Sunday, April 6, 2014

Prajavani: F C Kohli--Bheeshma of Software Industry

For those of you who can read Kannada, my tribute to F C Kohli appeared in Prajavani http://t.co/8lEEIRUNeo

ಪುರವಣಿವಾಣಿಜ್ಯ
ಕೊಹ್ಲಿ: ಸಾಫ್ಟ್‌ವೇರ್ ಉದ್ಯಮದ ಭೀಷ್ಮ
·          
·         Wed, 03/26/2014 - 01:00

ಫಕೀರ್ಚಂದ್ ಕೊಹ್ಲಿ ಅವರಿಗೆ ಮಾರ್ಚ್ ೧೯ರಂದು ೯೦ ವರ್ಷ ತುಂಬಿತು. ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಹಲವು ಭಾರತೀಯರ ಮನಮುಟ್ಟಿದವರು ಅವರು. ಅಂಥ ಭಾರತೀಯರಿಗೆಲ್ಲಾ ಇದು ಸಂಭ್ರಮದ ಸಂದರ್ಭ.
ತಜ್ಞರು, ಕೊಹ್ಲಿ ಅವರ ಕೊಡುಗೆಯನ್ನು ವಿಧವಿಧವಾಗಿ ವರ್ಣಿಸಿದ್ದಾರೆ. ಅಲ್ಲದೆ, ಭಾರತೀಯ ಸಾಫ್ಟ್ವೇರ್ ಉದ್ಯಮದ ಭೀಷ್ಮ ಎಂದೇ ಅವರನ್ನು ಬಣ್ಣಿಸುತ್ತಾರೆ. ೧೯೭೪ರಿಂದ ೧೯೯೬ರ ಅವಧಿಯಲ್ಲಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಕಂಪೆನಿ ವ್ಯವಸ್ಥಿತವಾಗಿ ರೂಪುಗೊಳ್ಳಲು ಕಾರಣರಾದ ಯೋಜನಾಚತುರ, ದೂರದೃಷ್ಟಿಯುಳ್ಳ ಪರಿಣತ. ಅಷ್ಟೇ ಅಲ್ಲ, ಭಾರತದಲ್ಲಿ 0,೦೦೦ ಕೋಟಿ ಡಾಲರ್ ವಹಿವಾಟಿನ ಮಾಹಿತಿ ತಂತ್ರಜ್ಞಾನ ಉದ್ದಿಮೆಯು ತಲೆ ಎತ್ತಲು ಅಡಿಪಾಯ ಹಾಕಿದ ದಿಗ್ಗಜ. ಅವರ ಗರಡಿ­ಯಲ್ಲಿ ಪಳಗಿದವರು ಯಶಸ್ವಿ ಕಂಪೆನಿಗಳನ್ನು ಕಟ್ಟಿದರೆಂಬುದು ಹೆಗ್ಗಳಿಕೆ. ಕುಶಲ ಕೈಗಾರಿಕೆಯಷ್ಟೇ ಆಗಿದ್ದ ಸಾಫ್ಟ್ವೇರ್ ಅಭಿವೃದ್ಧಿಗೆ ಯಾಂತ್ರಿಕ ಉದ್ಯಮಗಳ ಸ್ವರೂಪ ನೀಡಿದ ಅವರನ್ನುಐಟಿ ಸೇವೆಗಳ ಹೆನ್ರಿ ಫೋರ್ಡ್ಎನ್ನಬಹುದು.
ಕುಶಲ ಯಂತ್ರಗಾರಿಕೆ ಎನಿಸಿಕೊಂಡಿದ್ದ ಸಾಫ್ಟ್ವೇರ್ ಅಭಿವೃದ್ಧಿಯ ಚಟುವಟಿಕೆಯನ್ನುಸಾಫ್ಟ್ವೇರ್ ಫ್ಯಾಕ್ಟರಿ ಹಂತಕ್ಕೆ ಕೊಂಡೊಯ್ದು, ಆಮೇಲೆ ಅದು ಹಲವು ಬಗೆಯ ಸಾಂಸ್ಥಿಕ ಬದಲಾವಣೆಗೆ ಕಾರಣರಾದವರು ಕೊಹ್ಲಿ.
ಮೇಲಿನ ಗುಣವಿಶೇಷಣಗಳೆಲ್ಲಾ ಸತ್ಯವಾದರೂ ಫಕೀರ್ ಚಂದ್ ಕೊಹ್ಲಿ ವ್ಯಕ್ತಿತ್ವ ಕಟ್ಟಿಕೊಡಲು ಮಾಹಿತಿಯಷ್ಟೇ ಸಾಲದು. ಮೊದಲು ಬಿಸಿನೆಸ್ ಪತ್ರಕರ್ತನಾಗಿ, ಆಮೇಲೆ ಟಿಸಿಎಸ್ ಉಪಾಧ್ಯಕ್ಷನಾಗಿ ನಾನು ಅವರ ಜೊತೆ ಎರಡು ದಶಕಗಳ ಕಾಲ ಒಡನಾಟ ನಡೆಸಿದ್ದೇನೆ. ಒಂದೊಂದೂ ಭೇಟಿಯಲ್ಲಿ ತಮ್ಮ ವ್ಯಕ್ತಿತ್ವದ ಹೊಸ ಮುಖಗಳನ್ನು ಕಾಣಿಸುತ್ತಾ ನನ್ನನ್ನು ಸೋಜಿಗಗೊಳಿಸುತ್ತಲೇ ಬಂದವರು ಅವರು.
