Prajavani, Dec 23,
2015
https://t.co/BMj5QN1ngs
ವರ್ಲ್ಡ್
ವೈಡ್ ವೆಬ್‌ಗೆ ಬೆಳ್ಳಿ ಸಂಭ್ರಮ
ಪ್ರಪಂಚದಲ್ಲಿ ನಡೆಯುವ ಯಾವುದೇ ಮಹಾನ್ ಕ್ರಾಂತಿಯ ಮೊದಲ ಹೆಜ್ಜೆ ತುಂಬಾ ಚಿಕ್ಕದಿರುತ್ತದೆ, ನಂತರ ಅದು
ತ್ರಿವಿಕ್ರಮಾಕಾರವಾಗಿ ಬೆಳೆದಿರುತ್ತದೆ’ ಎಂಬ ಮಾತಿದೆ. World Wide Web ಅಥವಾ ವಿಶ್ವವ್ಯಾಪಿ ಜಾಲದ ಹುಟ್ಟು ಕೂಡ ಹೀಗೆಯೇ. 90ರ ದಶಕದಲ್ಲಿ
ಇಂಗ್ಲೆಂಡ್‌ನ ಗಣಕ ವಿಜ್ಞಾನಿ ತಿಮೊಥಿ ಜಾನ್ ಬರ್ನರ್ಸ್ ಲೀ (ಟಿಮ್ ಬರ್ನರ್ಸ್ ಲೀ) ಹೈಪರ್
ಟೆಕ್ಟ್ಸ್ ಟ್ರಾನ್ಸ್‌ಫರ್ ಪ್ರೋಟೊಕಾಲ್ (http) ತಂತ್ರಜ್ಞಾನ ಬಳಸಿಕೊಂಡು ಜಾಗತಿಕ ಜಾಲ
ವ್ಯವಸ್ಥೆಯೊಂದನ್ನು (WWW) ಅಭಿವೃದ್ಧಿಪಡಿಸಿದಾಗ ಸ್ವತಃ ಅವರಿಗೇ ಇದು ನಾಳೆ
ವಿಶ್ವವನ್ನೇ ಬದಲಿಸಬಲ್ಲಂತಹ ತಂತ್ರಜ್ಞಾನವಾಗಲಿದೆ ಎಂಬುದರ ಸಣ್ಣ ಕಲ್ಪನೆಯೂ ಇರಲಿಲ್ಲ.
ಹೌದು. ವಿಶ್ವದ ಅಚ್ಚರಿಗಳನ್ನು ಬೆರಳ ತುದಿಗೆ ನಿಲುಕಿಸಿದ ಈ ತಂತ್ರಜ್ಞಾನಕ್ಕೆ ಮೊನ್ನೆ
ಅಂದರೆ 2015, ನವೆಂಬರ್ 12ರಂದು 25 ವರ್ಷ ತುಂಬಿತು. ಇಂಟರ್‌ನೆಟ್
ಎನ್ನುವುದು ಇಂದು ಬದುಕಿನ ಎಲ್ಲ ಆಯಾಮಗಳನ್ನು ಆವರಿಸಿಕೊಂಡು ಬಿಟ್ಟಿದೆ. ವರ್ಲ್ಡ್ ವೈಡ್ ವೆಬ್
ಅನ್ನು (w3) ಮಾನವನ ಜ್ಞಾನದ ಭಂಡಾರ ಎಂದೇ ಬಣ್ಣಿಸಲಾಗುತ್ತದೆ.
ಇಂಟರ್‌ನೆಟ್ ಮತ್ತು ವರ್ಲ್ಡ್ ವೈಡ್ ವೆಬ್ ಇವೆರಡು ಪದಗಳನ್ನು ಕೆಲವೊಮ್ಮೆ
ಸಮನ್ವಯಗೊಳಿಸಲಾಗುತ್ತದೆಯಾದರೂ, ಎರಡರ ಅರ್ಥ ಒಂದೇ ಅಲ್ಲ.
