Thursday, October 23, 2014

Prof CNR Rao: Interview in Prajavani

ಸಿಎನ್‌ಆರ್‌ ರಾವ್ ವಿಜ್ಞಾನದ ಬೆಳಕಿನಲ್ಲಿ...By Shivanand Kanavi
 

  • ವಿಜ್ಞಾನ ಆಯ್ಕೆ ಮಾಡಿಕೊಳ್ಳಲು ಏನು ಕಾರಣ ಅಥವಾ ಯಾರು ನಿಮಗೆ ಪ್ರೇರಣೆ?

ನಾನು ತುಂಬಾ ಚಿಕ್ಕವನಾಗಿದ್ದಾಗಲೇ ವಿಜ್ಞಾನದ ಕುರಿತು ಅತ್ಯುತ್ಸುಕನಾಗಿದ್ದೆ. ಶಾಲೆಯಲ್ಲಿದ್ದಾಗಲೇ ಸಿ.ವಿ.ರಾಮನ್ ಅವರನ್ನು ಭೇಟಿ ಮಾಡಿದೆ. ಅವರನ್ನು ಮಾತನಾಡಿಸಿದ್ದೇ ಅಲ್ಲದೆ, 1944-45ರಲ್ಲಿ ಅವರ ಪ್ರಯೋಗಾಲಯಕ್ಕೆ ಭೇಟಿ ಕೊಟ್ಟೆ. ಇದು ನಡೆದದ್ದು ಸುಮಾರು 70 ವರ್ಷಗಳ ಹಿಂದೆ. ಆ ವೇಳೆಗೆ ನಾನು ಹೈಸ್ಕೂಲ್‌ನಲ್ಲಿ ಇದ್ದೆ. ನಾನು ಶಾಲೆಯಲ್ಲಿ ಕಲಿಯಲು ಪ್ರಾರಂಭಿಸಿದ್ದು ತುಂಬಾ ಚಿಕ್ಕ ವಯಸ್ಸಿನಲ್ಲಿ. ಬಿ.ಎಸ್‌ಸಿ. ಮುಗಿಸಿದ ನಂತರ ಸಂಶೋಧನೆ ಮಾಡಬೇಕೆಂದು ನಿರ್ಧರಿಸಿದೆ. ಹಲವು ಜನರ ಹೆಸರುಗಳೊಂದಿಗೆ ಸಂಶೋಧನಾ ಪ್ರಬಂಧಗಳು ಪ್ರಕಟವಾದಾಗಲೆಲ್ಲಾ ನನ್ನಲ್ಲಿ ಒಂದು ರೀತಿ ಬೆರಗು ಮೂಡುತ್ತಿತ್ತು. ಅಂಥದ್ದನ್ನು ನಾನು ಅದಕ್ಕೂ ಮೊದಲು ನೋಡಿಯೇ ಇರಲಿಲ್ಲ. ಎಷ್ಟೋ ಶಿಕ್ಷಕರನ್ನು ಸಂಶೋಧನೆ ಮಾಡುವ ಕುರಿತು ವಿಚಾರಿಸಿದೆ. ಪದವಿಪೂರ್ವ ಹಂತದಲ್ಲಿ ಯಾರೂ ಖುದ್ದು ಸಂಶೋಧನೆ ಮಾಡುವ ಉತ್ಸಾಹ ತೋರಿಸುತ್ತಿರಲಿಲ್ಲ, ಮಾಡುವವರನ್ನು ಉತ್ತೇಜಿಸುತ್ತಲೂ ಇರಲಿಲ್ಲ. ಪದವಿ ಕಲಿಯುವಾಗ ಸಂಶೋಧನೆಯ ಮಾತೆತ್ತಿದರೆ, ‘ನೀನಿನ್ನೂ ಬಿ.ಎಸ್‌ಸಿ ವಿದ್ಯಾರ್ಥಿ’ ಎಂದು ಹೇಳಿ, ಉತ್ಸಾಹಕ್ಕೆ ತಣ್ಣೀರೆರಚುತ್ತಿದ್ದರು.
* ನೀವು ರಸಾಯನ ವಿಜ್ಞಾನ ಆರಿಸಿಕೊಂಡಿದ್ದು ಏಕೆ?
ಪದವಿಗೂ ಮೊದಲು ನಾನು ರಸಾಯನ ವಿಜ್ಞಾನಕ್ಕಿಂತ ಭೌತ ವಿಜ್ಞಾನದ ಕಲಿಕೆಯಲ್ಲಿ ಮುಂದಿದ್ದೆ. ನನಗೆ ಭೌತ–ರಸಾಯನ ವಿಜ್ಞಾನ ಇಷ್ಟವಾಯಿತು ಹಾಗೂ ನಾನು ಅಮೆರಿಕಕ್ಕೆ ಹೋದಾಗ ಆ ವಿಷಯವನ್ನೇ ಆರಿಸಿಕೊಂಡು, ಭೌತ ವಿಜ್ಞಾನವನ್ನು ಮೈನರ್ ಆಗಿಯೂ (ಪೂರಕ ಅಧ್ಯಯನ), ರಸಾಯನ ವಿಜ್ಞಾನವನ್ನೂ ಮೇಜರ್ (ಮುಖ್ಯ ಅಧ್ಯಯನ ವಸ್ತು) ಆಗಿಯೂ ಕಲಿಯತೊಡಗಿದೆ. ಪಾಲಿಂಗ್ ಅವರ ಜೊತೆ ಕೆಲಸ ಮಾಡುವುದು ನನ್ನ ಬಯಕೆಯಾಗಿತ್ತು. ಅವರು ಮಾಲಿಕ್ಯುಲಾರ್ ಸ್ಟ್ರಕ್ಚರ್ ಅಥವಾ ಕಣ ರಚನೆಯ ಕುರಿತು ತಾವು ಏನೂ ಕಲಿಸುತ್ತಿಲ್ಲ ಎಂದರು. ಆದರೆ ಪರ್ಡ್ಯೂನಲ್ಲಿನ ಅವರ ವಿದ್ಯಾರ್ಥಿಗಳಲ್ಲಿ ಒಬ್ಬರು ಇನ್ನೂ ಆ ವಿಷಯದಲ್ಲಿ ಸಂಶೋಧನೆ ಮುಂದುವರಿಸಿದ್ದರು. ಹಾಗಾಗಿ ನಾನು ಪರ್ಡ್ಯೂಗೆ ಹೋಗಲು ತೀರ್ಮಾನಿಸಿದೆ.
* ಅಲ್ಲಿ ನೀವು ಏನಾದರೂ ಪ್ರಯೋಗಗಳನ್ನು ಮಾಡಲು ಸಾಧ್ಯವಾಯಿತೇ?
ಖಂಡಿತ ಸಾಧ್ಯವಾಯಿತು. ನಾನು ಪ್ರಯೋಗಶೀಲ. ಈಗ ಇಲ್ಲಿ ನಾನು ಅತ್ಯುತ್ತಮ ಪ್ರಯೋಗ ಶಾಲೆ ಯನ್ನು ಕಟ್ಟಿದ್ದೇನೆ. ಅಂಥ ಪ್ರಯೋಗಗಳಿಗಾಗಿ ಎಂಐಟಿ ಅಥವಾ ಹಾರ್ವರ್ಡ್‌ಗೆ ಹೋಗುವ ಅಗತ್ಯವಿಲ್ಲ. ಅನಿಲಗಳ ಇಲೆಕ್ಟ್ರಾನ್ ಡಿಫ್ರಾಕ್ಷನ್ (ಇಲೆಕ್ಟ್ರಾನ್ ವಿವರ್ತನೆ) ಕುರಿತು ಪಿಎಚ್.ಡಿ. ಮಾಡುವಾಗ, ಎಕ್ಸ್‌ರೇ ಕ್ರಿಸ್ಟಲೋಗ್ರಫಿ ಮತ್ತಿತರ ವಿಷಯಗಳ ಕುರಿತು ಅಧ್ಯಯನ ಮಾಡುವಾಗ ಪರಿಸ್ಥಿತಿ ಈಗಿನಂತೆ ಇರಲಿಲ್ಲ. ಆಗಿನ ಮೂರು ವರ್ಷ ಸಲೀಸಾಗಿ ಸಾಗಿತು. ಪಿಎಚ್.ಡಿ. ಪದವಿ ದಕ್ಕುವ ಹೊತ್ತಿಗೆ 28ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳನ್ನು ನಾನು ಪ್ರಕಟಿಸಿದ್ದೆ. ಅವುಗಳಲ್ಲಿ ಒಂದು ಡಜನ್‌ನಷ್ಟು ಪ್ರಬಂಧಗಳು ಇಲೆಕ್ಟ್ರಾನ್ ಡಿಫ್ರಾಕ್ಷನ್ ಕುರಿತಾಗಿದ್ದವು ಹಾಗೂ ಸ್ಪೆಕ್ಟ್ರೋಸ್ಕಪಿ ಕುರಿತು ಸುಮಾರು ಎಂಟು ಪ್ರಬಂಧಗಳನ್ನು ಸಿದ್ಧಪಡಿಸಿದ್ದೆ.