ಕಡಿಮೆ ಮಾತಾಡುವ ವ್ಯಕ್ತಿ. ಆದರೆ ಆಡುವ ಒಂದೊಂದೂ ನುಡಿ ಅಳೆದು ತೂಗಿದಂತೆ. ಯಾವುದೇ ವಿಷಯದ ಕುರಿತು ಹೇಳು­ವಾಗ ಅವರು ಸಾಕಷ್ಟು ಗಹನವಾಗಿ ವಿಚಾರ ಮಾಡಿರು­ತ್ತಾರೆ. ಬಳಸುವ ಪ್ರತಿ ಪದವನ್ನು ಎಚ್ಚರಿಕೆಯಿಂದ ಆರಿಸಿಕೊ­ಳ್ಳುತ್ತಾರೆ. ಕ್ಷೇತ್ರಕ್ಕೆ ಬರುವ ಹೊಸಬರು ಕೊಹ್ಲಿ ಅವರ ಮಾತಿನ ಹಾಗೂ ಕಾರ್ಯವೈಖರಿಯ ಲಯವನ್ನು ಭಂಗಪಡಿಸಲು ಯತ್ನಿಸಿ­ದ್ದುಂಟು. ಅವರೆಲ್ಲಾ ಯತ್ನದಲ್ಲಿ ವಿಫಲರಾಗುವಂತೆ ಪ್ರತಿಕ್ರಿಯೆ ನೀಡಿದ ಪ್ರತಿಭೆ ಕೊಹ್ಲಿ.
ಪೂರ್ವಸಿದ್ಧತೆಯೇ ಇಲ್ಲದೆ ಯಾರಾದರೂ ವಾದಕ್ಕೆ ಇಳಿದರೆ ಅದನ್ನು ಅವರು ಸಹಿಸುವುದಿಲ್ಲ. ಸಿದ್ಧರಾಗಿ ಬರುವಂತೆ ನಿರ್ದಾಕ್ಷಿಣ್ಯವಾಗಿ ತಿದ್ದುತ್ತಾರೆ. ೧೯೯೬ರಿಂದ ೨೦೦೯ರವರೆಗೆ ಟಿಸಿಎಸ್ ಮುನ್ನಡೆಸಿದ್ದು ಎಸ್.ರಾಮದೊರೈ. ತಮ್ಮ ನಂತರ ಜವಾಬ್ದಾರಿ ನಿರ್ವಹಿಸಲು ಅವರನ್ನು ಆಯ್ಕೆ ಮಾಡಿದ್ದು ಖುದ್ದು ಕೊಹ್ಲಿ.
ದಿ ಟಿಸಿಎಸ್ ಸ್ಟೋರಿ ಅಂಡ್ ಬಿಯಾಂಡ್ಎಂಬ ತಮ್ಮ ಪುಸ್ತಕದಲ್ಲಿ ರಾಮದೊರೈ ಹೀಗೆ ಬರೆದಿದ್ದಾರೆ: ‘ಹೊರನೋಟಕ್ಕೆ ಒರಟಾಗಿ ಕಾಣುತ್ತಿದ್ದ ಕೊಹ್ಲಿ, ಆಂತರ್ಯದಲ್ಲಿ ಮೃದು ಸ್ವಭಾವದವರು. ತಮ್ಮ ವಿಚಾರಗಳನ್ನು ಯಾರೇ ಆದರೂ ಸಕಾರಣವಾಗಿ ಪ್ರಶ್ನಿಸಿದರೆ, ಅದಕ್ಕೆ ಪೂರಕವಾದ ಸಿದ್ಧತೆಯಿಂದ ಮಾತನಾಡಿದರೆ, ಅವರು ಕೇಳಿಸಿಕೊಳ್ಳುತ್ತಾರೆ. ಒಪ್ಪುವಂಥ ಅಭಿಪ್ರಾಯ ಅದಾಗಿದ್ದರೆ ಸ್ವಾಗತಿಸುತ್ತಾರೆ’.
ಮೆಮೋ ಕಳುಹಿಸಿ, ನಿರ್ದಿಷ್ಟ ವಿಷಯದ ಕುರಿತು ಕ್ರಮವಾದ ಚರ್ಚೆ ನಡೆಸುವುದು ಕೊಹ್ಲಿ ಅವರು ಅನುಸರಿಸುತ್ತಿದ್ದ ಕ್ರಮಭಾರತದ ಸಾಫ್ಟ್ವೇರ್ಹಾಗೂ ಟಿಸಿಎಸ್ಗೆ ಕೊಹ್ಲಿ ಕೊಡುಗೆ ಏನು ಎಂಬುದು ಉತ್ತಮ ರೀತಿಯಲ್ಲಿಯೇ ದಾಖಲಾಗಿದೆ. ಆದರೆ ಅವರ ಕುರಿತು ಕಡಿಮೆ ಜನರಿಗೆ ಗೊತ್ತಿರುವ ಕೆಲವು ವಿಷಯವನ್ನು ನಾನು ಪ್ರಸ್ತಾಪಿಸುತ್ತೇನೆ. ಅವರೂ ನಿಯಮಿತವಾಗಿ ವಿಷಯವನ್ನು ಹೇಳಿಕೊಳ್ಳುತ್ತಾ ಇರುತ್ತಾರೆ.