ವಿಶ್ವವ್ಯಾಪಿ ಜಾಲವನ್ನು ಹೈಪರ್‌ಲಿಂಕ್‌ಗಳು ಮತ್ತು ಯುಆರ್‌ಎಲ್‌ಗಳಿಂದ
ಸಂಪರ್ಕಿಸಲಾಗಿರುತ್ತದೆ. ಈ ತಂತ್ರಜ್ಞಾನದಿಂದಾಗಿಯೇ ನಾವು ಇಂಟರ್‌ನೆಟ್‌ನಲ್ಲಿ ಏನೇ ಮಾಹಿತಿ ಹುಡುಕಿದರೂ
ಕ್ಷಣಾರ್ಧದಲ್ಲಿ ಆ ವಿಷಯಕ್ಕೆ ಸಂಬಂಧಿಸಿದ ಸಾವಿರಾರು ಕೊಂಡಿಗಳು ತೆರೆದುಕೊಳ್ಳುವುದು. ಬರ್ನಸ್
ಲೀ ಅವರ ಸಂಶೋಧನೆ ಮಹತ್ವ ಪಡೆದುಕೊಳ್ಳುವುದು ಇಲ್ಲಿಯೇ. 60ರ ದಶಕದಲ್ಲೇ ಇಂಟರ್‌ನೆಟ್ ವ್ಯವಸ್ಥೆ
ಅಭಿವೃದ್ಧಿಗೊಂಡಿದ್ದರೂ ಅದನ್ನು ಒಂದು ಸಣ್ಣ ಕ್ಲಿಕ್‌ನಲ್ಲಿ ಜನಸಾಮಾನ್ಯನ ಬೆರಳುಗಳಿಗೆ
ವರ್ಗಾಯಿಸಿದ ಹೆಗ್ಗಳಿಕೆ ಲೀ ಅವರದ್ದು.
ಬರ್ನಸ್ ಲೀ, ಈ ಮಹತ್ವದ ಸಂಶೋಧನೆಗೆ ಮುನ್ನುಡಿ ಬರೆಯುವಾಗ ಜಿನಿವಾದಲ್ಲಿರುವ
ಯೂರೋಪ್ ಪರಮಾಣು ಸಂಶೋಧನೆ ಕೇಂದ್ರದಲ್ಲಿ (ಸಿಇಆರ್‌ಎನ್) ಭೌತವಿಜ್ಞಾನಿಯಾಗಿದ್ದರು. ಆ ಸಂಸ್ಥೆಯಲ್ಲಿ
ನಡೆಯುತ್ತಿದ್ದ ಹಲವು ಸಂಶೋಧನೆಗಳ ದತ್ತಾಂಶ, ಆಕರ ಮಾಹಿತಿಗಳು, ಸಂಶೋಧಕರ ಹೆಸರು ಸೇರಿದಂತೆ ಬೃಹತ್ ಮಾಹಿತಿಯನ್ನು
ವ್ಯವಸ್ಥಿತವಾಗಿ ಸಂಗ್ರಹಿಸಿಡಲು ಮತ್ತು ಸುಲಭವಾಗಿ ಸಿಗುವಂತೆ ಮಾಡಲು ಹೈಪರ್ ಟೆಕ್ಟ್
(Hyper Text–http) ಎಂಬ ಯೋಜನೆ ಸಿದ್ಧಪಡಿಸಲು ಮುಂದಾದರು.
ಇದನ್ನು ವಿವರಿಸಿ ತಮ್ಮ ಮೇಲಧಿಕಾರಿಗಳಿಗೆ ಅವರು ಇ–ಮೇಲ್ (http://goo.gl/ooiNn)
ಮಾಡಿದರು. ‘ಸಿಇಆರ್‌ಎನ್’ ಸರ್ವರ್
ಬಳಸಿಕೊಂಡೇ ಇದನ್ನು ಎರಡು ಹಂತಗಳಲ್ಲಿ ಜಾರಿಗೆ ತರಬಹುದು. ಮೊದಲ ಹಂತದಲ್ಲಿ ಈ ಎಲ್ಲ
ಮಾಹಿತಿಗಳನ್ನು ಈಗಿರುವ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ಬಳಸಿಕೊಂಡು ಬ್ರೌಸರ್ ಮೂಲಕ ಪರ್ಸನಲ್
ಕಂಪ್ಯೂಟರ್‌ಗಿಂತ ಪ್ರಬಲವಾದ ವರ್ಕ್‌ಸ್ಟೇಷನ್‌ನಲ್ಲಿ ಪಡೆದುಕೊಳ್ಳುವಂತೆ ಮಾಡುವುದು, ಎರಡನೆಯದಾಗಿ
ಬಳಕೆದಾರನಿಗೆ ಈ ಮಾಹಿತಿ ಭಂಡಾರದಲ್ಲಿ ಹೊಸ ವಿಷಯಗಳನ್ನು ಸೇರಿಸಲು
ಮತ್ತು ಲಭ್ಯವಿರುವ ಮಾಹಿತಿಗಳಲ್ಲಿ ಲೋಪವಿದ್ದರೆ ಪರಿಷ್ಕರಿಸಲು ಅವಕಾಶ ಮಾಡಿಕೊಡಲು ಹೊಸ
ಪ್ರೊಗ್ರಾಂ ಒಂದನ್ನು ಅಭಿವೃದ್ಧಿಪಡಿಸುವುದು.