ಚಿಂತಾಮಣಿ ನಾಗೇಶ ರಾಮಚಂದ್ರ ರಾವ್ ವಿಶ್ವದ ಪ್ರಮುಖ ವಿಜ್ಞಾನಿಗಳಲ್ಲಿ ಒಬ್ಬರು. 1700ಕ್ಕೂ ಹೆಚ್ಚು ಸಂಶೋಧನೆಗಳ ಪ್ರಕಟಣೆ, 150ಕ್ಕೂ ಹೆಚ್ಚು ಪಿಎಚ್.ಡಿ. ಮಹಾಪ್ರಬಂಧಗಳ ಮಾರ್ಗದರ್ಶಕರು ಅವರು. ವಸ್ತು ವಿಜ್ಞಾನ ಅಥವಾ ಮೆಟೀರಿಯಲ್ ಸೈನ್ಸ್‌ನ ಹಲವು ಕ್ಷೇತ್ರಗಳಲ್ಲಿ ಅವರ ಕೆಲಸ ಪ್ರಧಾನವಾದದ್ದು ಹಾಗೂ ಅವರೀಗ ನ್ಯಾನೊ ವಿಜ್ಞಾನದಲ್ಲಿ ಹೊಸ ಟ್ರೆಂಡ್‌ಗಳನ್ನು ಹುಟ್ಟುಹಾಕಲು ಅವುಡುಗಚ್ಚಿ ಕೆಲಸ ಮಾಡುವುದರಲ್ಲಿ ನಿರತರಾಗಿದ್ದಾರೆ. ಸ್ಪೆಕ್ಟ್ರೋಸ್ಕೊಪಿ (ರೋಹಿತಗಳ ಅಧ್ಯಯನ), ಹೈ ಟೆಂಪರೇಚರ್ ಸೂಪರ್ ಕಂಡಕ್ಟಿವಿಟಿ (ಅತ್ಯುಷ್ಣ ವಾಹಕಗಳಿಗೆ ಸಂಬಂಧಿಸಿದ ಅಧ್ಯಯನ), ಕೊಲೊಸಿಯಲ್ ಮ್ಯಾಗ್ನೆಟೊ ರೆಸಿಸ್ಟೆನ್ಸ್ (ಬೃಹತ್ ಅಯಸ್ಕಾಂತೀಯ ತಾಳಿಕೆ), ಗ್ರಾಫೀನ್ಸ್, ಇನಾರ್ಗ್ಯಾನಿಕ್‌ (ನಿರವಯವ) ಸೇರಿದಂತೆ ನ್ಯಾನೊ ನಳಿಕೆಗಳಿಗೆ ಸಂಬಂಧಿಸಿದಂತೆ ಅಸಾಮಾನ್ಯ ಸಾಧನೆ ಮಾಡಿರುವ ಅವರು, ದ್ಯುತಿ ಸಂಶ್ಲೇಷಣೆ ಹಾಗೂ ನೀರಿನ ಕಣಗಳನ್ನು ವಿಭಜಿಸುವ ಹೊಸ ಮಾರ್ಗದ ಸಂಶೋಧನೆಗಳಲ್ಲಿ ಎಂಬತ್ತರ ಇಳಿ ವಯಸ್ಸಿನಲ್ಲಿಯೂ ಉತ್ಸಾಹದಿಂದ ತೊಡಗಿಕೊಂಡಿದ್ದಾರೆ. ರಾಜೀವ್ ಗಾಂಧಿ ಹಾಗೂ ಆನಂತರ ಮನಮೋಹನ್ ಸಿಂಗ್ ಪ್ರಧಾನಿಗಳಾಗಿದ್ದಾಗ ಪ್ರಧಾನ ಮಂತ್ರಿಗಳ ವೈಜ್ಞಾನಿಕ ಸಲಹಾ ಸಮಿತಿಯ ಅಧ್ಯಕ್ಷರಾಗಿದ್ದ ರಾವ್, ಆಗ ವಿಜ್ಞಾನ ಸಂಬಂಧಿ ಅನೇಕ ಯೋಜನೆಗಳು ಪ್ರಾರಂಭವಾಗಲು ಕಾರಣೀಭೂತರಾದವರು. ಬೆಂಗಳೂರಿನ ಜವಾಹರಲಾಲ್ ನೆಹರೂ ಉನ್ನತ ವೈಜ್ಞಾನಿಕ ಸಂಶೋಧನಾ ಕೇಂದ್ರದ ಆವರಣದಲ್ಲಿ ಪ್ರಧಾನಿಗಳ ವೈಜ್ಞಾನಿಕ ಸಲಹಾ ಸಮಿತಿಯ ಅಧ್ಯಕ್ಷರಾಗಿದ್ದಾಗಿನ ಅನುಭವಗಳ ಬಗೆಗೆ ರಾವ್ ಅವರನ್ನು ಶಿವಾನಂದ ಕಣವಿ ಮಾತನಾಡಿಸಿದ್ದಾರೆ. ಸಂದರ್ಶನದ ಆಯ್ದ ಭಾಗ ಇಲ್ಲಿದೆ....
* ಭಾರತಕ್ಕೆ ಮರಳಿ ಬರಲು ನೀವು ತೀರ್ಮಾನಿಸಿದ್ದು ಏಕೆ?
ಓಹ್, ನಾನು ದೇಶಭಕ್ತ ಕುಟುಂಬಕ್ಕೆ ಸೇರಿದವನು. ಬಿಎಸ್.ಸಿವರೆಗೆ ಖಾದಿ ಟೋಪಿ ತೊಡುತ್ತಿದ್ದೆ ಹಾಗೂ ಸ್ವಾತಂತ್ರ್ಯ ಚಳವಳಿಯಲ್ಲಿ ಪಾಲ್ಗೊಂಡಿದ್ದೆ. 12–13 ವರ್ಷದವನಿದ್ದಾಗಲೇ ಸ್ವಾತಂತ್ರ್ಯ ಚಳವಳಿಗೆ ಸಂಬಂಧಿಸಿದ ಪ್ರತಿಭಟನಾ ಮೆರವವಣಿಗೆಗಳಲ್ಲಿ ಭಾಗವಹಿಸಿದ್ದೆ. ಸಾರ್ವಜನಿಕ ಭಾಷಣಗಳನ್ನೂ ಮಾಡಿದ್ದೆ. ಆದ್ದರಿಂದ ಭಾರತಕ್ಕೆ ಮರಳಲೇಬೇಕು ಎಂಬ ಸಂಕಲ್ಪ ಮನಸ್ಸಿನಲ್ಲಿ ಸಹಜವಾಗಿಯೇ ಇತ್ತು. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ (ಐಐಎಸ್‌ಸಿ) ಸೇರಿ, ನಾಲ್ಕು ವರ್ಷ ಕೆಲಸ ಮಾಡಿದೆ. ಆರು ಪಿಎಚ್.ಡಿ.ಗಳಿಗೆ ಮಾರ್ಗದರ್ಶನ ಮಾಡಿದೆ.
* ಇದುವರೆಗೆ ನೀವು ಎಷ್ಟು ಪಿಎಚ್.ಡಿಗಳಿಗೆ ಮಾರ್ಗದರ್ಶನ ಮಾಡಿದ್ದೀರಿ? ಐಐಎಸ್‌ಸಿಯಲ್ಲಿ ನೀವು ಮಾಡಿದ್ದೇನು?
150ಕ್ಕೂ ಹೆಚ್ಚು ಪಿಎಚ್.ಡಿ.ಗಳಿಗೆ ಮಾರ್ಗ ದರ್ಶನ ಮಾಡಿದ್ದೇನೆ. ‘ಅಲ್ಟ್ರಾ ವಯೊಲೆಟ್ ಅಂಡ್ ವಿಸಿಬಲ್ ಸ್ಪ್ರೆಕ್ಟ್ರೊಸ್ಕೊಪಿ ಫಾರ್ ಕೆಮಿಸ್ಟ್ರಿ’ ಪುಸ್ತಕ ಬರೆದಾಗ ನನಗಿನ್ನೂ 26 ವರ್ಷವಾಗಿತ್ತು. ಆ ಪುಸ್ತಕ ಏಳು ಭಾಷೆಗಳಿಗೆ ಅನುವಾದ ಗೊಂಡಿತು. ಇವೆಲ್ಲವೂ ಸೇರಿ ನನ್ನನ್ನು ಐಐಟಿ, ಕಾನ್ಪುರದ ಪ್ರೊಫೆಸರ್ ಮಾಡಿದರು. ಆಗ ನನಗೆ 30 ವರ್ಷ ಕೂಡ ಆಗಿರಲಿಲ್ಲ.
