಯಗಳೂ ಇವೆ. ವಿಜ್ಞಾನದ ಮಾದರಿಗಳು ಏನು ಹೇಳುತ್ತವೆಯೋ ಅದಕ್ಕೆ ಸರಿಹೊಂದುತ್ತವೆ ಈ ವೈಪರೀತ್ಯಗಳು. ಇಲ್ಲಿ ಒಂದು ಅಂಶವನ್ನು ಗಮನಿಸಬೇಕು. ಸರಾಸರಿಯಲ್ಲಿ ಉಂಟಾಗುವ ಬದಲಾವಣೆಗಿಂತ ವಿಪರೀತಗಳಲ್ಲುಂಟಾಗುವ ಬದಲಾವಣೆಯು ಹೆಚ್ಚು ಸ್ಪಷ್ಟವಾಗಿ ಕಾಣುತ್ತದೆ. ಹಾಗಾಗಿ, ಒಂದು ಡಿಗ್ರಿಯಲ್ಲಿ ಸಣ್ಣಭಾಗದಷ್ಟು ಕಾವು ಏರುಪೇರಾದರೆ, ಅದು ಮಳೆಯ ಸರಾಸರಿ ಮೊತ್ತದ ಮೇಲೆ ಹೆಚ್ಚು ಪರಿಣಾಮ ಬೀರುವುದಿಲ್ಲ. ಆದರೆ, ಆ ಒಟ್ಟೂ ಕಾಲಮಾನದಲ್ಲಿ ಉಂಟಾಗುವ ಅತಿವೃಷ್ಟಿ ಹಾಗು ಅನಾವೃಷ್ಟಿಯನ್ನು ಅದು ಪ್ರಭಾವಿಸುತ್ತದೆ. ಕಳೆದ ಇಪ್ಪತ್ತು ವರ್ಷಗಳ ಮುಂಗಾರನ್ನು ನೀವು ಗಮನಿಸಿದರೆ, ಒಂದು ನಿರ್ದಿಷ್ಟ ಬಗೆಯ ವೈಪರೀತ್ಯವು ಮತ್ತೆ ಮತ್ತೆ ಉಂಟಾಗುತ್ತಲೇ ಇದೆ ಎನ್ನುವುದು ನಿಮಗೆ ಗೊತ್ತಾಗುತ್ತದೆ. ಹೀಗಾಗಿಯೇ, ಭೂಮಿಯ ತಾಪಮಾನ ಏರಿಕೆನ್ನು ಕಡೆಗಣ ಸುವುದು ಅಪಾಯಕಾರಿ ಎಂದು ವಾಯುಮಂಡಲ ವಿಜ್ಞಾನಿಗಳು ಎಚ್ಚರಿಸುತ್ತಾರೆ. ಹೀಗಿದ್ದೂ, ನಾನು ಆಗಲೇ ಹೇಳಿದ ಹಾಗೆ, ಈ ವಿದ್ಯಮಾನವನ್ನು ಅಲ್ಲಗಳೆಯುವವರೂ ಇದ್ದಾರೆ, ಅವರಲ್ಲಿ ಕೆಲವು ಹೆಸರಾಂತ ಭೌತವಿಜ್ಞಾನಿಗಳೂ ಇದ್ದಾರೆ. ಕಣವಿ: ಭೂವಿಜ್ಞಾನಿಗಳು, ಕಡಲುವಿಜ್ಞಾನಿಗಳು ಏನು ಹೇಳ್ತಾರೆ ಇದರ ಬಗ್ಗೆ..? ರೊದ್ದಂ: ನನ್ನ ಪ್ರಕಾರ, ಬಹುತೇಕ ಭೂವಿಜ್ಞಾನಿಗಳಿಗೆ ಈ ವಿದ್ಯಮಾನ ವಾಸ್ತವ ಎಂದು ಮನವರಿಕೆ ಆಗಿದೆ.

ಕಣವಿ: ಹಾಗಾದರೆ, ಯಾರಿಗೆ ಮನವರಿಕೆ ಆಗಿಲ್ಲ?

ರೊದ್ದಂ: ದೊಡ್ಡ ಸಂಖ್ಯೆಯ ಉದ್ಯಮಪತಿಗಳಿಗೆ!

ಕಣವಿ: ವಿಜ್ಞಾನಿಗಳ ಸಮುದಾಯದಲ್ಲಿ?

ರೊದ್ದಂ: ವಿಜ್ಞಾನಿಗಳ ಸಮುದಾಯದಲ್ಲಿ ಭೌತವಿಜ್ಞಾನಿಗಳ ಸಣ್ಣ ಗುಂಪಿದೆ. ಅವರು ಬಹಳ ವಿಶಿಷ್ಟರು ಆದರೆ ಈ ವಿಚಾರದಲ್ಲಿ ಅಷ್ಟೇ ಸಂದೇಹಪಡುವವರು. ಏನೂ ಅರಿಯದ ವ್ಯಕ್ತಿಗಳವರು ಎಂದು ನಾನು ಹೇಳುತ್ತಿಲ್ಲ. ಭೌತವಿಜ್ಞಾನವನ್ನು ಅವರು ಮಾಡುವ ರೀತಿಯಿದೆಯಲ್ಲ, ಅದು ಅವರನ್ನು ಈ ವಿಚಾರದಲ್ಲಿ ಸಂದೇಹವಾದಿಗಳನ್ನಾಗಿಸಿದೆ. ಭೌತವಿಜ್ಞಾನದಲ್ಲಿ ಸಾಮಾನ್ಯವಾಗಿ ಒಂದು ಪ್ರಶ್ನೆಗೆ, ಹೌದು ಅಥವಾ ಇಲ್ಲ ಎಂಬ ಎರಡೇ ಉತ್ತರಗಳಿರುತ್ತವೆ. ಈ ಕಾರಣದಿಂದಾಗಿ ಭೌತವಿಜ್ಞಾನಿಗಳು ಖಚಿತ ಸಾಕ್ಷ್ಯಗಳನ್ನು ಬೇಡುತ್ತಾರೆ. ಭೂಮಿಯ ತಾಪಮಾನ ಏರಿಕೆಯ ಕುರಿತು ಅವರ ಸಂದೇಹವನ್ನು ಅವರ ಮಾತುಗಳಲ್ಲೇ ವಿವರಿಸುವುದಾದರೆ - ‘ಹವಾಮಾನ ಬದಲಾಗುತ್ತಿರುವುದಕ್ಕೆ ಯಾವ ಖಚಿತ ಸಾಕ್ಷ್ಯಗಳೂ ಇಲ್ಲ. ಹವಾಮಾನದಲ್ಲಿ ಏರಿಳಿತಗಳು ಯಾವತ್ತಿಗೂ ಇದ್ದದ್ದೇ. ಇದು ತಿಳಿದ ವಿಚಾರವೇ. ಇದರಲ್ಲಿ ವಿಶೇಷ ಏನೂ ಇಲ್ಲ. ಇನ್ನು, ಈ ಏರಿಳಿತದ ಗುಣವು ಮಹತ್ತರವಾಗಿ ಬದಲಾಗಿದೆ ಎನ್ನುವುದಕ್ಕೂ ಯಾವ ನಿಖರ ಸಾಕ್ಷ್ಯಗಳಿಲ್ಲ’. ಆದರೆ, ಹವಾಮಾನದ ವಿಪರೀತಗಳನ್ನು ಗಮನಿಸುವವರು ಹೇಳುವ ಮಾತೇ ಬೇರೆ. ಸಾಕ್ಷ್ಯಗಳು ಬಲಗೊಳ್ಳುತ್ತಲೇ ಇವೆ ಎಂದವರು ವಾದಿಸುತ್ತಾರೆ. ಹತ್ತು ವರ್ಷಗಳ ಹಿಂದೆ ಇದ್ದದ್ದಕ್ಕಿಂತ ಈಗ ಸಾಕ್ಷ್ಯಗಳು ಬಲವಾಗಿವೆ.

ಕಣವಿ: ಸರಿ. ಆದರೆ ಈ ನಿರ್ಣಯವು, ಕಳೆದ 100 ವರ್ಷಗಳ ನಂಬಲರ್ಹವಾದ ಮಾಹಿತಿಯನ್ನಷ್ಟೇ ಅವಲಂಬಿಸಿದೆ ತಾನೆ? 