ಸಂಸ್ಥೆಯು ನಾಲ್ವರು ಸಾಫ್ಟ್‌ವೇರ್ ಎಂಜಿನಿಯರ್ ಮತ್ತು ಒಬ್ಬ ಪ್ರೊಗ್ರಾಮರ್ ನೆರವು
ಕೊಟ್ಟರೆ ಇವೆರಡೂ ಯೋಜನೆಗಳನ್ನು ಕ್ರಮವಾಗಿ ಮೂರು ತಿಂಗಳ ಕಾಲಾವಧಿಯಲ್ಲಿ ಜಾರಿಗೆ ತರುವುದಾಗಿ ಲೀ
ವಿವರಿಸಿದ್ದರು. ಮುಂದಿನ ದಿನಗಳಲ್ಲಿ ಈ ನಿಟ್ಟಿನಲ್ಲಿ ಅವರು ನಡೆಸಿದ
ಸಂಶೋಧನೆಗಳು ಮಾಹಿತಿ ತಂತ್ರಜ್ಞಾನ ಕ್ರಾಂತಿಗೆ ಮುನ್ನುಡಿ ಬರೆದವು. ವರ್ಲ್ಡ್ ವೈಡ್ ವೆಬ್
ಎನ್ನುವ ವಿಶ್ವವ್ಯಾಪಿ ಜಾಲದ ಉಗಮದ ಮೊದಲ ಹೆಜ್ಜೆ ಅದಾಗಿತ್ತು.
ಸದ್ಯಕ್ಕೆ ಭಾರತದಲ್ಲಿನ ಇಂಟರ್‌ನೆಟ್ ಬಳಕೆದಾರರ ಸಂಖ್ಯೆಯು ಅಮೆರಿಕವನ್ನು
ಹಿಂದಿಕ್ಕುತ್ತಿದೆ. ಪರ್ಸನಲ್ ಕಂಪ್ಯೂಟರ್, ಲ್ಯಾಪ್‌ಟಾಪ್ ಅಥವಾ ಸ್ಮಾರ್ಟ್‌ಫೋನ್ ಹೀಗೆ
ಒಂದಿಲ್ಲೊಂದು ಗ್ಯಾಡ್ಜೆಟ್‌ಗಳ ಮೂಲಕ ನಾವೂ ಈ ವಿಶ್ವಜಾಲದ ಭಾಗಗಳಾಗಿದ್ದೇವೆ. ಇಂಟರ್‌ನೆಟ್ ಎಂಬ
ಬೃಹತ್ ಗ್ರಂಥಾಲಯ ಜನರ ಬೆರಳ ತುದಿಗೆ ದೊರೆತಿದೆ. ಪ್ರಪಂಚದ ಒಂದು ತುದಿಯಲ್ಲಿದ್ದವರನ್ನು
ಇನ್ನೊಂದು ತುದಿಯಲ್ಲಿದ್ದವರ ಜತೆ ಕ್ಷಣಾರ್ಧದಲ್ಲಿ ಸಂಪರ್ಕಿಸುವ, ಯಾವುದೇ
ಸ್ವರೂಪದ (ಪಠ್ಯ, ಚಿತ್ರ, ಧ್ವನಿ, ದೃಶ್ಯ) ಮಾಹಿತಿಗಳನ್ನು ಆ ಕ್ಷಣವೇ ಹುಡುಕಿಕೊಡುವ, ತತ್ಕ್ಷಣದ, ಅಗ್ಗದ ಸಂವಹನ
ಮಾಧ್ಯಮವಾಗಿಯೂ ಇಂಟರ್‌ನೆಟ್ ಪ್ರವರ್ಧಮಾನಕ್ಕೆ ಬಂದಿದೆ.