ಐಟಿ ಸೇವೆಗಳ ಯಶಸ್ಸನ್ನು ದೇಶದ ಬಹುತೇಕ ಜನ ಬೆರಗುಗಣ್ಣಿನಿಂದ ನೋಡಿದ್ದೇ ಹೆಚ್ಚು (ಆರ್ಬಿಐ ಪ್ರಕಾರ 2012–13ರಲ್ಲಿ ರಫ್ತು ಮಾಡಿದ ಸಾಫ್ಟ್ವೇರ್ಪ್ರಮಾಣ 7000 ಕೋಟಿ ಡಾಲರ್‌). ಸುಮಾರು ಒಂದು ದಶಕದ ಹಿಂದೆಯೇ ಕೆಲವು ರಾಜಕಾರಣಿಗಳು ದೇಶವನ್ನುಐಟಿ ಸೂಪರ್ಪವರ್‌’ ಎಂದು ಅತಿಶಯೋಕ್ತಿಯಿಂದ ಬಣ್ಣಿಸಿದರು. ವಾಸ್ತವದಲ್ಲಿ ಅದು ಅಕಾಲಿಕ ಹೇಳಿಕೆಯಾಗಿತ್ತು. ಸಾಫ್ಟ್ವೇರ್ಗೆ ಉದ್ಯಮದ ಸ್ವರೂಪ ನೀಡಿದ ಕೊಹ್ಲಿ ಇಂಥ ಹೇಳಿಕೆಗಳಿಂದ ದೂರವೇ ಇದ್ದರು. ಹಾರ್ಡ್ವೇರ್ಉದ್ಯಮ ಅಭಿವೃದ್ಧಿಯಾಗದೆ ಜಾಗತಿಕ ತಂತ್ರಜ್ಞಾನ ಕ್ಷೇತ್ರದ ನಕಾಶೆಯಲ್ಲಿ ಭಾರತ ಉತ್ತಮ ಸ್ಥಾನ ಕಂಡುಕೊಳ್ಳುವುದು ಸಾಧ್ಯವಿಲ್ಲ ಎಂಬ ಸತ್ಯವನ್ನು ಅವರು ಪ್ರತಿಪಾದಿಸುತ್ತಿದ್ದರು. ಕಾಲದಲ್ಲಿ ಕೆಲವು ಸರ್ಕಾರಿ ಧೋರಣೆಗಳಿಂದಾಗಿ ದೇಶದಲ್ಲಿ ಮೈಕ್ರೊ ಎಲೆಕ್ಟ್ರಾನಿಕ್ಸ್ಕ್ರಾಂತಿಗೆ ಚಾಲನೆ ಸಿಗಲಿಲ್ಲ.
ಇವತ್ತು ಮೈಕ್ರೊಚಿಪ್ವಿನ್ಯಾಸ ಹಾಗೂ ಅದಕ್ಕೆ ಸಂಬಂಧಿಸಿದ ಪರೀಕ್ಷಣೆಗಳು ಎಲೆಕ್ಟ್ರಾನಿಕ್ಉದ್ಯಮ ಮೌಲ್ಯದ ಶೇ ೮೦ರಷ್ಟಕ್ಕೆ ಕಾರಣೀಭೂತವಾಗುತ್ತಿವೆ. ಆದ್ದರಿಂದ ಕೊಹ್ಲಿ ಚಿಪ್ವಿನ್ಯಾಸ ಹಾಗೂ ಪರೀಕ್ಷಣೆಗಳ ಕ್ಷೇತ್ರಕ್ಕೆ ಬೇಕಾದ ಎಂಜಿನಿಯರ್ಗಳನ್ನು ಐಐಟಿ ಮತ್ತು ಇತರ ಎಂಜಿನಿಯರಿಂಗ್ಕಾಲೇಜುಗಳು ಸೃಷ್ಟಿಸಿದರೆ ಭಾರತ ಮತ್ತೆ ಎಲೆಕ್ಟ್ರಾನಿಕ್ತಂತ್ರಜ್ಞಾನದಲ್ಲಿ ಮುಂಚೂಣಿಗೆ ಬರಬಹುದು ಎಂದು ಪ್ರತಿಪಾದಿಸಿದರು. ಇದರ ಫಲಿತವಾಗಿ ಭಾರತ ಚಿಪ್ ವಿನ್ಯಾಸ ಹಾಗೂ ಅದಕ್ಕೆ ಸಂಬಂಧಿಸಿದ ಪರೀಕ್ಷಣೆಗಳ ನೆಲೆವೀಡಾಗಿ ಬೆಳೆದಿದೆ. ಭಾರತದಲ್ಲಿ ಪ್ರತಿವರ್ಷ ಅತಿ ದೊಡ್ಡ ಪ್ರಮಾಣದ ಇಂಟೆಗ್ರೇಟೆಡ್ ಸರ್ಕಿಟ್ಗಳನ್ನು ವಿನ್ಯಾಸಗೊಳಿಸಬಲ್ಲ ಕನಿಷ್ಠ ೬೦೦೦ ಎಂ.ಟೆಕ್ ತಂತ್ರಜ್ಞರು (ಈಗಿನ ಪ್ರಮಾಣಕ್ಕಿಂತ ಪಟ್ಟು ಹೆಚ್ಚು ಎಂಬುದನ್ನು ನಾವು ಗಮನಿಸಬೇಕು) ಹೊಮ್ಮಬೇಕು ಎಂದು ಕೊಹ್ಲಿ ಒತ್ತಿಹೇಳುತ್ತಾರೆ. ಆಗ ಮಾತ್ರ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಇಸ್ರೇಲ್ಗೆ ನಮ್ಮ ದೇಶ ಸರಿಸಮಾನವಾಗಿ ನಿಲ್ಲಬಹುದು ಎನ್ನುತ್ತಾರೆ.
ಎಂಜಿನಿಯರಿಂಗ್ ಶಿಕ್ಷಣ ಸುಧಾರಿಸಬೇಕೆಂಬುದು ಕೊಹ್ಲಿ ಅವರ ತುಡಿತವಾಗಿದೆ. ಕೆಲವೇ ಕೆಲವು ಐಟಟಿಗಳು ಸಾಕಾಗುವುದಿಲ್ಲ, ಈಗ ಭಾರತದಲ್ಲಿ ಇರುವ ಕನಿಷ್ಠ ೫೦ ಕಾಲೇಜುಗಳಿಗೆ ಐಐಟಿ ಗುಣಮಟ್ಟದ ಶಿಕ್ಷಣ ನೀಡುವ ಸಾಮರ್ಥ್ಯವಿದೆ ಎಂದು ಸುಮಾರು ಎರಡು ದಶಕಗಳ ಹಿಂದೆ ಅವರು ಹೇಳಿದ್ದರು. ಮಾತಿಗೆ ಕಿವಿಗೊಟ್ಟ ಮಹಾರಾಷ್ಟ್ರ ಸರ್ಕಾರವು ಅಂಥ ಕಾಲೇಜುಗಳನ್ನು ಗುರ್ತಿಸಿ, ಮೇಲ್ದರ್ಜೆಗೇರಿಸುವ ಯೋಜನೆ ರೂಪಿಸುವ ಜವಾಬ್ದಾರಿಯನ್ನು ಅವರಿಗೇ ವಹಿಸಿತು.