ರೊದ್ದಂ: ನೀವು ಹೇಳಿದ್ದು ನಿಜ. ಅದೇ ಸಮಸ್ಯೆಯಾಗಿರುವುದು. ವಾದ, ಪ್ರತಿವಾದ ಹೀಗೆ ಮುಂದುವರಿಯುತ್ತದೆ. ಆದರೂ, ಮೋಡದ ವಿಚಾರದಲ್ಲಿ ಎಲ್ಲರು ಏಕಾಭಿಪ್ರಾಯ ಹೊಂದಿದ್ದಾರೆ. ಹವಾಮಾನದ ಮಾದರಿಗಳಲ್ಲಿ ಯಾವ ಅಂಶವು ಅತಿದೊಡ್ಡ ಅನಿಶ್ಚಿತತೆಯನ್ನು ಉಂಟುಮಾಡಬಲ್ಲದು? ಎಂಬ ಪ್ರಶ್ನೆಗೆ ನಿಸ್ಸಂಶಯವಾಗಿ ಮೋಡಗಳು ಎಂದು ಉತ್ತರಿಸಬಹುದು. ಅದರಲ್ಲೂ ನಿರ್ದಿಷ್ಟವಾಗಿ, ಮೋಡಗಳ ಹಾಗು ಕಿರಣಗಳ ನಡುವಿನ ಅಂತರ್-ಕ್ರಿಯೆಗಳೇನಿವೆ ಅವು ಅನಿಶ್ಚಿತವಾಗಿವೆ, ಸಂಕೀರ್ಣವಾಗಿಯೂ ಇವೆ. ಉದಾಹರಣೆಗೆ, ಹಗಲಿನಲ್ಲಿ ಮೋಡಕವಿದಿದ್ದರೆ ಹವಾಮಾನ ತುಸು ಹೆಚ್ಚೇ ತಂಪಾಗಿರುತ್ತದೆ. ಏಕೆಂದರೆ, ಸೂರ್ಯನ ಕಿರಣಗಳನ್ನು ಮೋಡಗಳು ಹಿಂದಕ್ಕೆ ಪುಟಿಸುವುದರಿಂದ ಆ ಕಿರಣಗಳು ಭೂಮಿಯನ್ನು ಸರಿಯಾದ ಪ್ರಮಾಣದಲ್ಲಿ ತಲುಪಲಾರವು. ಆದರೆ, ಮೋಡಕವಿದ ಇರುಳು ತುಸು ಹೆಚ್ಚೇ ಬೆಚ್ಚಗಿರುತ್ತದೆ. ಏಕೆ? ರಾತ್ರಿ ಹೊತ್ತಿನಲ್ಲಿ ಸೂರ್ಯನೇನು ಇರುವುದಿಲ್ಲ. ಆದರೆ, ಭೂಮಿಯಿಂದ ಹೊಮ್ಮುವ ಉಷ್ಣ-ಕಿರಣ (ಇನ್ಫ್ರಾರೆಡ್ ಕಿರಣ) ಮೋಡಗಳಿಂದ ಮರಳಿ ಹಿಂದಕ್ಕೆ ಪುಟಿಯುತ್ತದೆ. ಹಾಗಾಗಿ, ಮೋಡಕವಿದ ಇರುಳು ಬೆಚ್ಚಗಿದ್ದರೆ, ಮೋಡಕವಿದ ಹಗಲು ತಂಪಗಿರುತ್ತದೆ. ಮೋಡಗಳು ಕಿರಣದೊಂದಿಗೆ ಯಾವ ಬಗೆಯ ಅಂತರ್-ಕ್ರಿಯೆಯಲ್ಲಿ ತೊಡಗಿರುತ್ತದೆ ಎನ್ನುವುದಕ್ಕೆ ಇದು ಉತ್ತಮ ನಿದರ್ಶನವಾಗಿದೆ. ಇನ್ನೂ ಹಲವು ಪರಿಣಾಮಗಳಿವೆ. ಒಟ್ಟಿನಲ್ಲಿ, ಇಂಥಾ ಅಂತರ್-ಕ್ರಿಯೆಗಳೇ ಅನಿಶ್ಚಿತತೆಗೆ ಪ್ರಧಾನ ಕಾರಣ ಎನ್ನಬಹುದು. ಭಾರತದಲ್ಲಿ ಮುಂಗಾರಿನ ಕುರಿತು ಆಸಕ್ತಿ ದೊಡ್ಡ ಪ್ರಮಾಣದಲ್ಲಿದೆ. ಈ ಆಸಕ್ತಿ ವಿಶ್ವದಾದ್ಯಂತ ಈಗ ಹೆಚ್ಚುತ್ತಲೇ ಇದೆ. ಕಳೆದ 20 ವರ್ಷಗಳಲ್ಲಿ ಬೇರೆಬೇರೆ ಪ್ರದೇಶಗಳಲ್ಲಿ ಮುಂಗಾರು ಮಾದರಿಯ ಹವಾಮಾನವನ್ನು ಗುರುತಿಸಲಾಗಿದೆ. ತೀರ ಇತ್ತೀಚಿನವರೆಗೂ ಮುಂಗಾರು ಎಂದರೆ ಹಲವರ ಪ್ರಕಾರ ಭಾರತೀಯ ಮುಂಗಾರು ಎಂದಾಗಿತ್ತು. ಆದರೆ ಈಗ, ‘ಭಾರತೀಯ ಮುಂಗಾರು’ ಎಂದು ನಿರ್ದಿಷ್ಟವಾಗಿ ಗುರುತಿಸುವ ಸನ್ನಿವೇಶ ಉಂಟಾಗಿದೆ. ಏಕೆಂದರೆ, ಈಗ ‘ಆಸ್ಟ್ರೇಲಿಯಾದ ಮುಂಗಾರು’, ‘ಆಫ್ರಿಕಾದ ಮುಂಗಾರು’; ಹೀಗೆ ಬೇರೆಬೇರೆ ಮುಂಗಾರುಗಳನ್ನು ಗುರುತಿಸಲಾಗಿದೆ. ಆದರೆ, ಅವೆಲ್ಲವೂ ಭಾರತೀಯ ಮುಂಗಾರಿನ ಪ್ರಮಾಣವನ್ನು ಹೋಲಬೇಕೆಂದೇನಿಲ್ಲ.

ಕಣವಿ: ಮುಂಗಾರು ಭಾರತೀಯ ಉಪಖಂಡಕ್ಕಷ್ಟೇ ಸೀಮಿತವೇ? ಅಥವಾ, ಏಷಿಯಾದ ಇನ್ನಿತರ ಪ್ರದೇಶಗಳಲ್ಲೂ ಅದು ಕಂಡುಬರುತ್ತದೆಯೇ?

ರೊದ್ದಂ: ಬೇರೆ ಪ್ರದೇಶಗಳಲ್ಲೂ ಇವೆ ಆದರೆ, ಅವುಗಳ ಪ್ರಮಾಣ ಕಡಿಮೆ. ಮುಂಗಾರು ಎನ್ನುವುದಕ್ಕೆ ಈಗ ಹೆಚ್ಚು ಅರ್ಥವ್ಯಾಪ್ತಿ ಇರುವ ವ್ಯಾಖ್ಯಾನವೊಂದು ಸಿದ್ಧವಾಗಿದೆ. ಮುಂಗಾರು ಎಂದರೆ ಗಾಳಿಯ ಪರಿಚಲನೆಯಲ್ಲಿ ಕ್ಷಿಪ್ರ ಸ್ಥಿತ್ಯಂತರ ಆಗುವುದು. ಸ್ವಿಚ್ ಆಗುವುದು. (ಯಾವುದರ ಪರಿಚಲನೆಯು ಸ್ವಿಚ್ ಆಗುತ್ತದೆ ಎಂದು ರೊದ್ದಂ ಅವರು ಸ್ಪಷ್ಟ ಪಡಿಸಿಲ್ಲ. ಗಾಳಿಯದ್ದೇ ಇರಬೇಕು ಎಂದು ಸಂದರ್ಶನದ ಮುಂದಿನ ಭಾಗವನ್ನು ಓದಿ ಭಾವಿಸಲಾಗಿದೆ - ಅನುವಾದಕ). ಈ ಕ್ಷಿಪ್ರ ಸ್ಥಿತ್ಯಂತರವು ವರ್ಷದ ಒಂದು ನಿರ್ದಿಷ್ಟ ಸಮಯದಲ್ಲಿ ಆಗುತ್ತದೆ ಹಾಗು, ಪ್ರತಿವರ್ಷವೂ ಅದೇ ಹೊತ್ತಿನಲ್ಲಿ ಆಗುತ್ತದೆ. ಇದೊಂದು ಆವರ್ತನ. ಭಾರತದ ನೈರುತ್ಯ ಮುಂಗಾರುವಿನ ಕುರಿತು ಹೇಳುವುದಾದರೆ, ಮೇ ತಿಂಗಳ ಕೊನೆ ಅಥವಾ, ಜೂನ್ ತಿಂಗಳ ಶುರುವಿನಲ್ಲಿ ಪರಿಚಲನೆಯು ಆರಂಭಗೊಂಡರೆ ಸರಿಸುಮಾರು ಸಪ್ಟೆಂಬರ್ ಹೊತ್ತಿನಲ್ಲಿ ಅಂತ್ಯಗೊಳ್ಳುತ್ತದೆ. ಈ ವಿದ್ಯಮಾನವು, ನೆಲ ಹಾಗು ಕಡಲಿನ ನಡುವಿನ ತಾಪಮಾನ ವ್ಯತ್ಯಾಸವನ್ನು ಪ್ರಧಾನವಾಗಿ ಅವಲಂಬಿಸಿದೆ. ಹಾಗಾಗಿ, ಗಾಳಿ ಪರಿಚಲನೆಯು ಋತುಬದ್ಧವಾಗಿ ಸ್ವಿಚ್ ಆಗುವುದೇ ಮುಂಗಾರು ಎಂದು 6 ವ್ಯಾಖ್ಯಾನಿಸಿದರೆ, ಈ ಪ್ರಕ್ರಿಯೆಯು ಒಂದಕ್ಕಿಂತ ಹೆಚ್ಚು ಬಾರಿ ಘಟಿಸುವುದನ್ನು ನಾವು ಮನಗಾಣಬಲ್ಲೆವು.

ಕಣವಿ: ಈ ಒಟ್ಟೂ ಗಾಳಿಯ ಪರಿಚಲನೆ ಏನಿದೆ, ಅದು ತೇವಾಂಶವನ್ನು ಹೊತ್ತು ತಂದಲ್ಲಿ ಮಳೆ ಆಗುತ್ತದೆ. ಅಲ್ಲವೇ?

ರೊದ್ದಂ: ಸರಿಯಾಗಿ ಹೇಳಿದಿರಿ. ಅದು ಕಡಲಿನ ಕಡೆಯಿಂದ ಬೀಸಿದಾಗ ತೇವಾಂಶವನ್ನು ಹೊತ್ತುತರುತ್ತದೆ, ಇದರಿಂದ ಮಳೆಯೂ ಬರುತ್ತದೆ. ಭಾರತದಂಥ ಮುಂಗಾರು ಪ್ರದೇಶಗಳಲ್ಲಿ, ಬಿಸುಪಿನ ಅಲೆಯನ್ನು ಹೊರತುಪಡಿಸಿದರೆ, ಉಷ್ಣಾಂಶವೋ, ಗಾಳಿಯೋ ಆಸಕ್ತಿಯ ವಿಷಯ ಆಗುವುದಿಲ್ಲ. ಇಲ್ಲಿ ಏನಿದ್ದರೂ ಹೆಚ್ಚು ಗಮನಿಸಬೇಕಾದ ವಿಷಯ ಮಳೆ.

ಕಣವಿ: ಕಾಂಬೋಡಿಯ, ವಿಯಟ್ನಾಂ, ಲಾವೋಸ್ ಪ್ರದೇಶಗಳನ್ನು ನೋಡಿದರೆ?

ರೊದ್ದಂ: ಅವೆಲ್ಲಾ ಏಷಿಯಾದ ಆಗ್ನೇಯ ಮುಂಗಾರಿನ ಪ್ರದೇಶಗಳು. ಇಲ್ಲಿದು ಅಲ್ಲಿಗೂ ಅನ್ವಯಿಸುತ್ತದೆ. ನೀವು ಇಂಗ್ಲೆಂಡ್‍ನಲ್ಲಿ ವಾಸಮಾಡುತ್ತಿದ್ದರೆ, ಮಳೆ ಎನ್ನುವುದು ಮುಖ್ಯ ವಿಷಯವೇ ಆಗುವುದಿಲ್ಲ. ಅಲ್ಲಿ ಹೆಚ್ಚು ಕಡಿಮೆ ಪ್ರತಿದಿನವೂ ಮಳೆ ಸುರಿಯುತ್ತದೆ. ತುಂತುರು ಮಳೆ. ಹಾಗಾಗಿ, ಅವರು ಉಷ್ಣಾಂಶದ ಕುರಿತು ಹೆಚ್ಚು ತಲೆಕೆಡಿಸಿಕೊಳ್ಳುತ್ತಾರೆ. ಭಾರತದಲ್ಲಿ ನಾವ್ಯಾರೂ ಉಷ್ಣಾಂಶದ ಕುರಿತು ಹೆಚ್ಚು ಚಿಂತಿಸುವುದಿಲ್ಲ. ಏಕೆಂದರೆ, ವಾತಾವರಣವು ಇಲ್ಲಿ ಬಹುತೇಕ ಬೆಚ್ಚಗೇ ಇರುತ್ತದೆ. ನಮ್ಮಲ್ಲಿ ಅನಿಶ್ಚಿತವಾಗಿರುವುದು ಮಳೆ. ಮಳೆಯನ್ನು ಮುಂಗಾಣುವುದು ಇದೆಯಲ್ಲ ಅದು ಅತ್ಯಂತ ಕಷ್ಟಕರವಾದದ್ದು. ಮಳೆಗಿಂತ ಸುಲಭವಾಗಿ ಉಷ್ಣಾಂಶ ಹಾಗು ಗಾಳಿ ಬೀಸುವುದನ್ನು ಮುಂಗಾಣಬಹುದು. ಮಳೆ ಎನ್ನುವುದು ಸ್ಥಳ ಹಾಗು ಕಾಲ ನಿರ್ದಿಷ್ಟವಾಗಿರುತ್ತದೆ ಎಂದು ನಮ್ಮ ಅನುಭವ ತೋರಿಸಿಕೊಟ್ಟಿದೆ. ಉದಾಹರಣೆಗೆ, ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಮಳೆಯಾಗುತ್ತಿದ್ದರೂ ಅದೇ ನಗರದ ಹಳೆ ಏಪೆರ್Çೀರ್ಟ್ ರಸ್ತೆಯಲ್ಲಿ ಅದೇ ಹೊತ್ತಿನಲ್ಲಿ ಮಳೆ ಇಲ್ಲದೇ ಇರಬಹುದು. ಹಾಗಾಗಿ, ಮಳೆಯು ಸ್ಥಳ ನಿರ್ದಿಷ್ಟವೂ, ಕಾಲ ನಿರ್ದಿಷ್ಟವೂ ಆಗಿದೆ. ಭೌತವಿಜ್ಞಾನದ ಎಲ್ಲಾ ಲೆಕ್ಕಗಳು ಮುಗಿದು ಕೊನೆಯಲ್ಲಿ ಮಳೆ ಆಗುತ್ತದೆಯೋ ಇಲ್ಲವೋ ಎಂದು ತಿಳಿಸುವ ಹಂತವಿದೆಯಲ್ಲ, ಅದು ದುಸ್ಸಾಧ್ಯವಾದದ್ದು.

