Thursday, August 30, 2018

Avishrant Anveshaka M M Kalburgi a tribute

On Aug 30, 2015 morning Prof M M Kalburgi was assassinated heinously. This is an edited version of the tribute written then.
Portions of this tribute have been published in  English, Tamil and Malayalam in Rediff,com, Ghadar Jari Hai, Outlook magazine, Hindustan Times, Los Angeles Times and many websites on the Internet.ಅವಿಶ್ರಾಂತ ಅನ್ವೇಷಕ – ಪ್ರಾ. ಕಲಬುರ್ಗಿ
ಶಿವಾನಂದ ಕಣವಿ
( ಕಲಬುರ್ಗಿ ಯವರ ಹತ್ಯೆಯ ಮರು ದಿನ ನಾನು ಬರೆದ ಶ್ರದ್ಧಾಂಜಲಿ  ಹಿಂದೂಸ್ತಾನ್ ಟೈಮ್ಸ್, ಗದರ್ ಜಾರೀ ಹೈ, ಔಟ್ಲುಕ್ ಮ್ಯಾಗಜಿನ್, ರಿಡಿಫ್, ಲಾಸ್ ಎಂಜೆಲಿಸ್ ಟೈಮ್ಸ್ ಗಳಲ್ಲಿ, ತಮಿಳು, ಮಲಯಾಳಂ ಪತ್ರಿಕೆಗಳಲ್ಲಿ  ಮತ್ತು ಅನೇಕ ಜಾಲ ತಾಣಗಳಲ್ಲಿ  ಪ್ರಕಟ ವಾಯಿತು ಮತ್ತು ಉದ್ಧರಿಸಲಾಯಿತು. ಇದು ಆ ಶ್ರದ್ಧಾಂಜಲಿಯ ಪರಿಷ್ಕೃತ ಆವೃತ್ತಿ )


ಅಗಸ್ಟ್ ೩೦, ೨೦೧೫ ರ ಮುಂಜಾನೆ, ಕರ್ನಾಟಕದ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ನಗರವಾದ ಧಾರವಾಡದ ಸಂತೃಪ್ತ ಸುಸಂಸ್ಕೃತ ಜೀವನಕ್ಕೆ ಆಘಾತ ತಲುಪಿತ್ತು. ಧಾರವಾಡದ ರತ್ನಗಳಲ್ಲಿ ಒಬ್ಬರಾಗಿದ್ದ ಪ್ರಸಿದ್ಧ ಸಂಶೋಧಕ, ಸಮೃದ್ಧ ಲೇಖಕ,  ಪ್ರಾ. ಮಲ್ಲೇಶಪ್ಪ ಕಲ್ಬುರ್ಗಿ ಯವರಿಗೆ ಅಮಾನುಷ ಕೊಲೆಗಡುಕರು ಅವರ ಮನೆಗೇ ಬಂದು ಗುಂಡು ಹಾಕಿದ್ದರು. ಆ ಕರಾಳ ದಿನ ನಾನೂ ಧಾರವಾಡದಲ್ಲಿದ್ದೆ. ಮುಂಜಾನೆ ವಿಶ್ವವಿದ್ಯಾಲಯದ ಆವರಣದಲ್ಲಿ ತಿರುಗಾಡಿ ಮನೆಗೆ ಮರುಳುತ್ತಿದ್ದಂತೆಯೇ ದಾರಿಯಲ್ಲಿ ಈ ಭಯಂಕರ ಸುದ್ದಿ ಕಿವಿಗೆ ಬಿತ್ತು. ನಾನು ಮನೆ ಮುಟ್ಟುವ ಮೊದಲೇ ನನ್ನ ತಮ್ಮ ಪ್ರಿಯದರ್ಶಿ, ಕಲಬುರ್ಗಿ ಮತ್ತು ಅವರ ಕುಟುಂಬದವರೊಂದಿಗೆ ಆಸ್ಪತ್ರೆಗೆ ಧಾವಿಸಿದ್ದ. ಆದರೆ ಕಾಲ ಕೈ ಮೀರಿತ್ತು.

ಈ ಭೀಷಣ ಹತ್ಯೆ ವಿಶಾಲವಾದ ಕನ್ನಡ ಸಾಹಿತ್ಯಿಕ ವಲಯವನ್ನು; ಅವರ ಅಪಾರ ಶಿಷ್ಯ ಮತ್ತು ಅಭಿಮಾನಿ ಬಳಗವನ್ನು ಬುಡ ಸಮೇತ ಅಲುಗಾಡಿಸಿತ್ತು. ಈಗಲೂ, ೭೭ ವರುಷದ ಲೇಖಕನ, ಮಾಫಿಯಾ ಶೈಲಿಯ ಅಮಾನವೀಯ ಹತ್ಯೆಯನ್ನು ಯಾರು ಮಾಡಿಸಿರಬಹುದು ಎಂದು ಉಹಾಪೋಹಗಳೇ ನಡೆದಿವೆ.