ಸವಾಲನ್ನು ಸಮರ್ಥವಾಗಿ ಸ್ವೀಕರಿಸಿದ ಕೊಹ್ಲಿ, ಕಾಲೇಜುಗಳನ್ನು ಸುಧಾರಿಸಲು ಏನೇನು ಮಾಡಬೇಕು ಎಂದು ವಿಶ್ಲೇಷಣಾತ್ಮಕ ವರದಿ ನೀಡಿ ಸುಮ್ಮನಾಗಲಿಲ್ಲ. ಪುಣೆಯ ಕಾಲೇಜ್ ಆಫ್ ಎಂಜಿನಿಯರಿಂಗ್ (ಸಿಒಇಪಿ) ಗುಣಮಟ್ಟ ಸುಧಾರಣಾ ನಿರ್ದೇಶಕ ಮಂಡಳಿಯ ಅಧ್ಯಕ್ಷರಾಗಿ ಸಕ್ರಿಯವಾಗಿ ತೊಡಗಿಕೊಂಡರು. ಎಂ.ವಿಶ್ವೇಶ್ವರಯ್ಯ, ಸಿ.ಕೆ.ಎನ್.ಪಟೇಲ್, ಥಾಮಸ್ ಕೈಲಾತ್, ಹತೀಮ್ ತ್ಯಾಬ್ಜೀ ಮೊದಲಾದ ದಿಗ್ಗಜರ ಮಾತೃಸಂಸ್ಥೆಸಿಒಇಪಿ’. ಆದರೂ ಇತ್ತೀಚೆಗೆ ಪ್ರಸಿದ್ಧ ಕಾಲೇಜು ತನ್ನ ಗುಣಮಟ್ಟವನ್ನು ಬಹಳ­ಮಟ್ಟಿಗೆ ಕಳೆದುಕೊಂಡಿತ್ತು. ೧೫೦ ವರ್ಷಗಳಷ್ಟು ಹಳೆಯದಾದ ಸಂಸ್ಥೆಯಲ್ಲಿ ಐಐಟಿ ಗುಣಮಟ್ಟದ ಪದವಿ ಹಾಗೂ ಸ್ನಾತಕೋತ್ತರ ಶಿಕ್ಷಣ ದೊರೆಯುವಂತೆ ಮಾಡಿದ್ದು ಕೊಹ್ಲಿ ಅವರ ನಿರ್ದೇಶನದ ಫಲ. ಈಗ ಅನೇಕ ಪರಿಣತರು ಸಂಸ್ಥೆಯನ್ನು ಶ್ಲಾಘಿಸುತ್ತಾರೆ.
ಎಂಜಿನಿಯರಿಂಗ್ ಶಿಕ್ಷಣದ ಜೊತೆ ಕೊಹ್ಲಿ ಅವರ ನಂಟು ಕೆಲ ದಶ­ಕಗಳಷ್ಟು ಹಳೆಯದು. ಮುಂಬೈನವಿಜೆಟಿಐ ಆಗಿನ ಪ್ರಾಂಶು­ಪಾಲರಾದ ಡಾ. ಪಿ.ಕೆ.ಕೇಳ್ಕರ್ ಅವರಿಗೆ ೧೯೫೦ರ ದಶಕದಲ್ಲಿ ಕೊಹ್ಲಿ ಪರಿಚಿತರಾದರು. ಆಗಲೇ ಕಂಟ್ರೋಲ್ ಸಿಸ್ಟಂ ಕುರಿತ ಒಂದು ಕೋರ್ಸನ್ನು ಎಂ. ದರ್ಜೆಯಲ್ಲಿ ಕಾಲೇಜಿನಲ್ಲಿ ಅಳವಡಿಸಲಾಯಿತು.
ಕೋರ್ಸ್ ಪ್ರಾರಂಭಿಸಿದ ಭಾರತದ ಮೊಟ್ಟ ಮೊದಲ ಕಾಲೇಜು ಎಂಬ ಅಗ್ಗಳಿಕೆವಿಜೆಟಿಐಗೆ ಸಂದಿತು. ಟಾಟಾ ಎಲೆಕ್ಟ್ರಿಕ್ ಕಂಪೆನಿಯಲ್ಲಿ ಆಗ ಕೆಲಸ ಮಾಡುತ್ತಿದ್ದ ಕೊಹ್ಲಿ ಪುರುಸೊತ್ತು ಸಿಕ್ಕಾಗಲೆಲ್ಲಾ ಕಾಲೇಜಿಗೆ ಹೋಗಿ ಪಾಠ ಮಾಡುತ್ತಿದ್ದರು.
ಅಷ್ಟೇ ಅಲ್ಲದೆ, ಮುಂಬೈ ಹಾಗೂ ಕಾನ್ಪುರದಲ್ಲಿ ಐಐಟಿಗಳನ್ನು ಸ್ಥಾಪಿಸುವ ಹೊಣೆಗಾರಿಕೆ ಕೇಳ್ಕರ್ ಅವರ ಹೆಗಲಿಗೆ ಬಿತ್ತು. ಆಗ ಕೊಹ್ಲಿ ಹಾಗೂ ಕೇಳ್ಕರ್ ಬೌದ್ಧಿಕ ಸಂಪರ್ಕ ಇನ್ನಷ್ಟು ಗಟ್ಟಿಗೊಂಡಿತು. ಟಿಸಿಎಸ್ ಪ್ರತಿನಿಧಿಯಾಗಿ ವಿದೇಶಕ್ಕೆ ಹೋದಾಗ ಕೆಲವು ಪ್ರತಿಭಾವಂತರನ್ನು ಗುರುತಿಸಿ, ಅಂಥವರನ್ನು ಐಐಟಿಯಲ್ಲಿ ಪ್ರಾಧ್ಯಾಪಕರಾಗಿ ಪಾಠ ಮಾಡಲು ಕರೆತಂದರು. ಭಾರತದಲ್ಲಿಯೇ ಕಂಪ್ಯೂಟರ್ ಸೈನ್ಸ್ನಲ್ಲಿ ಮೊದಲ ಎಂ.ಟೆಕ್ಶುರುವಾಗಿದ್ದು ಕಾನ್ಪುರ ಐಐಟಿಯಲ್ಲಿ. ಐಐಟಿ ಪ್ರೊಫೆಸರ್ಗಳನ್ನು ಕರೆಸಿ ಕೊಹ್ಲಿ ಟಿಸಿಎಸ್ನಲ್ಲಿ ತರಬೇತಿ ಕೊಡಿಸಿದ್ದೇ ಅಲ್ಲದೆ ಕೆಲವು ಯೋಜನೆಗಳಿಗೆ ಅವರಿಂದ ಸಲಹೆಗಳನ್ನೂ ಪಡೆದರು. ಅಕಾಡೆಮಿಕ್ವಲಯದ ಜೊತೆ ಟಿಸಿಎಸ್ ಬಲವಾದ ಬಾಂಧವ್ಯ ಇಂದಿಗೂ ಮುಂದುವರಿದಿದೆ.