ಕಣವಿ: ತೇವಾಂಶ ಎನ್ನುವುದು ಗಾಳಿಯಲ್ಲಿ ಇರುತ್ತದೆ. ಅದನ್ನು ನಾವು ಅಳೆಯಬಲ್ಲೆವು. ಯಾವ ಸಂದರ್ಭದಲ್ಲಿ ಇದು ಹನಿಬೀಳುತ್ತದೆ (ತೇವವು ಹನಿಗೊಳ್ಳುವುದು - ಕಂಡನ್ಸೇಶನ್. ಹನಿಯು ಭುವಿಗೆ ಬೀಳುವುದು - ಪ್ರೆಸಿಪಿಟೇಶನ್. - ಅನುವಾದಕ) ? ಅನಿಶ್ಚಿತತೆಗೆ ಈ ಅರಿವಿನ ಕೊರತೆಯೇ ಪ್ರಧಾನ ಕಾರಣವೇ?

ರೊದ್ದಂ: ಹೌದು. ಯಾವ ಸಂದರ್ಭದಲ್ಲಿ, ಎಷ್ಟರಮಟ್ಟಿಗೆ ಹಾಗು ಎಲ್ಲಿ ತೇವಾಂಶವು ಹನಿಬೀಳುತ್ತದೆ ಎಂದು ಗುರುತಿಸುವುದು ಪ್ರಧಾನ ಅಂಶವೇ ಆಗಿದೆ. ಹನಿಬೀಳುವುದರ ಕುರಿತು ಭೌತವಿಜ್ಞಾನಿಗಳನ್ನು ಕೇಳಿದರೆ, ಇದರ ನಿಯಮವನ್ನು ನಾವು ಬಲ್ಲೆವು ಹಾಗು ಇದನ್ನು 100 ವರ್ಷಗಳ ಹಿಂದೆಯೇ ಕಂಡುಹಿಡಿಯಲಾಗಿತ್ತು ಎಂದು ಹೇಳಿಯಾರು. ಪ್ರತಿ ಒತ್ತಡದ ಅಂಕಿಗೂ, ಆವಿಯು ಹನಿಯಾಗಲು ಒಂದು ನಿರ್ದಿಷ್ಟ ಉಷ್ಣಾಂಶವಿರುತ್ತದೆ. ಆದರೆ, ಮೋಡಗಳ ಹುಟ್ಟನ್ನು ವಿವರಿಸಲು ಈ ನಿಯಮವಷ್ಟೇ ಸಾಕಾಗುವುದಿಲ್ಲ. ಮುಂಗಾರಿನಲ್ಲಿ, ಬೆಂಗಳೂರು ಹಾಗು ಭಾರತದ ಬಹುಪಾಲು ಭಾಗಗಳಲ್ಲಿ ಕಂಡುಬರುವ ಹೇರಿದ/ಕುಪ್ಪೆ ಮೋಡಗಳು ನಿಜಕ್ಕೂ ಹರಿವಿನ ಮೋಡಗಳೇ ಆಗಿವೆ. ಇವು ನೆಲದ ಮೇಲಿನಿಂದಲೇ ರೂಪುಗೊಳ್ಳುತ್ತ ಮೇಲಕ್ಕೆ ಸಾಗುತ್ತವೆ. ಹಾಗಾಗಿ, ಈ ಪ್ರಕ್ರಿಯೆಯು ಉಷ್ಣ ಚಲನವಿಜ್ಞಾನವನ್ನಷ್ಟೇ ಒಳಗೊಂಡಿಲ್ಲ, ದ್ರವ್ಯ ಚಲನವಿಜ್ಞಾನವನ್ನೂ ಸಂಕೀರ್ಣವಾಗಿ ಒಳಗೊಂಡಿದೆ. ಅಂದರೆ, ಉಷ್ಣ ಹಾಗು ದ್ರವ್ಯ ಚಲನವಿಜ್ಞಾನದ ಪರಸ್ಪರ ಕ್ರಿಯೆಯಿಂದ ಈ ಪ್ರಕ್ರಿಯೆ ಉಂಟಾಗುತ್ತದೆ. ಹಾಗಾಗಿ, ಸ್ಥೂಲವಾಗಿ ನಾವು ಹೀಗೆ ಹೇಳಬಹುದು - ಮೋಡ ಸೃಷ್ಟಿಯ ಕೆಲಸ ನೆಲದ ಮೇಲಣ ಉಷ್ಣ ವಲಯದಿಂದಲೇ ಆರಂಭವಾಗುತ್ತದೆ. ಬಿಸಿಯಾದ ಎಲರು ಮೇಲಕ್ಕೆ ಸಾಗಿ, ಅದರಲ್ಲಿ ತೇವಾಂಶವಿದ್ದಲ್ಲಿ ಯಾವುದೋ ಒಂದು ಹಂತದಲ್ಲಿ ಹನಿಗೊಳ್ಳುವ ಉಷ್ಣಾಂಶವನ್ನದು ತಲುಪಿ, ಹನಿಗೊಳ್ಳುತ್ತದೆ.

ಕಣವಿ: ಅದು ಮತ್ತಷ್ಟು ತೂಕಗೊಂಡಾಗ ಕೆಳಗೆ ಬೀಳುತ್ತದೆ. ಅಲ್ಲವೇ?

ರೊದ್ದಂ: ಇಲ್ಲ ಇಲ್ಲ, ಅದು ಒಮ್ಮೆಲೆ ತನ್ನ ತೂಕವನ್ನು ಹೆಚ್ಚಿಸಿಕೊಳ್ಳುವುದಿಲ್ಲ. ಎಲ್ಲಾ ಮೋಡಗಳು ಮಳೆ ತರಿಸುವುದಿಲ್ಲ. ಗಾಳಿಯ ಬೀಸು ತಕ್ಕಮಟ್ಟಿಗೆ ಬಲವಾಗೇ ಇದ್ದಲ್ಲಿ ಅದು ಆ ಹನಿಗಳನ್ನು ಮತ್ತಷ್ಟು ಮೇಲಕ್ಕೆ ಕೊಂಡೊಯ್ಯುತ್ತದೆ. ಹನಿಗೊಳ್ಳುವ ಪ್ರಕ್ರಿಯೆ ಸಾಗುತ್ತ ಒಂದು ಹಂತದಲ್ಲಿ ಅಷ್ಟೂ ಆವಿಯು ನೀರಿನ ಹನಿಯಾಗುತ್ತದೆ. ಇದು ಮಳೆಯಾಗಿ ಸುರಿಯಲು ಹನಿಗಳು ದೊಡ್ಡದಾಗಬೇಕು. ತನ್ನ ತೂಕದಿಂದಲೇ ನೆಲಕ್ಕೆ ಬೀಳುವಷ್ಟು ದೊಡ್ಡದು. ಸಣ್ಣದಾಗಿದ್ದ ಪಕ್ಷದಲ್ಲಿ ಹನಿಗಳು ನೆಲಕ್ಕೆ ಬೀಳುವುದಿಲ್ಲ, ಗಾಳಿಯು ಅವುಗಳನ್ನು ತನ್ನೊಂದಿಗೆ ಒಯ್ಯುತ್ತದೆ. ಹನಿಗಳು ಹಿರಿದಾಗಿದ್ದರೆ ಮಾತ್ರ ಅವು, 8 ಮೊಡದೊಳಗಿನ ಗಾಳಿಯ ಮೇಲ್ಚಲನೆಯ ಶಕ್ತಿಗೆ ಎದುರಾಗಿ, ಮೀರಿ ಕೆಳಕ್ಕೆ ಬೀಳುತ್ತವೆ. ಇನ್ನು, ಇಂದಿಗೂ ಇಡಿಯಾಗಿ ಅರ್ಥವಾಗದ ಹಲವು ಅಂಶಗಳು ಮಳೆಯ ಪ್ರಕ್ರಿಯೆಯನ್ನು ಪ್ರಭಾವಿಸುತ್ತವೆ. ಏಕೆಂದರೆ, ಮೋಡಗಳು ಹಾಗು ಅದರ ಹೊರಗಿನ ಗಾಳಿಯ ನಡುವಿನ ಅಂತರ್-ಕ್ರಿಯೆಯೇನಿದೆ, ಅದನ್ನು ತಿಳಿಯುವುದು ಬಹಳ ದುಸ್ತರ. ಈಗ ನೋಡಿ, ಒಳಗೆ ತೇವಾಂಶವುಳ್ಳ ಗಾಳಿಯಿದೆ ಹಾಗು ಸಾಕಷ್ಟು ಪ್ರಮಾಣದಲ್ಲಿ ಹೊರಗಿನ ಗಾಳಿಯನ್ನು ಒಳಕ್ಕೆ ಹಾಯಿಸಲಾಗಿದೆ ಎಂದು ಭಾವಿಸೋಣ. ತೇವಾಂಶವು ಹನಿಯಾಗಿ ಬದಲಾಗಿದ್ದರು ಕೂಡ, ಈ ಹೊರಗಿನ ಒಣ ಗಾಳಿಯು ಮೋಡವನ್ನು ತೆಳುಗೊಳಿಸಿಬಿಡುತ್ತದೆ. ಹಾಗಾಗಿ, ಮೋಡಗಳಾಗುವುದು, ಹನಿಬೀಳುವುದು; ಇವೆಲ್ಲ ಇನ್ನೂ ಬಗೆಹರಿಯದ ಸಮಸ್ಯೆಗಳಾಗಿಯೇ ಉಳಿದಿವೆ.