ಪ್ರಾ. ಕಲಬುರ್ಗಿಯವರು ಸಾವಿರಾರು ವಿದ್ಯಾರ್ಥಿಗಳಿಗೆ “ಕವಿರಾಜಮಾರ್ಗ”, ನಾಡೋಜ ಪಂಪನ ಕಾವ್ಯ ಮತ್ತು ವಚನ ಸಾಹಿತ್ಯದ ಒಳಸುಳುವುಗಳ ಬಗ್ಗೆ ಆಳವಾಗಿ, ಸ್ವಾರಸ್ಯಕರವಾಗಿ ಪಾಠ ಹೇಳಿದ ಕರ್ನಾಟಕ ವಿಶ್ವವಿದ್ಯಾಲಯದ ಲೆಕ್ಚರ್ ಹಾಲುಗಳ ಸಮೀಪದಲ್ಲೇ ಮರುದಿನ ಅವರ ಅಂತ್ಯಕ್ರಿಯೆಯನ್ನು ಲಿಂಗಾಯತ ಧರ್ಮದ ವಿಧಿಗಳ ಪ್ರಕಾರ ನಡೆಸಲಾಯಿತು.
ತದನಂತರ ಸಾವಿರಾರು ಜನ ಲೇಖಕರು, ವಿದ್ಯಾರ್ಥಿಗಳು; ಧಾರವಾಡ, ಬೆಂಗಳೂರು, ದಿಲ್ಲಿ, ವಾರಣಾಸಿ, ತಿರುವನಂತಪುರಂ ಮತ್ತಿತರ ಪಟ್ಟಣಗಳಲ್ಲಿ ಈ ಹತ್ಯೆಯನ್ನು ಧಿಕ್ಕರಿಸಿ ಮೆರವಣಿಗೆ, ಪ್ರದರ್ಶನಗಳನ್ನು ಮಾಡಿದ್ದಾರೆ ಮತ್ತು ಬೇಗ ಅಪರಾಧಿಗಳನ್ನು ಬಂಧಿಸಲು ಸರಕಾರವನ್ನು ಒತ್ತಾಯಿಸಿದ್ದಾರೆ. ಮೂರು ವರುಷಗಳ ನಂತರವೂ ಕೊಲೆಗಡುಕರ ಮತ್ತು ಅವರ ಹಿಂದಿರುವ ಶಕ್ತಿಗಳ ಪತ್ತೆ ಆಗಿಲ್ಲ. ಇತ್ತೀಚಿಗೆ ಪತ್ರಕರ್ತೆ ಗೌರಿ ಲಂಕೇಶರ ಹತ್ಯೆಯ ತಪಾಸಣೆಯ ಸಂದರ್ಭದಲ್ಲಿ ಕೆಲ ಸಂಶಯಾಸ್ಪದ ವ್ಯಕ್ತಿಗಳ ಬಂಧನದ ಸುದ್ದಿ ಮಾಧ್ಯಮಗಳಲ್ಲಿ ಬಂದ ನಂತರ ‘ಅಂತೂ ಕೊನೆಗೆ ಕಲಬುರ್ಗಿಯವರ ಹತ್ಯೆಯ ನಿಗೂಢವನ್ನೂ ಪರಿಹರಿಸಲಾಗುವದೇ ’  ಎಂದು ಅವರ ಅಭಿಮಾನಿಗಳಿಗೆ ಸ್ವಲ್ಪ ಆಸೆ ಹುಟ್ಟಿದೆ.

ಬೆಂಗಳೂರಿನಂತೆ ಧಾರವಾಡದ ಹೆಮ್ಮೆ ಐಟಿ ಕೋಟ್ಯಾಧೀಶರು ಅಥವಾ ರಿಯಲ್ ಎಸ್ಟೇಟ ರಾಜರು ಇಲ್ಲವೇ ರಾಜಕೀಯ ದಲ್ಲಾಳಿಗಳು ಅಲ್ಲ. ಉತ್ಕೃಷ್ಟ  ಸಂಗೀತಗಾರರು; ಜ್ಞಾನಪೀಠ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ ಪುರಸ್ಕೃತರಾದ  ಲೇಖಕರು; ಕವಿಗಳು; ನಾಟಕಕಾರರು; ಕಥೆಗಾರರು; ಸಂಶೋಧಕರು, ಕಲಾವಿದರೇ ಧಾರವಾಡದ ಖ್ಯಾತಿಗೆ ಕಾರಣೀಭೂತರು. ಆದ್ದರಿಂದಲೇ ಆದಿನದ ಕರಾಳ ಕೊಲೆಯಿಂದ ಜನ ದಂಗು ಬಡೆದಿದ್ದರು. ಕೊಲೆಗಡುಕರು ಸಾಮಾನ್ಯ ವಿದ್ಯಾರ್ಥಿಗಳಂತೆ ಬಂದು "ಸರ್ ಇದ್ದಾರೆಯೇ" ಎಂದು ಬಾಗಿಲಿನಿಂದ ಕೇಳಿ, ಒಳಗೆ ಪ್ರವೇಶಿಸಿ ಕಲಬುರ್ಗಿಯವರ ಹಣೆಗೆ ಗುಂಡಿಟ್ಟು ಕೊಂದು ತಮ್ಮ ಮೋಟರ್ ಸೈಕಲ್ ಮೇಲೆ ಫ಼ರಾರಿ ಆಗಿದ್ದರು. ಇದರಿಂದ ಜನತೆ ತಲ್ಲಣಿಸಿತ್ತು.

