Sunday, January 20, 2019

Interview Prof S Settar on art and artisans of Ancient India


ಸಂಸ್ಕೃತಿ ಸಂಶೋಧಕ ಪ್ರಾ. ಡಕ್ಷರ ಶೆಟ್ಟರ ಅವರೊಂದಿಗೆ ಒಂದು ಸಂಭಾಷಣೆ

ಸದ್ಧ್ಯ NIAS ನಲ್ಲಿ ಅತಿಥಿ ಪ್ರಾಧ್ಯಾಪಕರಾದ ಷಡಕ್ಷರ ಶೆಟ್ಟರ ಅವರು ಪ್ರಸಿದ್ಧ ಇತಿಹಾಸಕಾರರು. ಅನೇಕ ವಿಷಯಗಳೊಡನೆ ಅವರು  ಭಾರತೀಯ ಶಿಲ್ಪ, ಶಿಲ್ಪಿಗಳು, ಲಿಪಿಗಳ ಬೆಳವಣಿಗೆ ಮತ್ತು ಲಿಪಿಕಾರರ ಬಗೆಗೆ ಅಮೂಲ್ಯವಾದ ಸಂಶೋಧನೆಗಳನ್ನು ಮಾಡಿದ್ದಾರೆ. ಶಿವಾನಂದ ಕಣವಿ ಅವರನ್ನು ಇತ್ತೀಚೆಗೆ NIASನಲ್ಲಿ ಭೇಟಿ ಮಾಡಿ ಹಲ ವಿಷಯಗಳನ್ನು ಚರ್ಚಿಸಿದರು. ಇದು ಆ ಸಂಭಾಷಣೆಯ ಪರಿಷ್ಕ್ರತ ರೂಪ.ಶಿವಾನಂದ ಕಣವಿ: ಮೊದಲನೆ ಪ್ರಶ್ನೆ ನಿಮ್ಮ ಭಾಷೆ, ಲಿಪಿ ಸಂಶೋಧನೆಗೆ  ಸಂಬಧಿಸಿದ್ದಲ್ಲ. ಇದು ನಿಮ್ಮ ಟೆಂಪಲ ಆರ್ಕಿಟೆಕ್ಚರ ಬಗೆಗಿನ  ಹಿಂದಿನ ಕೆಲಸಕ್ಕೆ ಸಂಬಂಧಿಸಿದ್ದು. ಈಗ ಹಾಗೆ ನೀವು ಲಿಪಿ ಲಿಪಿಕಾರರ ಬಗ್ಗೆ ಬರೆದೀರಿ,  ಹಂಗ ನಮ್ಮ ಗುಡಿಗಳನ್ನು ಕಟೆದ ಶಿಲ್ಪಕಾರರು; ಅವರ ಬಗ್ಗೆ, ಅವರ ಹಿನ್ನೆಲೆ ಬಗ್ಗೆ, ಅವರು ಬಳಸಿದ ಪರಿಕರಗಳು, ಟೂಲ್ಸ, ಟೆಕ್ನಾಲಜಿ, ಅವರಿಗೆ ಮಾರ್ಗದರ್ಶನ ಮಾಡಿದ ಗ್ರಂಥಗಳು, ಶಾಸ್ತ್ರಗಳು - ಇವುಗಳ ಬಗ್ಗೆ  ಕೆಲಸ ಆಗಿದೆಯಾ?
ಪ್ರಾ. ಶೆಟ್ಟರ : ಆಗಿದೆ. ನನ್ನ ಬರವಣಿಗೆಯಲ್ಲಿಯೇ ಸ್ವಲ್ಪ ಬಂದಿದೆ. ಲಿಪಿಕಾರರ ಬಗ್ಗೆ ನಾನು ಇತ್ತೀಚೆಗಷ್ಟೇ
 ಬರೆದಿದ್ದೇನೆ. ಹಿಂದೆ ಪ್ರಾಚೀನ ಶಿಲ್ಪಿಗಳ ಬಗ್ಗೆ ಬರೆದಿರುವೆ. ಬಹುಷಃ ನಮ್ಮ ದೇಶದೊಳಗೆ ಪ್ರಾಚೀನ  ಶಿಲ್ಪಿಗಳ ಬಗ್ಗೆ ಕೆಲಸ ಮಾಡಿರುವ ಇಬ್ಬರು ಅಂದರೆ,  ನಾನು ಮತ್ತು  ಎಸ್. ಸಿ. ಮಿಶ್ರಾ. ಅವರು ಮಧ್ಯಪ್ರದೇಶದ ಶಿಲ್ಪಿಗಳ ಕುರಿತಾಗಿ ಬರಿದಿದ್ದಾರೆ. ವಿಸ್ತೃತವಾಗಿ ಪ್ರಾಚೀನ  ಶಿಲ್ಪಿಗಳ ಬಗ್ಗೆ ಬರಿದಿರೋದು ನಮ್ಮ ದೇಶದಲ್ಲಿ ಬಹುಷಃ ನಾನೊಬ್ಬನೇ ಎಂದು ಕಾಣುತ್ತೆ. ನನಗೆ ಅದರ ಬಗ್ಗೆ ಒಂದು ತರಹದ ಹುಚ್ಚು ಇತ್ತು. ಇದುವರೆಗೆ ಶಿಲ್ಪಿಗಳನ್ನ ಹೊರಗಿಟ್ಟು, ಬರೀ ಕಲೆ, ಶೈಲಿ, ಶಿಲ್ಪಶಾಸ್ತ್ರದ ಬಗ್ಗೆ ಬರೆದುಕೊಂಡಿದ್ದೀವಿ ಅಂತ ನನಗೆ ಅನಿಸುತ್ತಿತ್ತು. ನಾನು ಇಂಡೀಯನ್ ಹಿಸ್ಟರಿ ಕಾಂಗ್ರೆಸ್ಸಿನ ಅಧ್ಯಕ್ಷನಾದಾಗ ಕೂಡ ಪ್ರಾರಂಭ ಕಾಲದ ಶಿಲ್ಪಿಗಳ  ಬಗ್ಗೆನೆ ನನ್ನ ಅಧ್ಯಕ್ಷ  ಭಾಷಣದ ಉದ್ದಕ್ಕೂ ಬಂದಿದೆ.
ಇತ್ತೀಚೆಗೆ ಸ್ವಲ್ಪ ಜನ ಶಿಲ್ಪಿಗಳ ಬಗ್ಗೆ ಆಸಕ್ತರಾಗಿದಾರೆ. ಇನ್ನೊಂದು ವಿಷಯ ಅಂದ್ರೆ, ಶಿಲ್ಪಿಗಳ ಬಗ್ಗೆ ಆಕರಗಳೇನಿವೆಯಲ್ಲ, ಅವು ಕರ್ನಾಟಕದಲ್ಲಿ ಸಿಕ್ಕಿರುವಷ್ಟು ಬೇರೆಲ್ಲಿಯೂ ಸಿಗುವುದಿಲ್ಲ. ಬಾದಾಮಿಯ ಚಾಳುಕ್ಯರ ಕಾಲದಿಂದಲೂ ಇದನ್ನು ನಾವು ಹೇಳಬಹುದು. ನನ್ನ ಇತ್ತೀಚಿನ ಹಳಗನ್ನಡದ ಬಗೆಗಿನ ಪುಸ್ತಕದಲ್ಲಿ ಇದರ ಉಲ್ಲೇಖ ಇದ್ದೇ ಇದೆ. ಶಿಲ್ಪಿಗಳ ಅಧ್ಯಯನವಷ್ಟೇ ಅಲ್ಲದೆ, ಅವರ ಹಸ್ತಾಕ್ಷರ ಮೊದಲು ಮಾಡಿ ಸಂಗ್ರಹಿಸಿ ಅಧ್ಯಯನ ಮಾಡಿದ್ದೇನೆ. ಹೀಗೆ ಯಾರೂ ಮಾಡಿಲ್ಲ ಎಂಬುದು ನನ್ನ ಅಂದಾಜು. ಹೊಯ್ಸಳರ ಕುರಿತಾದ ಪುಸ್ತಕವೊಂದರಲ್ಲಿಯೇ ಶಿಲ್ಪಿಗಳ ಬಗ್ಗೆ ಮೂರು ಅಧ್ಯಾಯಗಳಿವೆ. ಯಾವ ಯಾವ ರೀತಿಯ ಶಿಲ್ಪಿಗಳಿದ್ದರು, ಹೇಗಿದ್ದರು, ಹೇಗೆ ಬದುಕಿದ್ರು, ಯಾವ ರೀತಿ ಕೆಲ್ಸ ಮಾಡ್ತಾ ಇದ್ರು ಎಂಬುದರ ಬಗ್ಗೆ ಆ ಲೇಖನಗಳು ಬೆಳಕು ಚೆಲ್ಲುತ್ತವೆ. ಇದೆಲ್ಲಕ್ಕಿಂತ ಹೆಚ್ಚಾಗಿ, ಅವರು ಕೈಗೊಳ್ಳುತ್ತಿದ್ದಂತ ವೃತ್ತಿಯಾತ್ರೆಗಳು. ಎಲ್ಲೆಲ್ಲಿಗೆ ಪ್ರಯಾಣ ಬೆಳೆಸ್ತಿದ್ರು, ಎಷ್ಟು ದೂರದ ತನಕ ಹೋಗ್ತಾ ಇದ್ರು ಇತ್ಯಾದಿ.
ನನ್ನ ಅಧ್ಯಕ್ಷ ಭಾಷಣದ ಶೀರ್ಷಿಕೆ ಕೂಡ “ದಿ ಫೂಟ್ ಪ್ರಿಂಟ್ಸ್ ಆಫ್ ದಿ ಅರ್ಟಿಸನ್ಸ್ ಆಫ್ ಇಂಡಿಯ” ("ಭಾರತೀಯ ಕುಶಲಕರ್ಮಿಗಳ ಹೆಜ್ಜೆ ಗುರುತುಗಳು"). ಅಶೋಕ ಚಕ್ರವರ್ತಿಯ ಕಾಲದಿಂದ ಹಿಡಿದು ಕುಶಾಣರವರೆಗಿನ ಕುಶಲಕರ್ಮಿಗಳ ಇತಿಹಾಸದ  ಮೇಲೆ ಆ ಭಾಷಣ ಬೆಳಕು ಚೆಲ್ಲುವುದು. ಅದರಲ್ಲಿ ಕರ್ನಾಟಕದ ಬಗ್ಗೆ ಅಷ್ಟಾಗಿ ಪ್ರಸ್ತಾಪವಿಲ್ಲ. ಆದರೆ ಯಾವದೇ ಶೈಲಿಯ ಶಿಲ್ಪವಾದರೂ ನನ್ನ ಎಲ್ಲಾ ಬರವಣಿಗೆಗಳಲ್ಲಿ ಶಿಲ್ಪಿಗಳ ಬಗ್ಗೆ ಬರೆದಿದ್ದೇನೆ.
ಕಣವಿ: ಆಗ ಶಿಲ್ಪಕಲಾ ಶಾಲೆಗಳು ಇದ್ದವೇ?