ಕಣವಿ: ಮೋಡಗಳ ಒಳಗಿರುವ ತೇವದ ಗಾಳಿಯು ಮೇಲಕ್ಕೆ ಸಾಗುತ್ತ ಹಿಮಗಟ್ಟುತ್ತದೆ. ಇದರಿಂದಾಗಿ ಆಲಿಕಲ್ಲು ಅಥವಾ ಹಿಮಹರಳುಗಳು ರೂಪುಗೊಳ್ಳುತ್ತವೆಯೇ?

ರೊದ್ದಂ: ಇಲ್ಲಿ ಎರಡು ಸ್ತರ ಬದಲಾವಣೆಗಳು ಉಂಟಾಗಬಹುದು. ಆವಿಯಿಂದ ದ್ರವ್ಯವಾಗುವುದು ಒಂದು. ದ್ರವ್ಯದಿಂದ ಘನವಸ್ತುವಾಗುವುದು ಇನ್ನೊಂದು. ಪ್ರತಿಯೊಂದು ಬಾರಿ ಸ್ತರ ಬದಲಾವಣೆ ಆಗುತ್ತಲೂ ಮೋಡದೊಳಗೆ ಹರಿವಿನ ಲಕ್ಷಣಗಳು ಬದಲಾಗುತ್ತವೆ. ಏಕೆಂದರೆ, ಈ ಪ್ರಕ್ರಿಯೆಯಲ್ಲಿ ಒಂದಿಷ್ಟು ಕಾವನ್ನು ಒಮ್ಮೆಲೇ ಆ ಹರಿವಿಗೆ ಉಣ ಸಲಾಗುತ್ತದೆ. ನಾನು ಅಧ್ಯಯನ ನಡೆಸುತ್ತ ಬಂದಿರುವ ವಿಷಯಗಳಲ್ಲಿ ಈ ವಿಚಾರವೂ ಒಂದು. ಸರಿಯಾದ ಪ್ರಮಾಣದ ಕಾವನ್ನು, ಸರಿಯಾದ ಜಾಗದಲ್ಲಿ ಆ ಹರಿವಿಗೆ ಉಣ ಸಿದರೆ ಏನಾಗುತ್ತದೆ ಎಂದು ತಿಳಿಯುವುದು. ಈ ರೀತಿಯಲ್ಲಿ, ಹರಿವು ಮೋಡದಂತೆ ಕಾಣುವ ಹಾಗೆ ಮಾಡಬಹುದು.

ಕಣವಿ: ನೀವು ವಿವರಿಸಿದ ಈ ವಿದ್ಯಮಾನ, ಉಷ್ಣ ಹಾಗು ದ್ರವ್ಯ ಚಲನವಿಜ್ಞಾನದ ಪರಸ್ಪರ ಕ್ರಿಯೆಯ ಕುರಿತು ಮಾತನಾಡಿದ್ದಿರಲ್ಲ, ಅದನ್ನೇ ಸೂಚಿಸುತ್ತದೆಯೇ?

ರೊದ್ದಂ: ಹೌದು. ಆದರೆ, ಸರಿಯಾದ ಪ್ರಮಾಣದಲ್ಲಿ ಕಾವನ್ನು ಉಣ ಸಬೇಕು. ಪ್ರಯೋಗಗಳ ಆಧಾರದಲ್ಲಿ ನನ್ನ ಅಭಿಪ್ರಾಯ ಏನೆಂದರೆ, ನೀರು, ಎಣ್ಣೆ, ಪಾದರಸ ಮುಂತಾದ ಯಾವುದೇ ದ್ರವ್ಯದಲ್ಲಿ ಮೋಡದ ಹರಿವನ್ನು ಸೃಷ್ಟಿಸಬಹುದು, ಮೋಡವು ರಚನೆಗೊಳ್ಳುತ್ತಿರುವ ಪ್ರಕ್ರಿಯೆಯನ್ನು, ಅಂದರೆ, ಪುಕ್ಕದ ಆಕೃತಿಯೊಂದು ಮೂಡುತ್ತಿರುವುದನ್ನು ನೋಡಬಹುದು. 9 ಆದರೆ ಒಂದು ಷರತ್ತಿದೆ; ಉಣ ಸುವ ಕಾವಿನ ಪ್ರಮಾಣವು ಆ ದ್ರವ್ಯದ ಹರಿವಿನ ಶಕ್ತಿಯ ಪ್ರಮಾಣದೊಂದಿಗೆ ಒಂದು ನಿರ್ದಿಷ್ಟ ಅನುಪಾತದಲ್ಲಿರಬೇಕು. ಇದನ್ನು ನೀವು ಸಾಧಿಸಿದಿರೋ, ಬಾನಿನಲ್ಲಾಗುವ ಪ್ರಕ್ರಿಯೆಗೆ ತೀರ ಹತ್ತಿರವಾದ ವಿದ್ಯಮಾನವನ್ನು ನೀವು ಕಾಣಬಲ್ಲಿರಿ. ನೀರಿನ ಹನಿಗಳ ಮೋಡವು ಕೂಡ, ಆ ಪುಕ್ಕದ ಆಕೃತಿಯೊಂದು ಮೂಡುತ್ತದಲ್ಲ, ಅದರ ಒಂದು ವಿಶೇಷ ಬಗೆಯೇ ಆಗಿದೆ. ಇದು ನಮ್ಮ ತೀರ್ಮಾನ. ನಮ್ಮ ಪ್ರಕಾರ ಮೋಡವೊಂದು ಆ ಪುಕ್ಕದ ಆಕೃತಿಯ ತಾತ್ಕಾಲಿಕ ಹಂತ. ಅದಕ್ಕೆ ಸೀಮಿತ ಜೀವಿತಾವಧಿ ಇದೆ. ನಾನು ಪ್ರಯೋಗಾಲಯದಲ್ಲಿ, ಕಂಪ್ಯೂಟರಲ್ಲಿ ಸಾಕಷ್ಟು ಪ್ರಯೋಗಗಳನ್ನು ಮಾಡುತ್ತ ಬಂದಿದ್ದೇನೆ. ಅದು ಬಹಳ ಮೋಜಿನ ಕೆಲಸ, ತುಂಬ ಖುಷಿ ಕೊಟ್ಟಿದೆ. ನಾವು ದಿನನಿತ್ಯ ಏನೆಲ್ಲ ನೋಡುತ್ತೇವೆ, ಯಾವೆಲ್ಲವನ್ನು ಬೆರಗಿನಿಂದ ಕಾಣುತ್ತೇವೆ ಮತ್ತು ಪ್ರೀತಿಸುತ್ತೇವೆ ಅವೆಲ್ಲವನ್ನು ನಾವಿನ್ನೂ ಸರಿಯಾಗಿ ಅರ್ಥಮಾಡಿಕೊಂಡಿಲ್ಲ ಎಂಬ ವಿಷಯ ಬಹಳಷ್ಟು ಜನರಿಗೆ ಆಶ್ಚರ್ಯಕರ ಸಂಗತಿಯಾಗಿದೆ.

ಕಣವಿ: ಮೋಡಗಳ ರಚನೆಯು ಅವ್ಯವಸ್ಥಿತವಾದದ್ದು, ಚಿಟ್ಟೆ ಪರಿಣಾಮಕ್ಕೆ ಒಳಗಾದದ್ದು, ಸಿಕ್ಕಾಪಟ್ಟೆ ಗೊತ್ತಿರದ ಅಂಶಗಳನ್ನು ಒಳಗೊಂಡದ್ದು; ಹೀಗೆ ಕಾರಣಗಳನ್ನೊಡ್ಡಿ ಅವುಗಳ ಅಧ್ಯಯನವನ್ನೇ ಕೈಚೆಲ್ಲಿದ್ದಾರಲ್ಲ ಬಹಳಷ್ಟು ಮಂದಿ. (ಚಿಟ್ಟೆ ಪರಿಣಾಮ - ಇದು ಅವ್ಯವಸ್ಥೆ ಸಿದ್ಧಾಂತದ --ಖೇಯಾಸ್ ಥಿಯರಿ, ಪಾರಿಭಾಷಿಕ ಪದ. ಇಲ್ಲಿ, ಒಂದು ಪ್ರಕ್ರಿಯೆಯ ಕೊನೆಯ ಸ್ಥಿತಿಗಳು ಮೊದಲ ಸ್ಥಿತಿಗಳನ್ನು ಎಷ್ಟು ಅವಂಬಿಸಿರುತ್ತವೆ ಎಂದರೆ, ಮೊದಲ ಸ್ಥಿತಿಗಳಲ್ಲುಂಟಾಗುವ ಅತಿಸಣ್ಣ ಬದಲಾವಣೆಯು ಕೊನೆಯ ಸ್ಥಿತಿಗಳನ್ನು ನೆಲಬಾನಂತರದಷ್ಟು ಬದಲಾಯಿಸಿಬಿಡುತ್ತವೆ. ಈ ಪರಿಣಾಮವನ್ನೇ ಚಿಟ್ಟೆ ಪರಿಣಾಮ ಎಂದು ಕರೆಯಲಾಗುತ್ತದೆ - ಅನುವಾದಕ).