ಈ ಆಘಾತದಿಂದ ಸಾವರಿಸಿಕೊಂಡು ಜನ ಸಿಟ್ಟಿಗೇಳಲೂ ಕೆಲ ದಿನ ಬೇಕಾಯಿತು. ಸೆಪ್ಟೆಂಬರ ೧೪, ೨೦೧೫ ರಂದು ಸಾವಿರಾರು ಜನ ಕರ್ನಾಟಕದ ಮೂಲೆ ಮೂಲೆಗಳಿಂದ ಧಾರವಾಡಕ್ಕೆ ಬಂದು ವಿಶಾಲ ಮೆರವಣಿಗೆ ಮತ್ತು ಪ್ರತಿಭಟನಾತ್ಮಕ  ಸಭೆಗಳಲ್ಲಿ ಭಾಗವಹಿಸಿದರು. ಸರಕಾರೀ ಶೋಧ ಕಾರ್ಯಾಚರಣೆಯ ಆಮೆ ಗತಿಯನ್ನು ಧಿಕ್ಕರಿಸಿದರು.
ನಾನು ಅವರ ಶಿಷ್ಯನಾಗಿರಲಿಲ್ಲ. ಆದರೆ ನನ್ನ ತಂದೆ-ತಾಯಿ ಕಲಬುರ್ಗಿಯವರ ಆಪ್ತರಾಗಿದ್ದರು. ಅವರ ಮನೆ ಕೂಡ ಕಲ್ಯಾಣ ನಗರದ ನಮ್ಮ ಮನೆಯ ಪಕ್ಕದಲ್ಲಿಯೇ. ಹೀಗಾಗಿ ಮುಂಬೈ-ಇಗತ್ ಪುರಿ ವಾಸಿಯಾಗಿದ್ದರೂ ಧಾರವಾಡಕ್ಕೆ ಬಂದಾಗಲೆಲ್ಲ ನನಗೂ ಅವರ ಆಪ್ತ ಸ್ನೇಹ ಓದಗಲು ತಡವಾಗಲಿಲ್ಲ.ಹನ್ನೆರಡನೆಯ ಶತಮಾನದ ಶರಣರ ವಚನ ಸಾಹಿತ್ಯದಲ್ಲಿನ ಆಧುನಿಕ ಕ್ರಾಂತಿಕಾರೀ ಅಂಶಗಳು ನಮ್ಮಿಬ್ಬರ ಚರ್ಚೆಗೆ ವಿಷಯವಾಗಿದ್ದವು. ಅವರು ಸಂತೋಷದಿಂದ ಧಾರಾಳವಾಗಿ ತಮ್ಮ ಅಭ್ಯಾಸ-ಪಾಂಡಿತ್ಯಗಳ ಫ಼ಲಗಳನ್ನು, ಒಳನೋಟಗಳನ್ನು ನನ್ನೊಡನೆ ಹಂಚಿಕೊಳ್ಳುತ್ತಿದ್ದರು. ಭೆಟ್ಟಿ ಆದಾಗೆಲ್ಲ ಅವರು ತಾವು ಇತ್ತೀಚೆಗೆ ಬರೆದ ಅಥವಾ ಸಂಪಾದಿಸಿದ ಹೊತ್ತಿಗೆಗಳನ್ನು ಬಹಳ ಉತ್ಸಾಹ ಮತ್ತು ಅಭಿಮಾನದಿಂದ ನನಗೆ ತೋರಿಸುತ್ತಿದ್ದರು. ಅವರ ಉತ್ಸಾಹ ಸಾಂಕ್ರಾಮಿಕವಾಗಿತ್ತು. ಅವರು ಒಳ್ಳೆಯ ಸಂಘಟಕರೂ, ಪ್ರೇರಕರೂ ಕೂಡ ಆಗಿದ್ದರು. ಅನೇಕರನ್ನು ಉತ್ಸಾಹಿಸಿ ಪ್ರೇರೇಪಿಸಿ ಹಲವಾರು ಯೋಜನೆಗಳ ಕೆಲಸಕ್ಕೆ ಕೈಗೂಡಿಸಲು ಪುಸಲಾಯಿಸುತ್ತಿದ್ದರು.