ನಮ್ಮ ಬ್ಯಾಂಕಿಂಗ್ ವ್ಯವಸ್ಥೆ, ಷೇರು ಮಾರುಕಟ್ಟೆ, ಕೃಷಿ ಉತ್ಪನ್ನ
ವಹಿವಾಟು ಹೀಗೆ ಪ್ರತಿಯೊಂದೂ ವ್ಯವಹಾರ ಇಂಟರ್‌ನೆಟ್ ಆಧರಿಸಿ ನಡೆಯುತ್ತಿದೆ. ಭಾರತದಂತಹ
ದೇಶಗಳಲ್ಲಿ ಸ್ಮಾರ್ಟ್‌ಫೋನ್ ಮಾರಾಟದಲ್ಲಿ ಕಂಡುಬರುತ್ತಿರುವ ತೀವ್ರಗತಿಯ ಏರಿಕೆಯು ಇಂಟರ್‌ನೆಟ್
ಹರಿವಿನ ವ್ಯಾಪ್ತಿಯನ್ನು ವಿಸ್ತರಿಸಿದೆ. ಅದರಲ್ಲೂ ಮೊಬೈಲ್ ಇಂಟರ್‌ನೆಟ್ ಜನಪ್ರಿಯತೆಯಿಂದಾಗಿ
ಪ್ರತಿ ತಿಂಗಳು ದಶಲಕ್ಷ ಸಂಖ್ಯೆಗಳಲ್ಲಿ ಸ್ಮಾರ್ಟ್‌ಫೋನ್‌ಗಳು ಮಾರಾಟವಾಗುತ್ತಿವೆ. ಪರ್ಸನಲ್
ಕಂಪ್ಯೂಟರ್ ಮತ್ತು ಲ್ಯಾಪ್‌ಟಾಪ್ ಮಾರಾಟದಲ್ಲೂ ಗಣನೀಯ ಏರಿಕೆ ಕಂಡುಬರುತ್ತಿವೆ.
ನಮ್ಮ ಹಿರಿಯರು ಹೇಳುವಂತೆ ‘ಪ್ರತಿಯೊಂದು ಬೃಹತ್ ಆಲದ ಮರವೂ ಅತ್ಯಂತ ಸಾಧಾರಣ
ಹುಟ್ಟಿನ ಮೂಲವನ್ನು ಹೊಂದಿರುತ್ತದೆ’ ಎನ್ನುವಂತೆ, ವರ್ಲ್ಡ್ ವೈಡ್ ವೆಬ್‌ನ ಉಗಮ ಕೂಡ ತೀರಾ
ಸಾಮಾನ್ಯವಾದದ್ದು. ಲೀ ಬಿತ್ತಿದ ಈ ವಿಶ್ವವ್ಯಾಪಿ ಜಾಲದ ಬೀಜಗಳು ಇಂದು ಹೆಮ್ಮರವಾಗಿ
ಬೆಳೆದು ನಿಂತಿದೆ. ಇಂಟರ್‌ನೆಟ್ ಇತಿಹಾಸವನ್ನು ಒಮ್ಮೆ ತೆರೆದು ನೋಡಿದರೂ ಸಾಕು ನಮಗೆ
ಲೀ ಅವರ ಕೊಡುಗೆಯ ಮಹತ್ವ ಅರ್ಥವಾಗುತ್ತದೆ. ಇಂಟರ್‌ನೆಟ್‌ನ ಮೂಲ ಸಂಶೋಧನೆ
ಇವರಲ್ಲದಿರಬಹುದು. ಆದರೆ, ಅದರ ಬಳಕೆಯನ್ನು ಸಾರ್ವತ್ರಿಕಗೊಳಿಸಿದ ಕೀರ್ತಿ
ಅವರಿಗೇ ಸಲ್ಲಬೇಕು.
ಅಮೆರಿಕದ ರಕ್ಷಣಾ ಇಲಾಖೆಗೆ ಸೇರಿದ ಅಡ್ವಾನ್ಸ್ಡ್ ರೀಸರ್ಚ್ ಪ್ರಾಜೆಕ್ಟ್ಸ್ ಏಜೆನ್ಸಿ (ARPA) 60ರ ದಶಕದಿಂದಲೇ
ಗಣಕ ವಿಜ್ಞಾನಕ್ಕೆ ಸಂಬಂಧಿಸಿದ ಸಂಶೋಧನೆಗಳಿಗೆ ಹಣಕಾಸಿನ ನೆರವು ನೀಡುತ್ತಾ ಬಂದಿದೆ. ‘ಅರ್ಪಾ’ದಲ್ಲಿದ್ದ ಜೆ.ಸಿ.ಆರ್.