ರೊದ್ದಂ: ನೀವು ಗುರುತಿಸಿದ್ದು ನಿಜ. ಮೋಡಗಳ ವೈಜ್ಞಾನಿಕ ಅಧ್ಯಯನ 1960ರ ದಶಕದಲ್ಲಿ ಶುರುವಾಯಿತು. ಬಹಳ ಸರಳವಾದ ಪ್ರಯೋಗಗಳನ್ನು ನಡೆಸಲಾಯಿತು. ದುರಾದೃಷ್ಟವಶಾತ್, 1970ರ ದಶಕಕ್ಕೆ ಬರುವ ಹೊತ್ತಿಗೆ, ಆ ಸರಳ ಪ್ರಯೋಗಗಳು ಮೋಡಗಳಂತೆ ವರ್ತಿಸುತ್ತಿಲ್ಲ ಎಂದು ಮನಗಾಣಲಾಯಿತು. ಹೀಗಾಗಿ, ಪ್ರಯೋಗಾಲಯಗಳಲ್ಲಿ ಮೋಡದ ಹರಿವನ್ನು ಸೃಷ್ಟಿಸುವ ಪ್ರಯತ್ನಗಳು ಕಡಿಮೆಯಾದವು. ಆದರೆ, ಸಂಶೋಧಕರು ಎಲ್ಲಿ ಬಿಟ್ಟಿದ್ದರೋ ಅಲ್ಲಿಂದ ನಾವು ಅಧ್ಯಯನವನ್ನು ಮುಂದುವರಿಸಿದೆವು. 10 1980ರಲ್ಲಿ, ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ (ಐ.ಐ.ಎಸ್‍ಸಿ) ನನ್ನ ವಿದ್ಯಾರ್ಥಿಗಳ ಕೂಡೆ ಒಂದು ಪ್ರಯೋಗಕ್ಕೆ ಕೈಹಾಕಿದೆ. ಜಿ ಎಸ್ ಭಟ್ ಆ ವಿದ್ಯಾರ್ಥಿಗಳಲ್ಲಿ ಮೊದಲಿಗನಾಗಿದ್ದ (ಪ್ರಸ್ತುತ ಅವರು ಐ.ಐ.ಎಸ್‍ಸಿಯ ಸಿಎಓಎಸ್ ವಿಭಾದಲ್ಲಿ ಪ್ರಾಧ್ಯಾಪಕರು). ಆ ಪ್ರಯೋಗ ಸಾಕಷ್ಟು ವಿಷಯಗಳನ್ನು ಹೊರಗೆಡವಿತು. ಅಲ್ಲಿಂದ ಮೊದಲ್ಗೊಂಡು ಇಲ್ಲಿಯವರೆಗೂ ನಾನು ಒಂದಲ್ಲಾ ಒಂದು ರೀತಿಯಲ್ಲಿ ಮೋಡಗಳ ಅಧ್ಯಯನದಲ್ಲಿ ತೊಡಗಿರುವೆ. ಪ್ರತಿ ಬಾರಿ ಪ್ರಯೋಗ ನಡೆಸಿದಾಗಲೂ, ಮೋಡವನ್ನು ಹೋಲುವ ಹರಿವಿನ ಸೃಷ್ಟಿಗೆ ನಾವು ಮತ್ತಷ್ಟು ಹತ್ತಿರ ಬರುತ್ತಲೇ ಇದ್ದೇವೆ. ನಮ್ಮ ನೀರಿನ ತೊಟ್ಟಿಯಲ್ಲೀಗ ಮೋಡದ ಹಲವು ಪ್ರಕಾರಗಳನ್ನು ಮರುಸೃಷ್ಟಿಸಬಹುದಾಗಿದೆ. ಈ ಹಂತ, ಹಲವು ಜನರನ್ನು ಇತ್ತ ಗಮನ ಹರಿಸುವಂತೆ ಮಾಡಿದೆ. ಸದ್ಯ ನನ್ನ ಆಸಕ್ತಿ, ಆ ಎಲ್ಲದರ ವಿವರಗಳನ್ನು ಕಂಪ್ಯೂಟರ್‍ನಲ್ಲಿ ತರಿಸುವುದು. ಪ್ರಯೋಗಾಲಯದಲ್ಲಿ ಆ ಎಲ್ಲಾ ಸ್ಥಿತಿಗಳನ್ನು, ಅಂದರೆ, ಆವಿ, ಹನಿಗೊಳ್ಳುವ ಪ್ರಕ್ರಿಯೆ ಮುಂತಾದವುಗಳನ್ನು ಮರುಸೃಷ್ಟಿಸುವುದು ಇದೆಯಲ್ಲ, ಅದು ಬಹಳ ಕಷ್ಟದ ಕೆಲಸ. ಪ್ರಯೋಗಾಲಯದಲ್ಲಿ ಅಣ ಗೊಳಿಸುವ ವ್ಯವಸ್ಥೆ ಬಹಳ ದೊಡ್ಡದಾಗಿರಲು ಸಾಧ್ಯವಿಲ್ಲವಲ್ಲ. ಆದರೆ, ಕಂಪ್ಯೂಟರ್‍ನಲ್ಲಿ ಆ ಸಮಸ್ಯೆ ಎದುರಾಗುವುದಿಲ್ಲ. ಒಂದು ದೃಷ್ಟಿಯಿಂದ, ಕಂಪ್ಯೂಟರ್ ಬಳಸುವುದರಿಂದ ನನಗೆ ಹೆಚ್ಚಿನ ಸ್ವಾತಂತ್ರ್ಯ ಸಿಗಲಿದೆ. ಸೂಪರ್ ಕಂಪ್ಯೂಟರ್‍ನ ವೇಗಕ್ಕೆ ನನಗೆ ಪ್ರವೇಶ ದೊರೆತಿರಬೇಕಷ್ಟೆ. ಸದ್ಯಕ್ಕೆ ನಾವು ಕಂಪ್ಯೂಟರ್‍ನಲ್ಲಿ ಮೋಡಗಳ ಪ್ರತ್ಯನುಕರಣೆಯನ್ನು (ಸಿಮುಲೇಶನ್) ಮಾಡುತ್ತಲಿದ್ದೇವೆ.

ಕಣವಿ: ನೀವು ಯಾವ ಕಂಪ್ಯೂಟರ್ ಬಳಸುತ್ತಲಿದ್ದೀರಿ?

ರೊದ್ದಂ: ಅದೊಂದು ದೊಡ್ಡ ಸಮಸ್ಯೆ. ಬೆಂಗಳೂರಿನ ಸಿಎಸ್‍ಐಆರ್ ಫೋರ್ತ್ ಪ್ಯಾರಡಾಯ್ಮ್ ಇನ್ಸ್ಟಿಟ್ಯೂಟ್ (ಸಿಎಸ್‍ಐಆರ್ - 4ಪಿಐ) (ಈ ಸಂಸ್ಥೆಯ ಹಳೆಯ ಹೆಸರು ಸಿಎಂಎಂಎಸಿಎಸ್ - ಸಿಎಸ್‍ಐಆರ್ ಸೆಂಟರ್ ಫಾರ್ ಮ್ಯಾಥಮಾಟಿಕಲ್ ಮಾಡೆಲಿಂಗ್ ಆಂಡ್ ಕಂಪ್ಯೂಟರ್ ಸಿಮ್ಯುಲೇಶನ್) ಒಂದು ದೊಡ್ಡ ಕಂಪ್ಯೂಟರ್ ಅನ್ನು ತರಿಸಿಕೊಂಡಿತ್ತು. ಅದರಲ್ಲಿ ನಾನು ಸಾಕಷ್ಟು ಲೆಕ್ಕಗಳನ್ನು ಮಾಡಿದೆ. ಆದರೆ, ಅದೂ ಈವಾಗ ಸಾಕಾಗುತ್ತಿಲ್ಲ. ಪೂಣೆಯ ಐಐಟಿಎಂ (ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟ್ರಾಪಿಕಲ್ ಮೆಟೆರಾಲಜಿ) ಅಲ್ಲಿ ಶಕ್ತಿಯುತವಾದ ಕಂಪ್ಯೂಟರೊಂದಿದೆ. ಐಐಎಸ್‍ಸಿ ಅಲ್ಲಿ ಕ್ರೇ ಎಂಬ ಕಂಪ್ಯೂಟರ್ ಇದೆ. ಇವೆರಡರಲ್ಲೂ ಕೆಲವೊಮ್ಮೆ ಲೆಕ್ಕಗಳನ್ನು ಮಾಡುತೆ ್ತೀನೆ.

ಕಣವಿ: ನನ್ನದೊಂದು ತರಲೆ ಪ್ರಶ್ನೆ ಇದೆ. ನಮ್ಮಲ್ಲಿ, ಸುದೀರ್ಘ ಪರಂಪರೆಯುಳ್ಳ ಪಂಚಾಂಗ ವ್ಯವಸ್ಥೆ ಇದೆ. ಹವಾಮಾನದ ಆಗುಹೋಗುಗಳನ್ನು ಗುರುತಿಸಲೂ ಅದನ್ನು ಬಳಸಲಾಗುತ್ತದೆ. ಇದೇ ಕಾರಣಕ್ಕಾಗಿ ಅದು ಕೃಷಿ ಆರ್ಥಿಕತೆಗೆ ಬಹಳ ಮುಖ್ಯ ಅನಿಸಿದೆ. ಭಾರತೀಯ ಹವಾಮಾನ ಇಲಾಖೆಯಿಂದ ಕಳೆದ 100 ವರ್ಷಗಳ ನಂಬಲರ್ಹ ಮಾಹಿತಿಯು ಈಗ ದೊರೆಯುವುದರಿಂದ, ಹವಾಮಾನದ ವಾಸ್ತವಾಂಶಗಳನ್ನು ಪಂಚಾಂಗದ ಭವಿಷ್ಯತ್-ವಾಣ ಯೊಂದಿಗೆ ಹೋಲಿಸಿ ನೋಡಬಹುದಲ್ಲವೇ? ಅವೆರಡರ ನಡುವಿನ ಸಂಬಂಧ ಹಾಗು ಪಂಚಾಂಗ ನುಡಿಯುವ ಕಣ ಯ ನಿಖರತೆಯನ್ನು ಒರೆಗೆ ಹಚ್ಚಬಹುದಲ್ಲ?

ರೊದ್ದಂ: ಮಳೆಯನ್ನು ದೃಷ್ಟಿಯಲ್ಲಿಟ್ಟು ನೋಡುವುದಾದರೆ, ಅವೆರಡರ ನಡುವಿನ ಸಂಬಂಧ ಬಹಳ ಶಿಥಿಲವೆಂದೇ ಹೇಳಬೇಕಾಗುತ್ತದೆ. ಒಂದು ಉದಾಹರಣೆ ಕೊಡುತ್ತೇನೆ. ಮೈಸೂರು ಅರಸು ಸಂಸ್ಥಾನದಲ್ಲಿ, ಮಹಾರಾಜರ ಪ್ರೋತ್ಸಾಹದಿಂದ ಒಂಟಿಕೊಪ್ಪಲು ಪಂಚಾಂಗವನ್ನು ರಚಿಸಲಾಗಿತ್ತು. ಆದರೆ, ಪಂಚಾಂಗವು ರೇಖಾಂಶವನ್ನು ಅವಲಂಬಿಸಿದ್ದು. ಹಾಗಾಗಿ, ಆ ಪಂಚಾಂಗವು ಇಡೀ ಕರ್ನಾಟಕಕ್ಕೆ ನಿಖರವಾಗಿ ಅನ್ವಯಿಸುವ ಸಾಧ್ಯತೆಯೇ ಇರದು. ಹೀಗೆಂದ ಮಾತ್ರಕ್ಕೆ, ಪಂಚಾಂಗಗಳಲ್ಲಿ ಯಾವ ಜ್ಞಾನವೂ ಇರಲಿಲ್ಲ ಎಂದೇನಲ್ಲ. ಮಳೆಗಾಲವು ಗಾಲಿಯುರುಳಿನಂತೆ ಮರುಕಳಿಸುವಂಥದ್ದು ಎಂಬ ತಿಳಿವು ಅವುಗಳಲ್ಲಿತ್ತು. ವರ್ಷ (12 ತಿಂಗಳ ಅವಧಿ) ಪದದ ಮೂಲ ಅರ್ಥ ಮಳೆ ಎನ್ನುವುದೇ ಆಗಿದೆ. ಮಳೆಯು ಋತುಬದ್ಧವಾಗಿರುವಂಥದ್ದು - ವರ್ಷಕ್ಕೊಮ್ಮೆ ಬರುವಂಥದ್ದು. ಹಾಗಾಗಿ, 12 ತಿಂಗಳ ಅವಧಿಯನ್ನು ಸೂಚಿಸುವ ಪದವೂ, ಮಳೆಯನ್ನು ಸೂಚಿಸುವ ಪದವೂ ಒಂದೇ ಆಗಿದೆ. ಮಳೆಯು ಸರಿಸುಮಾರು ಮೂರರಿಂದ ನಾಲ್ಕು ತಿಂಗಳು ಇರುತ್ತದೆ ಎಂಬ ಸ್ಥೂಲ ತಿಳಿವೂ ಪಂಚಾಂಗಗಳಲ್ಲಿತ್ತು.