ಅವರ ಬರವಣಿಗೆ ಸಮೃದ್ಧವಾಗಿತ್ತು: ಸಂಶೋಧಕ ಲೇಖನಗಳ ನಾಲ್ಕು ಸಂಪುಟ : ಮಾರ್ಗ ೧-೬ ; ಸುಮಾರು ೭೫೦ ಸಂಶೋಧನ ಪ್ರಬಂಧಗಳು,  ಹತ್ತಾರು ವಚನ ಸಾಹಿತ್ಯದ ಸಂಪುಟಗಳನ್ನೂ ಒಳಗೊಂಡು ೭೦ ಸಂಪಾದಿತ ಕೃತಿಗಳು ಇತ್ಯಾದಿ. ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಉತ್ತಮ ಪ್ರಾಧ್ಯಾಪಕರೆಂದು ಖ್ಯಾತರಾದ ನಂತರ, ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾಗಿ ಉತ್ತಮ ಸಂಯೋಜಕರೂ, ಸಂಘಟಕರೂ ಆಗಿ ಬೆಳಗಿದರು. ನಿವೃತ್ತರಾದ ನಂತರ ಅವರ ಲೇಖನಿ ಇನ್ನೂ ಚುರುಕಾಯಿತು.

ಅವರ ಕೊನೆಯ ೫ ವರುಷಗಳ ಕೃತಿಗಳ ಪಟ್ಟಿಯೇ ಅಗಾಧವಾಗಿದೆ. ಉದಾಹರಣೆಗೆ : ಬಸವರಾಜ ಕಟ್ಟೀಮನಿಯವರ ಸಮಗ್ರ ಸಾಹಿತ್ಯಿಕ ಮತ್ತು ಪತ್ರಿಕೋದ್ಯಮೀ ಬರವಣಿಗೆಗಳನ್ನು ೧೩ ಸಂಪುಟಗಳಲ್ಲಿ ಸಂಪಾದಿಸಿದರು. ಕಳೆದ ಶತಮಾನದ  ಅಗ್ರಗಣ್ಯ ಸಂಶೋಧಕರಲ್ಲಿ ಒಬ್ಬರಾದ ಫ. ಗು. ಹಳಕಟ್ಟಿಯವರ ಸಮಗ್ರ ಬರವಣಿಗೆಗಳನ್ನು ಸಂಪಾದಿಸಿ ಹಲವು ಸಂಪುಟಗಳಲ್ಲಿ ಪ್ರಕಟಿಸಿದರು. ವಿಜಯಪುರದ (ಮುಂಚೆ ಬಿಜಾಪುರ) ಆದಿಲ್ ಶಾಹಿ ರಾಜರ ಆಸ್ಥಾನದಲ್ಲಿದ್ದ ಒಬ್ಬ ಇತಿಹಾಸಕಾರನು ಫಾರ್ಸಿ ಭಾಷೆಯಲ್ಲಿ ಬರೆದ ಇತಿಹಾಸವನ್ನು ಕನ್ನಡದಲ್ಲಿ ಭಾಷಾಂತರಿಸಿ ೧೨ ಸಂಪುಟಗಳಲ್ಲಿ ಪ್ರಕಟಿಸಿದರು. ಇದಲ್ಲದೆ ೧೨ನೆಯ ಶತಮಾನದ ಲಿಂಗಾಯತ ಶರಣರ ಆಯ್ದ ೨೫೦೦ ವಚನಗಳ ಸಂಪುಟವನ್ನು ಪರಿಷ್ಕರಿಸಿ ೨೦ ಭಾಷೆಗಳಲ್ಲಿ ಅನುವಾದಿಸಿ ಪ್ರಕಟಿಸುವ ಬಸವ ಸಮಿತಿಯ ಯೋಜನೆಯ ಅಧ್ವರ್ಯು ಆಗಿ ಅದರಲ್ಲಿ ಪೂರ್ತಿ ತೊಡಗಿಕೊಂಡಿದ್ದರು. ಅದು ೨೦೧೨ರಲ್ಲಿಯೇ ಕನ್ನಡ,ಇಂಗ್ಲಿಷ್, ಸಂಸ್ಕೃತ , ಮರಾಠಿ, ಹಿಂದಿ, ಬಂಗಾಲಿ, ಉರ್ದು,ತೆಲುಗು,ತಮಿಳು ಮತ್ತು ಪಂಜಾಬಿ ಭಾಷೆಗಳಲ್ಲಿ ಪ್ರಕಟಗೊಂಡಿತ್ತು.