ಶೆಟ್ಟರ: ಶಿಲ್ಪಕಲಾ ಶಾಲೆಗಳು ಇದ್ದವೇ ಎಂದು ನಾವು ಎಲ್ಲಾ ಕಡೆಗೂ ಕೇಳ್ತೀವಿ. ಆ ಕಾನ್ಸೆಪ್ಟ್ ಇತ್ತು ಅಂತ ಹೇಳಲಿಕ್ಕಾಗುವುದಿಲ್ಲ. ಇದು ಒಂದು ರೀತಿಯಲ್ಲಿ ತಂದೆಯಿಂದ ಮಗನಿಗೆ, ಅವನಿಂದ ಮತ್ತವನ ಮಗನಿಗೆ ಪಾರಂಪರಿಕವಾಗಿ ಮುಂದುವರೆಸಿಕೊಂಡು ಹೋಗ್ತಾ ಇದ್ದಂತಹ ಕಲೆ. ಮೂಲ ವಾಸ್ತು ಮತ್ತು ಶಿಲ್ಪಕಲಾ ಗ್ರಂಥಗಳನ್ನು ಆಳವಾಗಿ ಅಧ್ಯಯನ ಮಾಡುವಷ್ಟು  ಅವರು ಅಕ್ಷರಸ್ಥರಾಗಿರಲಿಲ್ಲ ಎಂದು ನನಗನಿಸುತ್ತದೆ. ಆದರೆ ಕುಶಲಕರ್ಮಿಗಳು ಶಾಸ್ತ್ರ ಗ್ರಂಥವಲ್ಲದಿದ್ದರೂ ಕೆಲ ಕೈಪಿಡಿ ತಂತ್ರಗಳು ಉಪಯೋಗಿಸುತ್ತಿದ್ದರು.  ಕುಶಲತೆಗಳು ಇದ್ದಿದಬಹುದೆನೋ, ಅದನ್ನೇ ತಂದೆ ಮಗನಿಗೆ ಬಳುವಳಿಯಾಗಿ ಕೊಟ್ಟಿರಬಹುದು ಎಂಬು ಊಹಿಸಬಹುದು. ಅದು ಕೇವಲ ಒಂದು ಕುಟುಂಬಕ್ಕೆ ಮಾತ್ರ ಸೀಮಿತವಾಗಿದ್ದ ಕೌಶಲ್ಯ ಎಂದು ಹೇಳಲಿಕ್ಕೆ ಆಗುವುದಿಲ್ಲ. ಅದು ಒಂದು ಪಂಗಡಕ್ಕೆ, ಸಮಾಜದ ಒಂದು ವರ್ಗಕ್ಕೆ ಸೇರಿದ್ದಾಗಿತ್ತು. ಇನ್ನೊಂದೆಂದರೆ ಆಗ ಮತ್ತು ಈಗಲೂ ಕೂಡ ಈ ತರಹದ ಕಲೆಗಳು, ಸಂಗೀತ ಇತ್ಯಾದಿ ಪಾಠ, ಗ್ರಂಥಗಳಿಂದಲ್ಲ ಆದರೆ ಒಬ್ಬ ಗುರು ಹಿರಿಯರ ಮಾರ್ಗದರ್ಶನದಲ್ಲಿ  ಅಭ್ಯಾಸ, ಸಾಧನೆಗಳಿಂದಲೇ ಎಲ್ಲರೂ ಕಲಿಯುತ್ತಾರೆ.  ಪಠ್ಯಗಳೂ ಇರಬಹುದು, ಆದರೆ ಪ್ರತ್ಯಕ್ಷ ಮಾಡುವ ಮೂಲಕವೇ ಕಲಿಯುವ ವಿದ್ಯೆ ಇದು.
ಕಣವಿ:   ಶಾಸ್ತ್ರಗಳೂ ಇದ್ದವೇ?
ಶೆಟ್ಟರ: ಇದ್ದವು. ನಾನು  ಐ ಜಿ ಎನ್ ಸಿ ಎ (Indira Gandhi National Centre for the Arts) ಚೇರ್ಮನ್ ಆಗಿದ್ದಾಗ ಒಂದು ಕಾರ್ಯಾಗಾರ ಮಾಡಿದ್ವಿ. ಅದರ ಮುಖ್ಯ ಉದ್ದೇಶ ಏನಂತಂದ್ರೆ, ಕಾಶ್ಯಪ ಶಿಲ್ಪ ಪಠ್ಯವನ್ನ ಇಟ್ಟುಕೊಂಡು, ಹಿಂದೆ ಅವರು ಬಳಸಿದ್ದಂತಹ ಕಲ್ಲನ್ನೇ ನಾವೂ ಉಪಯೋಗಿಸಿಕೊಂಡು, ಸಾಂಪ್ರದಾಯಿಕವಾಗಿ ಆ ಕಲೆಯನ್ನ ಬಲ್ಲ ಶಿಲ್ಪಿಗಳನ್ನೇ ಕರ್ಕೊಂಡು ಬಂದು, ನನಗೆ ಏನು ಗೊತ್ತಿರುವ ಶೈಲಿ, ವಿನ್ಯಾಸಗಳನ್ನು ನಾನು ಹೇಳಿಕೊಟ್ಟು, ಅವರು  ತಮ್ಮ ಉಪಕರಣ, ಪ್ಲಂಬ ಲೈನ್ಸ್, ತಾಳಮಾಳ ಇವನ್ನೆಲ್ಲ ಇಟ್ಟುಕೊಂಡು, ಶಿಲ್ಪಗಳನ್ನು ಕಟೆಯುವದು. ಈ ತರಹದ ಮೂರು ಕಾರ್ಯಾಗಾರಗಳನ್ನು ನಾವು ಹಮ್ಮಿಕೊಂಡಿದ್ವಿ. ಸಾಂಪ್ರದಾಯಿಕ ಶಿಲ್ಪಗಾರಿಕೆ ಗೊತ್ತಿದ್ದವರನ್ನೇ ಆ ಕೆಲಸದಲ್ಲಿ ಇನ್ವಾಲ್ವ್ ಮಾಡಿಕೊಂಡು ಏರ್ಪಡಿಸಿದ್ವಿ. ಅವರು ಯಾರೂ ವಿದ್ಯಾವಂತರಾಗಿರಲಿಲ್ಲ. ಆದರೆ ಅದ್ಭುತ ಕಲಾವಿದರಾಗಿದ್ರು. ಆಗ ನಾವು ೨೪ ಶಿವನ ಮೂರ್ತಿಗಳನ್ನು ಕೆತ್ತಿಸಿದೆವು. ಅಲ್ಲಿ ಈಗಲೂ ಇರಿಸಿದ್ದೀವಿ. ಚಾಳುಕ್ಯರ, ಹೊಯ್ಸಳರ ಕಾಲದ ಶಿಲ್ಪಿಗಳ ಕೆತ್ತನೆ ಕೆಲಸಕ್ಕಿಂತ ತುಂಬಾ ಉತ್ತಮವಾದ ಕರಕುಶಲತೆಯನ್ನ ಇಲ್ಲಿ, ಕೆಂಗುಂಟೆ ರಸ್ತೆಯಲ್ಲಿರುವ ಕಲಾಗ್ರಾಮದ ಕ್ಯಾಂಪಸಿನಲ್ಲಿ ಅವನ್ನ ಗಮನಿಸಬಹುದು. ಅಲ್ಲಿಯೇ ಒಂದು ಗ್ಯಾಲರಿಯನ್ನೂ ಕೂಡ ಮಾಡಲಾಗಿದೆ. ಸುಮಾರು ಮೂರರಿಂದ ಐದಡಿ ಎತ್ತರದ ಪ್ರತಿಯೊಂದು ಶಿಲ್ಪ. ಈ ಶಿಲ್ಪಿಗಳಿಗೆ ಈ ಕೆಲ್ಸ ನಿರ್ದೇಶಿಸಿದಾಗ, ಅವರು ದಿನಾಲೂ ಸುಮಾರು ಐದೂವರೆಗೆ ಎದ್ದು, ತಮ್ಮ ಎಂದಿನ ಸಂಪ್ರದಾಯಗಳನ್ನು ಪಾಲಿಸಿಯೇ ಶಿಲ್ಪಗಾರಿಕೆಯನ್ನ ಪ್ರಾರಂಭಿಸುತ್ತಿದ್ದರು. ಅದಕ್ಕೆ ಸಂಬಂಧಿಸಿದ ಚಿತ್ರಗಳು, ವೀಡಿಯೋ ಎಲ್ಲವನ್ನೂ ಸಂಗ್ರಹಿಸಿದ್ದೆವೆ. ಅವು ಅಲ್ಲಿಯೇ ಇವೆ. ನನ್ನ ಉದ್ದೇಶ ಶಿಲ್ಪಕಲೆಯನ್ನ ರಿಕ್ರಿಯೇಟ್ ಮಾಡುವ ಸಾಧ್ಯತೆಯನ್ನು ತೋರಿಸುವುದಾಗಿತ್ತು. ಅವರು ಮೂಲದಿಂದಲೇ ತುಂಬ ಕುಶಲಕಲಾಕರ್ಮಿಗಳಾಗಿದ್ದರು. ಅವರು ಹೆಚ್ಚು ವಿದ್ಯಾವಂತರಲ್ಲದ ಕಾರಣಕ್ಕೆ ಅವರಿಗೆ ಈ ಸಾಂಪ್ರದಾಯಿಕ ವಾಸ್ತು ಪಠ್ಯವನ್ನ ಶಿಲೆಗೆ ಅಳವಡಿಸಿಕೊಂಡು ಕೆಲಸ ಮಾಡುವ ತಂತ್ರಗಾರಿಕೆ ಇರಲಿಲ್ಲ ಅಷ್ಟೇ. ಮತ್ತು ಒಮ್ಮೊಮ್ಮೆ ಅವರು ಎಲ್ಲ ಶೈಲಿಗಳನ್ನೂ ಮಿಕ್ಸ್ ಮಾಡಿಬಿಡ್ತಾ ಇದ್ರು. ಅವರ ದೃಷ್ಟಿಯೊಳಗ ಅದೆ ಉತ್ತಮ.  ಆದರೆ ಚಾಳುಕ್ಯರ ಕಾಲದ ಶಿಲ್ಪಗಾರಿಕೆ ಬೇರೆ. ಚೋಳರ ಶೈಲಿಯೇ ಬೇರೆ. ಅವರಿಗೆ ಅದು ಗೊತ್ತಾಗ್ತಿರಲಿಲ್ಲ. ಅವರು ಕೆಲಸ ಮಾಡುತ್ತಾ, ಹೊಯ್ಸಳರದ್ದು ಮತ್ತು ಚೋಳರದ್ದು ಎರಡನ್ನೂ ಸೇರಿಸಿಬಿಡ್ತಾ ಇದ್ರು.
ಈಗ ಇತಿಹಾಸವನ್ನ ಗಮನಿಸಿ ಹೇಳೋದಾದರೆ, ಹೊಯ್ಸಳರ ನಂತರ ವಿಜಯನಗರ ಅರಸರ ಆಳ್ವಿಕೆ ಪ್ರಾರಂಭವಾದಾಗ ದಕ್ಷಿಣ ಭಾರತೀಯ ಶೈಲಿಯೇ ಪ್ರಾರಂಭವಾಯಿತು. ಗ್ರಾನೈಟಿನಲ್ಲಿ ಕೆತ್ತನೆ ಮಾಡ್ತಾ ಇದ್ದ ಚೋಳ ಶೈಲಿಯ ಶಿಲ್ಪಿಗಳು ಅವರದ್ದೇ ಒಂದು ವಿಶಿಷ್ಟ ಶೈಲಿಯನ್ನ ಹುಟ್ಟುಹಾಕಿದ್ರು. ನಮ್ಮಲ್ಲಿ ಆರಂಭದ ಚಾಳುಕ್ಯರು ಕೇವಲ ಮರಳುಗಲ್ಲನ್ನು (ಸ್ಯಾಂಡ್ ಸ್ಟೋನ್) ಮಾತ್ರ ಬಳಸ್ತಾ ಇದ್ರು. ಅವರು ಬೇರೆ ಯಾವುದನ್ನೂ ಉಪಯೋಗಿಸ್ತಿರಲಿಲ್ಲ. ಚಾಳುಕ್ಯರು ಮತ್ತು ಹೊಯ್ಸಳರು ಬರೀ ನುಣುಪುಗಲ್ಲನ್ನು (ಸಾಫ್ಟ್ ಸ್ಟೋನ್) ಮಾತ್ರ ಬಳಸುತ್ತಿದ್ದರು. ಹೊಯ್ಸಳರ ನಂತರ ಗ್ರಾನೈಟ್ ಪ್ರಮುಖ ಮಾಧ್ಯಮವಾಗಿ ಉಪಯೋಗಿಸಲ್ಪಟ್ಟಿತು.