ಮೇಘನಾದ್‌ ಸಹಾ ಹಾಗೂ ಎಸ್.ಎನ್. ಬೋಸ್ ಸೇರಿದಂತೆ ಭಾರತೀಯ ವಿಜ್ಞಾನದ ಶ್ರೇಷ್ಠನಾಮರೆಲ್ಲಾ ಯುವಕರಾಗಿದ್ದಾಗಲೇ ಪ್ರಾಯೋಗಿಕ ಕೆಲಸ ಮಾಡುವುದನ್ನು ನಿಲ್ಲಿಸಿಬಿಟ್ಟರು. ಕೊನೆಯವರೆಗೂ ವಿಜ್ಞಾನದಲ್ಲಿ ಪ್ರಾಯೋಗಿಕ ಕೆಲಸಗಳಿಗೆ ಒತ್ತು ನೀಡಿದವರೆಂದರೆ ಜಗದೀಶ್ ಚಂದ್ರ ಬೋಸ್ ಹಾಗೂ ಸಿ.ವಿ. ರಾಮನ್. ನನಗೆ ಅಂಥವರನ್ನು ಕಂಡರೆ ಆರಾಧ್ಯ ಭಾವನೆ ಇದೆಯೇ ಹೊರತು ಒಂದೇ ಒಂದು ಮಹತ್ ಕಾರ್ಯ ಮಾಡಿ ಸುಮ್ಮನಾಗುವವರ ಕುರಿತು ಅಲ್ಲ.
* ಐಐಟಿ, ಕಾನ್ಪುರ ಹೇಗಿತ್ತು?
ಐಐಟಿ, ಕಾನ್ಪುರ ತುಂಬಾ ಚೆನ್ನಾಗಿತ್ತು. ಭಾರತದಲ್ಲಿಯೇ ಅತ್ಯುತ್ತಮ ರಾಸಾಯನಿಕ ವಿಜ್ಞಾನ ವಿಭಾಗ ಇದ್ದುದು ಅಲ್ಲಿಯೇ. 1976ರಲ್ಲಿ ನಾನು ಐಐಟಿ ಬಿಟ್ಟೆ. ಅಲ್ಲಿ ನಾನು ಕೆಲಸ ಮಾಡುತ್ತಿದ್ದ ಮಟ್ಟ ನೋಡಿ, ಮಹತ್ತರವಾದ ಏನನ್ನೂ ನನ್ನಿಂದ ಮಾಡಲಾಗುವುದಿಲ್ಲ ಎಂದು ನನಗೇ ಅರಿವಾಯಿತು. ಆಮೇಲೆ ಸತೀಶ್ ಧವನ್ ನನಗೆ ಹೇಳಿದರು: ‘ನೀನು ಭಾರತವನ್ನು ಯಾಕೆ ಬಿಡುತ್ತೀಯಾ? ಬೆಂಗಳೂರಿನ ಐಐಎಸ್‌ಸಿಗೆ ವಾಪಸ್ಸಾಗಿ, ಸೊನ್ನೆಯಿಂದಲೇ ಪ್ರಾರಂಭಿಸಿ ಅಲ್ಲಿ ಒಂದು ಹೊಸ ರಾಸಾಯನಿಕ ವಿಜ್ಞಾನ ವಿಭಾಗವನ್ನು ಕಟ್ಟು. ನನಗೆ ಹಣಕಾಸಿನ ನೆರವು ನೀಡುವುದಂತೂ ಸಾಧ್ಯವಿಲ್ಲ. ನೀನೇ ಅದನ್ನು ಹೊಂದಿಸಿ ತರಬೇಕು. ಆದರೆ, ಅಲ್ಲಿ ನಿನಗೆ ಏನು ಬೇಕೋ ಅದನ್ನು ಮಾಡುವ ಸ್ವಾತಂತ್ರ್ಯ ಕೊಡಬಲ್ಲೆ’.
ನಾನು ಐಐಎಸ್‌ಸಿಯಲ್ಲಿ ಹೊಸ, ಸುಸಜ್ಜಿತ ಸಾಲಿಡ್‌ ಸ್ಟೇಟ್ ಕೆಮಿಸ್ಟ್ರಿ, ಸ್ಟ್ರಕ್ಚರಲ್ ಕೆಮಿಸ್ಟ್ರಿ ಹಾಗೂ ವಸ್ತು ವಿಜ್ಞಾನ ಸಂಶೋಧನಾ ವಿಭಾಗವನ್ನು ಕಟ್ಟಿದೆ. ಈ ಕೇಂದ್ರವನ್ನು ಕಟ್ಟುವ ಅವಕಾಶ ಜೆಎನ್‌ಸಿಎಎಸ್‌ಆರ್‌ನಲ್ಲಿಯೂ ನನಗೆ ಒದಗಿಬಂದಿತ್ತು. ಈಗ ಅದು ಕೂಡ ಅದ್ಭುತ ಕೇಂದ್ರವಾಗಿದೆ. ಇವತ್ತು ಯುವಜನತೆ ಭಾರತದಲ್ಲಿ ಸೌಕರ್ಯಗಳಿಲ್ಲ ಎಂದು ದೂರುವ ಹಾಗಿಲ್ಲ. ಏಕೆಂದರೆ, ನಮ್ಮಲ್ಲಿ ವಿಶ್ವ ದರ್ಜೆಯ ವಸ್ತು ವಿಜ್ಞಾನ ಸಂಶೋಧನಾ ಕೇಂದ್ರಗಳಿವೆ.
ನಾವು ವಿವಿಧ ಮೂಲಗಳಿಂದ ಹಣ ಸಂಗ್ರಹಿಸಿದೆವು. ಉದಾಹರಣೆಗೆ, ವಿಜ್ಞಾನದಲ್ಲಿ ನಾನು ಏನು ಅಂದುಕೊಂಡಿದ್ದೆನೋ ಅದನ್ನು ಮಾಡಲು ಎಮಿರೇಟ್ಸ್‌ನ ಶೇಕ್ ನಮಗೆ 15 ಕೋಟಿ ರೂಪಾಯಿ ಹಣಕಾಸಿನ ನೆರವು ಕೊಟ್ಟರು! ದುರದೃಷ್ಟವಶಾತ್ ಯಾವ ಭಾರತೀಯರೂ ಅಷ್ಟು ಉದಾರವಾಗಿ ನೆರವು ನೀಡಲಿಲ್ಲ.
* ಒಬ್ಬ ಸಾಮಾನ್ಯ ವ್ಯಕ್ತಿಗೆ ನೀವು ಮಾಡುವ ಕೆಲಸ ಏನೆಂದು ಹೇಗೆ ವಿವರಿಸುತ್ತೀರಿ?
ನಾನು ಹೊಸತನದ ವಸ್ತುಗಳನ್ನು ಸೃಷ್ಟಿಸುತ್ತೇನೆ ಅಥವಾ ಹೊಸ ಗುಣಲಕ್ಷಣಗಳಿರುವ ವಸ್ತುಗಳನ್ನು ಸಿದ್ಧಪಡಿಸುತ್ತೇನೆ. ಉದಾಹರಣೆಗೆ ಗ್ರಾಫೀನ್. ಮಾಲಿಬ್ಡೆನಮ್ ಸಲ್ಫೈಡ್‌ನ ದಪ್ಪ ಶೀಟ್‌ಗಳ ಒಂದು ಮಾಲಿಕ್ಯೂಲ್‌ನ ವ್ಯಾಪ್ತಿ ಇತ್ಯಾದಿ. ಈ ಕುರಿತು ಪ್ರಮುಖ ಲೇಖನ ಬರೆದುಕೊಡುವಂತೆ ನನ್ನನ್ನು ಕೇಳಿದ್ದಾರೆ.
* ಅವು ಆಸಕ್ತಿಕರ ಏಕೆ?
ಅವಕ್ಕೆ ಎಲ್ಲಾ ರೀತಿಯ ಹೊಸ ಅಯಸ್ಕಾಂತೀಯ ಮತ್ತು ಎಲೆಕ್ಟ್ರಾನಿಕ್‌ ಗುಣಗಳಿವೆ ಹಾಗೂ ಅವುಗಳ ವಿಷಯಾಸಕ್ತಿ ಕಾಳ್ಗಿಚ್ಚಿನಂತೆ ಹಬ್ಬುತ್ತಿದೆ. ಈ ಬಗೆಗೆ ಉಪನ್ಯಾಸ ನೀಡಲು ನಾನು ಜಪಾನ್‌ಗೆ ಹೋಗುತ್ತಿದ್ದೇನೆ.