ಲಿಕ್ಲಿಡರ್ ಅಮೆರಿಕದಲ್ಲಿನ ಹಲವು ವಿಶ್ವವಿದ್ಯಾಲಗಳ ಸಹಯೋಗದಲ್ಲಿ ಇಂತಹ ಸಂಶೋಧನೆಗಳನ್ನು
ಉತ್ತೇಜಿಸಲು ಮುಂದಾಳತ್ವ ವಹಿಸಿದರು. ಹೆಚ್ಚೂ ಕಡಿಮೆ ಒಂದೇ ವಿಷಯದ ಮೇಲೆ ಹಲವು ಸಂಶೋಧನಾ ತಂಡಗಳು
ಅಧ್ಯಯನ
ನಡೆಸುತ್ತಿದ್ದರೂ ಸುಲಭವಾಗಿ ಪರಸ್ಪರ ಮಾಹಿತಿಗಳನ್ನು ವಿನಿಮಯ ಮಾಡಿಕೊಳ್ಳಲು, ದತ್ತಾಂಶಗಳನ್ನು
ಹಂಚಿಕೊಳ್ಳಲು ಸಮರ್ಪಕವಾದ ವ್ಯವಸ್ಥೆ ಇರಲಿಲ್ಲ. ಹೀಗೆ ಕಂಪ್ಯೂಟರ್‌ನಿಂದ ಕಂಪ್ಯೂಟರ್‌ಗೆ ಕಡತಗಳನ್ನು
ರವಾನಿಸಬಹುದಾದ ಸಾಧ್ಯತೆಗಳ ಕುರಿತು ನಡೆದ ಸಂಶೋಧನೆಗಳ ಫಲವಾಗಿ ಹುಟ್ಟಿಕೊಂಡದ್ದೇ ಅರ್ಪಾನೆಟ್.
ಇದು ವಾಸ್ತವ. ಆದರೆ, ಮೊದಲ ಕಂಪ್ಯೂಟರ್ ನೆಟ್‌ವರ್ಕ್ ಬಳಕೆಯ ಸಾಧ್ಯತೆಯ
ಹೊಳಹು ಹೊಳೆದದ್ದು ಅಮೆರಿಕ ಮತ್ತು ಹಿಂದಿನ ಸೋವಿಯತ್ ಒಕ್ಕೂಟದಲ್ಲಿ ಪರಮಾಣು ಯುದ್ಧದ
ಸಿದ್ಧತೆಗಳು ನಡೆಯುತ್ತಿದ್ದ ಸಂದರ್ಭದಲ್ಲಿ. ಆದರೆ, ಇದು ಕೇಂದ್ರೀಕೃತ ನೆಟ್‌ವರ್ಕ್ ವ್ಯವಸ್ಥೆಯಾದರೆ, ಕಂಪ್ಯೂಟರ್
ಆಧಾರಿತ ಈ ನಿಯಂತ್ರಣ ವ್ಯವಸ್ಥೆಯನ್ನು ಕ್ಷಿಪಣಿ ದಾಳಿ ಮೂಲಕ ನಾಶಪಡಿಸುವ ಸಾಧ್ಯತೆ ಇತ್ತು.
ಹೀಗಾಗಿ ಕ್ಷಿಪಣಿ ದಾಳಿ ನಡೆದರೂ ಅದರಿಂದ ರಕ್ಷಿಸಿಕೊಳ್ಳಬಲ್ಲಂತಹ ವಿಕೇಂದ್ರೀಕೃತ
ನೆಟ್‌ವರ್ಕ್ ಕಲ್ಪನೆ ಪ್ರಸ್ತಾವವನ್ನು ರ್‍ಯಾಂಡ್ ಕಾರ್ಪೊರೇಷನ್‌ನ ಪೌಲ್ ಬಾರನ್
ಮುಂದಿಟ್ಟರು. ಆಗಿನ್ನೂ ಶತ್ರು ದೇಶದ ಮೇಲೆ ಎರಡು ಮೂರು ದೇಶಗಳು ಒಟ್ಟಾಗಿ ಸೇರಿಕೊಂಡು ಪರಸ್ಪರ
ಸಹಕಾರದ ಮೇಲೆ ದಾಳಿ ನಡೆಸುವ ಕಲ್ಪನೆ ಸಾಕಾರಗೊಂಡಿರಲಿಲ್ಲ.