ಈ ವಚನ ಸಂಪುಟಕ್ಕೆ ಕಲಬುರ್ಗಿ ಅವರು ಬರೆದ ಪಾಂಡಿತ್ಯಪೂರ್ಣ ಮುನ್ನುಡಿ ವಿಚಾರ ಪ್ರಚೋದಕವಾಗಿದೆ. ಅವರ ಹೃದಯ ವಿದ್ರಾವಕ ಅಂತ್ಯದ ಮೊದಲು ನಾನು ಧಾರವಾಡಕ್ಕೆ ಬಂದಾಗ ಎಂದಿನಂತೆ ಅವರ ಮನೆಗೆ ಹೋದೆ. ಆಗವರು ಇನ್ನು ಕೆಲವೇ ದಿನಗಳಲ್ಲಿ ವಚನ ಸಂಪುಟವು ಡೋಗ್ರಿ, ಆಸಾಮಿ, ಮೈಥಿಲಿ, ಬೋಡೋ, ಗುಜರಾತಿ, ಕೊಂಕಣಿ, ಒಡಿಯಾ, ಸಂತಾಲಿ, ನೇಪಾಳಿ ಮತ್ತು ಮಲಯಾಳಂ ಭಾಷೆಗಳಲ್ಲಿ ಕೂಡ ಬರಲಿದೆ ಎಂದು ಅಭಿಮಾನ ಪಟ್ಟರು. ಈ ಎಲ್ಲ ಭಾಷೆಗಳಲ್ಲಿ ಅನುವಾದ ಮಾಡುವ ಪಂಡಿತರನ್ನು ಆಗಾಗ್ಗೆ ಭೆಟ್ಟಿಯಾಗಿ ಕಾರ್ಯ ಕಮ್ಮಟಗಳನ್ನು ಆಯೋಜಿಸಿ ಅರ್ಥಪೂರ್ಣ ಅನುವಾದ ಮಾಡಲು ಮಾರ್ಗದರ್ಶನ ಮಾಡುತ್ತಿದ್ದರು. ಸಧ್ಯಕ್ಕೆ ಅವರು ವಚನಕಾರರ ಸುಮಾರು ೨೦೦೦೦ ವಚನಗಳನ್ನು ಸಂಪಾದಿಸಿ ಪ್ರಕಟಿಸುವ ಯೋಜನೆಯಲ್ಲಿ ತೊಡಗಿದ್ದರು. ಮೇಜಿನ ಮೇಲಿರುವ ತಿದ್ದಿದ ಕರಡು ಪತ್ರಗಳನ್ನು ತೋರಿ, “ಇವೆಲ್ಲವನ್ನೂ ಎರಡೇ ತೆಳ್ಳಗಿನ ಸಂಪುಟಗಳಲ್ಲಿ ಬೈಬಲ್ಲಿನಂತೆ ಪ್ರಕಟಿಸ ಬೇಕೆಂದು ಇಚ್ಛೆ ಇದೆ. ನಿಮಗೆ ಇದಕ್ಕೆ ತಕ್ಕ ಮುದ್ರಕರು ಗೊತ್ತೇ ” ಎಂದು ಕೇಳಿದರು.


ಇದೆಲ್ಲ ಕೆಲಸ ಅವರು ಮಾಡಿದ್ದು “ನಿವೃತ್ತ” ರಾದ ಮೇಲೆ !

ಅವರ ಮನೆಯ ಹೊರಗಡೆ “ವಿಶ್ರಾಂತ ಕುಲಪತಿ” ಎಂದು ನಾಮಫಲಕವನ್ನು ನೋಡಿ ನಾನು “ಇದು ತಪ್ಪಾಗಿದೆ, ಸರಿ ಎಂದರೆ ಅವಿಶ್ರಾಂತ ಕುಲಪತಿ” ಎಂದಾಗ ಬೇಕಿತ್ತು ಎಂದು ಹಾಸ್ಯ ಮಾಡಿದ್ದೆ. ಮುಂದಾಗಲಿರುವದು ಯಾರಿಗೆ ಗೊತ್ತಿತ್ತು?