* ಇತ್ತೀಚೆಗೆ ನಿಮಗೆ ದ್ಯುತಿ ಸಂಶ್ಲೇಷಣೆಯಲ್ಲಿ ಆಸಕ್ತಿ ಮೂಡಿತು ಎಂದು ಕೇಳಿದೆ.
ಹೌದು. ಇತ್ತೀಚೆಗೆ ನಮ್ಮಲ್ಲಿ ಅನೇಕ ಹುಡುಗ, ಹುಡುಗಿಯರು ನೀರಿನ ಕಣಗಳನ್ನು ಬೇರ್ಪಡಿಸಿ, ಜಲಜನಕ ಹಾಗೂ ಆಮ್ಲಜನಕವನ್ನು ತಯಾರಿಸುತ್ತಿದ್ದಾರೆ. ಜಲಜನಕ ಮಾಡುವ ಅತ್ಯುತ್ತಮ ಮಾರ್ಗವಿದು.
* ಪ್ರಧಾನಿಗಳ ವೈಜ್ಞಾನಿಕ ಸಲಹಾ ಸಮಿತಿಯ ಅಧ್ಯಕ್ಷರಾಗಿ ನಿಮ್ಮ ಅನುಭವಗಳೇನು?
ನನಗೆ ಅವರು ಯಾವುದಕ್ಕೂ ಇಲ್ಲ ಎನ್ನದೇ ಇದ್ದುದರಿಂದ ಒಳ್ಳೆಯ ಅನುಭವಗಳೇ ಆದವು. ನಾವು ಅನೇಕ ಕೆಲಸಗಳನ್ನು ಮಾಡಿದ್ದೇವಾದರೂ ಮನಮೋಹನ್ ಸಿಂಗ್ ಅವರಿಗೆ ಅವುಗಳ ಕುರಿತು ಮಾತನಾಡುವಷ್ಟು ಸಾಮರ್ಥ್ಯವಿಲ್ಲ. ನಾನು ರಾಜಕಾರಣಿಯಲ್ಲ. ಅಂಥ ಭಾಷಣಗಳನ್ನು ಮಾಡುವುದು ನನ್ನಿಂದಲೂ ಸಾಧ್ಯವಿಲ್ಲ. ಆದರೆ, ಹಿಂದಿನ ಸರ್ಕಾರದ ಅವಧಿಯಲ್ಲಿ ವಿಜ್ಞಾನ ಕ್ಷೇತ್ರದಲ್ಲಿ ಅನೇಕ ಒಳ್ಳೆಯ ಕೆಲಸಗಳು ಆಗಿವೆ. ಐದು ಐಐಎಸ್‌ಇಆರ್‌ (ಇಂಡಿಯನ್ ಇನ್ಸ್‌ಟಿಟ್ಯೂಟ್‌ ಆಫ್‌ ಸೈನ್ಸ್‌ ಎಜುಕೆಷನ್‌ ಅಂಡ್ ರಿಸರ್ಚ್‌)ಗಳನ್ನು ಪ್ರಾರಂಭಿಸಿದೆವು, ಫಾಸ್ಟ್ ಬ್ರೀಡರ್ ರಿಯಾಕ್ಟರ್ ಆನ್‌ಲೈನ್‌ಗೆ ಹೋಗಿದ್ದು ಅಥವಾ ಹೊಸ ರಾಕೆಟ್‌ಗಳು ಕ್ರಯೋಜಿನಿಕ್ ಎಂಜಿನ್‌ನಂತೆ ಮೇಲೆ ಹಾರಿದ್ದು ಹೇಗೆ ಅಂದುಕೊಂಡಿರಿ? ಹೊಸ ಪೆಟಾ ಫ್ಲಾಪ್ ಸೂಪರ್ ಕಂಪ್ಯೂಟರ್ ಅಭಿವೃದ್ಧಿಪಡಿಸಲು ನಮಗೆ 5000 ಕೋಟಿ ರೂಪಾಯಿ ಹಣಕಾಸಿನ ನೆರವು ಸಿಕ್ಕಿತ್ತು. ಇದುವರೆಗೆ ಯಾವ ದೇಶವೂ ಇದನ್ನು ಅಭಿವೃದ್ಧಿ ಪಡಿಸಿಲ್ಲ. ಚುನಾವಣೆಗಳು ಸನ್ನಿವೇಶವನ್ನು ಮಂಕಾಗಿಸಿದವು. ಯಾರಿಗೂ ಯಾವುದೇ ಧನಾತ್ಮಕ ಸಂಗತಿ ಕೇಳುವುದು ಬೇಡವಾಯಿತು. ಪುಣೆಯ ಐಐಎಸ್‌ಇಆರ್ ಅನ್ನೇ ನೋಡಿ. ಅಲ್ಲಿ ಪದವಿಪೂರ್ವ ವಿಜ್ಞಾನ ಶಿಕ್ಷಣದಿಂದಲೇ ನಾವು ಮಹತ್ತರವಾದುದನ್ನು ಸಾಧಿಸಲು ಸಾಧ್ಯವಿದೆ. ಕೆಲವರು ಹಳೆಯ ಸರ್ಕಾರದ ಜೊತೆ ಯಾವುದೇ ಕೆಲಸ ಮಾಡಿರುವವರನ್ನು ಕಾಂಗ್ರೆಸ್‌ನವರು ಎಂದು ಕರೆಯಬಹುದು. ಆದರೆ ನಾನು ರಾಜಕೀಯ ವ್ಯಕ್ತಿಯಲ್ಲ. ನಾನು ಹೊಸ ಪ್ರಧಾನಿಯನ್ನೂ ಅರ್ಧ ಗಂಟೆ ಭೇಟಿ ಮಾಡಿದೆ. ಅದು ಒಳ್ಳೆಯ ಅನುಭವ. ದೇಶದ ವಿಜ್ಞಾನದ ಸ್ಥಿತಿಗತಿಯ ಕುರಿತು ಬರೆದು ಕೊಡುವಂತೆ ನನ್ನನ್ನು ಕೇಳಿದರು. ಅದನ್ನು ಬರೆದುಕೊಟ್ಟ ಮೇಲೆ ‘ಧನ್ಯವಾದ’ ಎಂಬ ಪ್ರತಿಕ್ರಿಯೆ ಸಿಕ್ಕಿತು, ಅಷ್ಟೆ.
* ನೀವು ರಾಜ್ಯಸಭಾ ಸದಸ್ಯ ಆಗಲಿಲ್ಲವೇಕೆ?
ಸರ್ಕಾರದಲ್ಲಿ ಕೆಲಸ ಮಾಡಬೇಕು ಎಂದು ನಾನು ಎಂದೂ ಬಯಸಿದವನಲ್ಲ. ಕಾರ್ಯದರ್ಶಿ ಅಥವಾ ರಾಜ್ಯಸಭಾ ಎಂಪಿ ಅಥವಾ ಸಚಿವ ಆಗುವುದು ನನ್ನ ಆಸೆಯಲ್ಲ. ಮೂರು ಸಲ ರಾಜ್ಯಸಭೆಯ ಸ್ಥಾನವನ್ನು ನೀಡಲು ಮುಂದೆಬಂದರು. ನಾನು ನಿರಾಕರಿಸಿದೆ. 1975ರಲ್ಲಿ ಐಐಟಿ, ಕಾನ್ಪುರದಲ್ಲಿ ಇದ್ದಾಗಲೇ ಇಂದಿರಾಗಾಂಧಿ ಅವರು ಕಾರ್ಯದರ್ಶಿ ಸ್ಥಾನ ನೀಡಲು ಮುಂದೆ ಬಂದರು. ಆಗಲೂ ನಾನು ಬೇಡ ಎಂದಿದ್ದೆ. ಅದನ್ನು ಕೇಳಿ ಅವರಿಗೆ ಆಶ್ಚರ್ಯವಾಗಿತ್ತು. ‘ನಾನಿನ್ನೂ ಯುವಕನಾಗಿದ್ದು, ವಿಜ್ಞಾನದಲ್ಲಿ ಒಂದಿಷ್ಟು ಕೆಲಸಗಳನ್ನು ಮಾಡಬೇಕೆಂದಿದ್ದೇನೆ, ಕಾರ್ಯದರ್ಶಿ ಆಗಲು ಇಷ್ಟವಿಲ್ಲ’ ಎಂದಿದ್ದೆ. ಆನಂತರವೂ ಅವರು ನನ್ನ ಬಗೆಗೆ ಉತ್ತಮ ಭಾವನೆಯನ್ನೇ ಹೊಂದಿದ್ದರು ಹಾಗೂ ಪದ್ಮಭೂಷಣ ಪ್ರಶಸ್ತಿಗೆ ನನ್ನ ಹೆಸರನ್ನು ಸೂಚಿಸಿದರು. ವಿಜ್ಞಾನ ಮತ್ತು ತಂತ್ರಜ್ಞಾನದ ರೋಚಕತೆಯನ್ನು ಅನುಭವಿಸುವುದರಲ್ಲಿ ರಾಜೀವ್ ಗಾಂಧಿ ಅವರನ್ನು ಮೀರಿಸುವವರು ಯಾರೂ ಇಲ್ಲ. ನಾವಿಬ್ಬರು ಒಟ್ಟಿಗೆ ಅನೇಕ ಕೆಲಸಗಳನ್ನು ಮಾಡಿದ್ದೇವೆ.