ಪ್ಯಾಕೆಟ್ ಸ್ವಿಚ್ಚಿಂಗ್ ಆಧರಿಸಿದ ಮೊದಲ ಕಂಪ್ಯೂಟರ್ ನೆಟ್‌ವರ್ಕ್ 1966 ಮತ್ತು 1972ರ ನಡುವೆ
ಅಮೆರಿಕದಲ್ಲಿ ಅಭಿವೃದ್ಧಿಯಾಯಿತು. ಈ ಜಾಲದ ಮೂಲಕ ಒಂದು ನಿರ್ದಿಷ್ಟ ಬಳಕೆದಾರರ ಸಮೂಹ ಪರಸ್ಪರ
ಕಡತಗಳನ್ನು ವಿನಿಮಯ ಮಾಡಿಕೊಳ್ಳಲು ಸಾಧ್ಯವಾಯಿತು. ಇದರ ಬೆನ್ನಿಗೇ ಪರಸ್ಪರ ಟಿಪ್ಪಣಿಗಳನ್ನು
ವಿನಿಮಯ ಮಾಡಿಕೊಳ್ಳಲು ಇ–ಮೇಲ್ ಎನ್ನುವ ಎಲೆಕ್ಟ್ರಾನಿಕ್ ಮೇಲ್ ಬಳಕೆಗೆ ಬಂತು. 1967ರಿಂದ 1974ರವೆರೆಗೆ ‘ಎಂಐಟಿ’ನಲ್ಲಿ
ಅರ್ಪಾನೆಟ್ ಯೋಜನೆಯಲ್ಲಿ ಕೆಲಸ ಮಾಡಿದ ಅಭಯ್ ಭೂಷಣ್, ಎಫ್‌ಟಿಪಿ ಅಥವಾ ಫೈಲ್ ಟ್ರಾನ್ಸ್‌ಫರ್
ಪ್ರೋಟೊಕಾಲ್ ಬಗ್ಗೆ ಟಿಪ್ಪಣಿಯೊಂದನ್ನು ಸಿದ್ಧಪಡಿಸಿದರು. ಇದೇ ಎಫ್‌ಟಿಪಿಯೇ ಇ–ಮೇಲ್‌ನ
ಉಗಮಕ್ಕೆ ಕಾರಣ. ಇ–ಮೇಲ್‌ನ ಮೂಲ ಸಂಶೋಧಕ ಎಂದು ಇವರನ್ನು
ಗುರುತಿಸಲಾಗುತ್ತದೆ.
70ರ ದಶಕದಲ್ಲಿ ಅರ್ಪಾನೆಟ್ ಜನಪ್ರಿಯತೆ ಹೆಚ್ಚಿತು.
ಪ್ರತಿಯೊಂದು ವಿಶ್ವವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆಗಳನ್ನು ಅರ್ಪಾನೆಟ್ ಜತೆ
ಸಂಪರ್ಕಿಸಬೇಕು ಎನ್ನುವ ಮಾತುಗಳು ಕೇಳಿಬಂದವು. ಆದರೆ, ಅಂತರ್ ಸಂಪರ್ಕಿತ ಕಂಪ್ಯೂಟರ್ ಜಾಲಗಳ ಒಂದು
ಜಾಗತಿಕ ವ್ಯವಸ್ಥೆ ಅರ್ಥಾತ್ ಇಂಟರ್‌ನೆಟ್ ಅಭಿವೃದ್ಧಿಪಡಿಸುವುದು ಹೇಗೆ ಎನ್ನುವ ಪ್ರಶ್ನೆಯೂ
ಉದ್ಭವಿಸಿತು. ಟ್ರಾನ್ಸ್‌ಮಿಷನ್ ಕಂಟ್ರೋಲ್ ಪ್ರೋಟೊಕಾಲ್ ಅಥವಾ ಟಿಸಿಪಿ ಎಂದು ಕರೆಯುವ
ತಂತ್ರಜ್ಞಾನದ ಮೂಲಕ ರಾಬರ್ಟ್ ಖಾನ್ ಮತ್ತು ವಿಂಟನ್ ಕರ್ಫ್ ಇದಕ್ಕೆ ಪರಿಹಾರ ಕಂಡುಹಿಡಿದರು.