ಕಣವಿ: ಅಲ್ಲದೆ, ಆ ಆವರ್ತನಗಳ ನಡುವೆ ಹಲವು ನಕ್ಷತ್ರಗಳನ್ನು ಗುರುತಿಸಲಾಗಿದೆ. ಮಳೆಗಾಲದ ಬೇರೆಬೇರೆ ಹಂತಗಳಿಗೆ ಬೇರೆಬೇರೆ ನಕ್ಷತ್ರಗಳು.

ರೊದ್ದಂ: ಹೌದು. ಅದು ಸತತ ಅನುಭವದಿಂದ ಪಡೆದ ಜ್ಞಾನ. ಸರಿಯಾಗಿದೆ ಕೂಡ. ಆದರೆ, ಪ್ರದೇಶದಿಂದ ಪ್ರದೇಶಕ್ಕೆ ಅದು ವ್ಯತ್ಯಾಸಗೊಳ್ಳುತ್ತದೆ. ಹಾಗಾಗಿ, ಐಐಎಸ್‍ಸಿಯಲ್ಲಿ ಒಂದು ಪ್ರಯೋಗ ನಡೆಸಿದೆ. ಅದು, ನೀವು ಯೋಚಿಸುತ್ತಿರುವ ರೀತಿಯಲ್ಲಿ ಅಲ್ಲದಿದ್ದರೂ ನಕ್ಷತ್ರಗಳ ಅರಿವನ್ನು ಬಳಸುವವರನ್ನಂತೂ ಅದು ಒಳಗೊಂಡಿತ್ತು. ರೈತರನ್ನು ಮಾತನಾಡಿಸೋಣ ಹಾಗು ಯಾವ ರೀತಿಯ ಮುನ್ಸೂಚನೆಗಳನ್ನು ಅವರು ನೀಡುತ್ತಾರೆ ಎನ್ನುವುದುನ್ನು ಗಮನಿಸೋಣ ಎಂದು ಹೇಳಿದೆ. ಇದರ ಭಾಗವಾಗಿ ಕೆಲವು ರೈತರನ್ನು ಭೇಟಿಯಾಗಿ ಅವರನ್ನು ಐಐಎಸ್‍ಸಿಗೆ ಆಹ್ವಾನಿಸಿದ್ದೆವು. ಮೊಟ್ಟಮೊದಲನೆಯದಾಗಿ, ಹವಾಮಾನದ ಕುರಿತು ತಮ್ಮನ್ನು ಮಾತನಾಡಿಸಲು ಜನರು ಬಂದಿದ್ದಾರಲ್ಲ ಎಂದು ತಿಳಿದೇ ಅವರೆಲ್ಲರಿಗೂ ಬಹಳ ಸಂತೋಷವಾಗಿತ್ತು. ನಾನು ಅದಾಗಲೇ ಒಂದು ಕೆಲಸ ಮಾಡಿದ್ದೆ. ಹವಾಮಾನ ಇಲಾಖೆಯ ಎಲ್ಲಾ ಅಂಕಿಅಂಶಗಳನ್ನು, ಮಳೆಯ ದಾಖಲಾತಿಗಳನ್ನು ನಕ್ಷತ್ರಗಳ ಅನುಸಾರದಲ್ಲಿ ಮರುವಿಂಗಡಿಸಿದ್ದೆ. ಆ ಎಲ್ಲದರ ಮಾಹಿತಿ ಸಿಎಓಎಸ್ (ಸೆಂಟರ್ ಫಾರ್ ಅಟ್ಮಾಸ್ಫೆರಿಕ್ ಆಂಡ್ ಓಶಿಯಾನಿಕ್ ಸೈನ್ಸಸ್, ಐಐಎಸ್‍ಸಿ) ಜಾಲತಾಣದಲ್ಲಿದೆ. ಇದನ್ನಿಟ್ಟುಕೊಂಡು ನಾವೆಲ್ಲ ಸುದೀರ್ಘವಾಗಿ ಮಾತನಾಡಿದೆವು. ಅಲ್ಲಿ ಮೂಡಿದ ಅಭಿಪ್ರಾಯವೇನೆಂದರೆ, ನಮ್ಮ ಯಾವುದೇ ಮುನ್ಸೂಚನೆಗಳು, ಅವನ್ನು ಹವಾಮಾನ ಇಲಾಖೆಗಳೇ ನೀಡಿರಲಿ ಅಥವಾ ಪಂಚಾಂಗವೇ ನೀಡಿರಲಿ, ಅಸಮರ್ಪಕವಾಗಿವೆ ಎಂದು.

ಕಣವಿ: ನಮ್ಮ ಹವಾಮಾನ ಇಲಾಖೆಯು ವಿವರವಾದ ಮುನ್ಸೂಚನೆಗಳನ್ನು ನೀಡುವುದಿಲ್ಲ. ಸಾಧಾರಣ, ಸಾಧಾರಣಕ್ಕಿಂತ ಕಡಿಮೆ, ಮುಂಗಾರು; ಇಷ್ಟನ್ನೇ ಹೇಳುತ್ತದೆ. ಆದರೆ ಯು.ಎಸ್ ನಲ್ಲಿ, ಮುಂದಿನ 12, 24, 48, 72 ಗಂಟೆಗಳ ಮುನ್ಸೂಚನೆಯನ್ನು ಬಹಳ ನಿಖರವಾಗಿ ಅಲ್ಲಿನ ಪ್ರತಿ ಪ್ರದೇಶಗಳೂ, ಪ್ರತಿ ಟಿವಿ ಚ್ಯಾನಲ್ಲುಗಳೂ ನೀಡುತ್ತವೆ. ಆದರೆ, ಭಾರತದಲ್ಲಿ ಹಾಗಿಲ್ಲ. ಇಲ್ಲಿ ಹವಾಮಾನ ಮುನ್ಸೂಚನೆಯು ತ್ರಾಸದಾಯಕವಾಗಿರಲು ಕಾರಣ ಏನು?

ರೊದ್ದಂ: ಇದು ಬಹಳ ಮುಖ್ಯವಾದ ಪ್ರಶ್ನೆ. ನೋಡಿ, ಯುರೋಪ್ ಹಾಗು ಉತ್ತರ ಅಮೇರಿಕವಿರುವ ಮೇಲ್ಮಟ್ಟದ ಅಕ್ಷಾಂಶಗಳಲ್ಲಿ ಹವಾಮಾನದ ಚಲನವಲನಗಳು ಕೆಳಮಟ್ಟದ ಉಷ್ಣವಲಯಕ್ಕಿಂತ ಸರಳವಾಗಿವೆ. ಉಷ್ಣವಲಯದಲ್ಲಿ ಅವು ಹೆಚ್ಚು ಸಂಕೀರ್ಣವಾಗಿವೆ. ಮುಂಗಾರಿನ ಮುನ್ಸೂಚನೆಯಲ್ಲಿ ಬ್ರಿಟೀಷರು ಹಾಗು ಅಮೇರಿಕನ್ನರು ನಮಗಿಂತ ಉತ್ತಮರು ಎಂದೇನೂ ಅಲ್ಲ. ಅವರೂ ಆವಾಗಾವಾಗ ಗುರುತರ ತಪ್ಪುಗಳನ್ನು ಮಾಡಿದ್ದಾರೆ. ನಾವೂ ತಪ್ಪು ಮಾಡುತ್ತಿರುತ್ತೇವೆ, ನಿಜ. ಆದರೆ, ಈ ಮಾತು ಅವರಿಗೂ ಅನ್ವಯಿಸುತ್ತದೆ. ಇಡಿ ಪ್ರಪಂಚದಲ್ಲೇ ಮುಂಗಾರಿನ ಕುರಿತು ಅತಿಹೆಚ್ಚು ಆಸಕ್ತಿ ಹೊಂದಿರುವವರು ನಾವಾಗಿದ್ದೇವೆ. ಏಕೆಂದರೆ, ನಮ್ಮ ಆರ್ಥಿಕತೆಯು ಮುಂಗಾರನ್ನು ಬಹುವಾಗಿ ಅವಲಂಬಿಸಿದೆ. ಇನ್ನು ಹಲವು ಕಾರಣಗಳಿಗಾಗಿಯೂ ಮುಂಗಾರು ಅಧ್ಯಯನ ನಮಗೆ ಮುಖ್ಯ. ಹಾಗಾಗಿ, ಮುಂಗಾರು ಅಧ್ಯಯನದಲ್ಲಿ ನಾವು ಮುಂಚೂಣ ಯಲ್ಲಿರಬೇಕಾದ್ದು, ಪರಿಣತರಾಗಿರಬೇಕಾದ್ದು ಅತ್ಯಗತ್ಯ.  ಆದರೆ, ಭಾರತದ ಅತ್ಯುತ್ತಮ ಮೆದುಳುಗಳು ಮುಂಗಾರು ಅಧ್ಯಯನದಲ್ಲಿ ತೊಡಗಿಸಿಕೊಳ್ಳದೆ, ಪಶ್ಚಿಮ ದೇಶಗಳಲ್ಲಿ ರೂಢಿಯಲ್ಲಿರುವ ಅಧ್ಯಯನ ವಿಷಯಗಳ ಹಿಂದೆಹಿಂದೆ ಸಾಗುತ್ತವೆ. ಆದರೆ, ಪಶ್ಚಿಮ ದೇಶಗಳು ತಮಗೆ ಯಾವುದು ಮುಖ್ಯವೋ ಅದನ್ನೇ ಅಧ್ಯಯನ ಮಾಡುತ್ತವೆ! ಪಶ್ಚಿಮ ಜಗತ್ತಿನ ವಿಜ್ಞಾನಿಗಳು ತಮ್ಮ ಸಮಸ್ಯೆಗಳನ್ನು ಅವಲೋಕಿಸಿದಷ್ಟು ತೀವ್ರವಾಗಿ ಭಾರತೀಯ ವಿಜ್ಞಾನಿಗಳ ಸಮೂಹವು ತಮ್ಮ ದೇಶದ ಸಮಸ್ಯೆಗಳನ್ನು ಅವಲೋಕಿಸಿಲ್ಲ. ಆದರೆ, ಇತ್ತೀಚೆಗೆ ಪರಿಸ್ಥಿತಿ ಕೊಂಚ ಬದಲಾಗುತ್ತಿದೆ. ಒಂದನ್ನಂತೂ ಹೇಳಬಹುದು; ಭಾರತದಲ್ಲಷ್ಟೇ ಅಲ್ಲ, ಇಡೀ ಜಗತ್ತಿನಲ್ಲಿ ಸದ್ಯ ಇರುವ ಜ್ಞಾನದ ಮಟ್ಟವನ್ನು ಬಳಸಿಕೊಂಡು ಮುಂಗಾರನ್ನು ಮುನ್ಸೂಚಿಸುವುದು ಇದೆಯಲ್ಲ, ಅದು ಬಹಳ ಕಷ್ಟದ ಕೆಲಸ. ಅಮೇರಿಕದಿಂದ ಅಜ್ಞಾತ ಕಂಪ್ಯೂಟರ್ ಕೋಡ್ಗಳನ್ನು ಎರವಲು ಪಡೆಯುವುದು ಮುಂತಾದ ಚಟುವಟಿಕೆಗಳಿಗಷ್ಟೇ ಭಾರತೀಯ ಪ್ರತಿಸ್ಪಂದನೆ ಸೀಮಿತವಾಗಿದೆಯೇ ಹೊರತು, ಮುನ್ಸೂಚಿಸುವುದರಲ್ಲಿ ನಮ್ಮ ಅನುಭವವೇನು ಹೆಚ್ಚು ಶ್ರೀಮಂತವಾಗಿಲ್ಲ. ಅಮೇರಿಕದವರೇ, ‘ನಮ್ಮಿಂದ ಮುಂಗಾರನ್ನು ಮುಂಗಾಣುವುದು ಸಾಧ್ಯವಿಲ್ಲ’ ಎನ್ನುತ್ತಾರಲ್ಲ!