ಕಣವಿ: ಈ ತಂಜಾವೂರಿನ ಬೃಹದೇಶ್ವರ ಟೆಂಪಲ್ ಇದೆಯಲ್ಲ ಅದು ಗ್ರ್ಯಾನೈಟು ಅಲ್ಲವೇ?
ಶೆಟ್ಟರ: ತಮಿಳುನಾಡಿನಲ್ಲಿ ಏನೇನು ಶಿಲ್ಪಗಾರಿಕೆ ಇದೆಯೋ ಅದೆಲ್ಲವೂ ಗ್ರಾನೈಟ್ ನಿಂದ ಮಾಡಲ್ಪಟ್ಟಿರುವುದು. ವಿಜಯನಗರ ಅರಸರ ಆಳ್ವಿಕೆಯಲ್ಲಿ ಅದು ಒಂದು ರೀತಿಯಿಂದ ಸಾರ್ವತ್ರಿಕವಾಯಿತು. ಅಂದರೆ ದಕ್ಷಿಣ ಭಾರತದ ಶಿಲ್ಪಗಾರಿಕೆ ಕುಟುಂಬಗಳು ಪೂರ್ತಿ ಅವರ ಮಾದರಿಯನ್ನೇ ಅನುಸರಿಸಿದರು. ಅದಕ್ಕೂ ಮೊದಲು ಇದು ಪಾಂಡ್ಯರದ್ದು, ಇದು ಚೋಳರದ್ದು, ಅಂತ ಪ್ರತ್ಯೇಕಿಸಿ ಹೇಳಬಹುದಾಗಿತ್ತು. ಅವರು ಬಳಸುತ್ತಿದ್ದ ತಂತ್ರಗಾರಿಕೆ, ಉಪಕರಣಗಳು ಇವೆಲ್ಲಕ್ಕೂ ಇದು ಅನ್ವಯವಾಗುತ್ತದೆ. ಹೆಚ್ಚಿನ ಶಿಲ್ಪಿಗಳು ಒಂದು ಕೈಪಿಡಿಯನ್ನು ಆಧಾರವಾಗಿಟ್ಟುಕೊಂಡು, ತಮ್ಮ ತಂದೆಯ ಅಥವಾ ಪಂಗಡದ ಮುಖ್ಯಸ್ಥನ  ನಿರ್ದೇಶನದಲ್ಲಿ,  ಮಾರ್ಗದರ್ಶನದಲ್ಲಿ ಶಿಲ್ಪಕಲೆಯನ್ನು ಕಲಿತರು ಎಂದು ಹೇಳಬಹುದು.
ಕಣವಿ: ಅವರಿಗೆ ಅಕ್ಷರ ಜ್ಞಾನ ಇತ್ತಾ?
ಶೆಟ್ಟರ: ಅಕ್ಷರಾಭ್ಯಾಸ ಮಾಡಿರಲಿಲ್ಲ ಅಂದರೆ. ಅವರಲ್ಲಿ ಕೆಲವು ಶಿಲ್ಪಿಗಳಿಗೆ ತಮ್ಮ ಹೆಸರನ್ನು ಬರೆದುಕೊಳ್ಳುವಷ್ಟು ಅಕ್ಷರಜ್ಞಾನ ಇತ್ತು ಇನ್ನುಳಿದವರಿಗೆ ತಮ್ಮ ಹೆಸರನ್ನು ಬರೆದುಕೊಳ್ಳುವಷ್ಟು ಕೂಡಾ ಸರಿಯಾದ ಅಕ್ಷರಜ್ಞಾನ ಇರಲಿಲ್ಲ ತಪ್ಪು ಮಾಡತಿದ್ದರು.
ಕಣವಿ: ಹಂಗಂದ್ರ ಈ ಕಿರಾತಾರ್ಜುನ  ಮುಂತಾದ ಪೌರಾಣಿಕ ಸನ್ನಿವೇಶಗಳನ್ನ ಅವರು ಹೆಂಗ ಸಾಕ್ಷಾತ್ಕರಿಸುತ್ತಿದ್ದರು ?
ಶೆಟ್ಟರ: ಓದಾಕ ಬರಿಯಾಕ ಬರ್ತಿರಲಿಲ್ಲ ಅಂದ್ರೂನೂ, ಕತೆಗಳ ಮೂಲಕ ಅಂತ ಹೇಳಬಹುದು. ಕಥಾಸಮಯ ಅನ್ನುವುದು ಎಲ್ಲ ಕಾಲದಲ್ಲೂ ಸಾಮಾನ್ಯವಾಗಿ ಕಾಣುವಂಥದ್ದೇ. ಆ ಶಿಲ್ಪಗಳು ಪಠ್ಯಗಳಿಂದಲೇ  ಆವಿರ್ಭವಿಸಿದವು ಅಂತಲ್ಲ. ಕಲ್ಲಿನಲ್ಲಿ ಕಥೆಗಳು ಅಂತ ಏನು ಹೇಳ್ತೀವಿ ಅವು ಎರಡು ವಿಧ. ತನ್ನ ಕೌಶಲ್ಯವನ್ನ ಅಭಿವ್ಯಕ್ತಗೊಳಿಸುವದಕ್ಕೆ ನರೆಟಿವ್ ಅನ್ನುವುದನ್ನು ಆತ ಬಳಸಿಕೊಳ್ಳುತ್ತಿದ್ದ. ಒಮ್ಮೊಮ್ಮೆ ಕಥೆ ಒಂದು ಪೂರ್ತಿ ಪ್ಯಾನೆಲ್ ನಲ್ಲಿ ಇರ್ತದೆ. ಆದರೆ ಕೆಲವೊಮ್ಮೆ ಒಂದೇ ಚೌಕಟ್ಟಿನೊಳಗೆ ಸ್ಥಗಿತವಾಗಿರ್ತದೆ. ಉದಾಹರಣೆಗೆ ರಾವಣ ಕೈಲಾಸವನ್ನ ಎತ್ತಿದ್ದು. ಸಮುದ್ರಮಥನ ಅಥವಾ ಮಹಿಷಾಸುರ ಮರ್ದನ ಇತ್ಯಾದಿ. ಇಡೀ ಪೌರಾಣಿಕ ಸನ್ನಿವೇಶವನ್ನ ಒಂದೇ ಕಲ್ಲಿನೊಳಗೆ ಕೆತ್ತಿಡೂದು ಅಂದ್ರೆ ಅದು ಒಂದು ಸವಾಲೇ. ಹೀಗಾಗಿ, ಈ ಏಕಶಿಲಾ ಕೆತ್ತನೆಗಳಾಗಿರಬಹುದು ಅಥವಾ ಕಥಾನಕಗಳು ಆಗಿರಬಹುದು. ಇವೆಲ್ಲ ಅವರಿಗೆ ತಮ್ಮ ಕೌಶಲ್ಯವನ್ನ ವ್ಯಕ್ತಪಡಿಸಲಿಕ್ಕೆ ಸಾಕಷ್ಟು ಅವಕಾಶ ಕಲ್ಪಿಸಿ ಕೊಡುತ್ತಿದ್ದವು.  ಭೀಮವಿಜಯದ ಕಥೆಯಲ್ಲಿ ಅಂತೂ, ಆ ಸಂಭ್ರಮವನ್ನ ಪ್ರಕಟಪಡಿಸ್ತಾ ಇರೋ, ಮೇಳದವರು, ನಗಾರಿ ಬಾರಿಸೋವ್ರು, ಹಾಡು, ನೃತ್ಯ ಮಾಡಿಕೊಂಡು ಬರ್ತಾ ಇರೋರು, ಇವೆಲ್ಲವನ್ನ ತೋರಿಸ್ತಾರೆ. ಒಂದು ರೀತಿಯಿಂದ ಖಾಲೀ ಜಾಗೆಯನ್ನು ಹೇಗೆ ತುಂಬುತ್ತಿದ್ದರು ಎನ್ನುವದನ್ನು ನಾವು ನೋಡಬಹುದು. ಅದೂ ಅವರ ಕೌಶಲ್ಯವನ್ನು ತೋರಿಸುತ್ತಿತ್ತು. ಕೆಲುವೊಮ್ಮೆ ಅದು ಅದ್ಭುತವಾಗಿ ಕಲಾತ್ಮಕವಾಗಿರುತ್ತಿತ್ತು ಕೆಲುವೊಮ್ಮೆ ಸಾಧಾರಣವಾಗಿರುತ್ತಿತ್ತು.  
ಕಣವಿ: ಕೆಲವೊಂದು ಪಠ್ಯಗಳು ಪಂಥಾಭಿಮಾನಿಯಾಗಿ ಸೆಕ್ಟೇರಿಯನ್ ಆಗಿ ಇರ್ತಾವ. ಆದರೆ ಶಿಲ್ಪಿ ಅವೆಲ್ಲವನ್ನ ಅನುಸರಿಸದೇನೇ ಇರಬಹುದು. ಅವನಿಗೆ  ಶಿವಾ ಅಂದ್ರೂ ಅಷ್ಟ, ವಿಷ್ಣು ಅಂದ್ರೂನೂ ಅಷ್ಟ. ಅವಾಗ ಹೆಂಗ?
ಶೆಟ್ಟರ: ಹೌದು, ಒಬ್ಬ ಶಿಲ್ಪಿ ತನ್ನ ಕೆತ್ತನೆ ಕೆಲಸದಲ್ಲಿ ಮಗ್ನ ಆಗಿರುವಾಗ, ಅವನ ಮೇಲಿನವ ಒಬ್ಬ ಪುರೋಹಿತ ಬಂದು ಮಾರ್ಗದರ್ಶನ ಮಾಡುವಂಥ ಸನ್ನಿವೇಶಗಳಲ್ಲಿ, ಇಲ್ಲಿ ನಾಮಾ ಕೆತ್ತು, ಇಲ್ಲಿ ಇದನ್ನ ಮಾಡು, ಅದನ್ನ ಮಾಡು ಎಂದೆನ್ನುವ ಹೊತ್ತಿನಲ್ಲಿ ಪಾಪ, ಆ ಶಿಲ್ಪಿಗಳು ಹಾಗೇ ಮಾಡಿರಬಹುದಾದ ಸಾಧ್ಯತೆಗಳಿವೆ. ಅವರಿಗೇನು ಒಟ್ಟ ತಮಗೆ ಆಶ್ರಯ ನೀಡಿದವರ ಮಾತುಗಳನ್ನ ಕೇಳುವುದು ಮತ್ತು ಪಾಲಿಸುವುದು ಗೊತ್ತಿತ್ತು. ಆದರೆ ಅವರು ತಮ್ಮನ್ನು ತಾವು ಸಂಪೂರ್ಣವಾಗಿ ಆಶ್ರಯದಾತರಿಗೆ ಒಪ್ಪಿಸಿಕೊಳ್ಳಲಿಲ್ಲ, ಶರಣಾಗತಿಯ ಭಾವನೆ ತೋರಿಸಲಿಲ್ಲ. ತಮಗೆ ಸರಿ ಅನಿಸಿದ್ದನ್ನ ಎಷ್ಟೋ ಕಡೆ ಅವರು ಮಾಡಿದರು.