* ವಿ.ಪಿ. ಸಿಂಗ್, ಪಿ.ವಿ. ನರಸಿಂಹ ರಾವ್ ಅಥವಾ ವಾಜಪೇಯಿ ಅವರ ಜೊತೆಗಿನ ಅನುಭವಗಳು ಹೇಗಿದ್ದವು?
ಅವರೆಲ್ಲಾ ಪ್ರಧಾನಿಗಳಾಗಿದ್ದಾಗ ವೈಜ್ಞಾನಿಕ ಸಲಹಾ ಸಮಿತಿ ಇರಲೇ ಇಲ್ಲ. ಪಿ.ವಿ. ನರಸಿಂಹ ರಾವ್ ಅವರ ಕಾಲಘಟ್ಟ ತೀರಾ ಕೆಟ್ಟದಾಗಿತ್ತು. ಮನಮೋಹನ್ ಸಿಂಗ್ ಅವರ ಕಾಲದಲ್ಲೂ ನಾವು ಅನೇಕ ಕೆಲಸಗಳನ್ನು ಮಾಡಿದೆವು. ಆರು ವಾರಗಳಿಗೊಮ್ಮೆ ನಾವು ಅವರನ್ನು ಭೇಟಿ ಮಾಡುತ್ತಿದ್ದೆವು. ಆಗ ಅವರು, ‘ಪ್ರೊಫೆಸರ್ ರಾವ್, ನನ್ನ ಅನುಮತಿ ಸಿಕ್ಕಿದೆ ಎಂದುಕೊಂಡು ನೀವು ನಿಮ್ಮ ಕೆಲಸ ಮುಂದುವರಿಸಿ’ ಎನ್ನುತ್ತಿದ್ದರು. ಅವರು ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡು, ನಂಬುತ್ತಿದ್ದರು. ನಂಬಿಕೆ ಇಲ್ಲದ ಮಂತ್ರಿಗಳ ಜೊತೆ ಹೆಣಗಾಡುವುದು ಕಷ್ಟ. ‘ಸಚಿವರ ಜೊತೆ ಮುಖ್ಯೋಪಾಧ್ಯಾಯರ ರೀತಿ ನಡೆದುಕೊಳ್ಳಬೇಕು’ ಎಂದು ರಾಜೀವ್ ಗಾಂಧಿ ಆಗಾಗ ಹೇಳುತ್ತಿದ್ದರು. ಅವರ ಮಾತು ಸತ್ಯ. ಡಾ. ಸಿಂಗ್ ಸಂಕೋಚ ಸ್ವಭಾವದ ಸಜ್ಜನ. ಅದು ಅವರ ದೌರ್ಬಲ್ಯವೂ ಆಗಿತ್ತು. ರಾಜಕೀಯದಲ್ಲಿದ್ದುಕೊಂಡೂ ಹಾಗಿರುವುದು ಸರಿಯಲ್ಲವೇನೋ? ರಾಜೀವ್ ಗಾಂಧಿ ಅವರಿಗೆ ಆಸಕ್ತಿ ಇತ್ತು, ನಿರ್ಣಯಗಳನ್ನು ಕೈಗೊಳ್ಳುವುದರಲ್ಲೂ ಮುಂದಿದ್ದರು. ಅವರು ಮತ್ತಷ್ಟು ಅವಧಿಗೆ ಮುಂದುವರಿದಿದ್ದಿದ್ದರೆ ಇನ್ನಷ್ಟು ಕೆಲಸಗಳು ಆಗುತ್ತಿದ್ದವೇನೊ...
* ಈಗ ನಿಮ್ಮ ವೈಜ್ಞಾನಿಕ ಆಸಕ್ತಿಗಳೇನು?
ಕೃತಕ ದ್ಯುತಿ ಸಂಶ್ಲೇಷಣೆ, ನ್ಯಾನೊ ಶೀಟ್‌ಗಳು, ನಿರವಯವ ನ್ಯಾನೊ ಶೀಟ್‌ಗಳ ಹೊಸ ಭೌತ ವಿಜ್ಞಾನ ಇವೆಲ್ಲವೂ ಅಚ್ಚರಿ ಹುಟ್ಟಿಸುವಂತಿವೆ. ಇವತ್ತಷ್ಟೇ ನಾನು ಒಂದು ಪಿಎಚ್.ಡಿ ಕುರಿತು ಕೇಳಿಬಂದೆ. ಡಾ. ವಾಘ್‌ಮಾರೆ ಎಂಬ ಅದ್ಭುತ ಸಂಶೋಧನಾ ವ್ಯಕ್ತಿ ಅಲ್ಲಿದ್ದರು. ಅವರ ವಿದ್ಯಾರ್ಥಿ ಅನೇಕ ಮಹತ್ವದ ಲೆಕ್ಕಾಚಾರಗಳನ್ನು ಮಂಡಿಸಿದ್ದರು. ವಿಜ್ಞಾನ ಮುಂದುವರಿಯುವುದೇ ಹೀಗೆ. 80ರ ವಯಸ್ಸಿನಲ್ಲೂ ಹೀಗೆ ಸಾಗುತ್ತಲೇ ಇದೆ.
ಸಂದರ್ಶಕ ಶಿವಾನಂದ ಕಣವಿ ಥಿಯರಿಟಿಕಲ್ ಫಿಸಿಸಿಸ್ಟ್ ಹಾಗೂ ಬಿಸಿನೆಸ್ ಪತ್ರಕರ್ತ. ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ನಲ್ಲಿ ಉಪಾಧ್ಯಕ್ಷರಾಗಿಯೂ ಅವರು ಕೆಲಸ ಮಾಡಿದ್ದರು. ‘ಸ್ಯಾಂಡ್ ಟು ಸಿಲಿಕಾನ್’ ಹಾಗೂ ‘ರಿಸರ್ಚ್ ಬೈ ಡಿಸೈನ್: ಇನೊವೇಷನ್ ಅಂಡ್ ಟಿಸಿಎಸ್’ ಎಂಬ ಕೃತಿಗಳನ್ನೂ ಬರೆದಿದ್ದಾರೆ. ಅವರ ಇ-ಮೇಲ್: skanavi@gmail.com, ಬ್ಲಾಗ್: www.reflections-shivanand.blogspot.com/

Monday, October 20, 2014

ದೀಪದ ಲೋಕ ಬೆಳಗಿದವರಿಗೆ ನೊಬೆಲ್‌Prof Shuji Nakamura, University of California, Santa Barbara


ನಮ್ಮ ಭೂಮಂಡಲಕ್ಕೆ ಬಿಸಿಯೇರಿ ಜ್ವರ ಬಂದು ಏನೆಲ್ಲಾ ಏರುಪೇರುಗಳಾಗುತ್ತಿರುವ ಕಾಲ ಮಾನ ಇದು. ಇಂತಹ ಸಂದರ್ಭದಲ್ಲೇ ವಸುಂಧರೆಯ ಧಗೆಯನ್ನು ಒಂದಷ್ಟು ಮಟ್ಟದ ಲ್ಲಾದರೂ ತಗ್ಗಿಸುವ ಹಾಗೂ ಶಕ್ತಿಯ ದಕ್ಷ ಬಳಕೆಗೆ ಕಾರಣವಾದ ಎಲ್‌ಇಡಿ (ಲೈಟ್‌ ಎಮಿಟಿಂಗ್‌ ಡಯೋಡ್‌) ದೀಪಗಳನ್ನು ಕಂಡುಹಿಡಿದ ಸಂಶೋಧಕರಿಗೆ 2014ನೇ ಸಾಲಿನ ಪ್ರತಿಷ್ಠಿತ ನೊಬೆಲ್‌ ಭೌತಶಾಸ್ತ್ರ ಪುರಸ್ಕಾರ ಸಂದಿದೆ. ಜಪಾನ್‌ ಮೂಲದ ಅಮೆರಿಕ ವಾಸಿಗಳಾದ ನಾಕಮುರ, ಅಕಸಾಕಿ ಮತ್ತು ಅಮೊನೊ ಈ ಮನ್ನಣೆಗೆ ಪಾತ್ರರಾದ ಮೂವರು ವಿಜ್ಞಾನಿಗಳು.