ಇವರನ್ನು ಇಂಟರ್‌ನೆಟ್‌ನ ಸೃಷ್ಟಿಕರ್ತರು ಎಂದು ಸ್ಮರಿಸಿಕೊಳ್ಳಲಾಗುತ್ತದೆ.
ವಿಂಟನ್ ಸರ್ಫ಼್ ಜೊತೆ ಶಿವಾನಂದ ಕಣವಿ
ಈ ಕಾಲದಲ್ಲೇ ಅಂದರೆ 1971ರಲ್ಲಿ ಐಐಟಿ ಮುಂಬೈನ ಯೋಗನ್ ದಲಾಲ್
ಎಂಬ ಸ್ನಾತಕಪೂರ್ವ ವಿದ್ಯಾರ್ಥಿ, ಎಂಎಸ್ ಮತ್ತು ಪಿಎಚ್.ಡಿ ಅಧ್ಯಯನಕ್ಕಾಗಿ
ಸ್ಟ್ಯಾನ್‌ಫೋರ್ಡ್ ಸೇರಿದರು. 1974ರಲ್ಲಿ ವಿಂಟನ್ ಕರ್ಫ್, ಯೋಗನ್ ದಲಾಲ್
ಮತ್ತು ಕಾರ್ಲ್ ಸನ್‌ಶೈರ್ ಸೇರಿಕೊಂಡು ಸುಧಾರಿತ ಟಿಸಿಪಿ ಮತ್ತು ಇಂಟರ್‌ನೆಟ್ ಪ್ರೋಟೊಕಾಲ್‌ಗೆ
(ಐಪಿ) ಸಂಬಂಧಿಸಿದ ಕೆಲವು ಮಾನದಂಡಗಳನ್ನು ನಿಗದಿಪಡಿಪಡಿಸುತ್ತಾರೆ. ಇವರು ಪ್ರಸ್ತಾಪಿದ ಅಂಶವೇ
ನಂತರ ಇಂಟರ್‌ನೆಟ್‌ಗೆ ಮಾನದಂಡವಾಯಿತು.
ಇಷ್ಟೆಲ್ಲಾ ಸಂಶೋಧನೆಗಳು ನಡೆದರೂ ಇಂಟರ್‌ನೆಟ್ ಅನ್ನು ಸಂಪೂರ್ಣವಾಗಿ ಬದಲಿಸಿದ್ದು 90ರ ದಶಕದಲ್ಲಿ
ಅಭಿವೃದ್ಧಿಗೊಂಡ ವರ್ಲ್ಡ್ ವೈಡ್ ವೆಬ್ ಮತ್ತು ಬ್ರೌಸರ್ ಎಂಬ ಸಣ್ಣ ಪ್ರೋಗ್ರಾಂ. ಭಾರತೀಯರು
ಈ ಹೈಪರ್‌ಲಿಂಕ್ ಕಲ್ಪನೆಯನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲರು. ಯಾಕೆಂದರೆ ಮಹಾಭಾರತ, ರಾಮಾಯಣ, ಕಥಾಸರಿತ್ಸಾಗರ, ಪಂಚತಂತ್ರ, ವಿಕ್ರಮ ಮತ್ತು
ಬೇತಾಳ ಮತ್ತಿತರ ಕಥೆಗಳಲ್ಲಿ ಹೇಗೆ ನೂರಾರು ಉಪಕಥೆಗಳು ಇರುತ್ತವೆಯೋ, ಹೈಪರ್
ಲಿಂಕಿಂಗ್ ಕೂಡ ಹೀಗೆಯೇ. ಅಂದರೆ ಎಚ್‌ಟಿಪಿಪಿ ತಂತ್ರಜ್ಞಾನದ ನೆರವಿನಿಂದ ಇಂಟರ್‌ನೆಟ್‌ನಲ್ಲಿ
ಜೇಡರ ಬಲೆಯಂತೆ ಮಾಹಿತಿ ಬೆಸೆದುಕೊಂಡಿರುತ್ತದೆ. ಒಂದು ಮಾಹಿತಿ ಹುಡುಕಿದರೆ ಅದಕ್ಕೆ ಸಂಬಂಧಿಸಿದ
ಸಾವಿರಾರು ಪೂರಕ ಮಾಹಿತಿಗಳ ಕೊಂಡಿಗಳು ತೆರೆದುಕೊಳ್ಳುತ್ತವೆ.
