ದೀಪದ ಲೋಕ ಬೆಳಗಿದವರಿಗೆ ನೊಬೆಲ್
Prof Shuji Nakamura, University of California, Santa Barbara
ನಮ್ಮ ಭೂಮಂಡಲಕ್ಕೆ ಬಿಸಿಯೇರಿ ಜ್ವರ ಬಂದು ಏನೆಲ್ಲಾ ಏರುಪೇರುಗಳಾಗುತ್ತಿರುವ ಕಾಲ ಮಾನ ಇದು. ಇಂತಹ ಸಂದರ್ಭದಲ್ಲೇ ವಸುಂಧರೆಯ ಧಗೆಯನ್ನು ಒಂದಷ್ಟು ಮಟ್ಟದ ಲ್ಲಾದರೂ ತಗ್ಗಿಸುವ ಹಾಗೂ ಶಕ್ತಿಯ ದಕ್ಷ ಬಳಕೆಗೆ ಕಾರಣವಾದ ಎಲ್‌ಇಡಿ (ಲೈಟ್ ಎಮಿಟಿಂಗ್ ಡಯೋಡ್) ದೀಪಗಳನ್ನು ಕಂಡುಹಿಡಿದ ಸಂಶೋಧಕರಿಗೆ 2014ನೇ ಸಾಲಿನ ಪ್ರತಿಷ್ಠಿತ ನೊಬೆಲ್ ಭೌತಶಾಸ್ತ್ರ ಪುರಸ್ಕಾರ ಸಂದಿದೆ. ಜಪಾನ್ ಮೂಲದ ಅಮೆರಿಕ ವಾಸಿಗಳಾದ ನಾಕಮುರ, ಅಕಸಾಕಿ ಮತ್ತು ಅಮೊನೊ ಈ ಮನ್ನಣೆಗೆ ಪಾತ್ರರಾದ ಮೂವರು ವಿಜ್ಞಾನಿಗಳು.
ಈ ಆವಿಷ್ಕಾರಕ್ಕೆ ಪ್ರಶಸ್ತಿಯ ಮುಕುಟ ತೊಡಿಸಿರುವ ರಾಯಲ್ ಸ್ವೀಡಿಷ್ ಅಕಾಡೆಮಿ ಆಫ್ ಸೈನ್ಸಸ್ ಹೀಗೆ ಹೇಳಿದೆ– ‘ಈ ಮೂವರು 1990ರ ದಶಕದ ಆರಂಭದಲ್ಲಿ ತಾವೇ ಆವಿಷ್ಕರಿಸಿದ ಅರೆವಾಹಕಗಳಿಂದ ಪ್ರಕಾಶಮಾನವಾದ ನೀಲಿ ಬೆಳಕಿನ ಕಿರಣಗಳನ್ನು ಹೊರಹೊಮ್ಮಿಸುವಲ್ಲಿ ಯಶಸ್ವಿಯಾದರು. ವಿದ್ಯುತ್ ದೀಪಗಳ ತಾಂತ್ರಿಕತೆಯಲ್ಲಿ ಮೂಲಭೂತ ಪರಿವರ್ತನೆಗೆ ಇದು ಚಾಲಕ ಶಕ್ತಿಯಾಯಿತು. ಕೆಂಪು ಮತ್ತು ಹಸಿರು ಕಿರಣಗಳನ್ನು ಸೂಸುವ ಡಯೋಡ್‌ಗಳು ಅದಕ್ಕೂ ಮುಂಚೆ ಎಷ್ಟೋ ವರ್ಷಗಳಿಂದ ಇದ್ದವು.