ಈ ಆವಿಷ್ಕಾರಕ್ಕೆ ಪ್ರಶಸ್ತಿಯ ಮುಕುಟ ತೊಡಿಸಿರುವ ರಾಯಲ್‌ ಸ್ವೀಡಿಷ್‌ ಅಕಾಡೆಮಿ ಆಫ್‌ ಸೈನ್ಸಸ್‌ ಹೀಗೆ ಹೇಳಿದೆ– ‘ಈ ಮೂವರು 1990ರ ದಶಕದ ಆರಂಭದಲ್ಲಿ ತಾವೇ ಆವಿಷ್ಕರಿಸಿದ ಅರೆವಾಹಕಗಳಿಂದ ಪ್ರಕಾಶಮಾನವಾದ ನೀಲಿ ಬೆಳಕಿನ ಕಿರಣಗಳನ್ನು ಹೊರಹೊಮ್ಮಿಸುವಲ್ಲಿ ಯಶಸ್ವಿಯಾದರು. ವಿದ್ಯುತ್‌ ದೀಪಗಳ ತಾಂತ್ರಿಕತೆಯಲ್ಲಿ ಮೂಲಭೂತ ಪರಿವರ್ತನೆಗೆ ಇದು ಚಾಲಕ ಶಕ್ತಿಯಾಯಿತು. ಕೆಂಪು ಮತ್ತು ಹಸಿರು ಕಿರಣಗಳನ್ನು ಸೂಸುವ ಡಯೋಡ್‌ಗಳು ಅದಕ್ಕೂ ಮುಂಚೆ ಎಷ್ಟೋ ವರ್ಷಗಳಿಂದ ಇದ್ದವು.
ಆದರೆ ನೀಲಿ ಕಿರಣಗಳನ್ನು ಸೂಸುವ ದೀಪವಿಲ್ಲದೆ ಬಿಳಿ ಬಣ್ಣದ ಎಲ್‌ಇಡಿ ದೀಪಗಳನ್ನು ಕಂಡುಹಿಡಿಯುವುದು ಅಸಾಧ್ಯವಾಗಿತ್ತು. ವಿಜ್ಞಾನ ಮತ್ತು ಉದ್ಯಮ ರಂಗದಲ್ಲಿ ಸಾಕಷ್ಟು ಸಂಶೋಧನೆ ನಡೆದಿದ್ದವಾದರೂ ನೀಲಿ ಕಿರಣ ಸೂಸುವ ಎಲ್‌ಇಡಿ ದೀಪದ ಆವಿಷ್ಕಾರವು ಮೂವತ್ತು ವರ್ಷಗಳಿಂದ ಸವಾಲಾಗಿ ಕಾಡಿತ್ತು. ಸರಿಯಾದ ವಿದ್ಯುತ್‌ ಸೌಲಭ್ಯವಿಲ್ಲದ ಜಗತ್ತಿನ 150 ಕೋಟಿಗಿಂತಲೂ ಹೆಚ್ಚಿನ ಜನರ ಬದುಕಿನ ಗುಣಮಟ್ಟವನ್ನು ಸುಧಾರಿಸುವ ಭಾರಿ ಆಶಾಭಾವ ಈ ಎಲ್‌ಇಡಿ ದೀಪಗಳಿಂದಾಗಿ ಮೂಡಿದೆ’.
ಹಾಗಾದರೆ, ನಮ್ಮ ಬದುಕಿನ ಶೈಲಿಯಲ್ಲಿ ಕ್ರಾಂತಿಕಾರಕ ಬದಲಾವಣೆಗೆ ಕಾರಣವಾಗಿರುವ ಅರೆವಾಹಕ ಬಿಲ್ಲೆಗಳು (ಸೆಮಿಕಂಡಕ್ಟರ್‌ ಚಿಪ್‌) ನಮಗೆ ಬೆಳಕನ್ನೂ ನೀಡುತ್ತಿವೆಯೇ?– ಎಂಬ ಪ್ರಶ್ನೆ  ಅನೇಕರನ್ನು ಕಾಡಬಹುದು. ಹೌದು ಅರೆವಾಹಕ ಬಿಲ್ಲೆಗಳು ಬೆಳಕನ್ನೂ ಸೂಸಬಲ್ಲವು ಎಂಬುದು ನಿಜ. ಆದರೆ ಈ ಅರೆವಾಹಕ ಬಿಲ್ಲೆಗಳು ಎಲೆಕ್ಟ್ರಾನಿಕ್‌ ಸಾಧನಗಳಲ್ಲಿ ಬಳಕೆಯಾಗುವ ಅರೆವಾಹಕ ಬಿಲ್ಲೆಗಳಂತೆ ಸಿಲಿಕಾನ್‌ನಿಂದ ತಯಾರಾದವುಗಳಲ್ಲ. ಬದಲಿಗೆ ಗ್ಯಾಲಿಯಂ, ಇಂಡಿಯಂ, ಆರ್ಸೆನಿಕ್‌, ಸಾರಜನಕ, ಅಲ್ಯುಮಿನಿಯಂ, ರಂಜಕದ ಮಿಶ್ರಲೋಹಗಳನ್ನು ಬಳಸಿ ತಯಾರಿಸಲಾದ ಸಂಯುಕ್ತ ಅರೆವಾಹಕಗಳು ಇವು. ಅತ್ಯಂತ ಕಡಿಮೆ ಶಾಖವನ್ನು ಹೊರಹೊಮ್ಮಿಸುವ ಈ ಎಲ್‌ಇಡಿ ತಂತ್ರಜ್ಞಾನವು ಎಲ್ಲೆಡೆಗೂ ಕ್ರಿಪ್ರವಾಗಿ ವ್ಯಾಪಿಸುತ್ತಿದೆ.
ಕೆಲವು ಅರೆವಾಹಕಗಳ ಮೂಲಕ ವಿದ್ಯುತ್ತನ್ನು ಹಾಯಿಸಿದಾಗ ಅವು ಬೆಳಕಿನ ಕಿರಣಗಳನ್ನು ಸೂಸುತ್ತವೆ ಎಂಬುದು 20ನೇ ಶತಮಾನದ ಆರಂಭದಲ್ಲಿಯೇ ಗೊತ್ತಾಗಿತ್ತು. ಆದರೆ ಅಂತಹ ಕಿರಣಗಳನ್ನು ಪಡೆಯಲು ಆಗುತ್ತಿದ್ದ ವೆಚ್ಚ ಹಾಗೂ ಅವುಗಳ ಕ್ಷಮತೆ ತೀರಾ ಕಡಿಮೆ ಇತ್ತು. ಈ ತೊಡಕುಗಳನ್ನು ನೀಗಿಕೊಳ್ಳಲು ಹೆಚ್ಚುಕಡಿಮೆ ಒಂದು ಶತಮಾನ ಕಾಲವೇ ಹಿಡಿಯಿತು!
ಹೀಗೆ ಅಧಿಕ ಕ್ಷಮತೆಯ ಹಾಗೂ ದುಬಾರಿಯಲ್ಲದ ವೆಚ್ಚದಲ್ಲಿ ಬೆಳಕು ಹೊಮ್ಮಿಸುವ, ‘ಡೈರೆಕ್ಟ್‌ ಬ್ಯಾಂಡ್‌ ಸೆಮಿಕಂಡಕ್ಟರ್‌್ಸ’ ಎಂದೇ ಹೆಸರಾಗಿರುವ ಅರೆವಾಹಕಗಳು ‘ಅರೆವಾಹಕ ಲೇಸರ್‌ ಕಿರಣ’ಗಳ ಅಭಿವೃದ್ಧಿಗೆ ಮುನ್ನುಡಿ ಬರೆದವು. ಇವತ್ತು ನಮ್ಮ ದಿನದ ಬದುಕಿನಲ್ಲಿ ಹಾಸುಹೊಕ್ಕಾಗಿರುವ ಸಿ.ಡಿ ಪ್ಲೇಯರ್‌, ಡಿವಿಡಿ ಪ್ಲೇಯರ್‌, ಟಿ.ವಿ ರಿಮೋಟ್‌ ಇನ್ನಿತರ ಉಪಕ ರಣಗಳ ಹಿಂದಿನ ಚಾಲಕ ಶಕ್ತಿಯಾಗಿ ಕೆಲಸ ಮಾಡುತ್ತಿರುವುದು ಈ ಅಗ್ಗದ ದರದ ಅರೆ ವಾಹಕಗಳೇ. ಕಚೇರಿಗಳಲ್ಲಿನ ‘ಲ್ಯಾನ್‌’  ಕಂಪ್ಯೂಟರ್‌ ಜಾಲದಿಂದ ಹಿಡಿದು ಜಲಾಂತ ರ್ಗಾಮಿಯ ಆಪ್ಟಿಕ್‌ ಕೇಬಲ್‌ ಮೂಲಕ ಅತ್ಯಧಿಕ ವೇಗದಲ್ಲಿ ದತ್ತಾಂಶಗಳನ್ನು ರವಾನಿಸಲು ನೆರವಿಗೆ ಬರುತ್ತಿರುವುದು ಕೂಡ ಇಂತಹ ಅರೆವಾಹಕಗಳೇ.