ವಿಜಯನಗರ ಅರಸರ ಆಳ್ವಿಕೆಯೊಳಗ ಮತ್ತು ನಂತರ, ಈ ಕೌಶಲ್ಯಕ್ಕೆ ಭಂಗ ಬಂದದ್ದನ್ನ ನಾವು ಗಮನಿಸಬಹುದು. ಶೈವ- ವೈಷ್ಣವ ಪಂಥಾಭಿಮಾನ  ಇವೆಲ್ಲ ಹೆಚ್ಚಾದವು. ಆದರೆ ಕೌಶಲ್ಯ ಮಾತ್ರ ಶಿಲ್ಪಿಯದೇ.
ಕಣವಿ:ಆಗ ಶಿಲ್ಪಿಗಳು ಅವರ ಕಲ್ಪನೆಯನ್ನ ಕಲ್ಲಿಗೆ ಇಳಿಸಿ ಅದ್ಭುತ ಅನುವಂತಹ ಶಿಲ್ಪಗಾರಿಕೆ ಮಾಡಿದ್ರು ಸರಿ. ಆದರ, ಆವಾಗ, ಅವರಿಗೆ ಒಂದು ರೂಪುರೇಷೆ, ಪ್ಲಾನ್ ಅಥವಾ ಪೂರ್ತಿ ಡಿಸೈನ್ ಹಾಕಿಕೊಡಾಕ ಆರ್ಕಿಟೆಕ್ಟ್ಸ್, ವಾಸ್ತುಶಿಲ್ಪಿಗಳು ಇದ್ದರಾ?
ಶೆಟ್ಟರ: ಹೌದು, ಆರ್ಕಿಟೆಕ್ಟ್ಸ್ ಇರ್ತಿದ್ರು ಅವಾಗೂನೂ. ಸಾಧಾರಣ ಶಿಲ್ಪಿಗಳಿಗೆ ತಾವೇನು ಕೆತ್ತಲಿದ್ದೇವೆ ಅನ್ನೂದರ ಪೂರ್ಣ ಅಂದಾಜು ಇರ್ತಿರಲಿಲ್ಲ. ಆದರೆ ಒಂದು ದೇವಸ್ಥಾನವನ್ನು ಕಟ್ಟತಾ ಇದ್ದಾರೆ ಅಂದ್ರೆ, ಅದಕ್ಕೆ ವಿಪರೀತ ಶ್ರಮ, ವಿನ್ಯಾಸ, ರೂಪುರೇಷೆ, ಸಮಯ ಎಲ್ಲಾ ಒಟ್ಟುಗೂಡಿಸಿಕೊಂಡು ಕೆಲಸ ಮಾಡ್ತಿದ್ರು. ಬೃಹದೇಶ್ವರ, ಕೈಲಾಸ ಇವೆಲ್ಲಾ ಬಹಳಾ ಮುತುವರ್ಜಿಯಿಂದ ಮಾಡಿದಂಥಾ ಕೆಲಸಗಳು. ಸಾಟಿಯಿಲ್ಲದಂತಹ ತಾಂತ್ರಿಕ ಕುಶಲಗಾರಿಕೆಯನ್ನ ನಾವು ಆಗಿನ ಕೆತ್ತನೆಗಳಲ್ಲಿ ಕಾಣಬಹುದು. ಅವರು ಸಿಮೆಂಟ ಮುಂತಾದವನ್ನು ಬಳಸ್ತಿರಲಿಲ್ಲ. ಮತ್ತೆ ಎಷ್ಟೋ ಸಾರಿ ಅವರು ಒಂದೇ ಕಲ್ಲಿನೊಳಗ ಕೆತ್ತುತ್ತಾನೂ ಇರಲಿಲ್ಲ. ಎರಡೆರಡು ಕಲ್ಲುಗಳನ್ನು ಸೇರಿಸಿ ಕಟ್ಟುವ ಅವರ ಕ್ರಮ ಬಹಳ ಮೆಚ್ಚುವಂಥದ್ದು. ಅದೊಂದು ಅಪೂರ್ವವಾದ, ಅದ್ಭುತ ನೈಪುಣ್ಯತೆ ಅಂತಲೇ ಹೇಳಬಹುದು. ಈಗ ಸ್ಟ್ರಕ್ಚರಲ್ ಇಂಜಿನೀರಿಂಗ ಅಂತ ನಾವೇನು ಹೇಳ್ತೀವಿ, ಅವೆಲ್ಲ ಆಗಲೂ ಇದ್ದವು.
ಕಣವಿ: ಇದರ ಬಗ್ಗೆ ಲಿಖಿತ ರೂಪದೊಳಗ ಏನಾದ್ರೂ ದಸ್ತಾವೇಜುಗಳು ಸಿಕ್ಕಿವೆಯಾ;  ಅವರು ಉಪಯೋಗಿಸುತ್ತಿದ್ದಂತಹ ಸಲಕರಣೆಗಳು, ಉಪಕರಣಗಳು, ತಂತ್ರಜ್ಞಾನ ಇತ್ಯಾದಿಗಳ ಬಗ್ಗೆ ?
ಶೆಟ್ಟರ: ಈಗಿನವರ ಬಗ್ಗೆ ನಾವು ಸಂಗ್ರಹ ಮಾಡ್ತಾ ಇದೀವಿ. ಹಿಂದ ಬಹುಷ: ತಾಳೆಗರಿಗಳನ್ನ ಉಪಯೋಗಿಸಿಕೊಂಡು ಈ ಕೌಶಲ್ಯಗಳನ್ನ ಲಿಖಿತರೂಪದೊಳಗೆ ಸಂಗ್ರಹಿಸಿರಬಹುದು. ಒರಿಸ್ಸಾದೊಳಗೆ ಒಂದು ಸಿಕ್ಕಿದೆ. ಎಷ್ಟು ಚೆನ್ನಾಗಿ ಅವರು, ದೇವಸ್ಥಾನವನ್ನು ಕಟ್ಟುವ ಬಗ್ಗೆ ಸಂಕೀರ್ಣ ಕೌಶಲಗಳನ್ನ ಒಂದು ತಾಳೆಗರಿಯಲ್ಲಿ ಸಂಗ್ರಹಿಸಿ ಇಟ್ಟಿದ್ದಾರೆ. ಮತ್ತು ಅದನ್ನು ಅವರು ಅನುಸರಿಸುತ್ತಾರೆ ಕೂಡ. ಆದರೆ, ಇಲ್ಲಿ ನಮ್ಮಲ್ಲಿ ಅಂಥಾವು ಸಿಕ್ಕಿಲ್ಲ. ನಮ್ಮವರು ಬರವಣಿಗೆಕಿಂತಾ ಕೆತ್ತನೆ ಕೆಲಸ ಹೆಚ್ಚು ಮಾಡಿದ್ದಾರೆ.
ಕಣವಿ: ಆಗಮ ಶಾಸ್ತ್ರದೊಳಗ, ದೇವಸ್ಥಾನಗಳ ಬಗ್ಗೆ ಹೆಚ್ಚು ಉಲ್ಲೇಖ ಇವೆ ಅಂತಾರೆ. ಅದು ಕೇವಲ ಪೂಜೆ ಪುನಸ್ಕಾರಗಳ ಬಗ್ಗೆನಾ ಅಥವಾ ವಾಸ್ತುಶಿಲ್ಪ, ವಿನ್ಯಾಸ ಇದೆಲ್ಲ ಬಗ್ಗೆಯೂ ಪ್ರಸ್ತಾಪವಿದೆಯಾ?
ಶೆಟ್ಟರ: ಪೂಜೆ ಇತ್ಯಾದಿ ಸಂಪ್ರದಾಯಗಳ ಬಗ್ಗೆ ಅವರು ಹೆಚ್ಚು ಉಲ್ಲೇಖ ಮಾಡ್ತಾರೆ. ಆದರೆ ಅದರಲ್ಲಿ ಯಾವ ಜಾಗೆ ಆಯ್ಕೆ ಮಾಡಿಕೊಳ್ಳಬೇಕು, ಯಾವ ರೀತಿ ದೇವಸ್ಥಾನ ನಿರ್ಮಾಣಾ ಆಗಬೇಕು ಅವೆಲ್ಲಾನೂ ಬರ್ತಾವು. ಆಮೇಲೆ ಪ್ಲಂಬ್ ಲೈನ್ಸ್ ಹ್ಯಾಗೆ  ತೈಯಾರಿಸಬೇಕು,  ಕಲ್ಲಿನ ಆಯ್ಕೆ, ಇವೂ ಭಾಳ ಮುಖ್ಯ. ಆದರೆ ನನಗನ್ನಿಸುತ್ತೆ, ಹೆಚ್ಚಾಗಿ ಇದೆಲ್ಲಾ ಅವರಿಗೆ ಅವರ ಸ್ವಂತ ಅನುಭವದಿಂದ ಬಂದಿರೂದು, ಗ್ರಂಥಗಳನ್ನು ನೋಡಿ, ಕಲಿತು ಅನುಸರಿಸಿ ಅಲ್ಲ ಅಂತ.
ದೇವಸ್ಥಾನಗಳ ನಿರ್ಮಾಣದೊಳಗ ಸ್ಕೇಲ್, ಪ್ರಮಾಣ ಅನ್ನುವುದು ಇರ್ತದೆ. ಕೆಲವೊಮ್ಮೆ ಈ ಸ್ಕೇಲ್ ಅನ್ನುವುದನ್ನು ಕೂಡಾ ದೇವಸ್ಥಾನದೊಳಗೇನೆ ಬರೆದು, ಕಟ್ಟಿರುವಂಥದ್ದು ಇದೆ; ದೇವಕೊಳ, ದೇವಕೋಲು ಎಂದೆನ್ನುತ್ತಾರೆ. ಒಮ್ಅಮ್ಥಒಮ್ಮೊಮ್ಮೆ ಒಬ್ಬ ಆಶ್ರಯದಾತ, ಯಜಮಾನನ ಎತ್ತರದ ಮೇಲೆ, ಅವನ ಅಂಗಾಂಗಗಳ ಮೇಲೆ ಸ್ಕೇಲು ತೈಯಾರು ಮಾಡ್ತಿದ್ದರು. ನಮಗೆ ಇಂಥ ಸಾಕಷ್ಟು ಉಲ್ಲೇಖಗಳು, ಸಿಗ್ತಾವ.
ಕಣವಿ:  ಈ ಎಲ್ಲ ಜ್ಞಾನ ಹೆಚ್ಚಾಗಿ ಮೌಖಿಕವಾಗಿ ಇತ್ತಾ?