ಅವರ ಒಳನೋಟಗಳು, ಊಹೆಗಳು ಹಲವು ಬಾರಿ ಹಳೆಯ ನಂಬಿಕೆಗಳನ್ನು ಬುಡಸಹಿತ ಅಲ್ಲಾಡಿಸ ಬಲ್ಲವಾಗಿದ್ದವು. ಬಸವಣ್ಣ ಅವರಿಗೆ ಬಹು ಪ್ರಿಯವಾದ ವ್ಯಕ್ತಿ. ಬಸವಣ್ಣನ ಮತ್ತು ಇತರ ಶರಣರ ಕ್ರಾಂತಿಕಾರಿ ವಿಚಾರಗಳು ಅವರಿಗೆ ಪ್ರೇರಕ ಮತ್ತು ಪ್ರಿಯ. ಆದರೆ ಆಚಾರ ವಿಚಾರಗಳಲ್ಲಿ ಆ ಮಟ್ಟಕ್ಕೆ ಏರದ ಕೆಲವು ಲಿಂಗಾಯತ ಧರ್ಮಗುರುಗಳೂ ಅವರ ಸಿಟ್ಟಿಗೆ ಗುರಿಯಾಗುತ್ತಿದ್ದರು.

ಲಿಂಗಾಯತ ಧರ್ಮದ ಸಾಮಾಜಿಕ ಆಯಾಮಗಳನ್ನು ಅವರು ಪದೇ ಪದೇ ಒತ್ತಿ ಹೇಳುತ್ತಿದ್ದರು. ಹಿಂದಿನ ಪಾರಮಾರ್ಥಿಕ ಮೋಕ್ಷ ಪ್ರೇರಿತ ಭಕ್ತಿ ಮಾರ್ಗಕ್ಕೆ ಬಸವಣ್ಣ ಮತ್ತಿತರ ಶರಣರು ಸಮತೆಯ, ಎಲ್ಲರನ್ನೂ ಒಳಗೊಳ್ಳುವ, ಆರ್ಥಿಕ ಮತ್ತು ಸಾಮಾಜಿಕ ಆಯಾಮವನ್ನು ಕೊಟ್ಟಿದ್ದರು ಎಂದು ಅವರ ವಾದ. ಆದರೆ ಇಂದಿನ ಭಾರತದಲ್ಲಿ ಬಸವಣ್ಣನ ಈ ಒರೆಗಲ್ಲಿನ ಪರೀಕ್ಷೆಯಲ್ಲಿ ಪಾಸಾಗುವವರು ಬಹಳ ವಿರಳ. ಆದ್ದರಿಂದಲೇ ಕಲಬುರ್ಗಿ ಜಾತಿವಾದಿ ಶಕ್ತಿಗಳನ್ನಷ್ಟೇ ಅಲ್ಲದೆ ಕೆಲ ಸಂಪ್ರದಾಯವಾದಿ ವೀರಶೈವರನ್ನೂ ತಮ್ಮ ಬರವಣಿಗೆಗಳ ಮೂಲಕ ಟೀಕಿಸುತ್ತಿದ್ದರು. ಎಷ್ಟೋ ಜನ ಸಂಶೋಧಕರು ಅವರ ವೈಚಾರಿಕತೆಯನ್ನು ಗೌರವಿಸಿದರೂ ತಮ್ಮ ಭಿನ್ನ ಮತವನ್ನು ಸ್ಪಷ್ಟವಾಗಿ ಪ್ರಕಟಿಸುತ್ತಿದ್ದರು. ಅದರಿಂದ ವಿಚಲಿತರಾಗದೇ ಕಲಬುರ್ಗಿ, “ವಿಚಾರಗಳ, ಊಹೆಗಳ ಚಕಮಕಿಯಿಂದಲೇ ಸಾಂಸ್ಕೃತಿಕ ಸಂಶೋಧನೆ ಮುನ್ನಡೆಯ ಬಲ್ಲದು” ಎಂದು ನಂಬಿದ್ದರು.

ಯಾವುದೇ ಹೊಸ ವಿಚಾರವನ್ನು ಕೊನೆಯವರೆಗೂ ಬೆನ್ನಟ್ಟಿ ಅವರು ಒಮ್ಮೊಮ್ಮೆ ಅಚ್ಚರಿ ಉಂಟು ಮಾಡುವಂತಹ ಶಬ್ದಗಳನ್ನು ಆಡುತ್ತಿದ್ದರು. ಈ ಸಾರಿ ಸಿಕ್ಕಾಗ, “ಯಾವದೇ ಚಳುವಳಿಯ ತೆರೆದ ಮನೋಭಾವ, ಕ್ರಾಂತಿಕಾರೀ ಸ್ವರೂಪ, ಆ ಚಳುವಳಿಯಲ್ಲಿ ಭಾಗ ವಹಿಸುವ ಮಹಿಳೆಯರ ಸಂಖ್ಯೆಯಿಂದ ತಿಳಿಯಬಹುದಲ್ಲವೇ ,, ಆ ಸಂಖ್ಯೆ ಕಡಿಮೆಯಾದರೆ ಅದರ ಚಲನೆ ಸ್ಥಗಿತವಾದಂತೆಯೇ. ವೈದಿಕ, ಬೌದ್ಧ, ಇಸ್ಲಾಮ, ಕ್ರೈಸ್ತ ಧರ್ಮಗಳ ಬೆಳವಣಿಗೆಯಲ್ಲೂ ಇದನ್ನು ನಾವು ಕಾಣಬಹುದು. ಅದೇ ರೀತಿ ಹನ್ನೆರಡನೆಯ ಶತಮಾನದಲ್ಲಿ ವಿಪುಳರಾಗಿದ್ದ ಶರಣೆಯರು ನಂತರ ಬಹಳ ಕಡಿಮೆಯಾದರು ಅದೇ ಕಳೆದ ೯ ಶತಮಾನಗಳಲ್ಲಿ ಈ ಚಳುವಳಿ ಸ್ಥಾವರಗೊಂಡಿದ್ದ ದ್ಯೋತಕವಲ್ಲವೇ?” ಎಂದವರು ಪ್ರತಿಪಾದಿಸಿದರು. ಇದೆಷ್ಟು ಸರಳ ಆದರೆ ವಿಚಾರ ಪ್ರಚೋದಕ ಒಳನೋಟ !.