ಇದೇ ವೇಳೆ ವಿದ್ಯುತ್ತನ್ನು ನೇರವಾಗಿ ಬೆಳಕಾಗಿ ಪರಿವರ್ತಿಸುವ ಈ ಶೋಧನೆಯು ಅದನ್ನೇ ತದ್ವಿರುದ್ಧ ದಿಕ್ಕಿನಲ್ಲಿ ಯೋಚಿಸಲೂ ಪ್ರೇರಣೆಯಾಯಿತು. ಅಂದರೆ, ಬೆಳಕಿನಿಂದಲೇ ನೇರವಾಗಿ ವಿದ್ಯುತ್‌ ಪಡೆಯುವುದು ಕೂಡ ಸಾಧ್ಯವಾಗಬೇಕಲ್ಲವೇ?– ಎಂಬ ಪ್ರಶ್ನೆಯನ್ನು ತಜ್ಞರಲ್ಲಿ ಮೂಡಿಸಿತು. ಈ ಚಿಂತನೆಯ ಫಲವಾಗಿಯೇ ಇಂದು ಬೆಳಕನ್ನು ವಿದ್ಯುತ್‌ ಆಗಿ ಪರಿವರ್ತಿಸುವ ಅಧಿಕ ದಕ್ಷತೆಯ ಸೌರ ಫಲಕಗಳು ಅಭಿವೃದ್ಧಿಯಾಗಿವೆ ಎನ್ನಬಹುದು.
ಯಾವ ಡಯೋಡ್‌ಗಳು ತಮ್ಮ ಮೂಲಕ ವಿದ್ಯುತ್‌ ಹಾಯಿಸಿದಾಗ ಬೆಳಕು ಸೂಸುತ್ತವೋ ಅಂತಹ ಡಯೋಡ್‌ಗಳಿಗೆ ಎಲ್‌ಇಡಿ ಎನ್ನಲಾಗುತ್ತದೆ. ದೀಪಾವಳಿ, ಗಣೇಶ ಚೌತಿ, ಕ್ರಿಸ್‌ಮಸ್ ಸಂಭ್ರಮಗಳ ವೇಳೆ ಇಂದು ನಾವು ಉಪಯೋಗಿಸುತ್ತಿರುವ ಮಿನುಗು ದೀಪಗಳೆಲ್ಲಾ ಈ ಎಲ್‌ಇಡಿಗಳೇ. ಡಿಜಿಟಲ್‌ ಕ್ಯಾಮೆರಾ, ಕ್ಯಾಮ್‌ಕಾರ್ಡರ್‌, ಡಿವಿಡಿ ಪ್ಲೇಯರ್‌, ಟಿ.ವಿ ಇತ್ಯಾದಿಗಳು ಚಾಲನಾ ಸ್ಥಿತಿಯಲ್ಲಿವೆಯೋ ಅಥವಾ ಸ್ತಬ್ಧಾವಸ್ಥೆಯಲ್ಲಿವೆಯೋ ಎಂಬುದನ್ನು ಸೂಚಿಸುವ ಪುಟಾಣಿ ಚುಕ್ಕೆಯಂತಹ ಹಸಿರು ಹಾಗೂ ಕೆಂಪು ಬಣ್ಣದ ದೀಪಗಳು ಕೂಡ ಎಲ್‌ಇಡಿಗಳೇ.
ಎಲ್‌ಇಡಿ ಅಭಿವೃದ್ಧಿಗೆ ಕಾರಣವಾಗಿರುವ ಈ ಸಂಯುಕ್ತ ಅರೆವಾಹಕಗಳನ್ನು ನಮ್ಮ ಕಂಪ್ಯೂಟರ್‌, ಮೊಬೈಲ್‌ ಇನ್ನಿತರ ಎಲೆಕ್ಟ್ರಾನಿಕ್‌ ಗ್ಯಾಜೆಟ್‌ಗಳಿಗೆ ಬಲ ತುಂಬಿರುವ ಸಿಲಿಕಾನ್‌ ಚಿಪ್‌ನ ‘ಸೋದರ ಬಂಧು’ ಎಂದು ಕರೆಯಬಹುದು. ದಿನದ ಬದುಕಿನಲ್ಲಿ ಇಂತಹ ಅರೆವಾಹಕಗಳ ಉಪಯೋಗ ದಿನೇದಿನೇ ಹೆಚ್ಚುತ್ತಲೇ ಇದೆ.
ಕೆಂಪು, ಕಿತ್ತಳೆ, ಹಳದಿ ವರ್ಣದ ಪ್ರಕಾಶಮಾನ ಬೆಳಕಿನ ಕಿರಣಗಳನ್ನು ಸೂಸುವ ಎಲ್‌ಇಡಿ ಗಳನ್ನು ಮೊದಲೇ ಆವಿಷ್ಕರಿಸಲಾಗಿತ್ತು. ಆದರೆ ಹಸಿರು ಮತ್ತು ನೀಲಿ ಬಣ್ಣ ಸೂಸುವ ಎಲ್‌ಇಡಿ ಗಳ ಆವಿಷ್ಕಾರ ತಜ್ಞರ ಕೈಗೆ ಎಟುಕಿರಲಿಲ್ಲ. ವಿಜ್ಞಾನಿ ಶುಜಿ ನಾಕಮುರ 1990 ದಶಕದ ಮಧ್ಯ ಭಾಗದಲ್ಲಿ ಮೊದಲಿಗೆ ನೀಲಿ ಕಿರಣ ಸೂಸುವ ಹಾಗೂ ನಂತರ ಬಿಳಿ ಕಿರಣ ಹೊಮ್ಮಿಸುವ ಎಲ್‌ಇಡಿ ಕಂಡುಹಿಡಿಯುವ ತನಕ ಅದಕ್ಕಾಗಿ ಕಾಯಬೇಕಾಯಿತು. ನಾಕಮುರ ಅವರ ಈ ಬೆಳಕಿನ ಶೋಧನೆಯು ಸಂಬಂಧಿಸಿದ ಸಂಶೋಧನಾ ರಂಗವನ್ನೇ ಬೆಳಗಿಸಿತು; ಅತ್ಯಂತ ಕ್ಷಿಪ್ರ ಬೆಳವಣಿಗೆಗಳಿಗೆ ಇಂಬು ನೀಡಿತು. ನಾಕಮುರ ಸಾಧನೆಯ ಹಾದಿ ಹೂವಿನ ಹಾಸಿಗೆಯಾ ಗಿರಲಿಲ್ಲ. ಅವರಿಗೆ ಅಷ್ಟೇನೂ ಹಣಕಾಸು ನೆರವಿನ ಒತ್ತಾಸೆ ಇರಲಿಲ್ಲ. ಜತೆಗೆ ನೀಲಿ ಕಿರಣ ಸೂಸುವ ಎಲ್‌ಇಡಿಗಳನ್ನು ಅಭಿವೃದ್ಧಿಪಡಿಸುವ ತಮ್ಮ ಯತ್ನದಲ್ಲಿ ಹಲವಾರು ವರ್ಷಗಳ ಕಾಲ ಪದೇಪದೇ ವಿಫಲವಾಗಿದ್ದರು.