ಶೆಟ್ಟರ: ಇಲ್ಲ, ಜ್ಞಾನ ಹೆಚ್ಚಾಗಿ ರೂಢಿಯಿಂದ, ಸ್ವತಃ ಮಾಡುವುದರಿಂದ ಬಂದದ್ದು. ನಂತರ ಅದನ್ನ ಮೌಖಿಕವಾಗಿ ಇನ್ನೊಬ್ಬರಿಗೆ ವರ್ಗಾಯಿಸತಿದ್ದರು. ಶಿಷ್ಯರು ಗುರುಗಳಿಂದ ಕಲಿತಿದ್ದರು. ಗಮನಿಸಬೇಕಾದ ಮತ್ತೊಂದು ಅಂಶ ಅಂದರೆ, ಹೆಚ್ಚಿನ ಶಿಲ್ಪಗಳಿಗೆ ಯಾವ ಶಿಲ್ಪಿಯ ಹೆಸರನ್ನೂ ನೀಡಲಾಗಿಲ್ಲ. ಯಾಕಂದ್ರ, ಒಂದು ಅದು ಕೂಡಿ ಜೋಡಿಸಿ ಮಾಡಿದ್ದು, ಒಂದೆ ಕಲ್ಲಿನೊಳಗ ಮಾಡಿದ್ದಲ್ಲ. ಆದರೆ ಅವರಿಗೆ ಒಬ್ಬ ನಾಯಕ, ಮಾಸ್ಟರ್ ಅಂತ ಇರ್ತಿದ್ದ. ಈಗ ಕರ್ನಾಟಕ ಕಲಾ ಇತಿಹಾಸವನ್ನ ಗಮನಿಸೋದಾದ್ರ, ಅದರ ರೂವಾರಿ ಅಥವಾ ಮಾಸ್ಟರ್ ಅಂತ ಮಲ್ಲಿತಮ್ಮನನ್ನ ಗುರುತಿಸಲಾಗ್ತದೆ. ಅವನು ಹರಿಹರದಿಂದ ಸೋಮನಾಥಪುರತನಕ ಬಂದಿದ್ದನ್ನ ನಾನು ಚಾರ್ಟ್ ಮಾಡಿ ಕೊಟ್ಟಿದೀನಿ. ಅವನು ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ತನ್ನ ಸ್ಥಾನವನ್ನ ಬಿಟ್ಟು ಬೇರೆ ಪ್ರದೇಶಕ್ಕೆ ಹೋಗುವುದು ಉಲ್ಲೇಖಿತವಾಗಿದೆ. ಇದು ಒಂದು ರೀತಿಯಿಂದ ದೇವಸ್ಥಾನವನ್ನ ನಿರ್ಮಾಣ ಮಾಡಲಿಕ್ಕೆ ಸಾಧಾರಣ ಎಷ್ಟು ಸಮಯ ಹಿಡಿದಿರಬಹುದು ಅನ್ನುವುದನ್ನ ಪತ್ತೆ ಮಾಡಲಿಕ್ಕೆ ನನಗೆ ಸಹಾಯ ಮಾಡ್ತು. ಕೆಲವರು ಹೇಳ್ತಾರ, ಇದು ನಿರ್ಮಾಣ ಆಗಲಿಕ್ಕೆ ನೂರು ವರ್ಷ ಹಿಡಿದಿರಬೇಕು, ಅಂತ. ಅದು ನಿಜ ಅಲ್ಲ. ನಾಲ್ಕು ಅಥವಾ ಐದು ವರ್ಷಗಳಿಗಿಂತ ಅದು ಯಾವತ್ತೂ ಹೆಚ್ಚಿಗೆ ಇರಲಿಲ್ಲ. ಯಾವುದೇ ಕಾರಣದಿಂದ ಅವರಿಗೆ ಆ ಕಾಲಾವಧಿಯೊಳಗ ಅದನ್ನ ಮುಗಿಸಲಿಕ್ಕೆ ಆಗಲಿಲ್ಲ ಅಂದುಕೊಳ್ರಿಅಂಥದು ಯಾವತ್ತೂ ಮುಗೀಲೇ ಇಲ್ಲ. ಶಿಲ್ಪಿಗಳು ವಲಸೆ ಹೋಗ್ತಾ ಇದ್ದಂತಹ ಪ್ರಕ್ರಿಯೆ ಒಂದು ನಿರ್ಮಾಣದ ಯೋಜನೆಗೆ ಎಷ್ಟು ಸಮಯ ತಗುಲ್ತಾ ಇತ್ತು ಅನ್ನುವುದನ್ನ ತಿಳಿಲಿಕ್ಕೆ ಸಹಾಯವಾಯ್ತು. ಅವರು ಸೆಕ್ಟೇರಿಯನ್ ಇದ್ರೋ ಇಲ್ಲೋಬರೀ ವೈಷ್ಣವ ದೇಗುಲಗಳನ್ನಷ್ಟ ನಿರ್ಮಿಸಿದರೋ ಅಥವಾ ಶೈವ ದೇಗುಲಗಳನ್ನೂ ನಿರ್ಮಿಸಿದರೋ ಈ ಎಲ್ಲ ಅಂಶಗಳು ಗೊತ್ತಾಗ್ತವೆ.
ಯಾಕಂದರೆ ಕೆಲವು ಶಿಲ್ಪಿಗಳುಅವರ ಕುಶಲತೆಯ ಆಧಾರದ ಮೇಲೆ ಒಂದು ನಿರ್ದಿಷ್ಟ ಪಂಗಡದ ಮೇಲಷ್ಟೇ ಕೆಲಸ ಮಾಡಿದ್ರು. ಶ್ರೀವೈಷ್ಣವ ಪಂಗಡ ಬಂದ ಮೇಲೆಒಂದು ಹೊಸ ರೀತಿವಿನ್ಯಾಸಪಠ್ಯಚಲನೆಹೊಸತನ, ವೈಷ್ಣವ ಶಿಲ್ಪಗಳಿಗೆ ಬಂತು. ಒಂದೇ ಶೈಲಿಯೊಳಗ ನುರಿತಂತ ಕಲಾವಿದ ಒಬ್ಬ ಸಾಮಾನ್ಯ ಶಿಲ್ಪಿಗಿಂತ ಹೆಚ್ಚು ಕುಶಲತೆಯಿಂದ ಶಿಲ್ಪಗಾರಿಕೆ ಮಾಡ್ತಿದ್ದ.
ಅದರೊಳಗ ಶೈವರೂ ಇದ್ರು. ಆದರೆ ಒಟ್ಟಾರೆ ಹೇಳೋದಾದರೆ, ಈ ಶಿಲ್ಪಿಗಳು ಒಂದು ನಮೂನಿ ಕಾರಿನ ಚಾಲಕರಿದ್ದಂಗ. ಕಾರು  ಕಲಿತವರು ಯಾವ ಕಾರಾದರೂ ಓಡಿಸಬಹುದು. ವರ್ಸಟೈಲ್ ಆಗಿದ್ರು. 
ಕಣವಿ: ಅಂದ್ರ ಅವರು ಸೆಕ್ಯುಲರ್ ಅಥವಾ ವ್ಯವಸಾಯಿಕ ಶಿಲ್ಪಿಗಳು ಇದ್ರು ಅಂತೀರಿ ?
ಶೆಟ್ಟರ: ಈಗ ನೋಡ್ರಿ. ಅದ್ರಲ್ಲಿ ಸಹಾ ಎರಡು ಅಭಿಪ್ರಾಯಗಳು ಇದ್ವು. ಅಲ್ಲಿ ಯಾವುದೇ ಒಂದು ಅಭಿಪ್ರಾಯ ಇತ್ತು ಅಂತಿಲ್ಲ. ಅವರು ಸೆಕ್ಟೇರಿಯನ್ ಇದ್ರು ಅಂತಲೂ ಅಲ್ಲ, ಇಲ್ಲ ಅಂತಾನೂ ಹೇಳಲಿಕ್ಕೆ ಆಗುವುದಿಲ್ಲ. ಅವ್ರು ಶೈವ ಅಥವಾ ವೈಷ್ಣವ ಭಕ್ತರಾಗಿದ್ದರಾ ಅಂತ ಕೇಳಿಕೊಂಡರ ಅದಕ್ಕ ತಕ್ಕ ಉತ್ತರ ಸಿಗೂದಿಲ್ಲ. ಆನಂದ ಕುಮಾರಸ್ವಾಮಿಯವರು ಮತ್ತು ಅದಕೂ ಮೊದಲು ಈ. ಬಿ. ಹೆವೆಲ್ ಅವರು  ಕಲಾಶಿಲ್ಪಿಗಳು ಅನಾಮಧೇಯರಾಗಿರಲಿಕ್ಕೆ ಬಯಸಿದ್ರು ಅಂತ ಹೇಳಿದರು. ಅವರ ಪ್ರಕಾರ ತಮ್ಮ ಕಲಾವಂತಿಕೆಯನ್ನ ವ್ಯಕ್ತಪಡಿಸೋದೇ, ದೇವರ ಮೂರ್ತಿಗಳನ್ನು ಮರುಸೃಷ್ಟಿ ಮಾಡುವುದೇ ಅವರಿಗೆ ಒಂದು ರೀತಿಯ ಆರಾಧನಾಭಾವವನ್ನು ತಂದುಕೊಡ್ತಿತ್ತು. 
ಆದರೆ ನಾನು ಅದಕ್ಕ ವ್ಯತಿರಿಕ್ತವಾಗಿ ಬರೆದೀನಿ. ಯಾಕಂದ್ರೆ ಅಂಥಾ ಒಂದು ಸನ್ನಿವೇಶ ಆಗ್ಲಿ, ಭಾವನೆ ಆಗ್ಲಿ ಅಲ್ಲಿ ಇರಲೇ ಇಲ್ಲ. ಮಾಡಿದ ಕೆಲಸಕ್ಕೆ ಸಂಭಾವನೆ ಸಿಕ್ಕಿತಾ, ಅದು ಮುಗಿದ ಮೇಲೆ ಅವರು ಹೊರಡತಿದ್ರು. ಪ್ರತಿಫಲ ಇಲ್ಲದ ಕಡೆ ಅವರು ನಿಂತಿದ್ದನ್ನ ನಾವು ಕಾಣೋದೇ ಇಲ್ಲ. ಹಂಗಾಗಿಯೇ ಸಾಕಷ್ಟು ದೇವಾಲಯಗಳ ನಿರ್ಮಾಣ ಅರ್ಧಕ್ಕೇ ನಿಂತಿರುವುದನ್ನ ನಾವು ಇವತ್ತಿಗೂ ಕಾಣ್ತೀವಿ. ಭಕ್ತಿ ಅದೂ, ಇದೂ, ಎಲ್ಲಾ ನಾವು ಊಹೆ ಮಾಡಿ ಹೇಳೋದು ಅಷ್ಟೇ. ಅವರು ತಮ್ಮ ಹೊಟ್ಟೆಗಾಗಿನೇ ಇದನ್ನೆಲ್ಲಾ ಮಾಡತಿದ್ರು. ಯಾವಾಗ ಒಂದು ಜಾಗಾದೊಳಗ ಕೂಲಿ ಸಿಗಲಿಲ್ಲೋ ಅವರು ತಮ್ಮ ಕಾರ್ಯಕ್ಷೇತ್ರವನ್ನ ಬದಲಾಯಿಸಿಕೊಂಡುಬಿಡತಿದ್ರು. ಅದರೊಳಗೂ ಕೆಲವು ಜನ ಮಾತ್ರ ನಮ್ಮೂರಿನಲ್ಲಿ ಕಟ್ಟುವ ದೇಗುಲಕ್ಕೆ ಮಾತ್ರ ನಾನು ಕೆಲಸಾ ಮಾಡತೀನಿ, ಬೇರೆ ಊರಿಗೆ ನಾನು ಹೋಗುವುದಿಲ್ಲ ಅಂತ ಹೇಳತಿದ್ರು. ಹಿಂಗಾಗಿ ಅವರ ಹೆಸರುಗಳು ಸ್ಥಳೀಯವಾಗಿ ಮಾತ್ರ ನಮಗ ನೋಡಲಿಕ್ಕೆ ಸಿಗ್ತವೆ. 