ಅದೇ ರೀತಿ ಹಿಂದೊಮ್ಮೆ ಭೆಟ್ಟಿಯಾದಾಗ ಅವರೊಂದು ಹಳೆಯ ಪ್ರಬಂಧವನ್ನು ಕೊಟ್ಟಿದ್ದರು. ಆ ಲೇಖನವನ್ನು ಸದಾನಂದ ಕನವಳ್ಳಿಯವರು ಇಂಗ್ಲೀಷಿಗೆ ಅನುವಾದಿಸಿದ್ದರು. ಬಿಜ್ಜಳ-ಬಸವಣ್ಣರ ಭಿನ್ನಾಭಿಪ್ರಾಯ ಕೊನೆಗೆ ಜೋಡಿಸಲಾಗದ ಒಡಕಾಗಿ, ರಾಜ್ಯಶಕ್ತಿ ಮತ್ತು ಶರಣ ಚಳುವಳಿಯ ನಡುವೆ ತೀವ್ರ ಘರ್ಷಣೆಯಾಗಿ ಏಕೆ ರೂಪಾಂತರಗೊಂಡಿತು. ಸಾಮಾನ್ಯವಾಗಿ ಜಾತಿ ಪದ್ಧತಿ, ಅಂತರ್ಜಾತೀಯ ವಿವಾಹ ಈ ಒಡಕಿಗೆ ಕಾರಣವಾಯಿತು ಎಂದು ನಮ್ಮ ನಂಬಿಕೆ. ಆದರೆ ಆ ಲೇಖನದಲ್ಲಿ ಕೆಲ ವಚನಗಳನ್ನು ಉದ್ಧರಿಸಿ ‘ರಾಜ ಬೊಕ್ಕಸ ರಾಜನ ಸೊತ್ತಲ್ಲ ಅವನು ಅದರ ರಕ್ಷಕ ಮಾತ್ರ; ಬೊಕ್ಕಸ ಅದನ್ನು ತುಂಬಿದ ಜನತೆಯ ಸೊತ್ತು’ ಎಂಬ ಕ್ರಾಂತಿಕಾರೀ ಪ್ರಜಾಸತ್ತಾತ್ಮಕ ಬಸವಣ್ಣನ ವಿಚಾರವನ್ನು ಕಲಬುರ್ಗಿಯವರು ಪ್ರಕಾಶಕ್ಕೆ ತಂದಿದ್ದರು. ಈ ತತ್ವ ರಾಜಶಕ್ತಿಗೆ ಸವಾಲಾಗಿದ್ದರಿಂದ ಇದುವರೆಗೆ ಕಲ್ಯಾಣದಲ್ಲಿ ಶರಣ ಚಳುವಳಿಗೆ ಅಡ್ಡಬರದ ಬಿಜ್ಜಳ ಈಗ ಹಿಂಸೆಯಿಂದ ಈ ಚಳುವಳಿಯನ್ನು ಹತ್ತಿಕ್ಕಲು ಪ್ರಯತ್ನಿಸಿರಬಹುದೇ ಎಂದು ಅವರು ಮಂಡಿಸಿದ್ದರು. ಇದು ಅವರ ವೈಚಾರಿಕ ಮಾರ್ಗದ ಒಂದು ಉದಾಹರಣೆ. ಕೆಲವರಿಗೆ ಇದು ಬಂಡಾಯವಾಗಿ ಕಂಡರೆ ಉಳಿದವರಿಗೆ ಆಹ್ಲಾದಕರ ಹೊಸತಾಗಿ ಕಾಣುತ್ತಿತ್ತು. ಭಕ್ತಿ ಚಳುವಳಿಯ ರಾಜಕೀಯ, ಆರ್ಥಿಕ,ಸಾಮಾಜಿಕ, ಸಾಂಸ್ಕೃತಿಕ ಆಯಾಮಗಳಲ್ಲಿ ವಿಶೇಷ ಆಸ್ಥೆ ನನಗೆ ಇದ್ದದ್ದರಿಂದ ನಾನು ಅದನ್ನು ಸಂಪಾದಿಸಿ “ಗದರ್ ಜಾರೀ ಹೈ” ಎಂಬ ತ್ರೈಮಾಸಿಕದಲ್ಲಿ ಪ್ರಕಟಿಸಿದ್ದೆ (see http://www.ghadar.in/gjh_html/?q=content/basavanna-and-royal-treasury ) .