ಆದರೆ ನೀಲಿ ಕಿರಣಗಳನ್ನು ಸೂಸುವ ದೀಪವಿಲ್ಲದೆ ಬಿಳಿ ಬಣ್ಣದ ಎಲ್‌ಇಡಿ ದೀಪಗಳನ್ನು ಕಂಡುಹಿಡಿಯುವುದು ಅಸಾಧ್ಯವಾಗಿತ್ತು. ವಿಜ್ಞಾನ ಮತ್ತು ಉದ್ಯಮ ರಂಗದಲ್ಲಿ ಸಾಕಷ್ಟು ಸಂಶೋಧನೆ ನಡೆದಿದ್ದವಾದರೂ ನೀಲಿ ಕಿರಣ ಸೂಸುವ ಎಲ್‌ಇಡಿ ದೀಪದ ಆವಿಷ್ಕಾರವು ಮೂವತ್ತು ವರ್ಷಗಳಿಂದ ಸವಾಲಾಗಿ ಕಾಡಿತ್ತು. ಸರಿಯಾದ ವಿದ್ಯುತ್ ಸೌಲಭ್ಯವಿಲ್ಲದ ಜಗತ್ತಿನ 150 ಕೋಟಿಗಿಂತಲೂ ಹೆಚ್ಚಿನ ಜನರ ಬದುಕಿನ ಗುಣಮಟ್ಟವನ್ನು ಸುಧಾರಿಸುವ ಭಾರಿ ಆಶಾಭಾವ ಈ ಎಲ್‌ಇಡಿ ದೀಪಗಳಿಂದಾಗಿ ಮೂಡಿದೆ’.
ಹಾಗಾದರೆ, ನಮ್ಮ ಬದುಕಿನ ಶೈಲಿಯಲ್ಲಿ ಕ್ರಾಂತಿಕಾರಕ ಬದಲಾವಣೆಗೆ ಕಾರಣವಾಗಿರುವ ಅರೆವಾಹಕ ಬಿಲ್ಲೆಗಳು (ಸೆಮಿಕಂಡಕ್ಟರ್ ಚಿಪ್) ನಮಗೆ ಬೆಳಕನ್ನೂ ನೀಡುತ್ತಿವೆಯೇ?– ಎಂಬ ಪ್ರಶ್ನೆ ಅನೇಕರನ್ನು ಕಾಡಬಹುದು. ಹೌದು ಅರೆವಾಹಕ ಬಿಲ್ಲೆಗಳು ಬೆಳಕನ್ನೂ ಸೂಸಬಲ್ಲವು ಎಂಬುದು ನಿಜ. ಆದರೆ ಈ ಅರೆವಾಹಕ ಬಿಲ್ಲೆಗಳು ಎಲೆಕ್ಟ್ರಾನಿಕ್ ಸಾಧನಗಳಲ್ಲಿ ಬಳಕೆಯಾಗುವ ಅರೆವಾಹಕ ಬಿಲ್ಲೆಗಳಂತೆ ಸಿಲಿಕಾನ್‌ನಿಂದ ತಯಾರಾದವುಗಳಲ್ಲ. ಬದಲಿಗೆ ಗ್ಯಾಲಿಯಂ, ಇಂಡಿಯಂ, ಆರ್ಸೆನಿಕ್, ಸಾರಜನಕ, ಅಲ್ಯುಮಿನಿಯಂ, ರಂಜಕದ ಮಿಶ್ರಲೋಹಗಳನ್ನು ಬಳಸಿ ತಯಾರಿಸಲಾದ ಸಂಯುಕ್ತ ಅರೆವಾಹಕಗಳು ಇವು. ಅತ್ಯಂತ ಕಡಿಮೆ ಶಾಖವನ್ನು ಹೊರಹೊಮ್ಮಿಸುವ ಈ ಎಲ್‌ಇಡಿ ತಂತ್ರಜ್ಞಾನವು ಎಲ್ಲೆಡೆಗೂ ಕ್ರಿಪ್ರವಾಗಿ ವ್ಯಾಪಿಸುತ್ತಿದೆ.