ಕಣವಿ: ಎಲ್ ನೀನೊ ಮುಂತಾದ ವಿದ್ಯಮಾನಗಳ ಕುರಿತು ಮಾತನಾಡುವುದಾದರೆ? ಎಲ್ ನೀನೋ ಭಾರತದ ಮುಂಗಾರಿನ ಮೇಲೆ ಪರಿಣಾಮ ಬೀರಿದ್ದನ್ನು ಭಾರತೀಯ ವಿಜ್ಞಾನಿಗಳು ಖುದ್ದು ಗಮನಿಸಿದರೇ? ಅಥವಾ, ಆ ವಿಷಯವನ್ನು ನೇರವಾಗಿ ಪಶ್ಚಿಮದಿಂದ ಎರವಲು ಪಡೆದರೇ?

ರೊದ್ದಂ: ಇದೊಂದು ಕುತೂಹಲ ಕೆರಳಿಸುವ ಪ್ರಶ್ನೆ. ಮೊದಮೊದಲಿಗೆ ಈ ವಿದ್ಯಮಾನವನ್ನು ಎಲ್ ನೀನೊ ಎಂದು ಗುರುತಿಸಲಾಗಿರಲಿಲ್ಲ. ಎಲ್ ನೀನೊಗೆ ಸಂಬಂಧಿಸಿದಂತೆ ಭೌತಿಕ ವಿದ್ಯಮಾನಗಳನ್ನು ಮೊಟ್ಟಮೊದಲು ಗುರುತಿಸಿದವರು ಭಾರತೀಯ ಹವಾಮಾನ ಇಲಾಖೆಯ ಅಂದಿನ ಬ್ರಿಟಿಷ್ ಮುಖ್ಯಸ್ಥರಾದ ಸರ್ ಗಿಲ್ಬರ್ಟ್ ವಾಕರ್, ಸರಿಸುಮಾರು 1915-20ರಲ್ಲಿ. ಆತ ಚಾಣಾಕ್ಷನಾಗಿದ್ದ. ಭಾರತಕ್ಕೆ ಬಂದ ಸಂದರ್ಭದಲ್ಲಿ ಆತನಿಗೆ ಹವಮಾನ ವಿಜ್ಞಾನದ ಕುರಿತು ಏನೇನೂ ಗೊತ್ತಿರಲಿಲ್ಲ. ಆದರೆ ಅದರೆಡೆಗೆ ಸಮ್ಮೋಹಿತನಾಗಿದ್ದ. ಆದರೆ, ಕೆಲವೇ ಸಮಯದಲ್ಲಿ ಆತ, ಮುಂಗಾರು ತುಂಬ ವಿಕ್ಷಿಪ್ತವಾದದ್ದು ಎಂಬ ತೀರ‍್ಮಾನಕ್ಕೆ ಬಂದ - ಇದರ ಚಲನಕ್ರಮವನ್ನು ಸರಿಯಾಗಿ ಅರ್ಥೈಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ತಿಳಿದ. ‘ನಾನು ಸಂಖ್ಯಾಶಾಸ್ತ್ರದ ಆಧಾರದಲ್ಲಿ ಮುನ್ಸೂಚನೆಗಳನ್ನು ನೀಡುತ್ತೇನೆ’ ಎಂದು ಭಾವಿಸಿ, ಹವಾಮಾನ ಇಲಾಖೆಗೆ ಸಂಖ್ಯಾಶಾಸ್ತ್ರೀಯ ಮುನ್ಸೂಚನಾ ವಿಧಾನವನ್ನು ಪರಿಚಯಿಸಿದ.  ತೀರ ಇತ್ತೀಚಿನವರೆಗೂ, ವಾಕರ್‍ನ ತಾತ್ವಿಕ ಚಿಂತನೆ, ಅವನ ಸೂತ್ರ ಎಂದು ನಿಖರವಾಗಿ ಹೇಳುವುದಕ್ಕಿಂತ ಅವನ ತಾತ್ವಿಕ ಚಿಂತನೆ, ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆಗಳನ್ನು ನಿಯಂತ್ರಿಸುತ್ತಿತ್ತು, ನಿರ್ದೇಶಿಸುತ್ತಿತ್ತು. ಈಗ ವಸಂತ್ ಗೋವಾರಿಕರ್ ಅವರ ಮಾದರಿ ಎನ್ನುವುದು ಇದೆ. ಇದು, ವಾಕರ್ ಮಾದರಿಗಿಂತ ಹೆಚ್ಚಿನ ನಿಯತಾಂಕಗಳನ್ನು ಒಳಗೊಂಡಿದೆ. ಆದರೂ, ತಾತ್ವಿಕ ಚಿಂತನೆ ಎರಡು ಮಾದರಿಗಳಲ್ಲೂ ಒಂದೇ ಆಗಿದೆ. ವಾಕರ್ ಕಂಡುಹಿಡಿದ ಹಲವು ವಿಚಾರಗಳಲ್ಲಿ, ಭಾರತದ ಮುಂಗಾರಿಗೂ ಆಸ್ಟ್ರೇಲಿಯಾದಲ್ಲಿ ಏನು ಸಂಭವಿಸುತ್ತದೋ ಅದಕ್ಕೂ ನಿಕಟ ಸಂಬಂಧವಿದೆ ಎಂಬ ವಿಚಾರವೂ ಒಂದು. ಬ್ರಿಟಿಷ್ ಸಾಮ್ರಾಜ್ಯವಿದ್ದ ಕಾಲದಲ್ಲಿ ಬಹಳ ಸುಲಭವಾಗಿಯೇ ಅದರ ವಸಾಹತುಗಳಿಂದ ಮಾಹಿತಿಗಳನ್ನು ಆತ ಪಡೆದುಕೊಂಡ. ಮಾಹಿತಿಯ ಮಿಕ್ಕ ಜಾಗತಿಕ ಜಾಲಗಳು ಆಗ ಬಲವಾಗಿರಲಿಲ್ಲ, ಆ ಮಾತು ಬೇರೆ. ಹೀಗೆ, ಪೋರ್ಟ್ ಡಾರ‍್ವಿನ್‍ನಲ್ಲೋ, ಪರ್ತ್ ಅಲ್ಲೋ ಗಾಳಿಯ ಒತ್ತಡವು ಉಂಟುಮಾಡುವ ಪರಿಣಾಮವು, ಮುಂದೊಂದು ದಿನ ಭಾರತದ ಮುಂಗಾರಿನ ಪರಿಣಾಮವನ್ನು ಪ್ರಭಾವಿಸುತ್ತದೆ ಎನ್ನುವಂಥ ಅಂಶಗಳನ್ನು ಕಂಡುಹಿಡಿದ. ಈ ವಿಚಾರವನ್ನು ಯಾರು ಕೂಡ ಚಿಂತಿಸಲೂ ಸಾಧ್ಯವಾಗದ ಸಂದರ್ಭ ಅದಾಗಿತ್ತು. ಮೋಡಗಳಿಂದಾಗಿ ಮುಂಗಾರು ಉಂಟಾಗುತ್ತದೆ, ಇಲ್ಲಿನ ಮುಂಗಾರಿಗೂ ದೂರದಲ್ಲೆಲ್ಲೋ ಇರುವ ಪರ್ತ್‍ನಲ್ಲಿ ನಡೆಯುವುದಕ್ಕೂ ಯಾವ ಬಾದರಾಯಣ ಸಂಬಂಧ? ಎಂದು ಬಹುತೇಕರು ನಂಬಿದ್ದರು. ಜನರು ವಾಕರ್‍ನ ನಿಲುವುಗಳನ್ನು ಕಟುವಾಗಿ ಟೀಕಿಸಿದರು. ಆದರೆ, ವಿಪರ್ಯಾಸ ಏನೆಂದರೆ, ಆತ ಸತ್ತ ಎರಡೇ ವರ್ಷಗಳಲ್ಲಿ, ಇನ್ನೂ ನಿಖರವಾದ ಮಾಪನಗಳಿಂದಾಗಿ ಅವನು ಸೂಚಿಸಿದ ಆ ಬಾದರಾಯಣ ಸಂಬಂಧ ನಿಜವೆಂದು ಸಾಧಿತಗೊಂಡಿತು! ಆ ಗೆಲುವನ್ನು ಕಾಣಲು ಪಾಪ ಅವನು ಬದುಕಿರಲಿಲ್ಲ. ಅಲ್ಲಿಗೆ ಆ ಸಂಬಂಧದ ಕುರಿತು ಯಾವ ಸಂಶವೂ ಉಳಿದಿರಲಿಲ್ಲ. ಇದೇ ವಿದ್ಯಮಾನವು ಬೆಳೆದು ಎಲ್ ನೀನೊ ಎನಿಸಿಕೊಂಡಿತು. ಭಾರತದ ಮುಂಗಾರು ಹಾಗು ಉತ್ತರ ಆಸ್ಟ್ರೇಲಿಯಾದ ವಿದ್ಯಮಾನಗಳ ನಡುವಿನ ಯಾವ ನಂಟನ್ನು ವಾಕರ್ ತೊರಿಸಿದ್ದಾನೋ, ಅದು ಎಲ್ ನೀನೊವಿನ ಒಂದು ಸೂಚನೆ. ಈ ವಿದ್ಯಮಾನ ಆಸ್ಟ್ರೇಲಿಯಾಗಷ್ಟೇ ಸಂಬಂಧಪಟ್ಟಿದ್ದಲ್ಲ. ಕಣವಿ: ಈ ಅಟ್ಲಾಂಟಿಕ್ ತೂಗುವಿಕೆ (ಒಸಿಲೇಶನ್) ಇದ್ದಹಾಗೆ ಪೆಸಿಫಿಕ್ ತೂಗುವಿಕೆ ಎನ್ನುವುದು ಇದೆಯೇ? ರೊದ್ದಂ: ಹಾ, ಪೆಸಿಫಿಕ್ ತೂಗುವಿಕೆಗೆ ಎಲ್ ಸೊನಾ ಎನ್ನಲಾಗುತ್ತದೆ. ಎಲ್ ನೀನೊ ದಕ್ಷಿಣದ ತೂಗುವಿಕೆ (ಇಎನ್‍ಎಸ್‍ಓ). ಉತ್ತರ ಅಟ್ಲಾಂಟಿಕ್ ತೂಗುವಿಕೆ (ಎನ್‍ಎಓ) ಎಂಬ ಹೆಸರಿನದ್ದೂ ಒಂದಿದೆ. ಇನ್ನೂ ಹಲವು ತೂಗುವಿಕೆಗಳನ್ನು ಪತ್ತೆಹಚ್ಚಲಾಗಿದೆ. ತೂಗುವಿಕೆಯ ಪರಿಣಾಮಗಳ ಮುನ್ಸೂಚನೆಗಳನ್ನು ಹೆಚ್ಚು ನಿಖರವಾಗಿ ನೀಡಬಹುದು. ಈ ಕಾರಣದಿಂದಾಗಿ, ಅದಕ್ಕೂ ಮುಂಗಾರಿಗೂ ಇರುವ ನಂಟನ್ನು ಗುರುತಿಸಬಹುದು. ಇದನ್ನೇ ವಾಕರ್ ಮಾಡಿದ್ದು. ಈ ವಿದ್ಯಮಾನವನ್ನು ಪತ್ತೆಮಾಡಲಾಗಿದ್ದು ಭಾರತದಲ್ಲಲ್ಲವೇ? ಎಂದು ನೀವು ಕೇಳಬಹುದು. ಆದರೆ, ಭಾರತೀಯನಿಂದಲ್ಲ, ಬ್ರಿಟಿಷ್ ಹವಾಮಾನತಜ್ಞನಿಂದ. ಹೀಗಿದ್ದೂ ಒಂದು ವಿಷಯವನ್ನಂತೂ ಅಲ್ಲಗಳೆಯಲಾಗದು. ಅವನಿಗೆ ಹಲವು ಮಂದಿ ನೆರವಾಗಿದ್ದರಲ್ಲದೆ ಎಲ್ಲಾ ಲೆಕ್ಕಗಳನ್ನು ಭಾರತೀಯರೇ ಮಾಡಿದ್ದರು.