ನಾಕಮರ ಅವರು ಕೆಲಸ ಮಾಡುತ್ತಿದ್ದ ‘ನಿಚಿಯಾ’ ಕಂಪೆನಿಯು ಬಿಳುಪು ಎಲ್‌ಇಡಿ ಮತ್ತು ಲೇಸರ್ ಉತ್ಪನ್ನಗಳ ಅಭಿವೃದ್ಧಿಯಲ್ಲಿ ಇಂದು ಜಗತ್ತಿನಲ್ಲೇ ಮುಂಚೂಣಿಯಲ್ಲಿದೆ. ಕೆಲವು ವರ್ಷಗಳ ಹಿಂದೆ ಈ ಕಂಪೆನಿಯನ್ನು ತೊರೆದ ನಾಕಮುರ ಈಗ ಸಾಂತಾ ಬಾರ್ಬರಾದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಬೋಧಕರಾಗಿದ್ದು, ಗ್ಯಾಲಿಯಂ ನೈಟ್ರೇಡ್‌ ಹಾಗೂ ಇತರ ಸಂಯುಕ್ತ ಅರೆವಾಹಕಗಳ ಬೆಳಕಿನ ಗುಣಗಳ ಸಂಶೋಧನೆಯಲ್ಲಿ ತೊಡಗಿದ್ದಾರೆ. ಅವರ ಸಹೋದ್ಯೋಗಿ ಉಮೇಶ್‌ ಮಿಶ್ರ ಅವರು ಮೊಬೈಲ್‌ ಕಂಪೆನಿಗಳು ಹಾಗೂ ಅಮೆರಿಕದ ರಕ್ಷಣಾ ಇಲಾಖೆಗೆ ಬೇಕಾಗಿರುವ ಅಧಿಕ ಶಕ್ತಿಯ ಟ್ರಾನ್ಸಿಸ್ಟರ್‌ಗಳ ಆವಿಷ್ಕಾರದ ದಿಸೆಯಲ್ಲಿ ಗ್ಯಾಲಿಯಂ ನೈಟ್ರೈಡ್‌ನ ಎಲೆಕ್ಟ್ರಾನಿಕ್‌ ಗುಣಗಳ ಸಂಶೋಧನೆಯಲ್ಲಿ ಮಗ್ನರಾಗಿದ್ದಾರೆ. ನಾಕಮುರ ಮತ್ತು ಮಿಶ್ರ ಅವರು ಸೇರಿ ಸಾಂತಾ ಬಾರ್ಬರಾದಲ್ಲಿ ಗ್ಯಾಲಿಯಂ ನೈಟ್ರೇಡ್‌ನ ಕಟಿಬದ್ಧ ಸಂಶೋಧಕರೇ ಪಡೆಯನ್ನೇ ಕಟ್ಟಿದ್ದಾರೆ ಎಂಬುದು ಕೂಡ ಗಮನಾರ್ಹ.
ಎಲ್‌ಇಡಿಯನ್ನು ವಿದ್ಯುತ್‌ ದೀಪವಾಗಿ ಬಳಸುವುದರಿಂದ ಹಲವು ಉಪಯೋಗಗಳಿವೆ. ಬುರುಡೆ ಗಾಜಿನ ಬಲ್ಬು, ಟ್ಯೂಬ್‌ಲೈಟ್‌– ಸಿಎಫ್‌ಎಲ್‌ನಂತಹ ಫ್ಲೋರೆಸೆಂಟ್‌ ದೀಪಗಳಿಗಿಂತ ಹೆಚ್ಚಿನ ವಿದ್ಯುತ್ತನ್ನು ಇದು ಬೆಳಕಾಗಿ ಪರಿವರ್ತಿಸುತ್ತದೆ. ಬುರುಡೆ ಗಾಜಿನ ಬಲ್ಬುಗಳಲ್ಲಿ ಶೇ 90ರಷ್ಟು ವಿದ್ಯುತ್‌ ಶಕ್ತಿಯು ಶಾಖ ಸ್ವರೂಪದಲ್ಲಿ ನಷ್ಟವಾಗುತ್ತದೆ. ಅಲ್ಲದೇ ಇವುಗಳ ಬಾಳಿಕೆ ಅವಧಿ ಕೂಡ ತುಂಬಾ ಹೆಚ್ಚು. ಎಲ್‌ಇಡಿ ಬಲ್ಬು  ಒಂದು ಲಕ್ಷ ಗಂಟೆಗಳ ಕಾಲ ಬೆಳಕು ಸೂಸಬಲ್ಲದು. ಅಂದರೆ ಒಂದೇ ಸಮನೆ ಉರಿಸಿದರೂ ಅವು 12 ವರ್ಷ ಕಾಲ ಬೆಳಗಬಲ್ಲವು! ಬುರುಡೆ ಗಾಜಿನ ಬಲ್ಬುಗಳ ಬಾಳಿಕೆ ಅವಧಿ ಒಂದು ಸಾವಿರ ಗಂಟೆಗಳಾದರೆ ಫ್ಲೋರೊಸೆಂಟ್‌ ದೀಪಗಳ ಬಾಳಿಕೆ ಅವಧಿ ಹತ್ತು ಸಾವಿರ ಗಂಟೆಗಳಾಗಿದೆ.
ಎಲ್‌ಇಡಿ ದೀಪವು ಅತ್ಯಂತ ಕಡಿಮೆ ವಿದ್ಯುತ್‌ ಬಳಸಿಕೊಂಡು ಬೆಳಗಬಲ್ಲದು. ಹೀಗಾಗಿ ಎಲ್‌ಇಡಿ ಫ್ಲ್ಯಾಶ್‌ಲೈಟ್‌ಗಳಲ್ಲಿನ ಬ್ಯಾಟರಿಗಳು ಬಹು ದೀರ್ಘ ಕಾಲ ಬಾಳಿಕೆ ಬರುತ್ತವೆ. ಕುಗ್ರಾಮಗಳಲ್ಲಿ, ಚಾರಣಗಳ ಸಂದರ್ಭದಲ್ಲಿ ಅಥವಾ ಪ್ರಕೃತಿ ವಿಕೋಪದ ಸಂದರ್ಭಗಳಲ್ಲಿ ಇವುಗಳ ಅತ್ಯಂತ ಹೆಚ್ಚು ಉಪಯೋಗಿ.
ಇಷ್ಟೆಲ್ಲಾ ಅನುಕೂಲಗಳಿರುವ ಎಲ್‌ಇಡಿ ತಾಂತ್ರಿಕತೆಯಲ್ಲೂ ಕೆಲವು ಅರೆಕೊರೆಗಳಿವೆ. ಅವುಗಳಲ್ಲಿ ಮೂರು ಮುಖ್ಯವಾದವು. ಮೊದಲನೆಯಾದಾಗಿ, ಇವು ಸೂಸುವ ಕಿರಣಗಳಿಗೆ ಪ್ರಖರತೆ ಇಲ್ಲವಾದ್ದರಿಂದ ಹೆಚ್ಚಿನ ಪ್ರಕಾಶಮಾನವಾದ ಬೆಳಕು ಅಗತ್ಯವಿರುವ ಕಡೆಗಳಲ್ಲಿ ಇವನ್ನು ಬಳಸಲಾಗದು. ನಂತರದ ತೊಡಕು, ಇವುಗಳ ಬೆಲೆ ದುಬಾರಿ ಎಂಬುದು. ಕೊನೆಯದಾಗಿ, ಎಲ್‌ಇಡಿಗಳು ಒಂದು ನಿರ್ದಿಷ್ಟ ದಿಕ್ಕಿನಲ್ಲಿ, ಅಂದರೆ ಅದರ ಬೆಳಕು ನಾವು ಕೆಲಸ ಮಾಡುವ ಮೇಜಿನ ಕಡೆಗೋ, ಅಡುಗೆ ಒಲೆಯ ಕಡೆಗೋ ಹೆಚ್ಚಾಗಿ ಬೀಳುವಂತೆ ಮಾಡಿಕೊಳ್ಳಬಹುದಾದರೂ ಇಡೀ ಕೊಠಡಿಯನ್ನು ಸಮಾನವಾಗಿ ಬೆಳಗಿಸಬೇಕೆಂದರೆ ಹೆಚ್ಚೆಚ್ಚು ದೀಪಗಳನ್ನು ಬಳಸಬೇಕಾಗುತ್ತದೆ.
ತುಂಬಾ ಪ್ರಕಾಶಮಾನವಾದ ದೀಪಗಳಿಗಾಗಿ ಹಾಗೂ ಎಲೆಕ್ಟ್ರಾನಿಕ್‌್ಸ ಉದ್ಯಮದ ಅಭಿವೃದ್ಧಿಗಾಗಿ ತವಕಿಸುತ್ತಿರುವ ಅಮೆರಿಕದ ರಕ್ಷಣಾ ಇಲಾಖೆ ಮತ್ತು ಇಂಧನ ಇಲಾಖೆಗಳು ಅದನ್ನು ಸಾಧ್ಯವಾಗಿಸುವ ಅರೆವಾಹಕಗಳ ಸಂಶೋಧನೆಗಾಗಿ ಸಾಕಷ್ಟು ನಿಧಿಯನ್ನು ಕೊಡಮಾಡುತ್ತಿವೆ. ಹೀಗಾಗಿ ಈ ಕ್ಷೇತ್ರದಲ್ಲಿ ಭಾರಿ ಚಟುವಟಿಕೆಗಳು ನಡೆಯುತ್ತಿವೆ.
ಕನ್ನಡಕ್ಕೆ: ವೆಂಕಟೇಶ್‌ ಪ್ರಸಾದ್ ಬಿ.ಎಸ್‌.

Thursday, October 9, 2014

Light Emitting Diodes and Physics Nobel

My piece on light emitting diodes and 2014 Nobel Prize on rediff.com at:
http://www.rediff.com/news/report/why-blue-leds-are-worth-a-nobel-prize/20141009.htm