ಕೆಲವು ಅರೆವಾಹಕಗಳ ಮೂಲಕ ವಿದ್ಯುತ್ತನ್ನು ಹಾಯಿಸಿದಾಗ ಅವು ಬೆಳಕಿನ ಕಿರಣಗಳನ್ನು ಸೂಸುತ್ತವೆ ಎಂಬುದು 20ನೇ ಶತಮಾನದ ಆರಂಭದಲ್ಲಿಯೇ ಗೊತ್ತಾಗಿತ್ತು. ಆದರೆ ಅಂತಹ ಕಿರಣಗಳನ್ನು ಪಡೆಯಲು ಆಗುತ್ತಿದ್ದ ವೆಚ್ಚ ಹಾಗೂ ಅವುಗಳ ಕ್ಷಮತೆ ತೀರಾ ಕಡಿಮೆ ಇತ್ತು. ಈ ತೊಡಕುಗಳನ್ನು ನೀಗಿಕೊಳ್ಳಲು ಹೆಚ್ಚುಕಡಿಮೆ ಒಂದು ಶತಮಾನ ಕಾಲವೇ ಹಿಡಿಯಿತು!
ಹೀಗೆ ಅಧಿಕ ಕ್ಷಮತೆಯ ಹಾಗೂ ದುಬಾರಿಯಲ್ಲದ ವೆಚ್ಚದಲ್ಲಿ ಬೆಳಕು ಹೊಮ್ಮಿಸುವ, ‘ಡೈರೆಕ್ಟ್ ಬ್ಯಾಂಡ್ ಸೆಮಿಕಂಡಕ್ಟರ್‌್ಸ’ ಎಂದೇ ಹೆಸರಾಗಿರುವ ಅರೆವಾಹಕಗಳು ‘ಅರೆವಾಹಕ ಲೇಸರ್ ಕಿರಣ’ಗಳ ಅಭಿವೃದ್ಧಿಗೆ ಮುನ್ನುಡಿ ಬರೆದವು. ಇವತ್ತು ನಮ್ಮ ದಿನದ ಬದುಕಿನಲ್ಲಿ ಹಾಸುಹೊಕ್ಕಾಗಿರುವ ಸಿ.ಡಿ ಪ್ಲೇಯರ್, ಡಿವಿಡಿ ಪ್ಲೇಯರ್, ಟಿ.ವಿ ರಿಮೋಟ್ ಇನ್ನಿತರ ಉಪಕ ರಣಗಳ ಹಿಂದಿನ ಚಾಲಕ ಶಕ್ತಿಯಾಗಿ ಕೆಲಸ ಮಾಡುತ್ತಿರುವುದು ಈ ಅಗ್ಗದ ದರದ ಅರೆ ವಾಹಕಗಳೇ. ಕಚೇರಿಗಳಲ್ಲಿನ ‘ಲ್ಯಾನ್’ ಕಂಪ್ಯೂಟರ್ ಜಾಲದಿಂದ ಹಿಡಿದು ಜಲಾಂತ ರ್ಗಾಮಿಯ ಆಪ್ಟಿಕ್ ಕೇಬಲ್ ಮೂಲಕ ಅತ್ಯಧಿಕ ವೇಗದಲ್ಲಿ ದತ್ತಾಂಶಗಳನ್ನು ರವಾನಿಸಲು ನೆರವಿಗೆ ಬರುತ್ತಿರುವುದು ಕೂಡ ಇಂತಹ ಅರೆವಾಹಕಗಳೇ.
ಇದೇ ವೇಳೆ ವಿದ್ಯುತ್ತನ್ನು ನೇರವಾಗಿ ಬೆಳಕಾಗಿ ಪರಿವರ್ತಿಸುವ ಈ ಶೋಧನೆಯು ಅದನ್ನೇ ತದ್ವಿರುದ್ಧ ದಿಕ್ಕಿನಲ್ಲಿ ಯೋಚಿಸಲೂ ಪ್ರೇರಣೆಯಾಯಿತು. ಅಂದರೆ, ಬೆಳಕಿನಿಂದಲೇ ನೇರವಾಗಿ ವಿದ್ಯುತ್ ಪಡೆಯುವುದು ಕೂಡ ಸಾಧ್ಯವಾಗಬೇಕಲ್ಲವೇ?– ಎಂಬ ಪ್ರಶ್ನೆಯನ್ನು ತಜ್ಞರಲ್ಲಿ ಮೂಡಿಸಿತು. ಈ ಚಿಂತನೆಯ ಫಲವಾಗಿಯೇ ಇಂದು ಬೆಳಕನ್ನು ವಿದ್ಯುತ್ ಆಗಿ ಪರಿವರ್ತಿಸುವ ಅಧಿಕ ದಕ್ಷತೆಯ ಸೌರ ಫಲಕಗಳು ಅಭಿವೃದ್ಧಿಯಾಗಿವೆ ಎನ್ನಬಹುದು.