ನಮ್ಮ ಬೇಲೂರಿನ ದೇವಸ್ಥಾನವನ್ನ ಕಟ್ಟಿರುವ ಎಲ್ಲಾ ಶಿಲ್ಪಿಗಳು ಲಕ್ಕುಂಡಿ, ಲಕ್ಷ್ಮೇಶ್ವರ, ಗದಗನಿಂದ ಬಂದವರೇ ಆಗಿದ್ರು. ಅವರ ಕೆಲಸಗಳಲ್ಲಿ ಅವರೇ ಆ ಊರುಗಳ ಹೆಸರುಗಳನ್ನು ಹೇಳಿಕೊಂಡಿದ್ದಾರೆ. ಯಾಕಂದ್ರೆ ಬೇಲೂರಿನಲ್ಲಿ ಆಗ ಯಾವ ಶಿಲ್ಪಿಗಳೂ ಇರಲಿಲ್ಲ. ಇಡೀ ಬೇಲೂರಿನ ದೇವಸ್ಥಾನ ನಿರ್ಮಾಣ ಆಗಿರೋದೇ ಉತ್ತರ ಕರ್ನಾಟಕದ ಶಿಲ್ಪಿಗಳಿಂದ. ಅವರ ಹೆಸರುಗಳನ್ನು ಸಹ ಅವರು ಬರೆದುಕೊಂಡಿದಾರೆ. ತಾಳಗುಂದ, ಗದಗ, ಲಕ್ಕುಂಡಿ, ಲಕ್ಷ್ಮೇಶ್ವರ. ಇವತ್ತಿಗೂನೂ ಅವು ಶಿಲ್ಪದ ಕೇಂದ್ರಗಳು. ಅದರಲ್ಲೂ ಗದಗ ಅತ್ಯಂತ ಪ್ರಖ್ಯಾತ ಕೇಂದ್ರವಾಗಿತ್ತು. ಹೊಯ್ಸಳ ವಿಷ್ಣುವರ್ಧನ ದೇಗುಲ ನಿರ್ಮಾಣ ಮಾಡಬೇಕು ಅಂದಾಗ, ಮಾದರಿ ಅಂದ್ರ ಚಾಳುಕ್ಯ ದೇಗುಲಗಳೇ ಆಗಿದ್ವು. ಅವನ ದೃಷ್ಟಿಯೊಳಗೂನೂ ಶಿಲ್ಪಿಗಳು ಅಂದ್ರ ಚಾಳುಕ್ಯ ಶಿಲ್ಪಿಗಳೇ ಆಗಿದ್ರು. ಆಗ ಬೇಲೂರಿನಲ್ಲಿ ಶಿಲ್ಪಿಗಳೇ ಇರಲಿಲ್ಲ.
ಕಣವಿ : ಎಷ್ಟು ಕಾಲ ಹಿಂದಕ್ಕೆ ಚಾಚಿಕೊಂಡಿದೆ ಅಂತೀರಿ ಈ ದೇಗುಲ ನಿರ್ಮಾಣದ ಐತಿಹ್ಯ ?
ಶೆಟ್ಟರ: ನೋಡಿ, ಈಗ ಗುಡಿ ಮತ್ತು ದೇಗುಲಗಳಿಗೆ ವ್ಯತ್ಯಾಸ ಇದೆ.  ಗುಡಿಗೆ ಭಿನ್ನವಾದ ಕಟ್ಟಡದ ಮಾದರಿ. ಇದಕ್ಕೆ ಯಾವದೇ ರೀತಿಯ ವಿಶೇಷ ವಾಸ್ತು ವಿನ್ಯಾಸ ಬೇಕಾಗುವುದಿಲ್ಲ. ಇಲ್ಲಿ ಭಕ್ತರಿಗೆ ಮಧ್ಯವರ್ತಿಯ ಅಗತ್ಯವೂ ಇರಲಿಲ್ಲ. ಮಾನವ ಇತಿಹಾಸದ ಉದ್ದಕ್ಕೂ ನಾವು ಗುಡಿಗಳ ಇರುವಿಕೆಯನ್ನ, ಐತಿಹ್ಯವನ್ನ ಗಮನಿಸಬಹುದು. ಇವತ್ತಿಗೂ ಮರದ ಕೆಳಗ ಒಂದು ಸಣ್ಣ ಗುಡಿ ಮಾಡಿ, ಪೂಜಿಸೋದನ್ನ ನಾವು ನೋಡ್ತೀವಿ. ದೇಗುಲ, ಮಂದಿರ ಇದಕ್ಕಿಂತ ಭಿನ್ನವಾದದ್ದು.
ಬೌದ್ಧ ಮಂದಿರಗಳು ಬೇರೆ ಒಂದು ರೀತಿ ಮೊನಾಸ್ಟಿಕ್ ಕ್ರಿಯೇಶನ್ಸ್. ಹಿಂದು ದೇವಸ್ಥಾನಗಳು ಬೌದ್ಧ  ದೇಗುಲಗಳ ನಿರ್ಮಾಣದಿಂದ ಪ್ರಭಾವಿತಗೊಂಡಿದ್ವು ಅಂತಲೇ ಹೇಳಬಹುದು. ಸ್ಥೂಲವಾಗಿ ಹೇಳೊದಾದರೆ, ಕ್ರಿ.ಶ. 3ನೆ ಶತಮಾನಕ್ಕಿಂತ ಮುಂಚೆ ನಮಗೆ ಹಿಂದು ದೇವಸ್ಥಾನಗಳು ಸಿಗುವುದೇ ಇಲ್ಲ. ಗುಡಿಗಳು ಇದ್ವು. ಸಣ್ಣ ಸಣ್ಣ ಮಣ್ಣಿನ ಮಂದಿರಗಳು, ಒಂದು ಸಣ್ಣ ಕಲ್ಲಿಟ್ಟು ಪೂಜೆ ಮಾಡುವುದು, ಇವತ್ತಿಗೂ, ಮಾರೆಮ್ಮ, ಇಂಥಾ ದೇವರುಗಳ ಪೂಜೆ ಆಗ್ತಿದ್ದನ್ನ ನಾವು ನೋಡಬಹುದು. ಆದರೆ, ಗುಡಿಗೂ, ದೇಗುಲಕ್ಕೂ ಇರುವ ಮುಖ್ಯ ವ್ಯತ್ಯಾಸ ಅಂದ್ರ, ವಿನ್ಯಾಸದ ವಿಷಯದಲ್ಲಿ ವ್ಯತ್ಯಾಸ ಇರೋದು ಬೇರೆ, ಅದರ ಜೊತೆಜೊತೆಗೆ ಇದ್ದುದ್ದು ಏನು ಅಂದ್ರ ದೇಗುಲಕ್ಕ ತನ್ನದೇ ಆದ ಬಹುಮುಖ್ಯವಾದ ವಿನ್ಯಾಸ, ಯೋಜನೆ ಇರ್ತಿತ್ತು. ಅದರೊಳಗ, ಅರ್ಚಕರು, ಭಕ್ತರು, ಕಲಾವಿದರು ಎಲ್ಲರೂ ಕೂಡಿ ಇರಬಹುದಾಗಿತ್ತು. ಅವರು ಭಾಗಗಳನ್ನ ಮಾಡಿಕೊಂತ ಬಂದ್ರು. ಉದಾಹರಣೆಗೆ, ಅಂಗಭೋಗದೊಳಗಿದ್ದವರು,  ದೇಗುಲಕ್ಕ ಸಂಬಂಧಿಸಿದ ಪೂಜಾಕಾರ್ಯಗಳಿಗೇನೇ ಅಂದರೆ ಪೌರೋಹಿತ್ಯಕ್ಕೆ ತಮ್ಮನ್ನು ತಾವು ಸೀಮಿತಗೊಳಿಸಿಕೊಂಡುಬಿಟ್ಟಿದ್ರು. ನಾವೇನು ಬ್ರಾಹ್ಮಣರು ಅಂತ ಹೇಳ್ತೀವಿ. ರಂಗಭೋಗದೊಳಗೆ ಇದ್ದಂಥವರು, ನವರಂಗದೊಳಗ ಇದ್ದಂಥವರು, ಕಸಗುಡಿಸಿವವರು, ಸ್ವಚ್ಛತೆಯ ಕೆಲಸ ಮಾಡುವವರು, ವಾದ್ಯ, ಮೇಳದವರು, ನೃತ್ಯಮಾಡುವಂಥವರು ಮುಂತಾದವರು. ಇವರಿಗೆ ಅಂಗಭೋಗದೊಳಗ ಪ್ರವೇಶ ಇರ್ತಿರಲಿಲ್ಲ.  ಇವೆಲ್ಲ ಪ್ರವೇಶ ಪಡ್ಕೊಂಡದ್ದು ಆಗಮಗಳ ಮೂಲಕ. ಮತ್ತ ಇದರ ಜೊತೆಗೆ ಭಾಳಾ ವಿಶೇಷ ಅಂದ್ರ ಗುಡಿಗಳಿಗೆ ಆಸ್ತಿ ಇರೂದಿಲ್ಲ. ಆನಂತರ ಬಂದ ಸಂಗತಿ  ದೇವಸ್ಥಾನಗಳಿಗೆ, ಅದನ್ನು ನಿಭಾಯಿಸಲಿಕ್ಕೆ ಭೂದತ್ತಿ ಇಂಥಾವು ಇರತಿದ್ವು. ಅರ್ಚಕರಿಗೆ ವೇತನ ಕೊಟ್ಟು ಇಟ್ಟುಕೊಳ್ಳಲಾಗ್ತಿತ್ತು. ಗುಡಿಗಳಲ್ಲಿ ಕೂಡಾ ಅದರ ಆದಾಯದ ಆಧಾರದ ಮೇಲೆ ಇತ್ತೀಚೆಗೆ ಆ ವ್ಯವಸ್ಥೆ ಪ್ರಾರಂಭವಾಗಿದೆ. ಕ್ರಿ,ಶ. 3ನೇ ಶತಮಾನಕ್ಕಿಂತ ಮೊದಲು ನಾವದನ್ನು ಕಾಣೂದಿಲ್ಲ.