ಅಸಲಿಗೆ ಟಿಮ್ ಬರ್ನಸ್ ಲೀ ‘ಸಿಇಆರ್‌ಎನ್’ನಲ್ಲಿ ಕಡತಗಳನ್ನು ವಿದ್ಯುನ್ಮಾನವಾಗಿ ಪರಸ್ಪರ
ಸಂಪರ್ಕಕ್ಕೆ ತರಲು ಇರುತ್ತಿದ್ದ ಸಮಸ್ಯೆಯನ್ನು ನಿವಾರಿಸಲು ಈ ಸಂಶೋಧನೆ ಕೈಗೊಂಡರು. ಹೈಪರ್‌ಲಿಂಕ್ಡ್
ವೆಬ್ ಅಭಿವೃದ್ಧಿಪಡಿಸುವ ಪ್ರಸ್ತಾವವನ್ನು ವಿವರಿಸಿ ಅವರು ಮೇಲಧಿಕಾರಿಗಳಿಗೆ ಬರೆದ ಮನವಿಗೆ ‘ಮಾಹಿತಿ
ನಿರ್ವಹಣೆ: ಒಂದು ಪ್ರಸ್ತಾವ’ ಎಂದು ಕರೆದಿದ್ದರು. ಲೀ ಅವರ ಮನವಿಗೆ ಅವರ
ಮೇಲಧಿಕಾರಿ ಯಾಕಾಗಬಾರದು? ಎಂಬ ಜನಪ್ರಿಯ ಉತ್ತರ ನೀಡಿದ್ದರೆ ಅವರ ಸಂಶೋಧನೆ ‘ಸಿಇಆರ್‌ಎನ್’ಗೆ ಮಾತ್ರ
ಸೀಮಿತಗೊಳ್ಳುತ್ತಿತ್ತೇನೋ?
ಆದರೆ, ಅವರ ಮೇಲಧಿಕಾರಿಗಳು ಇದಕ್ಕೆ ಪೂರಕವಾಗಿ
ಸ್ಪಂದಿಸಲಿಲ್ಲ. ಪರಿಣಾಮ, ಲೀ ತಮ್ಮ ಸಂಶೋಧನೆಯನ್ನು ಜನರೆದುರು ತೆರೆದಿಟ್ಟರು.
ಈ ಅನಂತ ಸಾಧ್ಯತೆಯನ್ನು ಇಂಟರ್‌ನೆಟ್ ಸಮುದಾಯ ಬಹುಬೇಗ ಗ್ರಹಿಸಿಕೊಂಡಿತು. ವರ್ಲ್ಡ್ ವೈಡ್
ವೆಬ್ ಎಂಬ ಅನಂತ ಸಾಧ್ಯತೆ ಅನಾವರಣಗೊಂಡಿತು.
ಟಿಮ್ ತಮ್ಮ ಸಂಶೋಧನೆಗೆ ಒಂದು ನಯಾಪೈಸೆ ಸಂಭಾವನೆಯನ್ನೂ ಪಡೆಯಲಿಲ್ಲ. ಹಕ್ಕುಸ್ವಾಮ್ಯ
ಪಡೆದುಕೊಳ್ಳಲೂ ನಿರಾಕರಿಸಿದರು. ಈಗಲೂ ಅವರು ಇಂಟರ್‌ನೆಟ್‌ನ ಮುಂದಿನ ತಲೆಮಾರಿನ ಸಾಧ್ಯತೆಗಳ
ಕುರಿತು ಸಂಶೋಧನೆ ನಡೆಸುತ್ತಿದ್ದಾರೆ. 1994ರಲ್ಲಿ ಅವರಿಗೆ ಅಮೆರಿಕದ ಎಂಐಟಿಯಿಂದ ಕರೆ ಬಂತು. ವಿಶ್ವವ್ಯಾಪಿ
ಜಾಲವನ್ನು ನಿಯಂತ್ರಿಸುವ ಸಂಸ್ಥೆಯೊಂದು ಅಸ್ತಿತ್ವಕ್ಕೆ ಬಂತು. ಹೌದು ವರ್ಲ್ಡ್ ವೈಡ್ ವೆಬ್
ಕನ್ಸೋರ್ಟಿಯಂನ (W3C) ಅಧ್ಯಕ್ಷರಾಗಿ ಅವರು ಈಗಲೂ ಸಮಾಜಕ್ಕೆ ನಿಸ್ವಾರ್ಥ
ಸೇವೆ ಸಲ್ಲಿಸುತ್ತಿದ್ದಾರೆ.
--------------------------------------------------------------------------