ಯಾವ ಡಯೋಡ್‌ಗಳು ತಮ್ಮ ಮೂಲಕ ವಿದ್ಯುತ್ ಹಾಯಿಸಿದಾಗ ಬೆಳಕು ಸೂಸುತ್ತವೋ ಅಂತಹ ಡಯೋಡ್‌ಗಳಿಗೆ ಎಲ್‌ಇಡಿ ಎನ್ನಲಾಗುತ್ತದೆ. ದೀಪಾವಳಿ, ಗಣೇಶ ಚೌತಿ, ಕ್ರಿಸ್‌ಮಸ್ ಸಂಭ್ರಮಗಳ ವೇಳೆ ಇಂದು ನಾವು ಉಪಯೋಗಿಸುತ್ತಿರುವ ಮಿನುಗು ದೀಪಗಳೆಲ್ಲಾ ಈ ಎಲ್‌ಇಡಿಗಳೇ. ಡಿಜಿಟಲ್ ಕ್ಯಾಮೆರಾ, ಕ್ಯಾಮ್‌ಕಾರ್ಡರ್, ಡಿವಿಡಿ ಪ್ಲೇಯರ್, ಟಿ.ವಿ ಇತ್ಯಾದಿಗಳು ಚಾಲನಾ ಸ್ಥಿತಿಯಲ್ಲಿವೆಯೋ ಅಥವಾ ಸ್ತಬ್ಧಾವಸ್ಥೆಯಲ್ಲಿವೆಯೋ ಎಂಬುದನ್ನು ಸೂಚಿಸುವ ಪುಟಾಣಿ ಚುಕ್ಕೆಯಂತಹ ಹಸಿರು ಹಾಗೂ ಕೆಂಪು ಬಣ್ಣದ ದೀಪಗಳು ಕೂಡ ಎಲ್‌ಇಡಿಗಳೇ.
ಎಲ್‌ಇಡಿ ಅಭಿವೃದ್ಧಿಗೆ ಕಾರಣವಾಗಿರುವ ಈ ಸಂಯುಕ್ತ ಅರೆವಾಹಕಗಳನ್ನು ನಮ್ಮ ಕಂಪ್ಯೂಟರ್, ಮೊಬೈಲ್ ಇನ್ನಿತರ ಎಲೆಕ್ಟ್ರಾನಿಕ್ ಗ್ಯಾಜೆಟ್‌ಗಳಿಗೆ ಬಲ ತುಂಬಿರುವ ಸಿಲಿಕಾನ್ ಚಿಪ್‌ನ ‘ಸೋದರ ಬಂಧು’ ಎಂದು ಕರೆಯಬಹುದು. ದಿನದ ಬದುಕಿನಲ್ಲಿ ಇಂತಹ ಅರೆವಾಹಕಗಳ ಉಪಯೋಗ ದಿನೇದಿನೇ ಹೆಚ್ಚುತ್ತಲೇ ಇದೆ.