ಕಣವಿ: ಹಂಗಾದ್ರ ಈ ಅರ್ಚಕರು ಒಂದು ನಿರ್ದಿಷ್ಟ ಪಂಗಡದ ನೌಕರರಂತೆ ಕೆಲಸ ಮಾಡ್ತಾ ಇದ್ದರೋ ಅಥವಾ
ಶೆಟ್ಟರ: ದಾನಿಗಳು ತಮ್ಮ ಆಯ್ಕೆಯ ಅರ್ಚಕರುಗಳನ್ನ ನಿಯಮಿಸುತ್ತಿದ್ದರು. ಸಾಮಾನ್ಯವಾಗಿ ಇದು ದೇಗುಲ ಸ್ಥಾಪಿಸುವ ಸಂದರ್ಭಗಳಲ್ಲಿ ಇರತಿತ್ತು. ಅವರು ಹೇಳಿದವರಿಗೆ ಪೌರೋಹಿತ್ಯ ವಹಿಸುವ ಸನ್ನಿವೇಶಗಳೂ ಇರತಿದ್ವು. ಆದರೆ, ಅಗ್ರಹಾರದಲ್ಲಿ ಇರತಿದ್ದ ದೇವಸ್ಥಾನಗಳಿಗೂನೂ, ಅಗ್ರಹಾರೇತರ ದೇವಸ್ಥಾನಗಳಿಗೂನೂ ಸ್ವಲ್ಪ ವ್ಯತ್ಯಾಸ ಇದೆ. ಅಗ್ರಹಾರದಲ್ಲಿ ಇರತಿದ್ದ ಕುಟುಂಬಗಳವರಿಗೆ ಭೂದತ್ತಿಗಳು ಇರತಿದ್ವು. ಅರ್ಚಕ ವೃತ್ತಿ ಇರತಿತ್ತು. ಜೀವನ ನಡೀತಿತ್ತು. ಅದರೊಳಗೂ ಅವರವರ ನಡುವೆ ಪಾಳಿಗಳು ಇರತಿದ್ದವು. ನನ್ನ ಸೋಮನಾಥಪುರದ ಬಗೆಗಿನ ಕೃತಿಯನ್ನ ಗಮನಿಸಿರುವುದಾದರೆ ಈ ಎಲ್ಲ ವಿವರಗಳೂ ಸಿಕ್ಕು ಬಿಡ್ತವೆ. ಯಾರು ಯಾರು ರಂಗಭೋಗದೊಳಗೆ ಇರತಾ ಇದ್ರು, ಯಾರು ಯಾರು ಅಂಗಭೋಗದೊಳಗ ಇರತಾ ಇದ್ರು, ಹೋಮಹವನಾದಿಗಳಿಗೆ ಕಾಷ್ಠವನ್ನು ತರತಾ ಇದ್ದವರು ಯಾರು, ಅಕ್ಕಿ, ಎಣ್ಣೆಯನ್ನ ತರತಾ ಇದ್ದವರು ಯಾರು ಯಾರು ಅದನ್ನೆಲ್ಲ ಅದರಲ್ಲಿ ನಾನು ಹೇಳಿದೀನಿ. ಸೋಮನಾಥಪುರ ದೇವಸ್ಥಾನವಂತೂ ತುಂಬಾ ವಿಶಿಷ್ಟವಾದುದು. ಸಾಕಷ್ಟು ಮಾಹಿತಿಯನ್ನು ಕೊಟ್ಟಿದೀನಿ ಅದರ ಬಗ್ಗೆ. ಆ ರೀತಿಯ ಮಾಹಿತಿ ಎಲ್ಲ ದೇವಸ್ಥಾನಗಳಲ್ಲೂ ಸಿಗುವುದಿಲ್ಲ. ನೀವು ಇದನ್ನ ಕೇವಲ ಊಹೆ ಮಾಡಿ ಬಿಡಬಹುದು. ಪ್ರಧಾನ ಅರ್ಚಕರ ವೇತನ, ಜೀವನ ವಿಧಾನಗಳೇ ಬೇರೆ ಇರ್ತಿದ್ವು. ಉಪ ಅರ್ಚಕರ ವೇತನ, ಜೀವನ ವಿಧಾನಗಳೇ ಬೇರೆ ಇರ್ತಿದ್ವು. ಅವರ ವೇತನಗಳನ್ನ ನಿಗದಿಪಡಿಸುವಾಗಲೇ ನಿಮಗೆ ಗೊತ್ತಾಗಿ ಬಿಡ್ತದೆ. ಎಂಥ ಸೌಕರ್ಯಗಳನ್ನ, ಸವಲತ್ತುಗಳನ್ನ ಅವರು ಸಮಾಜದಲ್ಲಿ ಅನುಭವಿಸಿದರು ಅಂತ. ಪ್ರಧಾನ ಅರ್ಚಕರ ವೇತನ ಇಂತಿಷ್ಟು ಅಂತ ಇರ್ತಿತ್ತು. ಸಹಾಯಕರಿರತಾರ, ಮಾಣಿ ಅಂತ ಅವನಿಗಿಷ್ಟು. ನೀರು ತರೋವ್ರಿಗಿಷ್ಟು, ಎಣ್ಣಿ ತರೋವ್ರಿಗಿಷ್ಟು, ಹೂಹಣ್ಣು ತರೋವ್ರಿಗಿಷ್ಟು, ನೈವೇದ್ಯ ಮಾಡೋವ್ರಿಗಿಷ್ಟು. ಅದರಲ್ಲಿ ಈ ಎಲ್ಲಾ ವಿವರಗಳ್ನ ಕೊಟ್ಟಿದೀನಿ.
ಗುಡಿಗಳೇನಿ ಇದಾವೆ, ಅವು ನ್ಯಾಚುರಲ್ ಮತ್ತು ಗ್ರಾಮೀಣ. ? ಪ್ರದೇಶದೊಳಗ ಏನು ಅವರ ಭಕ್ತಿ ಅಥವಾ ನಂಬಿಕಿ ಇತ್ತೋ, ಅದರ ಪ್ರಕಾರ. ಅವ್ರಿಗೆಲ್ಲಾ ಮೂರ್ತಿಲಕ್ಷಣಗಳು ಇರೂದಿಲ್ಲ. ಸಾಮಾನ್ಯವಾಗಿ ಒಂದು ಕಲ್ಲಿಟ್ಟು ಅದಕ್ಕ ದುರ್ಗಮ್ಮ ಅಂತ ಕರೀತಾರ. ಅದನ್ನ ಬ್ಯಾರೇದವ್ರು ಮಾರೆಮ್ಮ ಅಂತ ಕರೀತಾರ. ಅಥವಾ ಇನ್ನೊಂದೇನೋ ಹೆಸರು. ಒಂದಿಷ್ಟು ಎಣ್ಣಿ ಹಾಕಿರ್ತಾರ. ಇವು ಒಂದು ಥರದ್ದು. ಎರಡನೆಯ ಥರದ್ದು ದೇವಸ್ಥಾನಗಳು. ಇದು ಸ್ವಲ್ಪ ಖರ್ಚಿನ ಕೆಲಸ. ದೇವಸ್ಥಾನಗಳಿಗೆ ಪೋಷಕರು, ದಾನಿಗಳು ಬೇಕು. ಈ ಖರ್ಚುವೆಚ್ಚಾನೆಲ್ಲಾ ಈ ದಾನಿಗಳೇ ನೋಡಿಕೋಬೇಕಾಗುತಿತ್ತು. 
ಕಣವಿ: ನನಗೊಂದು ಕುತೂಹಲ ಸದಾ ಇದೆ. ಈಗ ಎಲ್ಲಾ ಹಳ್ಳೀಗೆ ಹೋದ್ರೂನೂ ಒಂದು ಹಣಮಪ್ಪನ ಗುಡಿ ಇರ್ತದ, ಎಷ್ಟೋಕಡೆ ಒಂದು ಶಂಕರಲಿಂಗನ ಗುಡಿ ಇರ್ತದ, ಕೆಲವೊಂದು ಕಡೆ ದೇವಿ ಗುಡಿ ಇರ್ತದ.. ಇವೇ ಇಷ್ಟು ಏಕೆ ಸಾರ್ವತ್ರಿಕವಾದವು. ಅವು ಕೆಲವು ಪ್ರಾಚೀನ ಕಲ್ಟ ಅಥವಾ ಆರಾಧನೆಗಳಾ ? ರಾಮನ ಗುಡಿಗಳಿಗಿಂತ ಹಣಮಪ್ಪನ ಗುಡಿಗಳೇ ಹೆಚ್ಚೇಕೆ? ಇದು ಉತ್ತರ ಮತ್ತು ದಕ್ಷಿಣ ಭಾರತ ಎರಡರೊಳಗೂ ಎದ್ದು ಕಾಣುತ್ತಲ್ಲ?
ಶೆಟ್ಟರ: ದಕ್ಷಿಣ ಭಾರತದಲ್ಲಿ ಇರೂವಷ್ಟು ಉತ್ತರದಲ್ಲಿಲ್ಲ ಇದು. ದಕ್ಷಿಣದಲ್ಲಿ?? ಇದು ಮೊದಲಿಂದ ಇರಲಿಲ್ಲ. ವಿಜಯನಗರ ಅರಸರ ಕಾಲದಿಂದ ಹುಟ್ಟಿಕೊಳ್ತು. ಊರಿಗೊಂದು ಹಣಮಪ್ಪನ ಗುಡಿ ಇರಬೇಕು ಅದು ವಿಜಯನಗರ ಅರಸರ ಕಾಲದಿಂದ ಬಂತು. ಅದಕಿಂತ ಮುಂಚಿತವಾಗಿ ಇರಲಿಲ್ಲ. ಅದು ಮಾಧ್ವರಿಂದ ಬಂದ ಕಾನ್ಸೆಪ್ಟ್. ಅದಕ್ಕ ಒಂದು ಹಿನ್ನೆಲೆ ಇದೆ. ಒಬ್ಬರು ಮಾಧ್ವ ಗುರುಗಳು, ಇದ್ರು ವಿಜಯನಗರ ಕಾಲದಲ್ಲೇನೆ. ಈಗ ಈ ಮಾಧ್ವರೊಳಗ ಎಲ್ರೂ ಅದನ್ನೇ ಪಂಚಮುಖಿ ಆಂಜನೇಯ ಆರಾಧನೆ ಮಾಡೂದು. ಇದು ಪುರಾಣಗಳಿಂದ ಬಂದದ್ದೇನಲ್ಲ. ಆಗ ಊರ ಹೊರಗ ಹಣಮಂತನ ದೇವಸ್ಥಾನ ಕಟ್ಟಿಸಬೇಕು ಅನ್ನೂದು..ಅದೂ ಒಂದು ಸಾವಿರದಾ ಒಂದು ದೇವಸ್ಥಾನಗಳನ್ನ ಕಟ್ಟಿಸಬೇಕು ಅನ್ನೂ ಐತಿಹ್ಯ ಅದೆ. ಅದು ವಾಸ್ತವವೋ, ಕಲ್ಪನೆಯೋ ಅಂತೂ ಆ ಸಮಯದೊಳಗ ಇದು ಕಾಣಿಸಿಕೊಂಡಿತು. ಎಲ್ಲಾ ದೇವಸ್ಥಾನಗಳೂ ಸಾಮಾನ್ಯವಾಗಿ ಗಡಿ ಹೊರಗೇ ಇರ್ತಾವು. ಊರ ಹೊರಗ ಹಣಮಪ್ಪ ಅನ್ನೂದು ಹಂಗ ಬಂತು. ಇದು ಒಂದು ಐತಿಹ್ಯ.
ಎರಡನೇದು ಏನು ಅಂತಂದ್ರ, ಸಾಂಪ್ರದಾಯಿಕ ಹಿನ್ನೆಲೆಯೊಳಗ ಕ್ಷೇತ್ರಪಾಲ ಅನ್ನುವ ಇನ್ನೊಂದು ಕೂಡಾ ಇತ್ತು. ಆ ಕ್ಷೇತ್ರಪಾಲಂದು ಒಂದು ಮುಖ್ಯವಾದ ಶಕ್ತಿ ಅಂತಂದ್ರ, ಕ್ಷೇತ್ರಗಳ ರಕ್ಷಣೆ ಮಾಡೋದು. ಗ್ರಾಮಕ್ಷೇತ್ರಗಳನ್ನ ಕೂಡಾ ರಕ್ಷಣೆ ಮಾಡೋದು ಅವನ ಕರ್ತವ್ಯ ಆಗಿತ್ತು. ಈ ಕ್ಷೇತ್ರಪಾಲರು, ಸಾಮಾನ್ಯವಾಗಿ ಯಕ್ಷರು ಅದು ಮೊದಲಿನಿಂದಾನೂ ಇದೆ. ೧೪ ನೇ ಶತಮಾನದ ನಂತರ, ಈ ಪಾತ್ರವನ್ನು ಹಣಮಪ್ಪ ವಹಿಸಿದ. ಅವನು ಪಂಚಮುಖಿ ಅನ್ನುವ ಆಗಿನ ಜನರ ಪರಿಕಲ್ಪನೆಯ ನಿರೀಕ್ಷೆಗಳನ್ನು ಈಡೇರಿಸುತ್ತಾನೆ ಕೂಡಾ. ಹೀಗಾಗಿ ಹಣಮಂತ ಜನಪ್ರಿಯನಾದ.