ಕಣವಿ: ಭಾರತೀಯ ಬಾಹ್ಯಾಕಾಶ ಸಂಶೋಧನ ಸಂಸ್ಥೆಯು (ಇಸ್ರೋ) ಹವಾಮಾನ ಅಧ್ಯಯನಕ್ಕಾಗಿಯೇ ಉಪಗ್ರಹಗಳನ್ನು ಕಳಿಸಿತ್ತು. ಕಡಲಿನ ಮೇಲ್ಮೈ ತಾಪಮಾನ, ಮುಂತಾದ ಅಂಶಗಳ ಅಧ್ಯಯನ ಅವುಗಳ ಉದ್ದೇಶವಾಗಿತ್ತು. ಆ ಉಪಗ್ರಹಗಳಿಂದ ಏನಾದರು ಸಹಾಯ ಆಗಿದೆಯೇ?

ರೊದ್ದಂ: ಹೌದು, ದೊಡ್ಡ ಮಟ್ಟದಲ್ಲಿ ಆಗಿದೆ. ಕಣ ್ಣಗೆ ಕಟ್ಟುವಂಥ ಉದಾಹರಣೆ ಬೇಕೆಂದರೆ ಬಿರುಗಾಳಿಗಳ ಮುನ್ಸೂಚನೆಯನ್ನೇ ನೋಡಬಹುದು. ಇತ್ತೀಚೆಗೆ ಒದಿಶಾದಲ್ಲಿ ದೊಡ್ಡ ಚಂಡಮಾರುತವೊಂದು ಅಪ್ಪಳಿಸಿತ್ತು. ಇದರ ಪಥಗತಿಯನ್ನು ಹವಾಮಾನ ಇಲಾಖೆ ಸರಿಯಾಗಿಯೇ ಮುಂಗಂಡಿತ್ತು. ಏಕೆಂದರೆ, ಅವರ ಬಳಿ ಉಪಗ್ರಹದಿಂದ ದೊರೆತ ಸಮಗ್ರ ಮಾಹಿತಿ ಇತ್ತು. ಹೀಗಾಗಿ, ಆ ಬಿರುಗಾಳಿಯ ಜಾಡನ್ನು, ಅದರ ಹುಟ್ಟಿದಾರಭ್ಯದಿಂದಲೂ ಗುರುತಿಸಲಾಯಿತು. ನಿಮಗೆ ನೆನಪಿರಬಹುದು. ಕಳೆದ ಬೃಹತ್ ಚಂಡಮಾರುತದಲ್ಲಿ ಸಾವಿರಾರು ಜನರು ಸತ್ತಿದ್ದರು. ಆದರೆ, ಈ ಸಲದ ಒದಿಶಾ ಚಂಡಮಾರುತದಲ್ಲಿ ಸತ್ತವರು ಹತ್ತೋ ಇಪ್ಪತ್ತೋ ಮಂದಿಯಷ್ಟೇ. ಇಷ್ಟಲ್ಲದೆ, ಉತ್ತರಾಖಂಡದ ಕೇದರನಾಥದಲ್ಲಿ ಉಂಟಾದ ಮೇಘಸ್ಫೋಟವನ್ನು ಅದು ಘಟಿಸುವ ಮುನ್ನವೇ ನಮ್ಮ ಹವಾಮಾನ ಇಲಾಖೆ ಬಯಲಿಗೆ ಎಳೆದಿತ್ತು. ಆದರೆ ದುರದೃಷ್ಟವಶಾತ್ ನಮ್ಮ ಯಾವ ಸರಕಾರಿ ಇಲಾಖೆಗಳೂ ಅದನ್ನು ಗಂಭೀರವಾಗಿ ಪರಿಗಣ ಸಲಿಲ್ಲ. ಈ ನಡೆ ದೊಡ್ಡ ಅನಾಹುತಕ್ಕೆ ದಾರಿಮಾಡಿಕೊಟ್ಟಿತು. ಈ ಕಹಿ ಘಟನೆಯನ್ನು ನೆನಪಿಟ್ಟುಕೊಂಡು ಅಧಿಕಾರವರ್ಗದವರಾಗಲಿ, ರಾಜಕಾರಣ ಗಳಾಗಿ ಒದಿಶಾ ಚಂಡಮಾರುತದ ಸಮಯದಲ್ಲಿ ಸರಿಯಾದ ಏರ್ಪಾಡಿಲ್ಲದೆ ಸಿಕ್ಕಿಹಾಕಿಕೊಳ್ಳಲು ಬಯಸಲಿಲ್ಲ. ಹಾಗಾಗಿ, ಹವಾಮಾನ ಇಲಾಖೆಯ ಮುನ್ನೆಚ್ಚರಿಕೆಯನ್ನು ಅವರೆಲ್ಲ ಗಂಭೀರವಾಗಿ ಪರಿಗಣ ಸಿದರು ಹಾಗು, ಈ ಕಾರಣದಿಂದ ಸಾವು-ನೋವಿನ ಸಂಖ್ಯೆಯೂ ಕಡಿಮೆಯಾಯಿತು. ಇವೆಲ್ಲವು ಏನು ತಿಳಿಸುತ್ತದೆ ಅಂದರೆ, ನಾವು ಅಲ್ಪಾವಧಿಯ ಮುನ್ಸೂಚನೆಗಳನ್ನು ನೀಡುವುದರಲ್ಲಿ ಪರಿಣ ತರಾಗುತ್ತಿದ್ದೇವೆ. ಡಾಪ್ಲರ್ ರೆಡಾರ್‍ಗಳು ಅಲ್ಪಾವಧಿ ಮುನ್ಸೂಚನೆಗಳನ್ನು ನೀಡಲು ನೆರವಾದರೆ, ಒಂದು ಬಿರುಗಾಳಿಯ ಒಟ್ಟೂ ಜೀವಿತ ವರ್ತುಲವನ್ನು ಅರಿಯಲು ಉಪಗ್ರಹಗಳು ನೆರವಾಗುತ್ತವೆ. ಹವಾಮಾನ ಬದಲಾವಣೆಯನ್ನು ಅಧ್ಯಯನ ಮಾಡಲೂ ಅವು ಸಹಾಯಕ್ಕೆ ಬರುವವು. ಈ ಎಲ್ಲಾ ತಂತ್ರಜ್ಞಾನವನ್ನು ಬಳಸಿಕೊಂಡು, ಕಳೆದ 20-30 ವರ್ಷಗಳಲ್ಲಿ ಯಾವೆಲ್ಲ ಬದಲಾವಣೆಗಳು ಆಗಿವೆ ಎನ್ನುವುದನ್ನು ನಾವು ಅರಿಯಬಲ್ಲೆವು.

ಕಣವಿ: ಕಂಪ್ಯೂಟರ್ ಮಾದರಿಗಳು ಸಹಾಯಕ್ಕೆ ಬಂತೇ?

ರೊದ್ದಂ: ಎರಡು ದಿನಗಳ ಮಟ್ಟಿಗೆ ಕಂಪ್ಯೂಟರ್ ಮಾದರಿಗಳು ನೆರವಿಗೆ ಬಂತು. ಆದರೆ, ನಿರೀಕ್ಷಿತ ಮಟ್ಟದಲ್ಲಿ ನೆರವಾಗಿಲ್ಲ. 

ಕಣವಿ: ಉನ್ನತ ಅಕ್ಷಾಂಶಗಳಲ್ಲಿ ಕಂಪ್ಯೂಟರ್ ಮಾದರಿಗಳನ್ನು ಬಳಸುವುದು ಸುಲಭವೇ?

ರೊದ್ದಂ: ಸ್ಥೂಲವಾಗಿ ನೋಡಿದರೆ ಸುಲಭ ಅಂತಲೇ ಕಾಣ ಸುತ್ತದೆ. ಉಷ್ಣವಲಯದ ಕಂಪ್ಯೂಟರ್ ಮಾದರಿಗಳಲ್ಲಿ ನಮ್ಮನ್ನು ಅವಕ್ಕಾಗಿಸಿದ್ದು ಮೋಡಗಳು. ಉನ್ನತ ಅಕ್ಷಾಂಶ ವಲಯದಲ್ಲಿ ಕುಪ್ಪೆ ಮೋಡಗಳು ಹೆಚ್ಚಾಗಿ ಕಂಡುಬಾರವು. ಅವು ವಾಯುಮಂಡಲದ ಪರಿಚಲನೆಯನ್ನೂ ಪ್ರಭಾವಿಸವು. ಆ ವಲಯದಲ್ಲಿ ಬಹುಪಾಲು ಸ್ಥಾವರ ಮೋಡಗಳು, ಚದುರಿದ ಮೋಡಗಳು ಕಂಡುಬರುತ್ತವೆ. ಇದಕ್ಕೆ ವ್ಯತಿರಿಕ್ತವಾಗಿ ಭಾರತದಲ್ಲಿ ಮೋಡಗಳ ಪ್ರಾಮುಖ್ಯತೆ ಹೆಚ್ಚೇ ಇದೆ. ನಾನು ಮೋಡಗಳ ಅಧ್ಯಯನದಲ್ಲಿ ಆಸಕ್ತಿ ಹೊಂದಲು ಇದೇ ಕಾರಣ.

ಕಣವಿ: ಪ್ರೊ. ನರಸಿಂಹ ಅವರೇ, ತುಂಬು ಹೃದಯದ ಧನ್ಯವಾದ. ಈ ಮಾತುಕತೆ ನನಗೊಂದು ಕಲಿಕೆಯಾಯಿತು.

****************************************

 


No comments:

Post a Comment