ಕೆಂಪು, ಕಿತ್ತಳೆ, ಹಳದಿ ವರ್ಣದ ಪ್ರಕಾಶಮಾನ ಬೆಳಕಿನ ಕಿರಣಗಳನ್ನು ಸೂಸುವ ಎಲ್‌ಇಡಿ ಗಳನ್ನು ಮೊದಲೇ ಆವಿಷ್ಕರಿಸಲಾಗಿತ್ತು. ಆದರೆ ಹಸಿರು ಮತ್ತು ನೀಲಿ ಬಣ್ಣ ಸೂಸುವ ಎಲ್‌ಇಡಿ ಗಳ ಆವಿಷ್ಕಾರ ತಜ್ಞರ ಕೈಗೆ ಎಟುಕಿರಲಿಲ್ಲ. ವಿಜ್ಞಾನಿ ಶುಜಿ ನಾಕಮುರ 1990 ದಶಕದ ಮಧ್ಯ ಭಾಗದಲ್ಲಿ ಮೊದಲಿಗೆ ನೀಲಿ ಕಿರಣ ಸೂಸುವ ಹಾಗೂ ನಂತರ ಬಿಳಿ ಕಿರಣ ಹೊಮ್ಮಿಸುವ ಎಲ್‌ಇಡಿ ಕಂಡುಹಿಡಿಯುವ ತನಕ ಅದಕ್ಕಾಗಿ ಕಾಯಬೇಕಾಯಿತು. ನಾಕಮುರ ಅವರ ಈ ಬೆಳಕಿನ ಶೋಧನೆಯು ಸಂಬಂಧಿಸಿದ ಸಂಶೋಧನಾ ರಂಗವನ್ನೇ ಬೆಳಗಿಸಿತು; ಅತ್ಯಂತ ಕ್ಷಿಪ್ರ ಬೆಳವಣಿಗೆಗಳಿಗೆ ಇಂಬು ನೀಡಿತು. ನಾಕಮುರ ಸಾಧನೆಯ ಹಾದಿ ಹೂವಿನ ಹಾಸಿಗೆಯಾ ಗಿರಲಿಲ್ಲ. ಅವರಿಗೆ ಅಷ್ಟೇನೂ ಹಣಕಾಸು ನೆರವಿನ ಒತ್ತಾಸೆ ಇರಲಿಲ್ಲ. ಜತೆಗೆ ನೀಲಿ ಕಿರಣ ಸೂಸುವ ಎಲ್‌ಇಡಿಗಳನ್ನು ಅಭಿವೃದ್ಧಿಪಡಿಸುವ ತಮ್ಮ ಯತ್ನದಲ್ಲಿ ಹಲವಾರು ವರ್ಷಗಳ ಕಾಲ ಪದೇಪದೇ ವಿಫಲವಾಗಿದ್ದರು.
ನಾಕಮರ ಅವರು ಕೆಲಸ ಮಾಡುತ್ತಿದ್ದ ‘ನಿಚಿಯಾ’ ಕಂಪೆನಿಯು ಬಿಳುಪು ಎಲ್‌ಇಡಿ ಮತ್ತು ಲೇಸರ್ ಉತ್ಪನ್ನಗಳ ಅಭಿವೃದ್ಧಿಯಲ್ಲಿ ಇಂದು ಜಗತ್ತಿನಲ್ಲೇ ಮುಂಚೂಣಿಯಲ್ಲಿದೆ. ಕೆಲವು ವರ್ಷಗಳ ಹಿಂದೆ ಈ ಕಂಪೆನಿಯನ್ನು ತೊರೆದ ನಾಕಮುರ ಈಗ ಸಾಂತಾ ಬಾರ್ಬರಾದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಬೋಧಕರಾಗಿದ್ದು, ಗ್ಯಾಲಿಯಂ ನೈಟ್ರೇಡ್ ಹಾಗೂ ಇತರ ಸಂಯುಕ್ತ ಅರೆವಾಹಕಗಳ ಬೆಳಕಿನ ಗುಣಗಳ ಸಂಶೋಧನೆಯಲ್ಲಿ ತೊಡಗಿದ್ದಾರೆ. ಅವರ ಸಹೋದ್ಯೋಗಿ ಉಮೇಶ್ ಮಿಶ್ರ ಅವರು ಮೊಬೈಲ್ ಕಂಪೆನಿಗಳು ಹಾಗೂ ಅಮೆರಿಕದ ರಕ್ಷಣಾ ಇಲಾಖೆಗೆ ಬೇಕಾಗಿರುವ ಅಧಿಕ ಶಕ್ತಿಯ ಟ್ರಾನ್ಸಿಸ್ಟರ್‌ಗಳ ಆವಿಷ್ಕಾರದ ದಿಸೆಯಲ್ಲಿ ಗ್ಯಾಲಿಯಂ ನೈಟ್ರೈಡ್‌ನ ಎಲೆಕ್ಟ್ರಾನಿಕ್ ಗುಣಗಳ ಸಂಶೋಧನೆಯಲ್ಲಿ ಮಗ್ನರಾಗಿದ್ದಾರೆ. ನಾಕಮುರ ಮತ್ತು ಮಿಶ್ರ ಅವರು ಸೇರಿ ಸಾಂತಾ ಬಾರ್ಬರಾದಲ್ಲಿ ಗ್ಯಾಲಿಯಂ ನೈಟ್ರೇಡ್‌ನ ಕಟಿಬದ್ಧ ಸಂಶೋಧಕರೇ ಪಡೆಯನ್ನೇ ಕಟ್ಟಿದ್ದಾರೆ ಎಂಬುದು ಕೂಡ ಗಮನಾರ್ಹ.