ಹಲವಾರು ಬಾರಿ ನಾನು ಅವರಿಗೆ ಹನ್ನೆರಡನೆಯ ಶತಮಾನದ ಶರಣ-ವಚನ ಚಳುವಳಿಗಳಲ್ಲಿ ಲಿಂಗಾಯತ ಧರ್ಮದ ಪ್ರಾರಂಭ ಮತ್ತು ಕಳೆದ ೯ ಶತಮಾನಗಳಲ್ಲಿ ಆದ ಮೇಲು ಕೆಳಗುಗಳ ಇತಿಹಾಸದ ಕರಡು ಪ್ರತಿಯನ್ನಾದರೂ ಬರೆಯಿರಿ ಎಂದು ಕಾಡುತ್ತಿದ್ದೆ. ಅವರು ಕಣ್ಣು ಮಿಂಚಿಸಿ,  “ಬಹುಶಃ ಅದು ಬಹಳ ವಿವಾದಾತ್ಮಕವಾಗ ಬಹುದು” ಎಂದು ಅನ್ನುತ್ತಿದ್ದರು.

ಕೆಲವು ಕಿರಿಚುವ ಮಾಧ್ಯಮಗಳು ಅವರ ಹೇಳಿಕೆಗಳನ್ನು ಉದ್ದೇಶಪೂರ್ವಕವಾಗಿ ವಿಕೃತಗೊಳಿಸಿ ಅಥವಾ ಅಸಾಂದರ್ಭಿಕವಾಗಿ ಉದ್ಧರಿಸಿ ವಾದ ವಿವಾದಗಳನ್ನು ಸೃಷ್ಟಿಸುತ್ತಿದ್ದವು. ಇದರಿಂದ ಅವರ ಮನೆಯ ಮೇಲೆ ಕಲ್ಲು ತೂರಾಟ ಅಥವಾ ನಿಷೇಧ ಮೆರವಣಿಗೆಗಳು ಅಷ್ಟೇ ಅಲ್ಲದೆ ಹಿಂಸೆ-ಹತ್ಯೆಗಳ ಬೆದರಿಕೆಗಳು ಬಂದಿದ್ದವು. ಆದರೆ ಅವರು ಮಾತ್ರ ಹಿಂಜರಿಯದೇ ಮುನ್ನಡೆದರು. ನಾನೊಮ್ಮೆ ಈ ಬೆದರಿಕೆಗಳ ಬಗ್ಗೆ ಕೇಳಿದಾಗ ಅವರೊಂದು ಬಸವಣ್ಣನ ವಚನವನ್ನು ಉದ್ಧರಿಸಿದರು. ಬಹುಶಃ ಇದೇ ಅವರ ಸಂಶೋಧಕ  ಜೀವನಕ್ಕೆ ಮಾರ್ಗದರ್ಶಿಯಾಗಿತ್ತು.

“ನಾಳೆ ಬಪ್ಪುದು ನಮಗಿಂದೆ ಬರಲಿ,
ಇಂದು ಬಪ್ಪುದು ನಮಗೀಗಲೆ ಬರಲಿ,
ಇದಕಾರಂಜುವರು, ಇದಕಾರಳುಕುವರು
`ಜಾತಸ್ಯ ಮರಣಂ ಧ್ರುವಂ' ಎಂದುದಾಗಿ
ನಮ್ಮ ಕೂಡಲಸಂಗಮದೇವರು ಬರೆದ ಬರೆಹವ ತಪ್ಪಿಸುವಡೆ
ಹರಿಬ್ರಹ್ಮಾದಿಗಳಿಗಳವಲ್ಲ.” 
-------------------------------------------------------------------------------
ಶಿವಾನಂದ ಕಣವಿ: ಭೌತವಿಜ್ಞಾನಿ, ಪತ್ರಕರ್ತ, NIAS ನಲ್ಲಿ ಅತಿಥಿ ಪ್ರಾಧ್ಯಾಪಕರು, TCS ನಿವೃತ್ತ ಉಪಾಧ್ಯಕ್ಷರು;   skanavi@gmail.com; Mob: 9820225869
--------------------------------------------------------------