ಭಾರತದಲ್ಲಿ ಕಳೆದ ಒಂದು ದಶಕದಿಂದ ಮಾಹಿತಿ ಹಾಗೂ ಸಂವಹನ ತಂತ್ರಜ್ಞಾನ (ಐಸಿಟಿ) ಏರುಗತಿಯಲ್ಲಿದೆ. ಆದರೂ ಕೊಹ್ಲಿ ಅವರಿಗೆ ತೃಪ್ತಿ ಇಲ್ಲ. ವಸ್ತುಸ್ಥಿತಿ ಅವರಿಗೆ ಸ್ಪಷ್ಟವಾಗಿ ಗೊತ್ತು. ಭಾರತದ್ದೇ ಆದಇಂಡಿಕ್ಕಂಪ್ಯೂಟಿಂಗ್‌’ (ಭಾರತೀಯ ಭಾಷೆಗಳಲ್ಲಿ ಕಂಪ್ಯೂಟಿಂಗ್‌)  ರೂಪಿಸುವುದು ಅವರ ಕನಸಾಗಿತ್ತು. ಅದು ನನಸಾದಲ್ಲಿ ಇಂಗ್ಲಿಷ್ಬಾರದೆ ತಂತಮ್ಮ ಪ್ರಾದೇಶಿಕ ಭಾಷೆಗಳಲ್ಲೇ ವ್ಯವಹರಿಸುವ ಶೇ 90ರಷ್ಟು ಜನರು ಡಿಜಿಟಲ್ತಂತ್ರಜ್ಞಾನದ ಕಂದಕವನ್ನು ದಾಟಬಲ್ಲರು ಎಂದು ಕೊಹ್ಲಿ ಪದೇಪದೇ ಹೇಳುತ್ತಾರೆ. ನಿಜವಾದ ಐಟಿ ಕ್ರಾಂತಿಯ ಕನಸು ಭಾರತದಲ್ಲಿ ಆಗ ನನಸಾಗುತ್ತದೆ ಎಂಬುದು ಕೊಹ್ಲಿ ಅವರ ಅಭಿಮತ.
ದೇಶಿ ಹಾಗೂ ವಿದೇಶಿ ಮಳಿಗೆಗಳು ದೈತ್ಯಶಕ್ತಿಗಳಂತೆ ಮಾರುಕಟ್ಟೆಗೆ ಇಳಿದಾಗಿನಿಂದ ಸಣ್ಣ ಪ್ರಮಾಣದ ಸಗಟು ಮಾರಾಟಗಾರರು ಹೋರಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದ್ದು, ಕುರಿತು ಈಗಲೂ ಚರ್ಚೆ ನಡೆಯುತ್ತಿದೆ. ಅಂಥ ಸಣ್ಣ ವ್ಯಾಪಾರಿಗಳಿಗೆ ಮಾಹಿತಿ ತಂತ್ರಜ್ಞಾನದ ಮೂಲಕ ಚಾಣಾಕ್ಷ ವ್ಯಾಪಾರ ಮಾಡುವ ದಾರಿಯನ್ನು ಹುಡುಕಬಹುದು ಎಂದು ಕೊಹ್ಲಿ ಚಿಂತಿಸುತ್ತಾರೆ. ಹಾಗೆ ಆದಲ್ಲಿ ಎಂಥ ದೊಡ್ಡ ಸವಾಲಿಗೂ ದೇಸಿ ವ್ಯಾಪಾರಿಗಳು ಎದೆಗೊಡಬಲ್ಲರು ಎಂದು ಪರಿಹಾರ ಸೂಚಿಸುತ್ತಾರೆ.