ಎಲ್‌ಇಡಿಯನ್ನು ವಿದ್ಯುತ್ ದೀಪವಾಗಿ ಬಳಸುವುದರಿಂದ ಹಲವು ಉಪಯೋಗಗಳಿವೆ. ಬುರುಡೆ ಗಾಜಿನ ಬಲ್ಬು, ಟ್ಯೂಬ್‌ಲೈಟ್– ಸಿಎಫ್‌ಎಲ್‌ನಂತಹ ಫ್ಲೋರೆಸೆಂಟ್ ದೀಪಗಳಿಗಿಂತ ಹೆಚ್ಚಿನ ವಿದ್ಯುತ್ತನ್ನು ಇದು ಬೆಳಕಾಗಿ ಪರಿವರ್ತಿಸುತ್ತದೆ. ಬುರುಡೆ ಗಾಜಿನ ಬಲ್ಬುಗಳಲ್ಲಿ ಶೇ 90ರಷ್ಟು ವಿದ್ಯುತ್ ಶಕ್ತಿಯು ಶಾಖ ಸ್ವರೂಪದಲ್ಲಿ ನಷ್ಟವಾಗುತ್ತದೆ. ಅಲ್ಲದೇ ಇವುಗಳ ಬಾಳಿಕೆ ಅವಧಿ ಕೂಡ ತುಂಬಾ ಹೆಚ್ಚು. ಎಲ್‌ಇಡಿ ಬಲ್ಬು ಒಂದು ಲಕ್ಷ ಗಂಟೆಗಳ ಕಾಲ ಬೆಳಕು ಸೂಸಬಲ್ಲದು. ಅಂದರೆ ಒಂದೇ ಸಮನೆ ಉರಿಸಿದರೂ ಅವು 12 ವರ್ಷ ಕಾಲ ಬೆಳಗಬಲ್ಲವು! ಬುರುಡೆ ಗಾಜಿನ ಬಲ್ಬುಗಳ ಬಾಳಿಕೆ ಅವಧಿ ಒಂದು ಸಾವಿರ ಗಂಟೆಗಳಾದರೆ ಫ್ಲೋರೊಸೆಂಟ್ ದೀಪಗಳ ಬಾಳಿಕೆ ಅವಧಿ ಹತ್ತು ಸಾವಿರ ಗಂಟೆಗಳಾಗಿದೆ.
ಎಲ್‌ಇಡಿ ದೀಪವು ಅತ್ಯಂತ ಕಡಿಮೆ ವಿದ್ಯುತ್ ಬಳಸಿಕೊಂಡು ಬೆಳಗಬಲ್ಲದು. ಹೀಗಾಗಿ ಎಲ್‌ಇಡಿ ಫ್ಲ್ಯಾಶ್‌ಲೈಟ್‌ಗಳಲ್ಲಿನ ಬ್ಯಾಟರಿಗಳು ಬಹು ದೀರ್ಘ ಕಾಲ ಬಾಳಿಕೆ ಬರುತ್ತವೆ. ಕುಗ್ರಾಮಗಳಲ್ಲಿ, ಚಾರಣಗಳ ಸಂದರ್ಭದಲ್ಲಿ ಅಥವಾ ಪ್ರಕೃತಿ ವಿಕೋಪದ ಸಂದರ್ಭಗಳಲ್ಲಿ ಇವುಗಳ ಅತ್ಯಂತ ಹೆಚ್ಚು ಉಪಯೋಗಿ.