ಕಣವಿ: ಆಮೇಲೆ, ಈ ನಾನ್-ಆಂತ್ರೋಪೋಮಾರ್ಫಿಕ್, ಮನುಷ್ಯಾಕಾರವಲ್ಲದ  ಶಂಕರಲಿಂಗ. ಇನ್ನೂ ಹಳೆಯದು ಆಗಿರಬಹುದು ?
ಶೆಟ್ಟರ: ಹೌದು.
ಕಣವಿ: ಅನೇಕ ಪಾಶ್ಚಾತ್ಯರು ಲಿಂಗಕ್ಕೆ ಅಥವಾ ಯೋನಿಪೀಠದಲ್ಲಿರುವ ಲಿಂಗಕ್ಕೆ ಸೃಷ್ಟಿ ಕ್ರಿಯೆಯ ಪ್ರತೀಕ ಅಂದಿದ್ದಾರೆ ನೀವೇನಂತೀರಿ ?.
ಶೆಟ್ಟರ: ಇರಬಹುದು ಅದರಲ್ಲಿ ತಪ್ಪೇನಿಲ್ಲ. ಫ಼ರ್ಟಿಲಿಟಿ ಕಲ್ಟ್ಸ್ ವಿಶ್ವದಲ್ಲೆಲ್ಲಾ ನಾವು ಕಾಣುತ್ತೇವೆ. ಅಷ್ಟೇ ಅಲ್ಲ ನಮ್ಮಲ್ಲಿ  ಲಜ್ಜಾಗೌರಿ ಅಂತ ಒಂದು ಮೂರ್ತಿ ಅದ, ನೀವು ನೋಡಿರಬೇಕು ಅದನ್ನ. ನಮ್ಮ ಕರ್ನಾಟಕದಲ್ಲಿ ಬಹಳಷ್ಟು ಕಡೆ ಇದೆ. ಕುಶಾನರ ಕಾಲದಿಂದಲೇನೇ ಇದು ಪ್ರಾರಂಭವಾಗಿರೋದನ್ನ ನಾವು ಕಾಣ್ತೀವಿ.
ಕಣವಿ: ಈಗ ನಿಮ್ಮ ಹಳಗನ್ನಡ ಲಿಪಿ, ಲಿಪಿಕಾರರು, ಲಿಪಿ ವ್ಯವಸಾಯ ಬಗ್ಗೆ ಬರೆದ ಪುಸ್ತಕಕ್ಕೆ ಬರೋಣ. ಲಿಪಿಯ ವಿಕಾಸದ ಬಗ್ಗೆ ಮಾತಾಡುವಾಗ, ನಾವು ಆಕರಗಳನ್ನೆಲ್ಲಾ ಶಿಲಾಶಾಸನಗಲ್ಲಿಯೇ ನೋಡಿದ್ದೀರಿ ಆದರೆ ಲೇಖನ ಕೇವಲ ಶಿಲಾಶಾಸನಗಳಲ್ಲಷ್ಟೇ ಅಲ್ಲವಲ್ಲ. ತಾಡೋಲೆ ಇರ್ಬಹುದು, ಪ್ಯಾಪಿರಸ್ ಇರ್ಬಹುದು, ಇದೆಲ್ಲ ನಮ್ಮಲ್ಲಿ ಯಾವಾಗ ಶುರುವಾತು? ನಮಗೆ ಸಿಕ್ಕ ಅತ್ಯಂತ ಪ್ರಾಚೀನ ಹಸ್ತಪ್ರತಿ ಯಾವದು? ಅಕ್ಷರ ಕಲಸೋವ್ರು ಉಸುಗಿನ ಮ್ಯಾಲ, ಪಾಟೀ ಮ್ಯಾಲ ಎಲ್ಲಾ ಬರೀತಿದ್ದರು ಆದ್ದರಿಂದ ಶಾಸನಗಳಿಂದನೇ ಲಿಪಿ ಬೆಳಿತಂತ ಹೇಗೆ ಹೇಳೂದು?
ಶೆಟ್ಟರ:  ಅದು ಸರಿ ಹಂಗ ಹೇಳಲಿಕ್ಕೆ ಬರೂದಿಲ್ಲ. ಮೌಖಿಕ ಸಂಸ್ಕೃತಿ ಇದ್ದಾಗ ಕೂಡಾನೂ, ನೀವು ಹೇಳಿದ ಹಾಗೆ ನೀರಿನ ಮೇಲೆ ಅಥವಾ ಉಸುಗಿನ ಮ್ಯಾಲೆ ಅಥವಾ ಇನ್ನೊಂದು ಯಾವದಾದರೂ ಅಳಿಸಬಲ್ಲ ಸಾಧನದ ಮ್ಯಾಲೆ ಅದನ್ನ ಅವ್ರು ಮಾಡಿರುವ ಸಾಧ್ಯತೆ ಇದೆ. ಆದರ, ಅವುಗಳ ಅವಶೇಷ ಸಿಗಲ್ಲವಲ್ಲ. ಶಾಸನಗಳು ಕ್ರಿಸ್ತಪೂರ್ವ ಮೂರನೇ  ಶತಮಾನದಿಂದ ಇಕಡೆ ಸಿಗತಾವು.  ಬೌದ್ಧರಿಂದ ಮತ್ತು ಜೈನರಿಂದ ನಮ್ಮಲ್ಲಿ ಲೇಖನ ಪ್ರಾರಂಭವಾಯಿತು. ನಮಗ ಬ್ರಾಹ್ಮೀ ಶಾಸನಗಳು ೧೯ನೆಯ ಶತಮಾನದರೆಗೂ ಓದಾಕ ಬರ್ತಿರಲಿಲ್ಲ. ನಮಗೆ ವಿಸ್ಮೃತಿಯಾಗಿತ್ತು. ಜೇಮ್ಸ್ ಪ್ರಿನ್ಸೆಪ ಎನ್ನುವ ಪಾಶ್ಚಾತ್ಯನೊಬ್ಬ ಒಂದು ದ್ವಿಭಾಷಾ ಶಾಸನ (ಗ್ರೀಕ ಮತ್ತು ಬ್ರಾಹ್ಮಿ ಲಿಪಿಗಳಲ್ಲಿ ಬರೆದದ್ದು) ತೆಗೆದುಕೊಂಡು ಬ್ರಾಹ್ಮೀ ಅಕ್ಷರಗಳನ್ನು ಒಂದೊಂದಾಗಿ ಗುರುತಿಸಿದ. ನಮ್ಮ ಯಾವ ಪಂಡಿತರ ಕಡೆನೂ ಆಗಲಿಲ್ಲ.  ಔರಂಗಜೇಬನ ಕಾಲದಾಗೂ ಯಾರಿಗೂ ಓದಾಕ ಆಗಲಿಲ್ಲ. ನಾವೆಲ್ಲ ಮರೆತು ಬಿಟ್ಟಿದ್ದೆವು.
ಕಣವಿ: ಆಮೇಲೆ, ನಾಗರೀನೂ ಇದರಿಂದ ಬಂತ್ರೀ?
ಶೆಟ್ಟರ: ನಾಗರೀ ಬಂದದ್ದು ಬಹಳ ನಂತರ, ೭ನೆಯ ಶತಮಾನದಲ್ಲಿ. ಕ್ರಿ ಪೂ ೩ನೆಯ ಶತಮಾನದಿಂದ ಕ್ರಿ ಶ ೩ನೆಯ ಶತಮಾನದವರೆಗೆ ಬ್ರಾಹ್ಮಿ ಒಂದೇ ಲಿಪಿಯಾಗಿತ್ತು ಎಲ್ಲ ಭಾಷೆಗಳಿಗೂ. ನಂತರ ಸಾವಕಾಶ ಇತರ ಲಿಪಿಗಳು ಬಂದವು. ಬ್ರಾಹ್ಮಿ ಕೇವಲ ಲಿಪಿಯಾಗಿತ್ತು, ಭಾಷೆ ಅಲ್ಲ. ಬ್ರಾಹ್ಮೀಯಿಂದ ಕನ್ನಡ ಬಂದಿದ್ದು.
ಅಫ಼ಘಾನಿಸ್ತಾನದ ಗಾಂಧಾರ ಪ್ರದೇಶದಲ್ಲಿ ಅಶೋಕನಿಗೆ ಖರೋಷ್ಟಿ ಮತ್ತು ಅಮಹಾರಿಕ್ ಬರೆಯ ಬಲ್ಲ ಲಿಪಿಕಾರರು ಸಿಕ್ಕರು. ಅವನು ಅಲ್ಲಿ ಹೋಗಿ ಅವರ ಬರವಣಿಗೆಯನ್ನು ಅಭ್ಯಸಿಸಿ ತನ್ನ ಆದೇಶಗಳನ್ನು ಶಿಲಾ ಶಾಸನಗಳ ಮೂಲಕ ಮೂಡಿಸಲು ಕರೆತಂದ.
ಅಶೋಕನ ಬಗ್ಗೆ ನಾವು ಏನೇನೆಲ್ಲಾ ಹೇಳತೀವಿ. ಆದರೆ ಇದೆಲ್ಲಾ ಮುಖ್ಯ ಅಲ್ಲವೇ ಅಲ್ಲ. ನಾವು ಅವನನ್ನು ನೆನೆಸಬೇಕಾದದ್ದು ನಮ್ಮ ಲಿಪಿಗಳ ವಿಕಾಸಕ್ಕೆ ಕಾರಣೀಭೂತನಾದ ಎನ್ನುವದಕ್ಕಾಗಿ. ನಮ್ಮ ಸಂಸ್ಕೃತಿಗೆ ಎಲ್ಲದಕ್ಕೂ ಹೆಚ್ಚಿನ ಅವನ ಶಾಶ್ವತ ದೇಣಿಗೆ ಎಂದರೆ ಲಿಪಿ ಎನ್ನ ಬಹುದು.
ಕಣವಿ: ನಿಮ್ಮ ಇತ್ತೀಚಿನ ಭಾಷೆಯ ಇತಿಹಾಸದ ಬಗೆಗಿನ ಬರಹಗಳನ್ನು ಬಹಳ ಉತ್ಸಾಹ ಮತ್ತು ಕುತೂಹಲದಿಂದ ನಾನು ಓದಿದ್ದೇನೆ. ನಿಮ್ಮ ಅಮುಉಲ್ಯ ಸಮಯ ಮತ್ತು ಒಳನೋಟಗಳಿಗಾಗಿ ಕ್ರತಜ್ಞ. ನಮಸ್ಕಾರ. 
------------------------------------------------------------------
( ಈ ಮಿಶ್ರ ಭಾಷಾ ಸಂಭಾಷಣೆಯನ್ನು ಕನ್ನಡಕ್ಕೆ ಇಳಿಸಲು ಸಹಾಯ ಮಾಡಿದ ಶ್ರೀಮತಿ ಛಾಯಾ ಭಗವತಿ ಅವರಿಗೆ ಋಣಿ )