ಬಹುತೇಕರಿಗೆ ಕೊಹ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ನಾಯಕರೆಂದೇ ಪರಿಚಿತರು. ಆದರೆ ಕೆಲವರಿಗಷ್ಟೇ ವಿದ್ಯುತ್ ಉದ್ಯಮಕ್ಕೂ ಅವರು ಕೊಡುಗೆ ಉತ್ಕೃಷ್ಟವಾದದ್ದು ಎಂದು ಗೊತ್ತು. ‘ಐಇಇಇಸಂಸ್ಥೆಯ ಫೆಲೊ ಆಗಿ ಅವರು ಇರುವುದು .ಟಿ ಕ್ಷೇತ್ರದಲ್ಲಿನ ಸಾಧನೆಯಿಂದಾಗಿ ಅಲ್ಲ, ಪವರ್ ಎಂಜಿನಿಯರಿಂಗ್ ಕ್ಷೇತ್ರಕ್ಕೆ ಸಲ್ಲಿಸಿದ ಕಾಣಿಕೆಯಿಂದ. ಟಿಸಿಎಸ್ಗೆ 1969ರಲ್ಲಿ ಸೇರುವ ಮುನ್ನ ಟಾಟಾ ಎಲೆಕ್ಟ್ರಿಕ್ ಕಂಪೆನೀಸ್ನಲ್ಲಿ(ಈಗಿನ ಟಾಟಾ ಪವರ್) ಸುಮಾರು ಎರಡು ದಶಕ ಕಾಲ ಅವರು ಕೆಲಸ ಮಾಡಿದ್ದಾರೆ. ಚೀಫ್ ಲೋಡ್ ಡಿಸ್ಪ್ಯಾಚರ್ ಆಗಿ ಮುಂಬೈನಲ್ಲಿ ಸ್ಥಿರ, ಅತ್ಯುತ್ತಮ ಗುಣಮಟ್ಟದ ವಿದ್ಯುತ್ ಪೂರೈಕೆಯನ್ನು ಅಡೆತಡೆ ಇಲ್ಲದೆ ಮಾಡಿದ ಶ್ರೇಯಸ್ಸು ಅವರಿಗೆ ಸಲ್ಲಬೇಕು. ಯತ್ನದಲ್ಲಿ ಅವರು ಮುಂಬೈ ನಗರವು ನ್ಯೂಯಾರ್ಕ್ಗೆ ಸರಿಸಮಾನವಾಗಿ ಇರುವಂತೆ ಮಾಡಿದರು. 1960 ದಶಕದ ಮಧ್ಯಭಾಗದಲ್ಲಿ ಅವರ ನಾಯಕತ್ವದಲ್ಲಿ ಟಾಟಾ ಎಲೆಕ್ಟ್ರಿಕ್ದೊಡ್ಡ ಹೆಜ್ಜೆಯೊಂದನ್ನು ಇಟ್ಟಿತು. ‘ಲೋಡ್ಡಿಸ್ಪ್ಯಾಚ್‌’ಗೆ ಡಿಜಿಟಲ್ಕಂಪ್ಯೂಟರನ್ನು ಅಳವಡಿಸಿ ವಿಶ್ವದಲ್ಲೇ ಮೂರನೆಯ ಹಾಗೂ ಏಷ್ಯಾದಲ್ಲೇ ಮೊದಲ ಹೆಜ್ಜೆ ಇಟ್ಟಿತು.
‘Economics of longdistance extra high voltage transmission lines’ ವಿಷಯ ಕುರಿತು ಅವರು ಮಂಡಿಸಿದ ಪ್ರಬಂಧ 1963ರಲ್ಲಿಯೇ ಅಪಾರ ಮೆಚ್ಚುಗೆ ಗಳಿಸಿತು. ಪವರ್ಗ್ರಿಡ್ಕಾರ್ಪೊರೇಷನ್ಆಫ್ಇಂಡಿಯಾ ಎಂಬ ಬಹುದೊಡ್ಡ ಸರ್ಕಾರಿ ಕ್ಷೇತ್ರದ ಕಂಪೆನಿಗೆ ಪ್ರಬಂಧವೇ ಬುನಾದಿ.
ಭಾರತದಲ್ಲಿ ಇಂದಿನ ವಿದ್ಯುತ್ ಕ್ಷೇತ್ರದ ಸ್ಥಿತಿಯ ಕುರಿತು ಮಾತನಾಡುವಾಗ, ಅವರು ಪಟ್ಟ ಕಷ್ಟಗಳು ಅನಾವರಣಗೊಳ್ಳುತ್ತವೆ. ಪ್ರಸರಣ ಹಾಗೂ ವಿತರಣೆಯಲ್ಲಿ ಆಗುತ್ತಿರುವ ಶೇ 35ರಿಂದ ಶೇ 50ರವರೆಗಿನ ನಷ್ಟವನ್ನು ನೆನಪಿಸಿಕೊಂಡರೆ ಅವರಿಗೆ ಸಿಟ್ಟು ಬರುತ್ತದೆ. ಸಮರ್ಪಕ ವ್ಯವಸ್ಥೆಯಿಂದ ನಷ್ಟದ ಪ್ರಮಾಣವನ್ನು ಶೇ 10ರಷ್ಟಕ್ಕೆ ಇಳಿಸಬಹುದು ಎಂಬುದು ಅವರ ವಾದ. ಟಾಟಾ ಎಲೆಕ್ಟ್ರಿಕ್ನಲ್ಲಿ ನಷ್ಟದ ಪ್ರಮಾಣ ಶೇ 7–8ರಷ್ಟು ಮಾತ್ರ ಇತ್ತೆಂಬ ಅವರ ಮಾತು ವಾಸ್ತವದಲ್ಲಿ ಸತ್ಯವೆಂಬುದಕ್ಕೆ ಕನ್ನಡಿ ಹಿಡಿಯುತ್ತದೆ.
ಪ್ರಜ್ಞಾವಂತಿಕೆಯಿಂದ ಯೋಚಿಸಿ, ಸೂಕ್ತ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಬೇಕು. ಇದಕ್ಕೆ ಒಂದಿಷ್ಟು ಬಜೆಟ್ಬೇಕಾಗುತ್ತದೆ. ಆದರೆ ಹೀಗೆ ಮಾಡಿದಲ್ಲಿ ಗ್ರಾಹಕರಿಗೆ ಈಗ ಪೂರೈಕೆ ಮಾಡುತ್ತಿರುವ ವಿದ್ಯುತ್ಗಿಂತ ದುಪ್ಪಟ್ಟು ಪ್ರಮಾಣವನ್ನು ಒದಗಿಸುವುದು ಸಾಧ್ಯವಿದೆ, ಅದೂ ಹೆಚ್ಚುವರಿ ಬಂಡವಾಳ ತೊಡಗಿಸದೆಎಂದು ಅವರು ಹೇಳುತ್ತಾರೆ
ಆಚರಣೆಗೆ ತರಲಾಗುವಂಥ ಸಂಗತಿಗಳನ್ನಷ್ಟೇ ಚರ್ಚಿಸುವ ಕೊಹ್ಲಿ, ವಯಸ್ಸಿನಲ್ಲೂ ಐಐಟಿ ಬಾಂಬೆಯ ತರುಣ ಎಂಜಿನಿಯರ್ಗಳ ಜೊತೆ ವಿದ್ಯುತ್ವ್ಯವಸ್ಥೆ ಸುಧಾರಣೆಯ ವಿನ್ಯಾಸಗಳ ಕುರಿತು ವಿಚಾರ ವಿನಿಮಯ ನಡೆಸುತ್ತಾರೆ. ವಿದ್ಯುತ್ವಲಯ ಸುಧಾರಣೆಗೆ ಅಗತ್ಯ ವ್ಯವಸ್ಥೆ ಕಲ್ಪಿಸುವ ಸಲಹಾ ಸಮೂಹವಾಗಿ ಎಂಜಿನಿಯರ್ಗಳು ರೂಪುಗೊಳ್ಳಲು ಕೊಹ್ಲಿ ಪ್ರೇರಕಶಕ್ತಿ ಇದ್ದಂತೆ.