ಇಷ್ಟೆಲ್ಲಾ ಅನುಕೂಲಗಳಿರುವ ಎಲ್‌ಇಡಿ ತಾಂತ್ರಿಕತೆಯಲ್ಲೂ ಕೆಲವು ಅರೆಕೊರೆಗಳಿವೆ. ಅವುಗಳಲ್ಲಿ ಮೂರು ಮುಖ್ಯವಾದವು. ಮೊದಲನೆಯಾದಾಗಿ, ಇವು ಸೂಸುವ ಕಿರಣಗಳಿಗೆ ಪ್ರಖರತೆ ಇಲ್ಲವಾದ್ದರಿಂದ ಹೆಚ್ಚಿನ ಪ್ರಕಾಶಮಾನವಾದ ಬೆಳಕು ಅಗತ್ಯವಿರುವ ಕಡೆಗಳಲ್ಲಿ ಇವನ್ನು ಬಳಸಲಾಗದು. ನಂತರದ ತೊಡಕು, ಇವುಗಳ ಬೆಲೆ ದುಬಾರಿ ಎಂಬುದು. ಕೊನೆಯದಾಗಿ, ಎಲ್‌ಇಡಿಗಳು ಒಂದು ನಿರ್ದಿಷ್ಟ ದಿಕ್ಕಿನಲ್ಲಿ, ಅಂದರೆ ಅದರ ಬೆಳಕು ನಾವು ಕೆಲಸ ಮಾಡುವ ಮೇಜಿನ ಕಡೆಗೋ, ಅಡುಗೆ ಒಲೆಯ ಕಡೆಗೋ ಹೆಚ್ಚಾಗಿ ಬೀಳುವಂತೆ ಮಾಡಿಕೊಳ್ಳಬಹುದಾದರೂ ಇಡೀ ಕೊಠಡಿಯನ್ನು ಸಮಾನವಾಗಿ ಬೆಳಗಿಸಬೇಕೆಂದರೆ ಹೆಚ್ಚೆಚ್ಚು ದೀಪಗಳನ್ನು ಬಳಸಬೇಕಾಗುತ್ತದೆ.
ತುಂಬಾ ಪ್ರಕಾಶಮಾನವಾದ ದೀಪಗಳಿಗಾಗಿ ಹಾಗೂ ಎಲೆಕ್ಟ್ರಾನಿಕ್‌್ಸ ಉದ್ಯಮದ ಅಭಿವೃದ್ಧಿಗಾಗಿ ತವಕಿಸುತ್ತಿರುವ ಅಮೆರಿಕದ ರಕ್ಷಣಾ ಇಲಾಖೆ ಮತ್ತು ಇಂಧನ ಇಲಾಖೆಗಳು ಅದನ್ನು ಸಾಧ್ಯವಾಗಿಸುವ ಅರೆವಾಹಕಗಳ ಸಂಶೋಧನೆಗಾಗಿ ಸಾಕಷ್ಟು ನಿಧಿಯನ್ನು ಕೊಡಮಾಡುತ್ತಿವೆ. ಹೀಗಾಗಿ ಈ ಕ್ಷೇತ್ರದಲ್ಲಿ ಭಾರಿ ಚಟುವಟಿಕೆಗಳು ನಡೆಯುತ್ತಿವೆ.
ಕನ್ನಡಕ್ಕೆ: ವೆಂಕಟೇಶ್ ಪ್ರಸಾದ್ ಬಿ.ಎಸ್.
No comments:
Post a Comment