ಮ್ಯಾನೇಜ್ಮೆಂಟ್ಕನ್ಸಲ್ಟೆನ್ಸಿಸಂಸ್ಕೃತಿಯನ್ನು ಭಾರತಕ್ಕೆ ಪರಿಚಯಿಸಿದವರೂ ಅವರೇ. ಟಿಸಿಎಸ್ ಮೊದಲ ಅನೇಕ ಕಾರ್ಯಕ್ರಮಗಳು ಮ್ಯಾನೇಜ್ಮೆಂಟ್ಕೇಂದ್ರಿತವೇ ಆಗಿದ್ದವು. ‘ಒಂದು ಕಾಲದಲ್ಲಿ ನಾವು ವಿಶ್ವದರ್ಜೆಯ ಮ್ಯಾನೇ­­ಜ್‌­ಮೆಂಟ್ಕನ್ಸಲ್ಟಿಂಗ್ಕಂಪೆನಿಯನ್ನೂ ಭಾರತ­ದಲ್ಲಿ ರೂಪಿಸಬಹುದಾಗಿತ್ತು ಎಂಬುದು ನನ್ನ ಮಹತ್ವಾ­ಕಾಂಕ್ಷೆಎಂದು ಅವರು ಹೇಳುತ್ತಾರೆ. ವಿದ್ಯುತ್ ಹಾಗೂ ಐಟಿ ಉದ್ದಿಮೆಯಲ್ಲಿ ಕೊಹ್ಲಿ ಮಾಡಿದ ಸಮಾಜಮುಖಿ ಕೆಲಸ­ಗಳು ಹಲವು. ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯ ಅವರಂ­ತೆಯೇ ಅವರನ್ನೂಎಂಜಿನಿಯರ್ಗಳ ಎಂಜಿನಿ­ಯರ್  ಎಂದು ನಿಸ್ಸಂದೇಹವಾಗಿ ಕರೆಯಲು ಇಷ್ಟು ಸಾಕು.
ಈಗಲೂ ಕಾರ್ಯವ್ಯಸನಿಯಾಗಿಯೇ ಉಳಿದಿರುವ ಅವರಿಗೆ 90 ಹರೆಯದಲ್ಲೂ ನಿವೃತ್ತಿಯಲ್ಲಿ ನಂಬಿಕೆ ಇಲ್ಲ. ತಂತ್ರಜ್ಞಾನ ಹಾಗೂ ಅದರ ಜೊತೆಗೆ ತಳಕು ಹಾಕಿಕೊಂಡ ವ್ಯವಸ್ಥೆಗಳಿಂದ ಸಾಮಾಜಿಕ ಸಮಸ್ಯೆಗಳನ್ನು ಪರಿಹರಿಸುವ ದಾರಿಗಳನ್ನು ಈಗಲೂ ಅವರು ಹುಡುಕುತ್ತಲೇ ಇದ್ದಾರೆ!
ಕೊಹ್ಲಿ ಇಡೀ ದೇಶ ಹೆಮ್ಮೆಪಡಬಹುದಾದ ಬೌದ್ಧಿಕ ಸಂಪತ್ತು. ಅವರೂ ವಿಶ್ವೇಶ್ವರಯ್ಯನವರಂತೆ ದೀರ್ಘಾಯುಷಿಯಾಗಿ ಬಾಳಲಿ ಎಂಬುದು ನಮ್ಮೆಲ್ಲರ ಹಾರೈಕೆ.
ಸಾಮಾಜಿಕ ಸಮಸ್ಯೆಗೆ ತಂತ್ರಜ್ಞಾನದ ಪರಿಹಾರ
ಕೊಹ್ಲಿ ಇರುವುದೇ ಹಾಗೆ. ಯಾವುದೇ ಸಾಮಾಜಿಕ ಸಮಸ್ಯೆ ಎದುರಾದರೂ ಅದರಿಂದ ವಿಮುಖರಾಗದೆ, ಅದಕ್ಕೆ ತಂತ್ರಜ್ಞಾನದ ಮೂಲಕ ಪರಿಹಾರ ಹುಡುಕುವುದು ಅವರ ಜಾಯಮಾನ.
ಉದಾಹರಣೆಗೆ: ದೇಶದ ವಯಸ್ಕರ ಅನಕ್ಷರತೆಯ ಪ್ರಮಾಣ ಶೇ 34ರಷ್ಟಿದೆ ಎಂದು 2೦೦1 ಜನಗಣತಿಯಿಂದ ಗೊತ್ತಾದಾಗ ತಮ್ಮ ಸಹೋದ್ಯೋಗಿಗಳಾದ ಪಿ.ಎನ್.ಮೂರ್ತಿ ಹಾಗೂ ಕೇಶವ್ ನೂರಿ ಅವರೊಂದಿಗೆ ಸಮಸ್ಯೆಗೆ ಪರಿಹಾರ ರೂಪಿಸಿದರು. ಕಲಿಕೆ ಹಾಗೂ ಅರಿಯುವ ಪ್ರಕ್ರಿಯೆಯನ್ನು ಇನ್ನಷ್ಟು ಜನಮುಖಿಯಾಗಿಸಲು ಹೊಸತನದ ಬೋಧನಾ ಮಾರ್ಗವನ್ನು ಅವರು ಸೂಚಿಸಿದರು. ಕಂಪ್ಯೂಟರ್ ಆಧಾರಿತ ಸಾಕ್ಷರತಾ ಪ್ಯಾಕೇಜ್ಗೆ ಅದೇ ನಾಂದಿ. ಪ್ಯಾಕೇಜ್ ಬೋಧನೆಯಿಂದ 4 ಗಂಟೆಗಳಲ್ಲಿ ಯಾರು ಬೇಕಾದರೂ ಯಾವುದೇ ಭಾರತೀಯ ಭಾಷೆಯಲ್ಲಿ ಅಕ್ಷರಸ್ಥರಾಗಬಹುದಿತ್ತು, ಅದೂ ತಲಾ 1೦೦ ರೂಪಾಯಿಯಷ್ಟೇ ಕಡಿಮೆ ವೆಚ್ಚದಲ್ಲಿ. ಪ್ಯಾಕೇಜನ್ನು ಅನುಷ್ಠಾನಗೊಳಿಸಲು ನಿರ್ಧರಿಸಿದ ಅವರು, ಇಂಟೆಲ್ 486 ನಂಥ ಹಳೆಯ ಕಂಪ್ಯೂಟರ್ಗಳನ್ನು ಮರುಬಳಕೆ ಮಾಡಿದರೂ ಸಾಕು ಎಂದು ಸಲಹೆ ಕೊಟ್ಟರು. ಅನಿಮೇಟೆಡ್ ಗ್ರಾಫಿಕ್ಸ್ ಹಾಗೂ ಅಶರೀರವಾಣಿಯನ್ನು ಬಳಸಿ ಯಾವುದೇ ಭಾಷೆಯ ವರ್ಣಮಾಲೆಯನ್ನು ಅರ್ಥಸಹಿತ ಮನದಟ್ಟು ಮಾಡಿಸಬಲ್ಲ ಪ್ಯಾಕೇಜ್ ಅದು. ಕಲಿಕೆಯನ್ನು ಸರಳಗೊಳಿಸುವುದರ ಜೊತೆಗೆ ಆಸಕ್ತಿಯನ್ನೂ ಕೆರಳಿಸುವಂಥ ಉಪಾಯಗಳು ಪ್ಯಾಕೇಜ್ನಲ್ಲಿವೆ. ಇದನ್ನು ಯಶಸ್ವಿಯಾಗಿ ಜಾರಿಗೆ ತಂದರೆ ಐದು ವರ್ಷದ ಅವಧಿಯಲ್ಲಿ ಶೇ 9೦ರಷ್ಟು ವಯಸ್ಕ ಅಕ್ಷರಸ್ಥರನ್ನು ದೇಶಕ್ಕೆ ನೀಡುವುದು ಸಾಧ್ಯವಿದೆ. ಎಂದಿನ ಸಾಮಾನ್ಯ ಬೋಧನಾ ಕ್ರಮ ಅನುಸರಿಸಿದರೆ ಪ್ರಮಾಣದ ಯಶಸ್ಸು ಸಾಧಿಸಲು 3 ವರ್ಷಗಳೇ ಬೇಕಾಗುತ್ತವೆ.
ಕೊಹ್ಲಿ ಸಂಸ್ಥೆಗಳನ್ನು ಕಟ್ಟುವುದರಲ್ಲೂ ಸಮರ್ಥವಾಗಿ ಕೆಲಸ ಮಾಡಿದ್ದಾರೆ. ಕಂಪ್ಯೂಟರ್ ಸೊಸೈಟಿ ಆಫ್ ಇಂಡಿಯಾ, ನಾಸ್ಕಾಂ, ಮ್ಯಾನುಫ್ಯಾಕ್ಚರರ್ಸ್ ಅಸೋಸಿಯೇಷನ್ ಆಫ್ ಇನ್ಫರ್ಮೇಷನ್ ಟೆಕ್ನಾಲಜಿ, ಐಇಇಇ (ಇನ್ಸ್ಟಿಟ್ಯೂಟ್ ಆಫ್ ಎಲೆಕ್ಟಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ಎಂಜಿನಿಯರ್ಸ್), ಏಷ್ಯನ್- ಒಸಿಯಾನಿಯನ್ ಕಂಪ್ಯೂಟಿಂಗ್ ಇಂಡಸ್ಟ್ರಿ ಆರ್ಗನೈಸೇಷನ್ (ಎಎಸ್ಒಸಿಐಒ) ಮೊದಲಾದ ಸಂಸ್ಥೆಗಳ ಅಭಿವೃದ್ಧಿ ಹಾಗೂ ವಿಕಾಸದಲ್ಲಿ ಕೊಹ್ಲಿ ಅವರ ದಣಿವರಿಯದ ಪ್ರಯತ್ನಗಳು ಮತ್ತು ನಾಯಕತ್ವದ ಪಾತ್ರವಿದೆ. ಸುಮಾರು ಐದು ಲಕ್ಷ ಎಂಜಿನಿಯರ್ಗಳನ್ನು ಸದಸ್ಯರಾಗಿ ಹೊಂದಿರುವ, ವಿಶ್ವದ ಅತಿ ದೊಡ್ಡ ವೃತ್ತಿಪರರ ಸಂಸ್ಥೆ ಎನಿಸಿರುವಐಇಇಇಇತ್ತೀಚೆಗೆ ಅತಿ ಪ್ರತಿಷ್ಠಿತಸಂಸ್ಥಾಪಕರ ಪದಕವನ್ನು  ಕೊಹ್ಲಿ ಅವರಿಗೆ ಅಮೆರಿಕದಲ್ಲಿ ಪ್ರದಾನ ಮಾಡಿ, ಗೌರವಿಸಿತು.
-ಶಿವಾನಂದ ಕಣವಿ, (ಲೇಖಕರು ಹೆಸರಾಂತ ತಂತ್ರಜ್ಞಾನ ಪತ್ರಕರ್ತರು. ಟಿ.ಸಿ.ಎಸ್ ಮಾಜಿ ಉಪಾಧ್ಯಕ್ಷರು)

No comments: